Advertisement

ವೈಫ‌ಲ್ಯದ ಯೋಜನೆಗೆ ಮಣೆ ಹಾಕುವುದೇಕೆ?

01:49 AM Jul 07, 2019 | mahesh |

ಶರಾವತಿ ನದಿ, ಲಿಂಗನಮಕ್ಕಿ ಜಲಾಶಯದಲ್ಲಿ ಅಳಿವಿನಂಚಲ್ಲಿರುವ 25 ಬಗೆಯ ಸಿಹಿನೀರಿನ ಮೀನು ಜಾತಿಗಳಿವೆ. ಇದರಲ್ಲಿ 5 ಜಾತಿ ಮೀನುಗಳು ಪ್ರಪಂಚದ ಬೇರಾವ ಭಾಗದಲ್ಲೂ ಇಲ್ಲ. ಜೊತೆಗೆ ಅಳಿವಿನಂಚಲ್ಲಿರುವ ಮಾರ್ಶ್‌ ಮೊಸಳೆ, ಎರಡು ಜಾತಿಯ ನೀರುನಾಯಿಗಳು ಶರಾವತಿ ಕೊಳ್ಳದಲ್ಲಿವೆ. ಅತ್ಯಂತ ಅಪರೂಪದ ಜೆಲ್ಲಿಫಿಶ್‌ ಪ್ರಭೇದವಿದೆ. ನಾಗರಿಕ ಪ್ರಪಂಚ ಗ್ರಹಿಸದ ಅನೇಕ ಪ್ರಬೇಧಗಳಿವೆ. ಯೋಜನೆ ಜಾರಿಯಾದರೆ, ಅಮೂಲ್ಯ ಜೀವ ಪ್ರಬೇಧಗಳು ಶಾಶ್ವತವಾಗಿ ಅಳಿದುಹೋಗಲಿವೆ.

Advertisement

ನಿಸರ್ಗದಲ್ಲಿ ‘ಪೋಲು ಅಥವಾ ವೇಸ್ಟ್‌’ ಶಬ್ದಕ್ಕೆ ಸ್ಥಳವಿಲ್ಲ. ಪ್ರಕೃತಿಯಲ್ಲಿ ಯಾವುದೂ ವ್ಯರ್ಥವಲ್ಲ. ಪ್ಲಾಸ್ಟಿಕ್‌ ಎಂಬ ಭೂತದ ಆವಿಷ್ಕಾರವಾದ ನಂತರದಲ್ಲಿ ಹುಟ್ಟಿಕೊಂಡು ಬಲು ವೇಗವಾಗಿ ಬೆಳೆದ ಪದವಿದು. ಈ ಪದವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ಸರ್ಕಾರ ”ಶರಾವತಿ ನದಿಯಿಂದ ವ್ಯರ್ಥವಾಗಿ ಸಮುದ್ರಕ್ಕೆ ಸೇರುವ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತೇವೆ, ಅದಕ್ಕಾಗಿ ವಿಸ್ತೃತ ವರದಿ ತಯಾರು ಮಾಡಿ” ಎಂದು ಅಧಿಕಾರಿಗಳಿಗೆ ಆದೇಶ ನೀಡಿದೆ.

ಅತ್ತ ಬೆಂಗಳೂರಿನ ಗುತ್ತಿಗೆ, ಕಬ್ಬಿಣ, ಸಿಮೆಂಟ್, ಮರಳು ಮಾಫಿಯಾಗಳು ಲಾಭದ ಹಂಚಿಕೆಯ ಲೆಕ್ಕಾಚಾರದಲ್ಲಿ ತೊಡಗಿದ ಹೊತ್ತಿನಲ್ಲೇ ಇತ್ತ ಮಲೆನಾಡು ಮಳೆಯ ನಡುವೆಯೂ ಹೊತ್ತಿ ಉರಿಯುವಂತಹ ಸ್ಥಿತಿ ತಲುಪಿದೆ. ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳ ಸಮಸ್ತ ನಾಗರಿಕರು ಯೋಜನೆಯನ್ನು ಒಕ್ಕೊರಲಿನಿಂದ ವಿರೋಧಿಸುತ್ತಿದ್ದಾರೆ. ಹಳ್ಳಿಗಳಲ್ಲಿ, ಹೋಬಳಿಗಳಲ್ಲಿ, ಪಟ್ಟಣಗಳಲ್ಲಿ ಹೋರಾಟದ ಕಿಚ್ಚು ದಿನೇ-ದಿನೇ ಹೆಚ್ಚುತ್ತಿದೆ. ಲಿಂಗನಮಕ್ಕಿ ಆಣೆಕಟ್ಟು ನಿರ್ಮಿಸುವ ಹೊತ್ತಿನಲ್ಲಿ ಯುವಕರಾಗಿದ್ದ ಈಗಿನ ವೃದ್ಧರು, ಮಹಿಳೆಯರು, ಕಾಲೇಜು ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಸಭೆಗಳಲ್ಲಿ ಭಾಗವಹಿಸುತ್ತಾ ಯೋಜನೆಯ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಅತ್ತ, ಬೆಂಗಳೂರಿನಲ್ಲಿ ವಾಸಿಸುವ ಸಾವಿರಾರು ಜನರು ತಮಗೆ ಶರಾವತಿ ನದಿ ನೀರು ಬೇಡ ಎಂಬ ಕೂಗನ್ನು ಎಬ್ಬಿಸುತ್ತಿದ್ದಾರೆ. ಹಲವು ನದಿಗಳನ್ನು ಬತ್ತಿಸಿ, ತ್ಯಾಜ್ಯದ ಮಡುವಾಗಿ ಪರಿವರ್ತಿಸಿದ ಬೆಂಗಳೂರಿನ ದುರಾಸೆಗೆ ಅಲ್ಲಿನ ಸಾವಿರಾರು ಕೆರೆಗಳು ಬಲಿಯಾಗಿವೆ. ಐಷಾರಾಮಿ ಕಟ್ಟಡಗಳ ಕೆಳಗೆ ಸಮಾಧಿಯಾಗಿವೆ.

ಅವಾಸ್ತವಿಕ, ಅವೈಜ್ಞಾನಿಕ, ಅಸಾಮಾಜಿಕ, ಅಪಾರಿಸಾರಿಕ ಮತ್ತು ದುಬಾರಿಯಾದ ಈ ಯೋಜನೆಯಿಂದಾಗಿ ಬೆಂಗಳೂರಿಗೆ ಖಾಲಿ ಪೈಪನ್ನು ತಲುಪಿಸಬಹುದೇ ಹೊರತು, ನೀರನ್ನು ಕಳುಹಿಸಲು ಸಾಧ್ಯವಿಲ್ಲ. ಗುರುತ್ವಾಕರ್ಷಣೆಗೆ ವಿರುದ್ಧವಾಗಿ 430 ಕಿ.ಮೀ ದೂರ ಹಾಗೂ ಸುಮಾರು 2,000 ಅಡಿ ಎತ್ತರಕ್ಕೆ ನೀರನ್ನು ತಳ್ಳಲು ಅಪಾರ ಪ್ರಮಾಣದ ವಿದ್ಯುತ್‌ ಬೇಕಾಗುತ್ತದೆ. ಜೊತೆಗೆ ಬೃಹತ್‌ ಪೈಪುಗಳನ್ನು ಅಳವಡಿಸುವ ಕಾರ್ಯದಲ್ಲಿ ಪಶ್ಚಿಮಘಟ್ಟಗಳ ಲಕ್ಷಾಂತರ ಮರಗಳ ಹನನವಾಗುತ್ತದೆ. ಈಗಾಗಲೇ ಕಾಡುನಾಶದ ಕಾರಣಕ್ಕೆ ಮಲೆನಾಡಿನಲ್ಲಿ ಮತ್ತು ಶರಾವತಿ ನದಿ ಪಾತ್ರದಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿರುವುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ. ಯೋಜನೆಗೆ ವಿಸ್ತೃತ ರೂಪುರೇಷೆ ತಯಾರು ಮಾಡಲು ಸರ್ಕಾರ ಅಧಿಕಾರಿಗಳಿಗೆ ಆದೇಶಿಸಿದ ಬೆನ್ನಲ್ಲೇ ಮಲೆನಾಡಿನ ಭಾವನಾತ್ಮಕ ಜನರು ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಇಡೀ ಶಿವಮೊಗ್ಗ ಜಿಲ್ಲೆಯಲ್ಲಿಯೇ ಬರವಿದೆ. ದಕ್ಷಿಣದ ಚಿರಾಪುಂಜಿ ಎಂದೇ ಕರೆಯಲಾಗುವ ಆಗುಂಬೆಯಲ್ಲಿ ತೀವ್ರವಾದ ಬರದ ಛಾಯೆ ಇದೆ. ಆದ್ದರಿಂದ, ವಿದ್ಯುತ್‌ ಉತ್ಪಾದನೆಗೆ ಹೊರತಾಗಿ ಶರಾವತಿ ನದಿ ನೀರನ್ನು ಬಳಸುವುದಾದಲ್ಲಿ, ಸಾಗರ-ಹೊಸನಗರ -ಸೊರಬ-ಶಿಕಾರಿಪುರ ಮುಂತಾದ ತಾಲೂಕುಗಳ ಹಳ್ಳಿಗಳಿಗೆ ಕೆರೆ ತುಂಬಿಸಲು, ಕೃಷಿ ಮತ್ತು ಕುಡಿಯುವ ನೀರಿನ ವಿಸ್ತೃತ ಯೋಜನೆಯನ್ನು ಮೊದಲು ಸರ್ಕಾರ ತಯಾರಿಸಲಿ ಎಂಬ ಬೇಡಿಕೆಯನ್ನು ಮುಂದಿಡಲಾಗಿದೆ.

Advertisement

ಸಮಸ್ಯೆಯನ್ನು ಹಲವು ಆಯಾಮಗಳಿಂದ ನೋಡ ಬೇಕಾಗುತ್ತದೆ. ಬೆಂಗಳೂರಿನಲ್ಲಿ ವಾಸಿಸುತ್ತಿರುವವರು ನಮ್ಮವರೇ, ಅವರ ನೀರಿನ ಅವಶ್ಯಕತೆಗೆ ನಾವು ಧ್ವನಿಯಾಗಬೇಕು ಎಂಬ ಮಾನವೀಯ ನೆಲೆಯಿಂದ ನೋಡುವುದಾದರೂ, ನೀರೊಯ್ಯುವ ಯೋಜನೆ ಸಾಧುವಲ್ಲವೆಂದು ಹೇಳಬೇಕಾ ಗುತ್ತದೆ. ಏಕೆಂದರೆ, ಹಾಲಿ ಬೆಂಗಳೂರಿನಲ್ಲಿ 15 ಟಿ.ಎಂ.ಸಿಯಷ್ಟು ಮಳೆ ಬೀಳುತ್ತಿದೆ ಮತ್ತು 40% ನೀರು ಸೋರಿಕೆಯಾಗುತ್ತಿದೆ. ಇವೆರೆಡು ಸಾಧ್ಯತೆಗಳನ್ನು ಬಳಸಿಕೊಂಡಲ್ಲಿ ಬೆಂಗಳೂರಿಗೆ ನೀರಿನ ಸಮಸ್ಯೆಯಾಗುವುದಿಲ್ಲ ಎಂಬುದು ಎಲ್ಲರಿಗೂ ತಿಳಿಯುವ ಸತ್ಯ. ಇಂತಹ ಸರಳ ಸಾಧ್ಯತೆಗಳನ್ನು ಬದಿಗಿಟ್ಟು, ಮೊದಲ ಹಂತದಲ್ಲೇ 12,500 ಸಾವಿರ ಕೋಟಿ ಮತ್ತು ಯೋಜನೆ ಮುಗಿಯುವ ಹಂತಕ್ಕೆ ಲಕ್ಷಾಂತರ ಕೋಟಿಯಷ್ಟು ಸಾರ್ವಜನಿಕ ಹಣವನ್ನು ಬೇಡುವ ಈ ಯೋಜನೆಯನ್ನು ಬೆಂಗಳೂರಿನಲ್ಲಿ ವಾಸಿಸುತ್ತಿರುವ ದೊಡ್ಡ ಸಂಖ್ಯೆಯ ಸಾರ್ವಜನಿಕರು ಬಲವಾಗಿಯೇ ವಿರೋಧಿ ಸುತ್ತಿದ್ದಾರೆ. ಮಲೆನಾಡಿನ ಹೆಬ್ಟಾಗಿಲು ಎಂದು ಕರೆಯಲಾಗುವ ಶಿವಮೊಗ್ಗದ ಪ್ರತಿಹೋಬಳಿಯಲ್ಲಿ ಪ್ರತಿಭಟನೆಯ ಕಾವು ಏರುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಕರು ಬಹುಸಂಖ್ಯೆಯಲ್ಲಿ ಸಂಘಟಿತರಾಗುತ್ತಿದ್ದಾರೆ. ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟದ ಮನವಿಗೆ ಎಲ್ಲಾ ಧರ್ಮದ ಮುಖಂಡರು ತಮ್ಮ ಬೆಂಬಲ ಸೂಚಿಸಿ, ಯೋಜನೆಯನ್ನು ಬಲವಾಗಿ ವಿರೋಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಶರಾವತಿ ನದಿ ಉಳಿಸುವುದಕ್ಕಾಗಿಯೇ ನೂರಾರು ಗುಂಪುಗಳು ಅಹೋರಾತ್ರಿ ಕೆಲಸ ಮಾಡುತ್ತಿವೆ.

ಯಾರೂ ಗಮನಿಸದ ಮತ್ತು ಅತಿ ಕಡಿಮೆ ಜನರಿಗೆ ತಿಳಿದಿರುವ ಮತ್ತೂಂದು ಆಯಾಮವನ್ನು ಗಮನಿಸ ಬೇಕಾಗುತ್ತದೆ. ಶರಾವತಿ ನದಿ ಹಾಗೂ ಲಿಂಗನಮಕ್ಕಿ ಜಲಾಶಯದಲ್ಲಿ ಅಳಿವಿನಂಚಿನಲ್ಲಿರುವ ಇಪ್ಪತೈದು ಬಗೆಯ ಸಿಹಿನೀರಿನ ಮೀನು ಜಾತಿಗಳಿವೆ. ಇದರಲ್ಲಿ ಐದು ಜಾತಿ ಮೀನುಗಳು ಪ್ರಪಂಚದ ಬೇರಾವ ಭಾಗದಲ್ಲೂ ಇಲ್ಲ. ಜೊತೆಗೆ ಅಳಿವಿನಂಚಿನಲ್ಲಿರುವ ಮಾರ್ಶ್‌ ಮೊಸಳೆ, ಎರಡು ಜಾತಿಯ ನೀರುನಾಯಿಗಳು ಶರಾವತಿ ಕೊಳ್ಳದಲ್ಲಿವೆ. ಅತ್ಯಂತ ಅಪರೂಪದ ಸಿಹಿನೀರಿನ ಜೆಲ್ಲಿಫಿಶ್‌ ಪ್ರಭೇದ ಇಲ್ಲಿದೆ. ಶರಾವತಿ ಕೊಳ್ಳವನ್ನೇ ನಂಬಿಕೊಂಡ ಲಕ್ಷಾಂತರ ಜೀವಿವೈವಿಧ್ಯವಿದೆ. ನಾಗರಿಕ ಪ್ರಪಂಚ ಗ್ರಹಿಸದ ಅನೇಕ ಪ್ರಬೇಧಗಳಿವೆ. ಯೋಜನೆ ಜಾರಿಯಾದರೆ, ಇಲ್ಲಿ ನೈಸರ್ಗಿಕವಾಗಿ ಅತ್ಯಂತ ಅಮೂಲ್ಯವಾಗಿರುವ ಜೀವಪ್ರಬೇಧಗಳು ಶಾಶ್ವತವಾಗಿ ಅಳಿದುಹೋಗಲಿವೆ.

ರಾಜಕಾರಣಿಗಳು, ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಪ್ರಕಾರ ಸಮುದ್ರ ಸೇರಿ ವ್ಯರ್ಥವಾಗುವ ನೀರನ್ನು ಬಳಸಲಾಗುತ್ತದೆ ಎಂಬ ವಾದದಲ್ಲಿ ಮಾನವೀಯತೆ ಸತ್ತು ಹೋದಂತೆ ತೋರುತ್ತದೆ. ಗೇರುಸೊಪ್ಪೆಯಿಂದ ಕೆಳಗಿನ ಭಾಗದಲ್ಲಿ ವಾಸಿಸುವ ಸುಮಾರು 90 ಹಳ್ಳಿಗಳಲ್ಲಿ ಮೀನುಗಾರರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ, ಗುಂಟೆಗಳ ಲೆಕ್ಕದಲ್ಲಿ ಜಮೀನು ಹೊಂದಿರುವ ಅತಿಚಿಕ್ಕ ಹಿಡುವಳಿದಾರರು ತರಕಾರಿಯನ್ನು ಬೆಳೆದು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಲಿಂಗನಮಕ್ಕಿ ಜಲಾಶಯ ಕಟ್ಟಿದ್ದರಿಂದಲೇ ಅಲ್ಲಿನ ನೂರಾರು ಬೆಸ್ತರು ಹಾಗೂ ಚಿಕ್ಕ ಹಿಡುವಳಿದಾರರ ಬದುಕು ನೀರಿಲ್ಲದೇ ಹೈರಾಣಾಗಿದೆ. ಈಗ ಮತ್ತೆ ಅವರ ಜೀವನ ಮುರುಟುವ ಸಾಧ್ಯತೆ ಇದೆ. ಇನ್ನೂ ಒಂದು ಅಪಾಯ ಈಗಾಗಲೇ ಸಂಭವಿಸುತ್ತಿದೆ. ಶರಾವತಿಯ ಸಹಜ ಹರಿವನ್ನು ತಡೆದದ್ದರ ಪರಿಣಾಮವಾಗಿ ಸಮುದ್ರದ ಅಲೆಗಳು ವಾಪಾಸು ಶರಾವತಿ ನದಿಗೆ ಸೇರುತ್ತಿದೆ. ಸಮುದ್ರದ ಭರತ ತೀವ್ರಗೊಂಡಾಗ ಸುಮಾರು 10-20 ಕಿ.ಮಿ.ಗಳವರೆಗೂ ಶರಾವತಿ ನದಿ ಹಿಮ್ಮುಖ ಹರಿಯುತ್ತಾಳೆ. ಈ ಪ್ರಕ್ರಿಯೆಯಿಂದ ನೆಲ ಮತ್ತು ಸಮುದ್ರದ ನಡುವೆ ಅಸಮತೋಲನವುಂಟಾಗುತ್ತದೆ. ಸಿಹಿ ನೀರು ಇರುವ ನದಿ ಮುಖಜದ ಪ್ರದೇಶ ಉಪ್ಪಾಗುವು ದರಿಂದಾಗಿ ಅಲ್ಲಿನ ಮಣ್ಣು ತನ್ನ ಫ‌ಲವತ್ತತೆ ಕಳೆದುಕೊಂಡು ಸಾರಹೀನವಾಗುತ್ತದೆ ಹಾಗೂ ಇದನ್ನು ನಂಬಿಕೊಂಡ ಚಿಕ್ಕ ಹಿಡುವಳಿದಾರರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ.

ಎತ್ತಿನಹೊಳೆ ಎಂಬ ಹೆಸರಿನಲ್ಲಿ ನೇತ್ರಾವತಿ ನದಿಯನ್ನು ತಿರುವು ಮಾಡಿ ಬಯಲು ನಾಡಿಗೆ ನೀರುಣಿಸುವ ಯೋಜನೆ ವಿಫ‌ಲವಾಗಿರುವುದು ನಮ್ಮ ಕಣ್ಮುಂದೆಯೇ ಇದೆ. ಬೃಹತ್‌ ಪೈಪುಗಳನ್ನು ಅಳವಡಿಸುವ ಪ್ರಕ್ರಿಯೆಲ್ಲಿ ಅಪಾರ ಪ್ರಮಾಣದ ಕಾಡು ನಾಶವಾಗಿದೆ ಮತ್ತು ಇದರಿಂದಾಗಿ ನೇತ್ರಾವತಿ ಸೇರಿದಂತೆ ಅದರ ಹನ್ನೆರೆಡು ಉಪನದಿಗಳು ಬತ್ತಿ ಹೋಗಿವೆ. ಯೋಜನೆಯ ಜಾರಿಯಲ್ಲಿ ಸಾರ್ವಜನಿಕರ ಹಣ ಮತ್ತು ಅಪಾರ ಪ್ರಮಾಣದ ನೈಸರ್ಗಿಕ ಸಂಪತ್ತು ಅಂದರೆ ಕಬ್ಬಿಣ, ಮರಳು ಜಲ್ಲಿ ಇತ್ಯಾದಿ ಸೂರೆಯಾಗಿದೆ. ಶರಾವತಿ ನದಿಗೂ ಹನ್ನೆರೆಡು ಹೊಳೆಗಳು ಸೇರುತ್ತವೆಯಾದ್ದರಿಂದ ಇದಕ್ಕೆ ಬಾರಂಗೀ ಎನ್ನುವ ಹೆಸರೂ ಇದೆ. ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿದ ನಂತರದಲ್ಲಷ್ಟೇ ಯೋಜನೆಯ ರೂಪುರೇಷೆಗಳನ್ನು ತಿಳಿಯಲು ಸಾಧ್ಯ. ಆಗ ಮಾತ್ರ ಸರ್ಕಾರದ ತಜ್ಞರ ಯೋಜನಾ ವರದಿ ಯಲ್ಲಿರುವ ತಪ್ಪುಗಳು, ಸುಳ್ಳುಗಳು ಹೊರಗೆ ಬರುತ್ತವೆ. ಈ ಹೊತ್ತಿನಲ್ಲಿಯೇ ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟದವತಿಯಿಂದ ಮತ್ತೂಂದು ತಜ್ಞ ವರದಿಯನ್ನು ತಯಾರಿಸಲಾಗುತ್ತಿದೆ. ಇದರಲ್ಲಿ ಈ ಯೋಜನೆ ಪಾರಿಸಾರಿಕವಾಗಿ, ತಾಂತ್ರಿಕವಾಗಿ, ವೈಜ್ಞಾನಿಕವಾಗಿ, ಆರ್ಥಿಕವಾಗಿ ಹೇಗೆ ಕಾರ್ಯಸಾಧುವಲ್ಲ ಎಂಬ ಸಂಪೂರ್ಣ ವಿವರಗಳು ಲಭ್ಯವಿರುತ್ತದೆ.

ಮಲೆನಾಡಿಗರ ವಿರೋಧವನ್ನು ಸರ್ಕಾರ ಎದುರಿಸಿ, ಆಡಳಿತ ಯಂತ್ರವನ್ನು ಬಳಸಿ ಬಲವಂತವಾಗಿ ಯೋಜನೆಯ ಜಾರಿಗೆ ಮುಂದಾಗುತ್ತದೆಯೋ ಅಥವಾ ವಿರೋಧಕ್ಕೆ ಮಣೆ ಹಾಕಿ ಯೋಜನೆಯನ್ನೇ ರದ್ದು ಪಡಿಸುತ್ತದೆಯೋ ಕಾಲವೇ ನಿರ್ಣಯಿಸಬೇಕು.

(ಲೇಖಕರು ಪರಿಸರ ಕಾರ್ಯಕರ್ತರು)

ಅಖಿಲೇಶ್ ಚಿಪ್ಲಿ ಸಾಗರ

Advertisement

Udayavani is now on Telegram. Click here to join our channel and stay updated with the latest news.

Next