Advertisement
“ಇಲ್ಲ’. ಇದು ಅತ್ಯಂತ ಚಿಕ್ಕ ಪದವಾದರೂ ಜಗತ್ತಿನಲ್ಲಿ ಅತಿ ಹೆಚ್ಚು ಶಕ್ತಿ ಇರುವುದೂ ಇದೇ ಪದಕ್ಕೆ. “ನೋ’ ಎಂದು ಹೇಳಲು ಕಲಿತವನು ಜಗತ್ತನ್ನೇ ಆಳಬಲ್ಲ ಎನ್ನುವ ಮಾತಿದೆ. ಆದರೆ ಇದುವರೆಗೂ ಯಾವೊಬ್ಬ ವ್ಯಕ್ತಿಗೂ ಇಡೀ ಜಗತ್ತನ್ನು ಆಳಲು ಸಾಧ್ಯವಾಗಿಲ್ಲವಾದ್ದರಿಂದ ಯಾರೂ “ನೋ’ ಎನ್ನುವ ಪದದ ವಿರುದ್ಧದ ಸಮರದಲ್ಲಿ ಪೂರ್ಣ ಗೆಲುವು ಸಾಧಿಸಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
Related Articles
Advertisement
ಇನ್ನೊಬ್ಬರು ಸಹಾಯ ಕೇಳಿದಾಗ ನಮಗೆ ಆ ಸಹಾಯ ಮಾಡಲಾಗದಿದ್ದರೂ ಒಪ್ಪಿಕೊಳ್ಳುವುದಿದೆಯಲ್ಲ ಅದು ಮಹಾಪರಾಧ. ಒಪ್ಪಿಕೊಂಡ ಮೇಲೆ ಮಾಡಬೇಕು, ಮಾಡದೇ ಇದ್ದರೆ ಪಾಪಪ್ರಜ್ಞೆ ಕಾಡುತ್ತದೆ! ಎದುರಿನ ವ್ಯಕ್ತಿಯೂ ನಿಮ್ಮ ಮೇಲೆ ಮುನಿಸಿಕೊಳ್ಳುತ್ತಾನೆ. ನೀವು ನೋ ಎನ್ನಲಾಗದೇ ತೊಂದರೆಯ ಮೇಲೆ ತೊಂದರೆಯಲ್ಲಿ ಸಿಲುಕುತ್ತೀರಿ ಎಂದಾದರೆ, ಈ ವಿಷ ಚಕ್ರದಿಂದ ಹೊರಬರಲು ಬಯಸುತ್ತೀರಿ ಎಂದಾದರೆ ಈ ಲೇಖನ ಓದುವುದನ್ನು ಮುಂದುವರಿಸಿ…
ಇಲ್ಲ ಎಂದರೆ ತಪ್ಪಲ್ಲಇನ್ನೊಬ್ಬರ ಕೋರಿಕೆಗಳಿಗೆ ಇಲ್ಲ ಎನ್ನುವುದಕ್ಕೆ ಕಷ್ಟವಾಗುವುದು ಸಹಜವೇ. ಆದರೆ ಒಪ್ಪಿಕೊಂಡರೆ ಎದುರಾಗುವ ತೊಂದರೆಯೇನು ಕಡಿಮೆಯೇ? ನಾನು ಎಷ್ಟೋ ಜನರನ್ನು ನೋಡಿದ್ದೇನೆ. ಇಷ್ಟವಿಲ್ಲದ ಪ್ರಮೋಷನ್‌ಗಳನ್ನು ಒಪ್ಪಿಕೊಂಡು ಒದ್ದಾಡುತ್ತಿರುತ್ತಾರೆ, ಬೇಡದ ಕೆಲಸಗಳನ್ನು ಹಚ್ಚಿಕೊಂಡು, ಒಲ್ಲದ ವಲಯದಲ್ಲಿ ಇದ್ದುಕೊಂಡು, ಮನಸ್ಸಿಲ್ಲದ ಪಾರ್ಟಿಗಳಲ್ಲಿ ಭಾಗವಹಿಸಿ ಸಮಯ ಹಾಳು ಮಾಡಿಕೊಳ್ಳುತ್ತಿರುತ್ತಾರೆ, ಇಷ್ಟವಿಲ್ಲದ ವ್ಯಕ್ತಿಗಳನ್ನು ಬಾಳಸಂಗಾತಿಯಾಗಿ ಸ್ವೀಕರಿಸಿ ನಿತ್ಯ ನರಕಯಾತನೆ ಅನುಭವಿಸುತ್ತಿರುತ್ತಾರೆ, ಪದೇ ಪದೆ ಯಾಮಾರಿಸುವ ವ್ಯಕ್ತಿಗೆ ಮತ್ತೆ ಹಣ ಕೊಟ್ಟು ಕೈ ಕೈ ಹಿಸುಕಿಕೊಳ್ಳುತ್ತಾರೆ. ಆಗಲೇ ಹೇಳಿದಂತೆ, ಎಲ್ಲಿ ಎದುರಿನವ ಬೇಜಾರು ಮಾಡಿಕೊಳ್ಳುತ್ತಾನೋ ಎಂದು ನಾವು ಅವನ ಕೋರಿಕೆಯನ್ನು ಒಪ್ಪಿಕೊಂಡುಬಿಡುತ್ತೇವೆ. ಹೀಗೆ ಮಾಡುವುದು ಒಳ್ಳೆಯತನವೆನ್ನುವುದೇನೋ ಇರಲಿ. ಆದರೆ ನಿಮ್ಮ ಆನಂದವನ್ನೇ ಕಸಿಯುವ ಒಳ್ಳೆಯತನ ಕಟ್ಟಿಕೊಂಡು ಏನುಪಯೋಗ? ಸತ್ಯವೇನೆಂದರೆ ನೋ ಎನ್ನಲಾಗದವನು ಜೀವನದಲ್ಲಿ ಏನನ್ನೂ ಸಾಧಿಸಲಾರ. ಅವನು ಗಳಿಸುವುದೇನಿದ್ದರೂ ಅಸಹಾಯಕತೆಯನ್ನು, ನೋವನ್ನು, ಯಾತನೆಯನ್ನು…ಅಷ್ಟೆ! ನಿಮ್ಮ ಮೇಲೆ ನಿಮಗೆ ಗೌರವವಿಲ್ಲವೇ?
ಹೌದು, ಬಹುತೇಕ ಬಾರಿ ನೀವು ಇನ್ನೊಬ್ಬರಿಗೆ “ಇಲ್ಲ, ನಾನು ಮಾಡಲ್ಲ, ನನ್ನಿಂದ ಆಗಲ್ಲ’ ಎಂದು ಹೇಳಿದಾಗ ಅವರ ಮನನೋಯುವುದು ಖಚಿತ. ಆ ಸಮಯದಲ್ಲಿ ಅವರು ನಿಮ್ಮನ್ನು ಮನದಲ್ಲಿ ಶಪಿಸಬಹುದು ಅಥವಾ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಬಹುದು. ಆದರೆ ಮುಂದೆ ನಿಮ್ಮ ಪ್ರಾಮಾಣಿಕತೆಯನ್ನು ಅವರು ಮೆಚ್ಚುವುದು ನಿಶ್ಚಿತ. ಮಾಡುತ್ತೇನೆ ಎಂದು ಹೇಳಿ ಕೈಕೊಡುವವರಿಗಿಂತ, ಮೊದಲೇ ಆಗುವುದಿಲ್ಲ ಎಂದು ಹೇಳುವ ನೀವೇ ಅವರಿಗೆ ಮೆಚ್ಚುಗೆಯಾಗುತ್ತೀರಿ. ಒಂದು ವಿಷಯ ತಿಳಿದುಕೊಳ್ಳಿ, ಜಗತ್ತಿನಲ್ಲಿ ನಿಮ್ಮನ್ನು ಮೇಲೆತ್ತುವ ಅಥವಾ ಕೆಳಕ್ಕೆ ಬೀಳಿಸುವ ಶಕ್ತಿ ಇರುವುದು ನಿಮಗೊಬ್ಬರಿಗೆ ಮಾತ್ರ! ನಿಮ್ಮ ಮೇಲೆ ನಿಮಗೇ ಗೌರವವಿಲ್ಲ ಎನ್ನುವುದಾದರೆ, ಇರುವ ಒಂದು ಬದುಕಲ್ಲಿ ನೀವು ಸಮಯಕ್ಕೆ ಬೆಲೆ ಕೊಡುವುದಿಲ್ಲ ಎಂದಾದರೆ ನಿಮ್ಮ ಸ್ಥಿತಿಯಂತೂ ಸುಧಾರಿಸಲಾರದು. ಕೀಳರಿಮೆಯ ಕಿರೀಟ ತಲೆ ಮೇಲೆ ಬಂದು ಕೂಡುತ್ತದಷ್ಟೆ. ಬಹುತೇಕ ಜನರು ಅನವಶ್ಯಕ ಒತ್ತಡ, ನೆಗೆಟಿವ್ ಸೆಲ್ಫ್ಟಾಕ್(ಋಣಾತ್ಮಕ ಸ್ವಯಂ ಟೀಕೆ) ಮತ್ತು ಖನ್ನತೆಯಿಂದ ಬಳಲುವುದಕ್ಕೂ, ಬೇಡದ ಕೆಲಸಕ್ಕೆ, ಒಲ್ಲದ ಆಹ್ವಾನಗಳಿಗೆ ಅವರು “ಹೂಂ’ ಎನ್ನುವುದಕ್ಕೂ ಸಂಬಂಧವಿರುತ್ತದೆ. ನಿಮಗೆ ನೀವು ಸಮಯ ಕೊಟ್ಟುಕೊಳ್ಳುವುದು “ಸ್ವಾರ್ಥ’ವಂತೂ ಅಲ್ಲ. ದೇಹದ ಮೇಲಿರಲಿ ಗಮನ
ನಿಮಗೆ ಯಾರಾದರೂ ಏನನ್ನಾದರೂ ಕೇಳಿದಾಗ ಆಹ್ವಾನ ಕೊಟ್ಟಾಗ ಅಥವಾ ಇನ್ಯಾವುದೋ ರೀತಿಯಲ್ಲಿ ನಿಮ್ಮ ಸಮಯ ಮತ್ತು ಶಕ್ತಿಯನ್ನು ಬೇಡಿದಾಗ ನಿಮ್ಮ ದೇಹದಲ್ಲಿ ಯಾವ ರೀತಿಯ ಬದಲಾವಣೆಯಾಗುತ್ತದೋ ಗಮನಿಸಿ. ಆ ಬೇಡಿಕೆ ನಿಮಗೆ ಸುಸ್ತು ಉಂಟುಮಾಡುತ್ತದಾ? ಅಚಾನಕ್ಕಾಗಿ ತಲೆಭಾರವಾದಂತೆ ಅನಿಸುತ್ತದಾ ಅಥವಾ ಮೈ ಬೆವರುತ್ತದಾ? ನಿಮಗೆ ನಿಮ್ಮ ದೇಹದಂಥ ಸ್ನೇಹಿತ ಮತ್ತೂಂದಿಲ್ಲ. ಏನೋ ಎಡವಟ್ಟಾಗುತ್ತಿದೆ, ಯಾಕೋ ಈ ಕೆಲಸ ಬೇಡವೆನಿಸುತ್ತದೆ ಎನ್ನುವ ಸನ್ನೆಯನ್ನು ಅದು ಈ ರೀತಿಯಾಗಿ ನಿಮಗೆ ಕಳುಹಿಸುತ್ತಿರುತ್ತದೆ. ಅದನ್ನು ಗುರುತಿಸಲು ನಿರಂತರ ಪ್ರಯತ್ನದ ಅಗತ್ಯವಿದೆ. ಇನ್ಮುಂದೆ ಯಾರಾದರೂ ಏನಾದರೂ ಕೇಳಿದರೆ ನಿಮ್ಮ ದೇಹ ಯಾವ ಸಿಗ್ನಲ್‌ಗಳನ್ನು ಕಳುಹಿಸುತ್ತಿದೆಯೋ ಗಮನಿಸಿ. ಅದರ ಮಾತನ್ನು ಕೇಳಿಸಿಕೊಳ್ಳಿ. ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ
ಪ್ರಜ್ಞಾಪೂರ್ವಕವಾಗಿ ಒಂದು ಪ್ರಶ್ನೆ ಕೇಳಿಕೊಳ್ಳಿ “ನಿಜಕ್ಕೂ ನಾನು ಈ ಕೆಲಸವನ್ನು ಒಪ್ಪಿಕೊಳ್ಳಬೇಕಾ?’ ನಿಮಗೆ ಕೂಡಲೇ ಸ್ಪಷ್ಟವಾಗಿ ಉತ್ತರ ಸಿಗದಿದ್ದರೆ ಸ್ವಲ್ಪ ಸಮಯ ಕೊಡಲು ಅವರನ್ನು ಕೇಳಿ. ನನ್ನ ಸೀನಿಯರ್ ಸಹೋದ್ಯೋಗಿಯೊಬ್ಬರಿದ್ದರು. ಅವರಿಗೆ ನಾನು ಏನೇ ಕೇಳಿದರೂ “ನಾನು ಯೋಚಿಸಿ ಹೇಳುತ್ತೇನೆ’ ಎನ್ನುತ್ತಿದ್ದರು. ಕೆಲವೊಮ್ಮೆ ನನಗೆ ಅವರ ಈ ಗುಣದಿಂದ ಕಿರಿಕಿರಿಯಾಗುತ್ತಿತ್ತಾದರೂ, ಕೆಲವೇ ಸಮಯದಲ್ಲೇ ಅವರು ತಾವು ಸಹಾಯ ಮಾಡುವುದಾಗಿ/ಇಲ್ಲವೆಂದೋ ಸ್ಪಷ್ಟವಾಗಿ ಹೇಳಿಬಿಡುತ್ತಿದ್ದರು. ನನಗೂ ಸಮಯ ಉಳಿಯುತ್ತಿತ್ತು. ಇದೇ ವರ್ತನೆಯನ್ನೇ ನಾನೀಗ ಅಭ್ಯಾಸ ಮಾಡುತ್ತಿದ್ದೇನೆ. ಈಗಲೂ ಯಾರಾದರೂ ನನ್ನಿಂದ ಏನನ್ನಾದರೂ ಕೇಳಿದಾಗ “ಖಂಡಿತ ಮಾಡ್ತೇನೆ’ ಅನ್ನಲು ಬಾಯಿ ತೆರೆಯುತ್ತದೆ, ಆದರೆ ನನ್ನ ತುಡಿತವನ್ನು ಕಂಟ್ರೋಲ್ ಮಾಡಿಕೊಂಡು “ಯೋಚಿಸಿ ಹೇಳುತ್ತೇನೆ’ ಎನ್ನುತ್ತೇನೆ. ಅನಗತ್ಯ ವಿವರಣೆ ಬೇಡ
ಯಾರಾದರೂ ನಿಮಗೆ ರೆಸ್ಟಾರೆಂಟ್‌ಗೆ ಬರಲು ಆಹ್ವಾನ ಕೊಡುತ್ತಾರೆ ಎಂದುಕೊಳ್ಳಿ, ನಿಮಗೆ ಅಲ್ಲಿಗೆ ಹೋಗಲು ಮನಸ್ಸಿರುವುದಿಲ್ಲ. ಅಂಥ ಸಂದರ್ಭದಲ್ಲಿ ಅವರಿಗೆ “ಇಲ್ಲ’ ಎಂದು ಹೇಳಿಬಿಡಿ. ಅನವಶ್ಯಕ ವಿವರಣೆಗಳನ್ನು ಕೊಡುತ್ತಾ ಕೂಡಬೇಡಿ, ಎದುರಿನವನಿಗೆ ನೀವು ಬರುತ್ತೀರೋ ಇಲ್ಲವೋ ಎನ್ನುವುದಷ್ಟೇ ಮುಖ್ಯವಾಗಿರುತ್ತದೆಯೇ ಹೊರತು, ವಿವರಣೆಗಳಲ್ಲ. “ನನ್ನ ನಾಯಿಗೆ ಹುಷಾರಿಲ್ಲ, ಅಜ್ಜಿ ಸತ್ತುಹೋಗಿದ್ದಾಳೆ’ ಎಂಬ ಸುಳ್ಳುಗಳು ಬೇಕಿಲ್ಲ. ಈ ರೀತಿ ಸುಳ್ಳು ಹೇಳಿದ್ದಕ್ಕಾಗಿ ಆಮೇಲೆ ನಿಮಗೇ ಮನಸ್ಸು ಪಿಚ್ಚೆನಿಸುತ್ತದೆ. ನಾನು ಅಪ್ರಾಮಾಣಿಕ ಎಂಬ ಬೇಸರ ಕಾಡುತ್ತದೆ. ಒಂದು ವಿಷಯ ಸ್ಪಷ್ಟವಿರಲಿ, ಸುಖಮಯ ಮತ್ತು ಸಮೃದ್ಧ ಜೀವನ ನಿಮ್ಮದಾಗಬೇಕೆಂದರೆ ನಿಮ್ಮಲ್ಲಿ ಸ್ಪಷ್ಟತೆ ಮತ್ತು ಪ್ರಾಮಾಣಿಕತೆ ಇರುವುದು ಮುಖ್ಯ. “ಹೂಂ’ ಎನ್ನುತ್ತೀರೆಂದರೆ ಒಪ್ಪಿಕೊಂಡ ಕೆಲಸವನ್ನು ಮಾಡಿ ಮುಗಿಸಿ, ಸುಳ್ಳು ಕಥೆ ಹೇಳುತ್ತಾ ಜನರ ಹಾಗೂ ನಿಮ್ಮ ಟೈಂ ವೇಸ್ಟ್ ಮಾಡಬೇಡಿ. ಪ್ರಾಮಾಣಿಕತೆ, ಸ್ಪಷ್ಟತೆ, ಬೋಲ್ಡ್‌ನೆಸ್ ಎನ್ನುವುದು ರಕ್ತಗತ ಸಂಗತಿಗಳಲ್ಲ. ಅವೆಲ್ಲವೂ ಪ್ರಾಕ್ಟಿಸ್‌ನಿಂದ ಬರುವಂಥವು. “ಇಲ್ಲ’ ಎನ್ನುವ ಪ್ರಾಕ್ಟೀಸ್ ಇಂದಿನಿಂದಲೇ ಆರಂಭಿಸಿ. ಆಗಲ್ಲ ಎಂದರೆ ಈಗಲೇ ಹೇಳಿಬಿಡಿ! ಟೋನಿ ರಾಬಿನ್ಸ್, ಖ್ಯಾತ ಲೇಖಕ