ರಾಮನಗರ: ಸರ್ವೀಸ್ ರಸ್ತೆ ನಿರ್ವಹಣೆಗೆ ಸಂಬಂಧಿಸಿದಂತೆ ಎನ್‌ಎಚ್‌ಎಐ ಮತ್ತು ರಾಜ್ಯ ಸರ್ಕಾರ ಉದಾಸೀನ ಧೋರಣೆ ತಾಳಿರುವುದು ಪ್ರಯಾಣಿಕರಿಗೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ. ಒಂದೆಡೆ ಸರ್ವೀಸ್ ರಸ್ತೆಯಲ್ಲಿ ಸಂಚಾರ ನಿಯಮಗಳನ್ನು ಪಾಲನೆ ಮಾಡದಿರುವುದು, ಕೆಲವೆಡೆ ಸರ್ವೀಸ್ ರಸ್ತೆ ಬಂದ್ ಆಗಿದ್ದರೂ ಮಾಹಿತಿ ನೀಡದಿರುವುದು ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿ ತಂದೊಡ್ಡಿದೆ.
ರಾಮನಗರ-ಚನ್ನಪಟ್ಟಣ ಬೈಪಾಸ್ ರಸ್ತೆಯ ಎರಡೂ ಬದಿಯಲ್ಲಿರುವ ಸರ್ವೀಸ್ ರಸ್ತೆ ಬೈರಾಪಟ್ಟಣ ಸಮೀಪ ರೈಲು ಹಳಿಗಳ ಬಳಿ ಅಂತ್ಯಗೊಂಡಿದೆ. ರಸ್ತೆ ಅಂತ್ಯ ವಾಗುತ್ತದೆ ಎಂದು ಯಾವುದೇ ಫಲಕ ವನ್ನಾಗಲಿ, ರಸ್ತೆ ಬಂದ್ ಆದ ಬಳಿಕ ಮತ್ತೆ ಯಾವ ರಸ್ತೆಯಲ್ಲಿ ಸಂಚರಿಸಿ ಹೆದ್ದಾರಿಗೆ ಸಂಪರ್ಕ ಪಡೆಯಬೇಕು ಎಂಬ ಸೂಚನೆಯನ್ನಾಗಲಿ ಹೆದ್ದಾರಿ ಪ್ರಾಧಿಕಾರ ಅಥವಾ ಸ್ಥಳೀಯ ಆಡಳಿತ ನೀಡದಿರುವುದು ಪ್ರಯಾಣಿಕರ ಜೀವಕ್ಕೆ ಎರವಾಗಿರುವ ಉದಾಹರಣೆ ಸಾಕಷ್ಟಿದೆ.
ಎಕ್ಸ್‌ಪ್ರೆಸ್ ವೇನಲ್ಲಿ ಬೈಕ್ ಹಾಗೂ ಆಟೋ ಪ್ರವೇಶ ಇಲ್ಲ: ಬೈಕ್ ಹಾಗೂ ಆಟೋಗಳಿಗೆ ಎಕ್ಸ್‌ಪ್ರೆಸ್ ವೇನಲ್ಲಿ ಪ್ರವೇಶವಿಲ್ಲದ ಕಾರಣ ಈ ವಾಹನಗಳು ಬೈರಾಪಟ್ಟಣ ರೈಲ್ವೆ ಹಳಿ ಬಳಿ ರಸ್ತೆ ಅಂತ್ಯಗೊಳ್ಳುತ್ತಿದ್ದಂತೆ ಪ್ರಯಾ ಣಿಕರು ಎಲ್ಲಿಗೆ ಹೋಗಬೇಕು ಎಂದು ತಿಳಿಯದೆ ಗೊಂದಲಕ್ಕೆ ಸಿಲುಕುತ್ತಿದ್ದಾರೆ. ಮುಂದೆ ದಾರಿ ಬಂದ್ ಆಗಿರುವುದು ತಿಳಿಯದೆ ಇಬ್ಬರು ಯುವಕರು ರೈಲ್ವೆ ಕಂಬಿಗೆ ಅಡ್ಡಲಾಗಿ ಅಳವಡಿಸಿದ್ದ ಕಬ್ಬಿಣದ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ಇಬ್ಬರು ಯುವ ಕರು ಸಾವಿಗೀಡಾಗಿದ್ದರು. ಈ ಸ್ಥಳದಲ್ಲಿ ಇದೇ ರೀತಿ ಮೂರು ನಾಲ್ಕು ಅಪಘಾತಗಳು ಸಂಭವಿಸಿದೆಯಾದರೂ ಯಾರೂ ಎಚ್ಚೆತ್ತುಕೊಂಡಿಲ್ಲ.
ಪ್ರಯಾಣಿಕರ ಪರದಾಟ: ಇನ್ನು ಬೈರಾಪಟ್ಟಣ ಗ್ರಾಮದ ರೈಲ್ವೆ ಹಳಿ ಬಳಿ ಸರ್ವೀಸ್ ರಸ್ತೆ ಬಂದ್ ಆಗಿರುವ ಪರಿಣಾಮ ಪ್ರಯಾಣಿಕರು ಎಲ್ಲಿಗೆ ಹೋಗಬೇಕು, ಹೇಗೆ ಹೋಗಬೇಕು ಎಂದು ತಿಳಿಯದೆ ಪರದಾಡು ವಂತಾಗಿದೆ. ಮತ್ತೆ ಹೆದ್ದಾರಿಗೆ ಸಂಪರ್ಕ ಪಡೆಯಬೇಕು ಎಂದರೆ ಒಂದು ಕಿ.ಮೀ ನಷ್ಟು ಹಿಂದಕ್ಕೆ ಹೋಗಿ ಅಲ್ಲಿ ದೊಡ್ಡಮಳೂರು ಗ್ರಾಮದ ನದಿ ನರಸಿಂಹಸ್ವಾಮಿ ದೇವಾಲಯದ ರಸ್ತೆಯಲ್ಲಿ ಸಾಗಿ ಹೆದ್ದಾರಿಗೆ ಸಂಪರ್ಕ ಪಡೆಯಬೇಕಿದೆ. ಈ ಬಗ್ಗೆ ಮಾಹಿತಿ ಗೊತ್ತಿಲ್ಲದೆ ಬೈಕ್ ಸವಾರರು ಪರದಾಡುವಂತಾಗಿದೆ. ರಾತ್ರಿ ವೇಳೆ ಪ್ರಯಾಣಿಕರ ಪಾಡು ದೇವರಿಗೆ ಪ್ರೀತಿ ಎಂಬಂ ತಾಗಿದೆ. ಈ ಸಮಸ್ಯೆ ಬಗ್ಗೆ ಯಾರೂ ಗಮನಹರಿಸುತ್ತಿಲ್ಲದಿರುವುದು ಅಧಿಕಾರಿಗಳ ಬೇಜವಾಬ್ದಾರಿ ತನಕ್ಕೆ ಸಾಕ್ಷಿಯಾಗಿದೆ.
ಎಕ್ಸ್‌ಪ್ರೆಸ್ ವೇನ ಎಂಟ್ರಿ ಮತ್ತು ಎಕ್ಸೈಟ್ ಬಳಿಯೇ ಹೋಟೆಲ್ ಮತ್ತು ಟೀ ಅಂಗಡಿಗಳು: ಎಕ್ಸ್‌ಪ್ರೆಸ್ ವೇನ ಎಂಟ್ರಿ ಮತ್ತು ಎಕ್ಸೈಟ್ ಬಳಿಯೇ ಹೋಟೆಲ್ ಮತ್ತು ಟೀ ಅಂಗಡಿಗಳು ಇದ್ದು, ಈ ಹೋಟೆಲ್‌ಗಳ ಬಳಿ ಹತ್ತಾರು ವಾಹನಗಳು ನಿಲುಗಡೆ ಮಾಡು ವುದರಿಂದ ಇಲ್ಲಿ ಸುಗಮ ಸಂಚಾರಕ್ಕೆ ಅಡ್ಡಿ ಯಾಗುತ್ತಿದೆ. ಎಕ್ಸ್‌ಪ್ರೆಸ್ ವೇಗೆ ಒಂದೆಡೆ ಎಂಟ್ರಿ ಮತ್ತು ಎಕ್ಸೈಟ್ ಪಡೆಯುವ ವಾಹನಗಳು, ಸರ್ವೀಸ್ ರಸ್ತೆಯಲ್ಲಿ ಎರಡೂ ಕಡೆಯಿಂದ ತಿರುಗಾಡುವ ವಾಹನಗಳು ಹಾಗೂ ಹೋಟೆಲ್ ಬಳಿ ನಿಲ್ಲುವ ಸಾಲು ಸಾಲು ವಾಹನಗಳಿಂದಾಗಿ ಸರ್ವೀಸ್ ರಸ್ತೆಯಲ್ಲಿ ಸಂಚರಿಸಲು ಪರದಾಡುವಂತಾಗಿದೆ. ಹೆದ್ದಾರಿ ಪ್ರಾಧಿಕಾರ ಮತ್ತು ಪೊಲೀಸ್ ಇಲಾಖೆ ಇನ್ನಾದರೂ ಇತ್ತ ಗಮನಹರಿಸಿ, ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುವುದಕ್ಕೆ ಬ್ರೇಕ್ ಹಾಕಬೇಕಿದೆ.
ಇದರಿಂದಾಗಿ ಎಂಟ್ರಿ ಎಕ್ಸೈಟ್ ಬಳಿಯ ಸರ್ವೀಸ್ ರಸ್ತೆಯಲ್ಲಿ ಅಪಘಾತಗಳು ಸಂಭವಿಸುವುದನ್ನು ತಪ್ಪಿಸಬಹುದಾಗಿದೆ. ದಶಪಥ ರಸ್ತೆಯ ಸರ್ವೀಸ್ ರಸ್ತೆಗಳ ಅವ್ಯವಸ್ಥೆಯನ್ನು ಸರಿಪಡಿಸಲು ಎನ್‌ಎಚ್‌ಎಐ ಅಥವಾ ರಾಜ್ಯ ಸರ್ಕಾರ ಮುಂದಾಗಬೇಕಿದೆ. ಸರ್ವೀಸ್ ರಸ್ತೆಯಲ್ಲಿ ಪಾರ್ಕಿಂಗ್‌ನಿಂದ ಅಪಾಯ ಸರ್ವೀಸ್ ರಸ್ತೆಯಲ್ಲಿ ಸಂಚರಿಸುವುದು ತ್ರಾಸಕಾರಿ ಎನಿಸಿದ್ದು, ಇದಕ್ಕೆ ಮುಖ್ಯ ಕಾರಣ ಸರ್ವೀಸ್ ರಸ್ತೆಯ ಬದಿಯಲ್ಲಿ ನಿರ್ಮಾಣಗೊಂಡಿರುವ ಕೆಲ ಅಂಗಡಿ ಮುಗ್ಗಟ್ಟುಗಳು, ಹೋಟೆಲ್‌ಗಳು, ಟೀ ಅಂಗಡಿಗಳನ್ನು ಸರ್ವಿಸ್ ರಸ್ತೆಯಂಚಿನಲ್ಲೇ ನಿರ್ಮಿಸಿರುವುದು ಹೊಸ ಸಮಸ್ಯೆಗಳಿಗೆ ಎಡೆಮಾಡಿಕೊಟ್ಟಿದೆ.
ಸರ್ವೀಸ್ ರಸ್ತೆಯ ಎರಡೂ ಬದಿಯಲ್ಲಿ ದ್ವಿಪಥ ರಸ್ತೆಯನ್ನ ನಿರ್ಮಾಣ ಮಾಡಿದ್ದು, ಹೋಟೆಲ್‌ಗಳಿಗೆ ಬರುವ ವಾಹನಗಳು ರಸ್ತೆಯಲ್ಲೇ ನಿಲ್ಲಿಸಿ ಹೋಗುತ್ತಿವೆ. ಇದರಿಂದಾಗಿ ರಸ್ತೆಯಲ್ಲಿ ಸಂಚರಿಸುವ ಇತರೆ ವಾಹನಗಳಿಗೆ ಅಡಚಣೆಯಾಗುತ್ತಿದೆ.
– ಸು.ನಾ.ನಂದಕುಮಾರ್