Advertisement

ಚೀನಾ ಹಿಂದಿಕ್ಕಲು ಭಾರತಕ್ಕೆ  ಸಾಧ್ಯವೇ?

11:18 AM Dec 26, 2017 | Sharanya Alva |

1970ರವರೆಗೆ ಚೀನಾ ಮತ್ತು ಭಾರತದ ಪ್ರಗತಿಯ ಗತಿ ಹೆಚ್ಚು ಕಡಿಮೆ ಸಮಾನವಾಗಿತ್ತು. ಆ ಬಳಿಕದ ವರ್ಷಗಳಲ್ಲಿ ಎರಡೂ ದೇಶಗಳು ತಮ್ಮ ಭಿನ್ನ ಆರ್ಥಿಕ ನೀತಿಗಳನ್ನು ಅನುಸರಿಸಿದ್ದು ಇತಿಹಾಸ. 1978ರಲ್ಲೇ ಚೀನಾ ತನ್ನ ಆರ್ಥಿಕ ಸುಧಾರಣೆಗಳನ್ನು ಪ್ರಾರಂಭಿಸಿ ಹಂತಹಂತವಾಗಿ ತೀವ್ರತೆಯನ್ನು ಹೆಚ್ಚಿಸಿತು. ಮೊದಲ ಹಂತದಲ್ಲಿ ಕೃಷಿ, ವಿದೇಶ ವ್ಯಾಪಾರ ಮತ್ತು ಹೂಡಿಕೆಯ ರಂಗಗಳಲ್ಲಿ ಸುಧಾರಣೆ ಜಾರಿ ಮಾಡಲಾಯಿತು. ಸರಕಾರಿ ಒಡೆತನದ ಜಮೀನನ್ನು ಸಣ್ಣ ಹಿಡುವಳಿಗಳಾಗಿ ವಿಂಗಡಿಸಿ ಪ್ರತಿ ಕುಟುಂಬಕ್ಕೂ ಹಂಚಲಾಯಿತು. ಕೃಷಿ ರಂಗದಲ್ಲಿ ಉತ್ತಮ ಪ್ರಗತಿ ಸಾಧಿಸಲು ಪ್ರಾರಂಭವಾಗುವುದರ ಜೊತೆಗೆ ಗ್ರಾಮೀಣ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡಲಾಯಿತು. ಆರೋಗ್ಯ, ವಿದ್ಯಾಭ್ಯಾಸ, ಸಣ್ಣ ಉದ್ದಿಮೆಗಳಿಗೆ ಪ್ರೋತ್ಸಾಹ, ಉತ್ತಮ ಸಾರ್ವಜನಿಕ ವಿತರಣಾ ವ್ಯವಸ್ಥೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಚೀನಾದ ಪ್ರಗತಿಗೆ ನಾಂದಿ ಹಾಡಿತು. ಜೊತೆಗೆ ಜಿಡಿಪಿಯ ವೃದ್ಧಿ ಭಾರತಕ್ಕಿಂತ ಹೆಚ್ಚಾಗತೊಡಗಿತು.

Advertisement

ಭಾರತ ತನ್ನ ಆರ್ಥಿಕ ಸುಧಾರಣೆಗಳನ್ನು ಪ್ರಾರಂಭಿಸಿದ್ದು ಒಂದು ದಶಕಕ್ಕೂ ತಡವಾಗಿ 1991ರಲ್ಲಿ. ಆಗಲೇ ಚೀನಾ ಪ್ರಗತಿಯಲ್ಲಿ ಬಹಳಷ್ಟು ಮುಂದೆ ನೆಗೆದಿತ್ತು. ಚೀನಾದಂತೆ ಭಾರತ ರಫ್ತು ವ್ಯಾಪಾರದಲ್ಲಿ ಅಷ್ಟೇನೂ ಮುಂದುವರಿಯಲಿಲ್ಲ. ಭಾರತದಲ್ಲೇ ಸಾಕಷ್ಟು ಉಪಭೋಗಿಗಳು ಇರುವುದರಿಂದ ಉತ್ಪಾದನೆ ಎಲ್ಲ ಸ್ವದೇಶಿ ಮಾರುಕಟ್ಟೆಯಲ್ಲೇ ಬಿಕರಿಯಾಗತೊಡಗಿತು. ಚೀನಾ ಗಳಿಸಿದ ಆರಂಭಿಕ ಮುನ್ನಡೆ ಅದಕ್ಕೆ ವರಪ್ರದವಾಯಿತು. ಭಾರತ ಪ್ರಗತಿಯ ವೇಗ ಹೆಚ್ಚಿಸಿದರೂ, ಕೆಲವು ಆಂತರಿಕ ನ್ಯೂನತೆಗಳು ಪ್ರಗತಿಯ ಮೇಲೆ ಕಡಿವಾಣ ಹಾಕಿದವು. ಈ ಕುರಿತಾದ ಅವಲೋಕನವೇ ಲೇಖನದ ಆಶಯ.

ಇಂದಿನ ಸ್ಥಿತಿಗತಿ
ಭಾರತ ಮತ್ತು ಚೀನಾದ ಜಿಡಿಪಿಯಲ್ಲಿ ವಿವಿಧ ರಂಗಗಳ ಕೊಡುಗೆಯ ಅಂಕಿಸಂಖ್ಯೆಗಳನ್ನು ತಖೆ¤ 1ರಲ್ಲಿ ನೀಡಲಾಗಿದೆ. ಭಾರತದ ಸೇವಾ ರಂಗ ತೀವ್ರಗತಿಯಿಂದ ಮುನ್ನಡೆದರೂ ಉತ್ಪಾದನಾ ರಂಗ ಅಷ್ಟು ಬಿರುಸು ಕಾಣಲಿಲ್ಲ. ಚೀನಾದ ಉತ್ಪಾದನಾ ರಂಗವೂ ಸೇವಾ ರಂಗವೂ ಸಮಾನವಾಗಿ ಬೆಳೆದು ಆರ್ಥಿಕತೆ ಉತ್ತಮ ಸಮತೋಲನವನ್ನು ಸಾಧಿಸಿದ್ದನ್ನು ಕಾಣಬಹುದು. ಚೀನಾದ ಒಟ್ಟು ಆದಾಯದಲ್ಲಿ ವಿದೇಶ ವ್ಯವಹಾರದ ಪಾಲು ಹೆಚ್ಚುತ್ತಿರುವುದು ಪ್ರಗತಿಗೆ ಒಂದು ವಿಶೇಷ ಪ್ರಚೋದಕವಾಗಿ ಕೆಲಸ ಮಾಡುತ್ತಿದೆ. ಜಾಗತಿಕ ಬ್ಯಾಂಕು ಭಾರತ ಮತ್ತು ಚೀನಾದ ಪ್ರಗತಿಯ ಭವಿಷ್ಯದ ಅಂದಾಜನ್ನು ಈಗಾಗಲೇ ಮಾಡಿದೆ. 2015-18ರ ಅವಧಿಯಲ್ಲಿ ಆಗಬಹುದಾದ ಆರ್ಥಿಕ ಪ್ರಗತಿಯ ಗತಿಯನ್ನು ತಖೆ¤ 2ರಲ್ಲಿ ಕೊಡಲಾಗಿದೆ. ಈ ಆಯ್ದ ವರ್ಷಗಳಲ್ಲಿ ಭಾರತದ ಅಂದಾಜು ಪ್ರಗತಿಯ ವೇಗ ಚೀನಾಕ್ಕಿಂತ ಮುಂದಿರುವುದು ಗಮನಾರ್ಹ ಅಂಶವಾಗಿದೆ.

ಸೀಮಿತ ಹಣದುಬ್ಬರ ಕೂಡ ಪ್ರಗತಿಯ ಪ್ರಚೋದಕವೆಂದು ಭಾವಿಸಲಾಗುತ್ತದೆ. ಸಣ್ಣ ಪ್ರಮಾಣದ, ಹಿಡಿತದಲ್ಲಿರುವ ಹಣದುಬ್ಬರ ಸಕಾರಾತ್ಮಕವಾಗಿ ಆರ್ಥಿಕ ಪ್ರಗತಿಗೆ ಸಹಾಯ ಮಾಡುತ್ತದೆ. ಈ ದರದಲ್ಲಿ ಭಾರತ ಚೀನಾಕ್ಕಿಂತ ಹೆಚ್ಚಿದ್ದರೂ, ಹಣದುಬ್ಬರ ಎರಡು ಅಂಕಿಗಳಿಂದ ಕೆಳಗಿಳಿಯುತ್ತಾ ಶೇ.5ರ ಸರಹದ್ದಿಗೆ ಬಂದಿರುವುದು ಪ್ರಗತಿಗೆ ಸಹಾಯಕವೇ ಆಗಿದೆ. ಇಂದಿನ ಸ್ಥಿತಿಗತಿಗಳ ತಳಹದಿಯಲ್ಲಿ ಮುಂದಿನ ಹಾದಿಯನ್ನು ವಿವೇಚಿಸುವುದು ಸೂಕ್ತವಾದೀತು. ಜತೆಗೆ ಎರಡೂ ದೇಶಗಳ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ವಿಶ್ಲೇಷಿಸಿದರೆ ಮುಂದಿನ ಕಾರ್ಯತಂತ್ರದ ಸುಳಿವು ಸಿಗುವುದು ನಿಚ್ಚಳ.

ಭಾರತ ಯಾಕೆ ಚೀನಾಕ್ಕಿಂತ ಮುಂದಿಲ್ಲ?
ಭಾರತ ಆರ್ಥಿಕ ಮತ್ತು ಇತರ ರಂಗಗಳಲ್ಲಿ ಸುಧಾರಣೆ ಗಳನ್ನು ವಿಳಂಬವಾಗಿ ಪ್ರಾರಂಭಿಸಿತು. ಇದರಿಂದ ಅಮೂಲ್ಯವಾದ ಒಂದು ದಶಕದ ಪ್ರಗತಿಯ ಅವಕಾಶದಿಂದ ವಂಚಿತವಾಯಿತು. ಹೀಗಾಗಿ ಮೊದಲು ಸುಧಾರಣೆ ಪ್ರಾರಂಭಿಸಿದ ಚೀನಾಕ್ಕೆ ಆರಂಭಿಕ ಲಾಭ ಸಿಕ್ಕಿತು.

Advertisement

ಎರಡನೆಯದಾಗಿ ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾದರೆ ಚೀನಾ ಮಾವೋ ಸಿದ್ಧಾಂತದ “ಏಕಾಧಿಪತ್ಯ’ದಲ್ಲಿರುವ ದೇಶ. ಪ್ರಜಾತಂತ್ರ ಪ್ರಜೆಗಳಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ಕೊಡುವುದೇನೋ ನಿಜ; ಆದರೆ ನೀತಿಗಳನ್ನು ರೂಪಿಸುವುದಕ್ಕೂ ಅನುಷ್ಠಾನಗೊಳಿಸುವುದಕ್ಕೂ ತಕ್ಕುದಲ್ಲ. ಒಂದು ಪ್ರಗತಿಯ ಯೋಜನೆಯನ್ನು ರೂಪಿಸಿದರೆ ಅದಕ್ಕೆ ರಾಜಕೀಯ ಅನುಮೋದನೆ ಪಡೆಯಲು ವಿಳಂಬವಾಗುವುದು ಸಾಮಾನ್ಯ ವಿಚಾರ. ವಿಪಕ್ಷಗಳು ರಾಷ್ಟ್ರ ಹಿತಕ್ಕಿಂತ ತಮ್ಮ ರಾಜಕೀಯ ಲಾಭದ ಕಡೆಗೆ ಹೆಚ್ಚು ಪ್ರಾಧಾನ್ಯತೆ ಕೊಟ್ಟು ವಿಳಂಬಕ್ಕೆ ಕಾರಣವಾಗುತ್ತವೆ. ಇನ್ನು ಸರಕಾರ ಅನುಷ್ಠಾನಕ್ಕೆ ಹೊರಟಾಗ ಭೂಸ್ವಾಧೀನದಿಂದ ಹಿಡಿದು ಪರಿಸರದ ತನಕ ವಿವಿಧ ನೆಪ ತೆಗೆದು ಅಡ್ಡಗಾಲು ಹಾಕಲಾಗುತ್ತದೆ. ಚೀನಾದಂತಹ ರಾಜಕೀಯ ವ್ಯವಸ್ಥೆಯಲ್ಲಿ ಪಕ್ಷದ ಅಂಗಗಳು ಮತ್ತು ನೇತಾರರು ಮಾಡಿದ ನಿರ್ಧಾರವೇ ಅಂತಿಮ. ಅದನ್ನು ನ್ಯಾಯಾಲಯಗಳಲ್ಲಾಗಲಿ ಮುಷ್ಕರಗಳಿಂದಾಗಲಿ ತಡೆಯುವುದು ಅಸಾಧ್ಯದ ಮಾತು. ಹಾಗೇನಾದರೂ ಮಾಡುವ ಪ್ರಯತ್ನ ನಡೆದರೆ ಗುಂಡಿಕ್ಕಿ ಕೊಲ್ಲುವಂತಹ ನಿರ್ದಯತೆಯಿಂದ ಸರಕಾರ ಮುಂದುರಿಯುವ ಸಾಧ್ಯತೆ ಇದೆ. ಆದ್ದರಿಂದ ನಮ್ಮ ರಾಜಕೀಯ ವ್ಯವಸ್ಥೆಯಿಂದಾಗಿ ಭಾರತಕ್ಕೆ ಹಿಂದೇಟಾದುದನ್ನು ನಾವು ಗಮನಿಸಬಹುದು.

ಮೂರನೆಯ ಮುಖ್ಯ ಕಾರಣ ಚೀನಾದ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಅದರಿಂದ ಉದ್ಯಮಗಳಿಗೆ ಸಿಕ್ಕಿದ ಅನುಕೂಲತೆ. ಸುಧಾರಣೆಗಳನ್ನು ಕಾರ್ಯಗತಗೊಳಿಸುವಾಗ ಮೂಲಸೌಕರ್ಯಗಳಿಗೂ ಸಾಮಾಜಿಕ ಸೌಕರ್ಯಗಳಿಗೂ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಬಡತನ ನಿರ್ಮೂಲನೆಯ ಜೊತೆಗೆ ಜನರ ಜೀವನ ಸುಧಾರಿಸಿದ್ದು ಚೀನಾದ ದೊಡ್ಡ ಸಾಧನೆ. ಜನಸಂಖ್ಯೆಯ ನಿಯಂತ್ರಣಕ್ಕೆ “ಒಂದೇ ಮಗು’ ಎಂಬ ಧೋರಣೆ ಅನುಷ್ಠಾನ ಮಾಡಿದ್ದು ಈಗ ಫ‌ಲ ನೀಡುತ್ತಿರುವ ಅಂದಿನ ನೀತಿ. ಭಾರತ ಇಂತಹ ದಿಟ್ಟಹೆಜ್ಜೆ ತೆಗೆದುಕೊಳ್ಳಲು ಸಶಕ್ತವೇ? ತುಂಬಾ  ಸಂವೇದನಾಶೀಲವಾದ ಇಂತಹ ವಿಚಾರಕ್ಕೆ ಯಾವ ಸರಕಾರ ಮುಂದಾದೀತು ಎಂದು ಕಾದು ನೋಡಬೇಕಷ್ಟೇ.
ಚೀನಾದ ಕಾರ್ಮಿಕ ನೀತಿಯೂ ಪ್ರಗತಿಗೆ ಪರವಾಗಿದೆ. ಅಲ್ಲಿ ಹನ್ನೆರಡು ಗಂಟೆಗಳ ಎರಡು ಪಾಳಿಗಳು; ಭಾರತದಲ್ಲಿ ಎಂಟು
ಗಂಟೆಗಳ ಮೂರು ಪಾಳಿಗಳು. ಇದರಿಂದ ಮಾನವ ಸಂಪನ್ಮೂಲ ಗಳ ವೆಚ್ಚದಲ್ಲಿ ಮಹತ್ವದ ಕಡಿತ ಸಾಧ್ಯವಾಗುವುದರಿಂದ ರಫ್ತು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿರಲು ಚೀನಾಕ್ಕೆ ಸಾಧ್ಯವಾಗಿದೆ.

 


ಇಷ್ಟೇ ಅಲ್ಲದೆ ಕಾರ್ಮಿಕ ಕಾನೂನುಗಳು ಕಟ್ಟುನಿಟ್ಟಾಗಿರುವು ದರಿಂದ ಉತ್ಪಾದಕತೆ ಹೆಚ್ಚು. ಮುಷ್ಕರಗಳಿಗೆ ಅವಕಾಶವಿಲ್ಲದ ಕಾರಣ ಉತ್ಪಾದಕತೆ ಹೆಚ್ಚಿ ದೇಶದ ಪ್ರಗತಿಗೆ ಸಹಾಯಕವಾಗಿದೆ. ಚೀನಾ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತನ್ನ ಸರಕುಗಳನ್ನು ಮಾರಲು ಸಫ‌ಲವಾಗಿದೆ. ಸಣ್ಣ ಉದ್ದಿಮೆಗಳೇ ಹೆಚ್ಚಿರುವುದರಿಂದ ದೇಶದಾದ್ಯಂತ ಉತ್ಪಾದನೆ ನಡೆಯುತ್ತಲೇ ಇರುತ್ತದೆ. ಚೀನಾದಲ್ಲಿ ವಿದ್ಯುತ್ಛಕಿ ನಿರಂತರವಾಗಿ  ಪೂರೈಕೆಯಾಗುವುದರಿಂದ ಉತ್ಪಾದನಾ ನಷ್ಟಗಳಾಗುವುದಿಲ್ಲ; ಕ್ಷಮತೆ ಹೆಚ್ಚುತ್ತದೆ. ಭಾರತದ ಈ ನಿಟ್ಟಿನ ಪರಿಸ್ಥಿತಿ ಸುಧಾರಿಸಿದ್ದರೂ, ವಿದ್ಯುತ್ಛಕ್ತಿಯ ಅನಿಯಮಿತ ಪೂರೈಕೆ ಯಿಂದ ಬಹಳಷ್ಟು ಮಾನವ ದಿನಗಳ ಉತ್ಪಾದನೆ ನಷ್ಟವಾಗುತ್ತಿರುವುದು ಪ್ರಗತಿಗೂ, ಸ್ಪರ್ಧಾತ್ಮಕತೆಗೂ ಕಡಿವಾಣ ಹಾಕುತ್ತಿದೆ.

ಚೀನಾದ ಪ್ರಗತಿಯ ಇನ್ನೊಂದು ಮುಖ್ಯ ಅಂಶ ಗ್ರಾಮೀಣ ಪ್ರದೇಶದ ಪ್ರಗತಿಗೆ ಸರಕಾರ ನೀಡುತ್ತಿರುವ ಆದ್ಯತೆ ಮತ್ತು ಸವಲತ್ತು. ತಮ್ಮ ಮನೆಗಳ ಹಿತ್ತಿಲಲ್ಲಿ ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲಿಕ್ಕೂ, ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲೂ ತುಂಬಾ ಉದಾರ ನೀತಿ ಅಲ್ಲಿದೆ. ಚೀನಾದಲ್ಲಿ ಶೇ. 53 ಜನ ನಗರವಾಸಿಗಳಾಗಿರುವುದು ದೇಶ ಕಾಣುತ್ತಿರುವ ಪ್ರಗತಿಗೆ ನಿದರ್ಶನ. ಭಾರತದಲ್ಲಿ ಶೇ. 32 ಮಂದಿ ಮಾತ್ರ ನಗರವಾಸಿಗಳಾಗಿರುವುದು ಪ್ರಗತಿಗೆ ಇನ್ನೂ ಸಾಕಷ್ಟು ಅವಕಾಶವಿದೆ ಎನ್ನುವುದನ್ನು ತಿಳಿಸುತ್ತದೆ. ಭಾರತದ ಮಟ್ಟಿಗೆ ಬಡತನ ಮತ್ತು ನಿರುದ್ಯೋಗ ಇನ್ನೂ ಗಂಭೀರ ಸಮಸ್ಯೆಯಾಗಿಯೇ ಉಳಿದಿದೆ. ಚೀನಾ ದೇಶಕ್ಕೆ ಹೋಲಿಸಿದರೆ ಭಾರತ ಸರಿಸಮಾನವಾಗಿ ಪ್ರಗತಿ
ಹೊಂದಿಲ್ಲ ಎಂದ ಮಾತ್ರಕ್ಕೆ ಭಾರತ ಹಿಂದುಳಿದಿದೆ ಎಂದು ಅರ್ಥವಲ್ಲ. ಉದಾರೀಕರಣ ನೀತಿಯ ಬಳಿಕ ಭಾರತದಲ್ಲಿ  ಗಮನಾರ್ಹಬೆಳವಣಿಗೆಗಳಾಗಿವೆ. ರಸ್ತೆಗಳು, ಸಂಚಾರ ವ್ಯವಸ್ಥೆ, ದೂರಸಂಪರ್ಕ, ವಿಮಾನ ಯಾನ, ಜೀವನಶೈಲಿ, ಸಂಸ್ಕೃತಿ, ತಂತ್ರಜ್ಞಾನ ಎಲ್ಲವೂ ಬದಲಾಗುತ್ತಿದೆ.

“ಇದು ಭಾರತದ ಯುಗ’ ಎನ್ನುವಷ್ಟರ ಮಟ್ಟಿಗೆ ಪ್ರಗತಿಯಾಗುತ್ತಿದ್ದರೂ ಗ್ರಾಮೀಣ ಪ್ರದೇಶದ ಪ್ರಗತಿ ಮತ್ತು ದೇಶದಾದ್ಯಂತ ಮೂಲಕಸೌಕರ್ಯಗಳು ವಿಸ್ತಾರವಾಗಬೇಕು. ದೃಢ ಇಚ್ಛಾಶಕ್ತಿಯ ಸುಭದ್ರ ಸರಕಾರವೂ, ದಿಟ್ಟ ನಾಯಕತ್ವವೂ ಇದ್ದರೆ ಬರುವ
ದಶಕದಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದರೂ ಆಶ್ಚರ್ಯವಿಲ್ಲ.

 *ಡಾ| ಕೊಳ್ಚಪ್ಪೆ ಗೋವಿಂದ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next