ಬಳ್ಳಾರಿ/ಬೆಂಗಳೂರು: 20 ಕೋಟಿ ರೂಪಾಯಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಬಳ್ಳಾರಿಯಲ್ಲಿರುವ ಜನಾರ್ದನ ರೆಡ್ಡಿ ನಿವಾಸಗಳ ಮೇಲೆ ದಾಳಿ ನಡೆಸಿದ್ದು, ಸತತ 8ಗಂಟೆಗಳ ಕಾಲದಿಂದ ಪರಿಶೀಲನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ನಾಪತ್ತೆಯಾಗಿರುವ ರೆಡ್ಡಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿ ತಿಳಿಸಿದೆ.
ರೆಡ್ಡಿ ವಿರುದ್ಧ ರಾಜಕೀಯ ಷಡ್ಯಂತ್ರ: ರೆಡ್ಡಿ ಪರ ವಕೀಲ ಚಂದ್ರಶೇಖರ್
ಜನಾರ್ದನ ರೆಡ್ಡಿ ಎಲ್ಲಿಯೂ ಪರಾರಿಯಾಗಿಲ್ಲ, ಅವರನ್ನು ಬಂಧಿಸಲಾಗುವುದು ಎಂಬ ಭೀತಿಯನ್ನು ಸಿಸಿಬಿ ಅಧಿಕಾರಿಗಳು ಮಾಧ್ಯಮಗಳ ಮೂಲಕ ಸೃಷ್ಟಿಸಿದ್ದಾರೆ. ಹೀಗಾಗಿ ನಾವು ಕಾನೂನು ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ರೆಡ್ಡಿ ಪರ ವಕೀಲ ಚಂದ್ರಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ.
ಜನಾರ್ದನ ರೆಡ್ಡಿ ವಂಚನೆ ಕೇಸ್ ನಲ್ಲಿ ಇಲ್ಲದಿದ್ದರೂ ಅವರನ್ನು ಬಂಧಿಸುವ ಷಡ್ಯಂತ್ರ ನಡೆಸಲಾಗಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡ ಇದೆ. ಹೀಗಾಗಿ ಕೂಡಲೇ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಬಂಧನ ಭೀತಿಯಲ್ಲಿರುವ ಜನಾರ್ದನ ರೆಡ್ಡಿ ತಮ್ಮ ಆಪ್ತರ ಮೂಲಕ ನಿರೀಕ್ಷಣಾ ಜಾಮೀನು ಪಡೆದುಕೊಳ್ಳುವ ಸಿದ್ಧತೆ ನಡೆಸಿಕೊಳ್ಳುತ್ತಿರುವುದಾಗಿ ವರದಿ ವಿವರಿಸಿದೆ.