Advertisement
ಡೆಂಟಲ್ ಕ್ಲಿನಿಕ್ ಎಂದರೆ ಸಾಮಾನ್ಯ ಕ್ಲಿನಿಕ್ ಗಳಂತೆ ಅಲ್ಲ. ಅದಕ್ಕಾಗಿ ವಿಶೇಷವಾಗಿ ವಿನ್ಯಾಸವಾದ ಕುರ್ಚಿ, ಅದು ಕೆಲಸ ಮಾಡಲು ಕಂಪ್ರಸ್ಸರ್, ಹಲ್ಲು ಕೊರೆಯುವ ಡ್ರಿಲ್, ಹಲ್ಲು ತೆಗೆಯಲು ಬಳಸುವ ವಿಶೇಷ ಉಪಕರಣಗಳು, ಹಲ್ಲು ತುಂಬಲು ನಾನಾ ಬಗೆಯ ವಸ್ತುಗಳು, ಅಳತೆಯ ಸಾಧನಗಳು, ಶುದ್ಧೀಕರಿಸುವ ಆಟೋಕ್ಲೇವ್, ಹಲ್ಲಿನ ರಚನೆ ತಿಳಿಸುವ ಎಕ್ಸ್‌ರೇ ಮಶೀನ್ ಹೀಗೆ ಹತ್ತಾರು ವಸ್ತುಗಳು ಇರುವ ವ್ಯವಸ್ಥಿತ ಕೋಣೆ ಅಗತ್ಯ. ಎಲ್ಲಾ ಉಪಕರಣಗಳೂ ಕೆಲಸ ಮಾಡಲು ವಿದ್ಯುತ್ ಮತ್ತು ನೀರು ಹೆಚ್ಚಿನ ಪ್ರಮಾಣದಲ್ಲಿ ಬೇಕು. ಹೀಗಾಗಿ, ಡೆಂಟಲ್ ಕ್ಲಿನಿಕ್ ಆರಂಭಿಸಲು ಕನಿಷ್ಠ ಬಂಡವಾಳ ಮೂರರಿಂದ ನಾಲ್ಕು ಲಕ್ಷಗಳಾದರೆ, ಕೋಣೆಯ ಬಾಡಿಗೆ- ವಿದ್ಯುತ್- ನೀರು ಇವು ದಂತವೈದ್ಯರ ಆರ್ಥಿಕ ಹೊರೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ದಂತವೈದ್ಯರಿಗೆ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಾಯಕರ ಅವಶ್ಯಕತೆಯೂ ಇರುವುದರಿಂದ, ಅವರ ಸಂಬಳವೂ ಸೇರುತ್ತದೆ. ದಂತವೈದ್ಯರು ತಮ್ಮ ಜೀವನಕ್ಕಾಗಿ ಈ ವೃತ್ತಿಯನ್ನೇ ಅವಲಂಬಿಸಿರುವುದರಿಂದ, ಖರ್ಚು ಕಳೆದು ಕೆಲಮಟ್ಟಿಗೆ ಲಾಭ ಬರುವಂತೆ ವ್ಯವಸ್ಥೆ ಮಾಡಿಕೊಳ್ಳುವುದು ಅವರಿಗೆ, ಜೀವನ ನಿರ್ವಹಣೆಯ ದೃಷ್ಟಿ ಯಿಂದ ಅನಿವಾರ್ಯ.
Related Articles
Advertisement
ಚಿಕಿತ್ಸಾ ಶುಲ್ಕಗಳು : ದಂತ ಚಿಕಿತ್ಸೆಗೆ ತಗಲುವ ಖರ್ಚು- ನಾನಾ ವಿಚಾರ ಗಳನ್ನು ಅವಲಂಬಿಸಿರುತ್ತದೆ. ಆದ್ದರಿಂದ ಇಲ್ಲಿ ನೀಡಿರು ವು ದನ್ನು ಅಂದಾಜು ವೆಚ್ಚ ಎಂದು ಪರಿಗಣಿಸಬಹುದಷ್ಟೆ.
ಫಿಲ್ಲಿಂಗ್ : ಹಿಂದೆಲ್ಲಾ ಬೆಳ್ಳಿಯನ್ನು ಹಲ್ಲಿನಲ್ಲಿ ತುಂಬಲಾಗುತ್ತಿತ್ತು. ಈಗ ಪಾದರಸದ ಬಳಕೆಯಿದೆ. ತೀರಾ ಕಡಿಮೆಯಾಗಿದ್ದರೂ ಬೆಳ್ಳಿಯನ್ನು ಬೇರೆ ರೂಪದಲ್ಲಿ ಬಳಸಲಾಗುತ್ತದೆ. ಮೂಲವಸ್ತು ಬೆಳ್ಳಿ ದುಬಾರಿ. ಇದಲ್ಲದೇ ಸೌಂದರ್ಯದ ದೃಷ್ಟಿಯಿಂದ ಹಲ್ಲಿನ ಬಣ್ಣದ್ದೇ ಫಿಲ್ಲಿಂಗ್ ಮಾಡಿದರೆ ಉಪಯೋಗಿಸುವ ವಸ್ತು ಕಾಂಪೋಸಿಟ್, ಗ್ಲಾಸ್ ಐನೋಮರ್ ಮುಂತಾದ ವಸ್ತುಗಳ ಬೆಲೆ ಹೆಚ್ಚು. ಇವುಗಳನ್ನು ಬಳಸುವಾಗ ವಿಶೇಷ ಉಪಕರಣಗಳು ಬೇಕು. ಹೀಗಾಗಿ ಈ ಉಪಕರಣಗಳು ಮತ್ತು ಅವುಗಳ ನಿರ್ವಹಣೆಯ ವೆಚ್ಚವೂ ಬಿಲ್‌ನಲ್ಲಿ ಸೇರಿರುತ್ತದೆ. 1,000- 2,000 ರೂ.
ರೂಟ್ ಕೆನಾಲ್ : ಹಲ್ಲಿನ ಹುಳುಕು, ತಿರುಳನ್ನು ತಲುಪಿದಾಗ ಅದನ್ನು ಬರೀ ಫಿಲ್ಲಿಂಗ್ ಮಾಡಿ ಉಳಿಸಲು ಸಾಧ್ಯವಿಲ್ಲ. ಆಗ ಹಲ್ಲಿನ ಬೇರಿಗೆ ಚಿಕಿತ್ಸೆ ನೀಡುವ “ಬೇರುನಾಳ ಚಿಕಿತ್ಸೆ’ ಅಗತ್ಯ. ಇದು ಬಹಳ ಸೂಕ್ಷ್ಮವಾದ ಕೆಲಸ. ಸಣ್ಣ ಉಪಕರಣ ಬಳಸಿ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಎಕ್ಸ್‌ರೇಗಳನ್ನೂ ತೆಗೆಯಲಾಗುತ್ತದೆ. ಕೆಲವು ಬಾರಿ ಚಿಕಿತ್ಸೆ ಪೂರ್ಣವಾಗಲು ಮೂರು-ನಾಲ್ಕು ಬಾರಿ ಕ್ಲಿನಿಕ್‌ಗೆ ಹೋಗಬೇಕಾಗುತ್ತದೆ. ಹಲ್ಲಿನ ಕ್ಯಾಪ್, ಕೃತಕ ಹಲ್ಲು; ಇವುಗಳನ್ನು ತಯಾರಿಸಲು ಡೆಂಟಲ್ ಲ್ಯಾಬಿನ ನೆರವು ಬೇಕು. ದೀರ್ಘಕಾಲ ಬಾಳಿಕೆ ಬರಬೇಕಾದ ಇವುಗಳನ್ನು ತಯಾರಿಸುವಾಗ ಅತ್ಯುತ್ತಮ ಗುಣಮಟ್ಟದ ವಸ್ತುಗಳನ್ನೇ ಬಳಸಬೇಕು. ಸಾಮಗ್ರಿಗಳ ವೆಚ್ಚ, ಲ್ಯಾಬ್ ತಂತ್ರಜ್ಞರ ವೇತನ, ಇವೆಲ್ಲವೂ ಕ್ಯಾಪ್‌ಗೆ ನೀಡುವ ಹಣದಲ್ಲಿ ಸೇರಿರುತ್ತದೆ. 3,000- 5,000 ರೂ.
ವಕ್ರದಂತ ಚಿಕಿತ್ಸೆ : ವಕ್ರವಾದ ಹಲ್ಲುಗಳನ್ನು ತಂತಿಗಳ ಸಹಾಯದಿಂದ ನಿರ್ದಿಷ್ಟ ಒತ್ತಡ ಹಾಕಿ ಸರಿಯಾದ ಸ್ಥಳಕ್ಕೆ ತರುವುದು ಅತ್ಯಂತ ಕಷ್ಟದ ಕೆಲಸ. ಹಲ್ಲಿನ ಚಲನೆಯನ್ನು ನಿಖರವಾಗಿ ಕಂಡುಹಿಡಿದು, ಅದಕ್ಕೆ ತಕ್ಕದಾಗಿ ತಂತಿಯಲ್ಲಿ ಮಾರ್ಪಾಟು ಮಾಡಲು ನೈಪುಣ್ಯತೆ ಬೇಕು. ಸಾಕಷ್ಟು ಸಮಯ ಬೇಡುವ ಈ ಚಿಕಿತ್ಸೆಗೆ ಸುಮಾರು ಎರಡರಿಂದ ಮೂರು ವರ್ಷಗಳ ಕಾಲವೇ ಬೇಕಾಗಬಹುದು. 20,000- 40,000 ರೂ.
ಬುದ್ಧಿಹಲ್ಲು ತೆಗೆಯಲು : ದವಡೆಯ ಕೊನೆಯಲ್ಲಿ ಸಿಕ್ಕಿಹಾಕಿಕೊಂಡ ಬುದ್ಧಿಹಲ್ಲು ತೀವ್ರ ಸೋಂಕಿಗೊಳಗಾಗಿ ನೋವು, ಊತ ಕಾಣಿಸಿಕೊಂಡಾಗ ತೆಗೆಯುವುದೇ ಸೂಕ್ತ. ಆದರೆ ಇದು ಬೇರೆ ಹಲ್ಲನ್ನು ತೆಗೆದಷ್ಟು ಸುಲಭವಲ್ಲ. ಸುತ್ತಲಿರುವ ವಸಡಿನ ಮೂಳೆಯಿಂದ ಹಲ್ಲನ್ನು ನಿಧಾನವಾಗಿ ಬೇರ್ಪಡಿಸಿ, ಹಲ್ಲನ್ನು ತುಂಡು ಮಾಡಿ ಹೊರತೆಗೆಯಬೇಕು. ನಂತರ, ಗಾಯ ಮಾಯಲು ಹೊಲಿಗೆಯನ್ನು ಹಾಕಬೇಕು. ಸೂಕ್ಷ್ಮವಾಗಿ ತಜ್ಞವೈದ್ಯರು ಮಾಡುವ ಸಣ್ಣ ಶಸ್ತ್ರಚಿಕಿತ್ಸೆ ಇದಾಗಿರುವುದರಿಂದ ಸಹಜವಾಗಿಯೇ ಖರ್ಚು ಹೆಚ್ಚು. 3,000- 5,000 ರೂ.
ಮುನ್ನೆಚ್ಚರಿಕೆಯೇ ಮೂಲ ಮಂತ್ರ : ದಂತ ಚಿಕಿತ್ಸೆಯ ಫೀಸು ಇಳಿಸುವುದಕ್ಕೆ ಎಲ್ಲಕ್ಕಿಂತ ಸುಲಭ ಮಾರ್ಗವೆಂದರೆ ಜನರು, ಹಲ್ಲು ಮತ್ತು ಬಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸುವುದು. ಆಗ, ಮುಂದೆ ಚಿಕಿತ್ಸೆಯ ಅಗತ್ಯ ಬಂದರೂ ವೆಚ್ಚ ಕಡಿಮೆಯಾಗುತ್ತದೆ. ದಿನಕ್ಕೆರಡು ಬಾರಿ ಬ್ರಶಿಂಗ್, ತಿನ್ನುವ ಆಹಾರದ ಬಗ್ಗೆ ಎಚ್ಚರಿಕೆ ವಹಿಸಿ ಕಾಲಕಾಲಕ್ಕೆ ತಪಾಸಣೆ, ಕ್ಲೀನಿಂಗ್, ಆರಂಭಿಕ ಹಂತದಲ್ಲಿಯೇ ಹುಳುಕು ಪ್ರತಿಬಂಧಿಸುವಿಕೆ ಮಾಡಿಸಿದರೆ ಸಂಕೀರ್ಣ, ದುಬಾರಿ ಚಿಕಿತ್ಸೆಗಳ ಅಗತ್ಯವೇ ಬರುವುದಿಲ್ಲ! ಸಮಸ್ಯೆ ಸಣ್ಣದಿದ್ದಾಗ ಚಿಕಿತ್ಸೆ ಸುಲಭ ಮತ್ತು ಖರ್ಚು ಕಡಿಮೆ. ಆದ್ದರಿಂದ ಸಮಸ್ಯೆ ತೀವ್ರಗೊಂಡಾಗ ದಂತವೈದ್ಯರ ಬಳಿ ಭೇಟಿ ನೀಡಿ ದುಬಾರಿ ಎಂದು ಗೊಣಗುವ ಬದಲು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ
ಫೀಸ್ ಇಳಿಕೆ ಸಾಧ್ಯವಿಲ್ಲವೆ? : ಚಿಕಿತ್ಸಾ ಶುಲ್ಕವನ್ನು ಕಡಿಮೆ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರೆ, ಉತ್ತರ- ಅದು ಕೇವಲ ದಂತವೈದ್ಯರ ಮೇಲೆ ಮಾತ್ರವೇ ನಿರ್ಧರಿತವಾಗಿಲ್ಲ. ಚಿಕಿತ್ಸೆಗೆ ಬಳಸುವ ಪರಿಕರ, ಉಪಯೋಗಿಸುವ ಸಾಧನ, ಅದರ ಮೇಲಿನ ತೆರಿಗೆ, ಏರುತ್ತಿರುವ ನೀರು- ವಿದ್ಯುತ್ ಬಿಲ್, ಬಾಡಿಗೆ , ಲ್ಯಾಬ್ ವೆಚ್ಚ ಎಲ್ಲವನ್ನೂ ಪರಿಗಣಿಸಬೇಕಾಗಿರುವುದರಿಂದ, ದಂತಚಿಕಿತ್ಸೆಗೆ ಏಕರೂಪದ ದರ ನಿಗದಿಪಡಿಸುವುದು ಕಷ್ಟ. ಆದರೂ, ದಂತವೈದ್ಯರ ಸಂಘದಿಂದ ಜಿಲ್ಲಾ ಮಟ್ಟದಲ್ಲಿ ಅಂದಾಜು ಬೆಲೆ ನಿರ್ಧರಿಸಬಹುದು. ಸರ್ಕಾರಿ ಆಸ್ಪತ್ರೆ, ಕಾಲೇಜುಗಳಲ್ಲಿ ವೈದ್ಯರು- ವಸ್ತುಗಳು ಸುಲಭವಾಗಿ ಸಿಗುವಂತಾದರೆ ಜನರಿಗೆ ಅನುಕೂಲ. ಡೆಂಟಲ್ ಇನ್‌ಶೂರೆನ್ಸ್ ಕೆಲಮಟ್ಟಿಗೆ ಶುಲ್ಕವನ್ನು ಕಡಿಮೆ ಮಾಡುವಲ್ಲಿ ಸಹಾಯಕ.
-ಡಾ. ಕೆ. ಎಸ್.ಚೈತ್ರಾ