Advertisement

ಹಾರ್ವರ್ಡ್‌ ಯಾಕೆ? ಹಾರ್ಡ್‌ವರ್ಕ್‌ ಓಕೆ ಮೋದಿ ತಿರುಗೇಟು

03:45 AM Mar 02, 2017 | Team Udayavani |

ಮಹಾರಾಜ್‌ಗಂಜ್‌: ನೋಟುಗಳ ಅಪನಗದೀಕರಣವು ದೇಶದ ಜಿಡಿಪಿ ಮೇಲೆ ಹೇಳಿಕೊಳ್ಳುವಂಥ ಪರಿಣಾಮ ಬೀರಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ನೋಟು ಅಮಾನ್ಯವನ್ನು ಖಂಡಿಸಿದ್ದವರ ವಿರುದ್ಧ ಪ್ರಧಾನಿ ಮೋದಿ ವಾಗ್ಧಾಳಿ ನಡೆಸಿದ್ದಾರೆ.

Advertisement

ಉತ್ತರಪ್ರದೇಶದ ಮಹಾರಾಜ್‌ಗಂಜ್‌ನಲ್ಲಿ ಬುಧವಾರ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, “ಒಂದು ಕಡೆ, ನೋಟು ಅಮಾನ್ಯ ಕುರಿತು ಹಾರ್ವರ್ಡ್‌ನ ಮಂದಿ ಏನು ಹೇಳುತ್ತಿದ್ದಾರೆ ಎಂಬುದನ್ನು ಕೆಲವರು ಉಲ್ಲೇಖೀಸುತ್ತಾ ಕೂತರೆ, ದೇಶದ ಬಡ ವ್ಯಕ್ತಿಯ ಮಗ ತನ್ನ ಪರಿಶ್ರಮದಿಂದ ದೇಶದ ಆರ್ಥಿಕತೆಯನ್ನು ಸುಧಾರಿಸಲು ಯತ್ನಿಸುತ್ತಿದ್ದಾನೆ. ಹಾರ್ಡ್‌ವರ್ಕ್‌(ಪರಿಶ್ರಮ) ಎನ್ನುವುದು ಹಾರ್ವರ್ಡ್‌ಗಿಂತಲೂ ಹೆಚ್ಚು ಪ್ರಭಾವಶಾಲಿಯಾದದ್ದು ಎಂಬುದು ಈಗಲಾದರೂ ಗೊತ್ತಾಯಿತಲ್ಲವೇ,’ ಎನ್ನುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ನೋಟು ಅಮಾನ್ಯವನ್ನು ಟೀಕಿಸಿದ್ದ ಹಾರ್ವರ್ಡ್‌ ವಿವಿ ಪ್ರೊಫೆಸರ್‌, ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ ಅವರನ್ನು ಉದ್ದೇಶಿಸಿ ಪರೋಕ್ಷವಾಗಿ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಮಂಗಳವಾರವಷ್ಟೇ ಪ್ರಕಟವಾಗಿದ್ದ ಜಿಡಿಪಿಯು ನಿರೀಕ್ಷೆಗಿಂತ ಹೆಚ್ಚು ಅಂದರೆ ಶೇ.7ಧಿರಷ್ಟು ದಾಖಲಾಗಿದ್ದನ್ನು ಅಂಕಿಅಂಶ ಹೇಳಿತ್ತು. ಬಿಜೆಪಿ ಗೆದ್ದಾಗಿದೆ: ಇದೇ ವೇಳೆ, ಉತ್ತರಪ್ರದೇಶದ 5 ಹಂತಗಳ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿಯಾಗಿದೆ. ಇನ್ನುಳಿದಿರುವ 2 ಹಂತಗಳು ಬಿಜೆಪಿಯ ಗೆಲುವಿಗೆ ಬೋನಸ್‌. ಅಂದರೆ, ತರಕಾರಿ ಕೊಂಡ ಬಳಿಕ ವ್ಯಾಪಾರಿಯು ಗ್ರಾಹಕನಿಗೆ ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಫ್ರೀಯಾಗಿ ನೀಡಿದಂತೆ ಎಂದೂ ಮೋದಿ ಹೇಳಿದ್ದಾರೆ.

ತೆಂಗಿನಕಾಯಿ ಒಳಗೆ ಇರೋದು ಜ್ಯೂಸ್‌ ಅಲ್ಲ! 
ಇತ್ತೀಚೆಗೆ ಮಣಿಪುರಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್‌ ನಾಯಕ, “ನಾನು ತೆಂಗಿನಕಾಯಿಯಿಂದ ಜ್ಯೂಸ್‌ ಹೊರತೆಗೆದು, ಲಂಡನ್‌ಗೆ ಕಳುಹಿಸುತ್ತೇನೆ’ ಎಂದು ಹೇಳುತ್ತಿದ್ದರು. ಪಾಪ, ಅವರಿಗೆ ತೆಂಗಿನಕಾಯಿಯೊಳಗೆ ಇರುವುದು ಜ್ಯೂಸ್‌ ಅಲ್ಲ, ನೀರು ಎಂಬುದು ಗೊತ್ತಿಲ್ಲ. ಅವರು ಅಷ್ಟೊಂದು ದೂರದೃಷ್ಟಿಯ ಹಾಗೂ ಪ್ರತಿಭಾವಂತ ನಾಯಕ. ನಿಜಕ್ಕೂ ಅವರು ಉತ್ತರಪ್ರದೇಶದಲ್ಲಿ ಏನು ಮಾಡಬೇಕೆಂದು ಬಯಸುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದೂ ಮೋದಿ ವ್ಯಂಗ್ಯವಾಡಿದ್ದಾರೆ.

ಗೋಯಲ್‌ ಮಾತಾಡುವಾಗಲೇ ಕರೆಂಟ್‌ ಗೋತಾ!
ವಾರಾಣಸಿಯಲ್ಲಿ ಕೇಂದ್ರ ವಿದ್ಯುತ್‌ ಸಚಿವ ಪಿಯೂಷ್‌ ಗೋಯಲ್‌ ಅವರು ವಿದ್ಯುತ್‌ ಹಂಚಿಕೆ ವಿವಾದದ ಕುರಿತು ಸುದ್ದಿಗಾರರ ಜತೆ ಮಾತಾಡುತ್ತಿರುವಾಗಲೇ, ಕರೆಂಟ್‌ ಹೋದ ಘಟನೆ ನಡೆದಿದೆ. ನಂತರ ಅವರು ಕತ್ತಲಲ್ಲಿ ಮಾಡಿದ ಸುದ್ದಿಗೋಷ್ಠಿಯ ಫೋಟೋವನ್ನು ಟ್ವೀಟ್‌ ಮಾಡಿದ್ದು, “ವಾರಾಣಸಿಯಲ್ಲಿ ಸರಿಯಾಗಿ ವಿದ್ಯುತ್‌ ಪೂರೈಕೆ ಆಗುತ್ತಿಲ್ಲ ಎಂದು ಈಗ ನಾನು ಗಂಗಾಮಾತೆ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ’ ಎಂದಿದ್ದಾರೆ. ಈ ಮೂಲಕ ವಿದ್ಯುತ್‌ ಸಮಸ್ಯೆಯಿದ್ದರೆ ಗಂಗೆಯ ಮೇಲೆ ಪ್ರಮಾಣ ಮಾಡಿ ಎಂಬ ಸಿಎಂ ಅಖೀಲೇಶ್‌ ಯಾದವ್‌ ಮಾತಿಗೆ ಟಾಂಗ್‌ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next