ಬೆಂಗಳೂರು: ಸಕ್ಕರೆ ನಾಡಿನಲ್ಲಿ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಬಿಜೆಪಿಯಲ್ಲಿ ರಣೋತ್ಸಾಹ ತುಂಬಿರುವ ಪ್ರಧಾನಿ ನರೇಂದ್ರ ಮೋದಿ ಜೆಡಿಎಸ್ ಬಗ್ಗೆ ಒಂದಕ್ಷರವನ್ನೂ ಮಾತನಾಡದಿರುವುದೇಕೆ ?
ಇಂಥದೊಂದು ಪ್ರಶ್ನೆ ರಾಜಕೀಯ ವಲಯದಲ್ಲಿ ಈಗ ಗಿರಕಿ ಹೊಡೆಯಲಾರಂಭಿಸಿದೆ. ಕಾಂಗ್ರೆಸ್ ಬಗ್ಗೆ ವಾಗ್ಧಾಳಿ ನಡೆಸಿರುವ ಅವರು ಜಾತ್ಯತೀತ ಜನತಾ ದಳದ ಭದ್ರಕೋಟೆಯಲ್ಲೇ ಜೆಡಿಎಸ್ ಬಗ್ಗೆಯಾಗಲಿ, ಆ ಪಕ್ಷದ ನಾಯಕರ ಬಗ್ಗೆಯಾಗಲಿ ಒಂದಕ್ಷರ ವನ್ನೂ ಮಾತನಾಡದೇ ಇರುವುದರ ಮರ್ಮವೇನು? ಎಂಬುದು ಖುದ್ದು ಬಿಜೆಪಿ ನಾಯಕರಿಗೇ ಯಕ್ಷಪ್ರಶ್ನೆಯಾಗಿ ಪರಿಣಮಿಸಿದೆ.
ಪ್ರಧಾನಿ ನಡೆಯ ಬಗ್ಗೆ ಮೂರು ರಾಜಕೀಯ ಪಕ್ಷದಲ್ಲಿ ಅದರಲ್ಲೂ ವಿಶೇಷವಾಗಿ ಬಿಜೆಪಿ ಪಾಳಯದಲ್ಲಿ ಪ್ರಶ್ನೆಗಳು ಉದ್ಭವವಾಗುವುದಕ್ಕೂ ಕಾರಣಗಳು ಇಲ್ಲದಿಲ್ಲ. ಕಳೆದ ತಿಂಗಳು ಮಂಡ್ಯದಲ್ಲಿ ನಡೆದ ಸಮಾವೇಶಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಜೆಡಿಎಸ್ ವಿರುದ್ಧ ವಾಚಾಮಗೋಚರವಾಗಿ ಟೀಕಾಸ್ತ್ರ ಪ್ರಯೋಗಿಸಿದ್ದರು. ಜೆಡಿಎಸ್ ಕಾಂಗ್ರೆಸ್‌ನ ಬಿ ಟೀಂ ಎಂದು ಟೀಕಿಸಿದ್ದು ಮಾತ್ರವಲ್ಲ, ಈ ಪಕ್ಷದ ನಾಯಕರು ವಂಶವಾದದ ಮೂಲಕ ಕರ್ನಾಟಕವನ್ನು “ಎಟಿಎಂ’ ಆಗಿ ಮಾಡಿಕೊಂಡಿದ್ದಾರೆ ಎಂದು ವಾಗ್ಧಾಳಿ ನಡೆಸಿದ್ದರು. ಅಮಿತ್ ಶಾ ಈ ಹೇಳಿಕೆಯಿಂದ ಆಚೆ ಬರುವುದಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರಿಗೆ ಸರಿಸುಮಾರು ಒಂದು ವಾರವೇ ಬೇಕಾಯ್ತು. ಸರಣಿ ಟ್ವೀಟ್‌ಗಳು, ಪತ್ರಿಕಾ ಹೇಳಿಕೆಗಳು, ಟಿವಿ ಬೈಟ್‌ಗಳು ಸೇರಿದಂತೆ ಲಭ್ಯವಿರುವ ಎಲ್ಲ ವೇದಿಕೆಗಳಲ್ಲೂ ಅಮಿತ್ ಶಾ ವಿರುದ್ಧ ಕುಮಾರಸ್ವಾಮಿ ಕೆಂಡದುಂಡೆಗಳನ್ನೇ ಉಗುಳಿ ದ್ದರು. ಕೇವಲ ಭಾಷಣದಲ್ಲಿ ಮಾತ್ರವಲ್ಲ ಬಿಜೆಪಿ ಹಿರಿಯ ನಾಯಕರ ಜತೆಗೆ ನಡೆಸಿದ ಸಭೆಯಲ್ಲೂ “ಅಡೆjಸ್ಟ್ ಮೆಂಟ್’ ರಾಜಕಾರಣದ ಬಗ್ಗೆ ಶಾ ಆಕ್ರೋಶ ವ್ಯಕ್ತ ಪಡಿಸಿದ್ದರು. ಹಳೆ ಮೈಸೂರು ಭಾಗದಲ್ಲಿ ಇದುವರೆಗೆ ಬಿಜೆಪಿ ನಿರೀಕ್ಷಿತ ಸಾಧನೆ ಮಾಡದೇ ಇರುವ ಬಗ್ಗೆ ಬೇಸರವನ್ನೂ ವ್ಯಕ್ತಪಡಿಸಿದ್ದರು.
ಇದಾದ ಬಳಿಕ ಬಿಜೆಪಿ ನಾಯಕರ ಜೆಡಿಎಸ್ ಬಗೆಗಿನ ವರಸೆ ಬದಲಾಗಿತ್ತು. ಬಿಜೆಪಿ ರಾಷ್ಟ್ರೀಯ ಸಂಘ ಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಈ ಹಿಂದೆ ಕುಮಾರಸ್ವಾಮಿಯವರನ್ನು ಟೀಕಿಸಿದ್ದ ವಿಡಿಯೋ ತುಣುಕುಗಳು ಮತ್ತೆ “ಮರು ಪ್ರಸಾರ’ಗೊಂಡವು. ಮೈಸೂರು-ಬೆಂಗಳೂರು ದಶಪಥ ರಸ್ತೆ ಉದ್ಘಾಟನೆಯವರೆಗೂ ಬಿಜೆಪಿ-ಜೆಡಿಎಸ್ ಸಮರ ಮುಂದುವರಿದೇ ಇತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಈ ಯಾವ ಅಂಶಗಳಿಗೂ ತಮ್ಮ ಭಾಷಣದಲ್ಲಿ ಅವಕಾಶ ನೀಡದೇ ಇರುವ ಮೂಲಕ ಅಚ್ಚರಿ ಸೃಷ್ಟಿಸಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜತೆಗೆ ನರೇಂದ್ರ ಮೋದಿ ಹೊಂದಿರುವ ವೈಯಕ್ತಿಕ ಸಂಬಂಧ ಹಾಗೂ ಗೌರವದ ಹಿನ್ನೆಲೆಯಲ್ಲಿ ಅವರು ಜೆಡಿಎಸ್ ಬಗ್ಗೆ ಮೃಧು ಧೋರಣೆ ತಳೆದಿರಬಹುದು ಎಂಬ ವಾದವನ್ನು ತಳ್ಳಿಹಾಕುವಂತಿಲ್ಲ. ಇನ್ನು ಮಂಡ್ಯದಲ್ಲಿ ನೇರ ಹಣಾಹಣೀ ಇರುವುದು ಕಾಂಗ್ರೆಸ್-ಜೆಡಿಎಸ್ ಮಧ್ಯೆ ಮಾತ್ರ. ಈ ಬಾರಿ ಬಿಜೆಪಿಗೆ ಒಂದು ಸ್ಥಾನ ಬೋನಸ್ ರೂಪದಲ್ಲಿ ಬರುವ ನಿರೀಕ್ಷೆ ಇದೆ. ಹೀಗಿರುವಾಗ ಒಕ್ಕಲಿಗರ ಭದ್ರಕೋಟೆಯಲ್ಲಿ ಆ ಸಮುದಾಯದ ಹಿರಿಯ ನಾಯಕರನ್ನು ಟೀಕಿಸಿ ಒಟ್ಟಾರೆಯಾಗಿ ಒಕ್ಕಲಿಗ ಸಮುದಾಯದಲ್ಲಿ ಬಿಜೆಪಿ ಪರವಾಗಿರುವ ಸದ್ಭಾವನೆಯನ್ನು ಕೆಣಕುವುದು ಬೇಡ ಎಂಬ ಕಾರಣಕ್ಕೆ ಅನಗತ್ಯ ಟೀಕೆಯನ್ನು ಬದಿಗಿಟ್ಟಿರುವ ಸಾಧ್ಯತೆ ಹೆಚ್ಚು ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಹಾಗಂತ ಜೆಡಿಎಸ್ ಬಗ್ಗೆ ಸಾಫ್ಟ್ ಕಾರ್ನರ್ ಅಂತೂ ಅಲ್ಲ. ಈಗಾಗಲೇ ಜೆಡಿಎಸ್‌ಗೆ ಎಷ್ಟು ಡ್ಯಾಮೇಜ್ ಮಾಡಬೇಕೋ ಅಷ್ಟು ಮಾಡಲಾಗಿದೆ. ಆದರೆ ಪ್ರಧಾನಿ ಮೋದಿ ಅವರ ಮೌನದ ಹಿಂದಿನ ಲೆಕ್ಕಾಚಾರಗಳು “ಮೋದಿ-ಅಮಿತ್ ಶಾ’ ಜೋಡಿಗೆ ಮಾತ್ರ ತಿಳಿದಿದೆ. ರಾಜ್ಯ ಬಿಜೆಪಿ ನಾಯಕರಂತೂ ಕಗ್ಗತ್ತಲಲ್ಲಿ ಇದ್ದಂತಿದೆ.
-ರಾಘವೇಂದ್ರ ಭಟ್