ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ರಷ್ಯಾ ವಿರುದ್ಧ ನಿರ್ಣಯ ತೆಗೆದುಕೊಳ್ಳಲು ಅಲ್ಬೇನಿಯಾ ಹಾಗೂ ಅಮೆರಿಕಾ ಸೇರಿ ಮಂಡಿಸಿದ ನಿರ್ಣಯದಿಂದ ಹೊರಗುಳಿಯುವ ಮೂಲಕ ಭಾರತ ಜಾಗತಿಕ ಮಟ್ಟದಲ್ಲಿ ಅಚ್ಚರಿ ಸೃಷ್ಟಿಸಿದೆ.
ರಷ್ಯಾ ವಿರುದ್ಧ ನಿರ್ಣಯ ತೆಗೆದುಕೊಳ್ಳುವಂತೆ ಅಮೆರಿಕಾ ಭಾರತದ ಮೇಲೆ ನಿರಂತರ ಒತ್ತಡ ಹೇರಿದ್ದರೂ ಸಭೆಗೆ ಗೈರಾಗುವ ಮೂಲಕ ಭಾರತ ರಷ್ಯಾದ ಪರ ನಿಂತಂತಾಗಿದೆ. ಈ ಪ್ರಕರಣದಲ್ಲಿ ಭಾರತ ಇದುವರೆಗೂ ಬಹಿರಂಗ ಹೇಳಿಕೆಯನ್ನು ಇದುವರೆಗೆ ನೀಡಿಲ್ಲ, ರಷ್ಯಾ ಪ್ರಧಾನಿ ಪುಟಿನ್ ಜತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಸಂಭಾಷಣೆ ನಡೆಸಿದ್ದರೂ ಅದು ಉಕ್ರೇನ್ ಪರ ಧ್ವನಿಯಾಗಿರಲಿಲ್ಲ ಎಂದೇ ಹೇಳಲಾಗುತ್ತಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯ ಅಲ್ಲದೇ ಇದ್ದರೂ ತಾತ್ಕಾಲಿಕ ಸದಸ್ಯ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಶಕ್ತಿಶಾಲಿಯಾಗಿದೆ. ಈ ಕಾರಣಕ್ಕಾಗಿಯೇ ಉಕ್ರೇನ್ ವಿದೇಶಾಂಗ ಸಚಿವ ಡಿ ಮ್ಯಾತ್ರೋ ಕುಲೇಬಾ, ಟ್ವೀಟ್ ಮಾಡಿ ” ಭಾರತ ತನ್ನ ಬಾಂಧವ್ಯ ಹಾಗೂ ಎಲ್ಲ ಪ್ರಭಾವವನ್ನು ಬಳಸಿ ಯುದ್ಧ ನಿಲ್ಲಿಸುವಂತೆ ರಷ್ಯಾದ ಮೇಲೆ ಪ್ರಭಾವ ಬೀರಬೇಕು. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲೂ ರಷ್ಯಾ ವಿರುದ್ಧ ನಿರ್ಣಯದಲ್ಲಿ ಭಾಗಿಯಾಗಬೇಕು” ಎಂದು ಒತ್ತಾಯಿಸಿದ್ದರು.
ಆದರೆ ರಷ್ಯಾ- ಉಕ್ರೇನ್, ರಷ್ಯಾ-ಚೀನಾ, ಭಾರತ- ಚೀನಾ, ಭಾರತ- ಪಾಕಿಸ್ತಾನ ಮಧ್ಯೆ ಇರುವ ದೀರ್ಘ ಕಾಲೀನ ಜಿಯೋಪಾಲಿಟಿಕಲ್ ಲೆಕ್ಕಾಚಾರಗಳೇ ಭಾರತ ಉಕ್ರೇನ್ ಪರ ವಾದಿಸದೇ ಇರುವುದಕ್ಕೆ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ರಷ್ಯಾ ಜತೆಗಿನ ಭಾರತದ ಬಾಂಧವ್ಯದ ಲೆಕ್ಕಾಚಾರವೂ ಸೇರಿದಂತೆ ನ್ಯಾಟೋ ರಾಷ್ಟ್ರಗಳ ಜತೆಗಿನ ಸಾಂಗತ್ಯವನ್ನು ಅಧರಿಸಿ ಉಕ್ರೇನ್ ಭಾರತದ ಪರವಾದ ನಿರ್ಣಯವನ್ನು ಎಂದೂ ತೆಗೆದುಕೊಂಡಿಲ್ಲ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಾಲಾನುಕಾಲಕ್ಕೆ ಉಕ್ರೇನ್ ಪಾಕಿಸ್ತಾನದ ಪರವಾಗಿಯೇ ನಿರ್ಧಾರ ತೆಗೆದುಕೊಂಡಿದೆ.
ಭಾರತದ ಖಂಡಾಂತರ ಕ್ಷಿಪಣಿ ಪರೀಕ್ಷೆಗೆ ಉಕ್ರೇನ್ ವಿರೋಧ ವ್ಯಕ್ತಪಡಿಸುವ ಜತೆಗೆ ಭಾರತಕ್ಕೆ ಕ್ಷಿಪಣಿ ತಂತ್ರಜ್ಞಾನ ಪೂರೈಕೆಗೆ ಅನ್ಯ ರಾಷ್ಟ್ರಗಳು ಸಹಕಾರ ನೀಡಬಾರದು ಎಂದು ವಾದಿಸಿತ್ತು. ವಾಜಪೇಯಿ ಕಾಲದಲ್ಲಿ ಭಾರತ ಪರಮಾಣು ಪರೀಕ್ಷೆ ನಡೆಸಿದಾಗ ಉಕ್ರೇನ್ ಕೂಡಾ ಆರ್ಥಿಕ ನಿರ್ಬಂಧ ವಿಧಿಸಿತ್ತು. ಸಾಲದಕ್ಕೆ ಪಾಕಿಸ್ತಾನಕ್ಕೆ ರಕ್ಷಣಾ ನೆರವು ನೀಡುವ ರಾಷ್ಟ್ರಗಳ ಪೈಕಿ ಉಕ್ರೇನ್ ಮುಂಚೂಣಿಯಲ್ಲಿದೆ. ಈ ಎಲ್ಲ ಕಾರಣಗಳಿಂದ ಭಾರತ ಉಕ್ರೇನ್ ವಿಚಾರದಲ್ಲಿ ದಿವ್ಯ ತಟಸ್ಥವಾಗಿದೆ ಎನ್ನಲಾಗುತ್ತಿದೆ.