Advertisement
ಈ ಕುರಿತು ಮಾತನಾಡುವ ಹಂಸಲೇಖ, “ಅದೊಂದು ಒಂದು ದಿನ ಎನ್.ಎಸ್.ರಾವ್ ಅವರು ನನಗೆ ರವಿಚಂದ್ರನ್ ಅವರನ್ನು ಪರಿಚಯ ಮಾಡಿಸಿದರು. ಅಲ್ಲಿಂದ ನನಗೆ ಎಲ್ಲಿ ಹೋಗಬೇಕು, ಯಾರನ್ನೋ ಅವಕಾಶ ಕೇಳಬೇಕು ಇದ್ಯಾವ ಸಂದರ್ಭವೂ ಬರಲಿಲ್ಲ. ಯಜಮಾನರು ಸೀದಾ ರಾಜಮಾರ್ಗದಲ್ಲಿ ನನ್ನನ್ನ ಕರೆದುಕೊಂಡು ಹೋದರು. ಅದಾದ ಮೇಲೆ ದೊಡ್ಡದೊಡ್ಡ ನಟರ ಸಿನಿಮಾಗಳಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಕ್ರಮೇಣ ಕಾಲ ಬದಲಾಗುತ್ತಾ ಹೋಯಿತು. ಹೀರೋಗಳು ಮನೆಗೆ ಕರೆಯೋದಕ್ಕೆ ಶುರು ಮಾಡಿದರು. ಕೆಲಸ ಬೇಕು ಅಂದರೆ ಮನೆಗೆ ಹೋಗಿ ಮಾತನಾಡಬೇಕು, ಅವರು ಹೇಳಿದ್ದನ್ನು ಕೇಳಬೇಕು ಎಂಬ ಪರಿಸ್ಥಿತಿ ಬಂತು. ಅದೆಲ್ಲಾ ನನಗೆ ಬಹಳ ಕಷ್ಟದ ವಿಷಯ. ಹಾಗಾಗಿ, ಬೇರೆ ಏನೋ ಮಾಡೋಣ ಅಂತ ನಾನು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡೋದನ್ನ ಕಡಿಮೆ ಮಾಡಿದೆ. ಆದರೂ ಕೆಲವರು ಬಿಡುತ್ತಿರಲಿಲ್ಲ. ನೀವೇ ಬೇಕು ಎಂದು ಕೆಲಸ ಮಾಡಿಸಿಕೊಳ್ಳುತ್ತಿದ್ದರು. ನಾನು ಕಮಾಂಡ್ ನಲ್ಲಿದ್ದರೆ ಅವರು ಒದ್ದಾಡುತ್ತಾರೆ. ಬಗ್ಗಿದರೆ ಗುಣಮಟ್ಟ, ಕೆಲಸ ಹಾಳಾಗುತ್ತದೆ. ಹಾಗಾಗಿ, ನಾನು ಸಿನಿಮಾದಿಂದ ದೂರ ಉಳಿಯಲು ಶುರು ಮಾಡಿದೆ. ಈಗ ಅದರ ವಿರುದ್ಧ ತರ್ಕ, ಮಾತು ಯಾವುದೂ ಇಷ್ಟವಿಲ್ಲ. Music is honey, music is money, music is many.. ಅಷ್ಟು ಹೇಳಬಲ್ಲೆ…’ಎಂದು ತಾವು ಸಂಗೀತದಿಂದ ಯಾಕೆ ದೂರವಾಗುತ್ತಿದ್ದೇನೆ ಎಂಬುದಕ್ಕೆ ಸ್ಪಷ್ಟನೆ ಕೊಟ್ಟರು ಹಂಸಲೇಖ.
Related Articles
Advertisement
ಲೈವ್ ಮಾಡೋದು ಕಷ್ಟ..
ಹಂಸಲೇಖ ಲೈವ್ ಆರ್ಕೆಸ್ಟ್ರಾದಲ್ಲಿ ಖುಷಿ ಕಂಡವರು. ದೊಡ್ಡ ತಂಡದೊಂದಿಗೆ ಲೈವ್ ಮಾಡಿ, ಅದ್ಭುತವಾದ ಹಾಡುಗಳನ್ನು ನೀಡಿದವರು. ಆದರೆ, ಇವತ್ತಿನ ಸಮಯದಲ್ಲಿ ಲೈವ್ ಮಾಡೋದು ಕಷ್ಟ ಎನ್ನುವುದು ಅವರ ಮಾತು.
“ಇವತ್ತಿನ ಸಮಯದಲ್ಲಿ ಲೈವ್ ಮಾಡೋದು ಬಹಳ ಕಷ್ಟ. ಈಗ ಒಂದು ಹಾಡು ಮಾಡುವುದಕ್ಕೆ ಕಡಿಮೆ ಎಂದರೂ ಮೂರು ಲಕ್ಷ ಬೇಕಾಗುತ್ತದೆ. ನಾವು ಮೊದಲು ಆ ಹಾಡನ್ನು 25 ಸಾವಿರಕ್ಕೆ ಮಾಡುತ್ತಿದ್ದೆವು. ಇನ್ನು, ಕಮ್ಯುನಿಕೇಶನ್ ಬಹಳ ಕಷ್ಟ. ನಾವೇನೋ ಹೇಳಿರುತ್ತೇವೆ. ಅವನು ಅರ್ಧ ಮಾಡಿ ಹೊರಟು ಹೋಗುತ್ತಾನೆ. ಬಿಡುವಿದ್ದಾಗ ಏನೋ ಮಾಡಿ ಕಳಿಸುತ್ತಾನೆ. ಅದು ಎಲ್ಲೆಲ್ಲೋ ರೌಂಡ್ ಹೊಡೆದು ಬರುವಷ್ಟರಲ್ಲಿ ಇನ್ನೇನೋ ಆಗಿರುತ್ತದೆ ಎನ್ನುತ್ತಾರೆ.
ನಾನು ಯಾರಿಗೆ ಬರೆಯಲಿ ಸಾಹಿತ್ಯ?
ನೀವ್ಯಾಕೆ ಈಗ ಸಾಹಿತ್ಯ ಬರೆಯಲ್ಲ… ಹೀಗೊಂದು ಪ್ರಶ್ನೆ ಹಂಸಲೇಖ ಅವರಿಗೆ ಎದುರಾಗುತ್ತಲೇ ಇರುತ್ತದೆ. ಈ ಪ್ರಶ್ನೆಯನ್ನು ಹಂಸಲೇಖ ಅವರ ಮುಂದಿಟ್ಟರೆ, “ಯಾರಿಗೆ ಬರೆಯಲಿ ಸಾಹಿತ್ಯ?’ ಎಂದು ಮರುಪ್ರಶ್ನೆ ಹಾಕುತ್ತಾರೆ. “ಸಂಗೀತ ಮಾಡುವುದೇ ಕಷ್ಟದ ಕೆಲಸ. ಇನ್ನು, ಅವರನ್ನು ಕೂರಿಸಿಕೊಂಡು, ಬರೆಯೋದು, ತೆಗೆದು ಹಾಕೋದು… ಇವೆಲ್ಲಾ ಸರಿ ಹೋಗಲ್ಲ’ ಎನ್ನುತ್ತಾರೆ.
ಕೈ ಹಿಡಿದ ರಿಯಾಲಿಟಿ ಶೋ
ಹಂಸಲೇಖ ಅವರು ಈಗ ಕಿರುತೆರೆ ವಾಹಿನಿಯ ರಿಯಾಲಿಟಿ ಶೋನಲ್ಲೂ ಬಿಝಿ. ಇದು ಅವರಿಗೆ ಖುಷಿ ನೀಡಿದ್ದು ಸುಳ್ಳಲ್ಲ. ಈ ಕುರಿತು ಮಾತನಾಡುವ ಅವರು, “ನಿಜ ಹೇಳಬೇಕೆಂದರೆ, ಇವತ್ತು ರಿಯಾಲಿಟಿ ಶೋಗಳಿಂದಲೇ ಊಟ ಮಾಡುತ್ತಿರುವುದು. ಚಿತ್ರರಂಗದಲ್ಲಿ ನಮ್ಮನ್ನು ಯಾರು ಕೇಳುತ್ತಾರೆ? ಒಂದು ಸಾರಿ ಆಚೆ ಹೋದರೆ ಮುಗಿದು ಹೋಯ್ತು. ಚಿತ್ರರಂಗಕ್ಕಿಂತ ಹೆಚ್ಚು ಗೌರವ, ಸ್ವಾತಂತ್ರ್ಯ, ದುಡ್ಡು ನನಗೆ ಅಲ್ಲಿ ಸಿಕ್ಕಿದೆ. ದೊಡ್ಡ ಮೈಲೇಜ್ ಸಿಗುತ್ತಿದೆ. ಕರ್ನಾಟಕದ ಯಾವುದೇ ಮೂಲೆಗೆ ಹೋದರೂ, ಗೌರವ ಸಿಗುತ್ತಿದೆ. ನನ್ನ ಹಾಡುಗಳ ಬಗ್ಗೆ ಎಲ್ಲರೂ ಮಾತಾಡುತ್ತಿರುತ್ತಾರೆ’ ಎಂದು ರಿಯಾಲಿಟಿ ಶೋ ಬಗ್ಗೆ ಹೇಳುತ್ತಾರೆ
ಈ ವರ್ಷ ನಿರ್ದೇಶನ ಗ್ಯಾರಂಟಿ…
ಸಿನಿಮಾ ನಿರ್ದೇಶನ ಮಾಡಬೇಕು ಎನ್ನುವುದು ಹಂಸಲೇಖ ಅವರ ಕನಸು. ಆ ಕುರಿತು ಆಗಾಗ ಸುದ್ದಿಗಳು ಬರುತ್ತಿದ್ದರೂ, ಸಿನಿಮಾ ಇನ್ನಷ್ಟೇ ಆರಂಭ ಆಗಬೇಕು. ಆದರೆ, ಈ ವರ್ಷ ಸಿನಿಮಾ ಮಾಡೋದು ಗ್ಯಾರಂಟಿ ಎನ್ನುತ್ತಾರೆ ಹಂಸಲೇಖ. ” ಈ ವರ್ಷ ಸಿನಿಮಾ ಮಾಡೋದು ಪಕ್ಕಾ. ಈಗ ಸಿನಿಮಾ ಮಾಡುವ ನಿರ್ಧಾರ ಮಾಡಿದ್ದೇನೆ. ಸದ್ಯದಲ್ಲೇ ಘೋಷಿಸುತ್ತೇನೆ’ ಎನ್ನುತ್ತಾರೆ.
ರವಿಪ್ರಕಾಶ್ ರೈ