ರಾಮನಗರ: ಶಾಸಕ ಆನಂದ್‌ಸಿಂಗ್ ಮೇಲೆ ಹಲ್ಲೆ ನಡೆಸಿ ಕಂಪ್ಲಿ ಗಣೇಶ್ ಪರಾರಿಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿರುವುದರಿಂದ ಮುಚ್ಚಿಹಾಕುವ ಉದ್ದೇಶದಿಂದಲೇ ತಡವಾಗಿ ಎಫ್ಐಆರ್ ದಾಖಲು ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಭಾನುವಾರವೇ ವರದಿ ರವಾನೆ: ಶಾಸಕ ಆನಂದ್ ಸಿಂಗ್ ವೈದ್ಯಕೀಯ ಚಿಕಿತ್ಸೆ ನೀಡಿದ ಅಪೋಲೋ ಆಸ್ಪತ್ರೆಯ ವೈದ್ಯರು ಮೆಡಿಕೋ ಲೀಗಲ್ ಪ್ರಕರಣದ ಬಗ್ಗೆ ಭಾನುವಾರವೇ ಶೇಷಾದ್ರಿಪುರಂ ಪೊಲೀಸರಿಗೆ ನೀಡಿದ್ದರು. ಆ ವರದಿ ಬಿಡದಿ ಪೊಲೀಸ್ ಠಾಣೆ ಅಧಿಕಾರಿಗಳ ಅದೇ ದಿನ ಕೈ ಸೇರಿದೆ. ಆಗಿನ್ನು ಶಾಸಕ ಗಣೇಶ್ ಮತ್ತು ಇತರ ಶಾಸಕರು ರೆಸಾರ್ಟ್‌ನಲ್ಲೇ ಇದ್ದರು.
ಉಭಯ ಸಂಕಟಕ್ಕೆ ಸಿಕ್ಕ ಬಿಡದಿ ಪೊಲೀಸರು ಸೋಮವಾರ ಬೆಳಿಗ್ಗೆ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಆನಂದ್ ಸಿಂಗ್‌ರಿಂದ ಹೇಳಿಕೆ ಪಡೆದುಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ. ಜನವರಿ 21ರ ಸೋಮವಾರ ಆನಂದ್ ಸಿಂಗ್ ಅವರು ದೂರು ಬಿಡದಿ ಠಾಣೆ ತಲುಪಿ ಎಫ್.ಐ.ಆರ್. ದಾಖಲಾಗಿದ್ದು ಮಧ್ಯಾಹ್ನ 1.30. ಅಲ್ಲಿಯವರೆಗೂ ಗಣೇಶ್ ಇನ್ನು ರೆಸಾರ್ಟ್‌ನಲ್ಲೇ ಇದ್ದರು,
ಆದರೆ ಕೈ ನಾಯಕರು ಪೊಲೀಸ್ ಅಧಿಕಾರಗಳ ಮೇಲೆ ಬಹುಶಃ ಒತ್ತಡ ಹೇರಿದ್ದರಿಂದ ಗಣೇಶ್‌ರ ಬಂಧನವಾಗಲಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಎಫ್.ಐ.ಆರ್ ದಾಖಲಾಗುವ ಕೆಲವೇ ಹೊತ್ತಿನ ಮುಂಚೆ ಶಾಸಕ ಗಣೇಶ್ ರೆಸಾರ್ಟ್‌ನಿಂದ ಹೊರಟು ಹೋಗಿದ್ದಾರೆ. ಅವರು ತಲೆಮರೆಸಿಕೊಂಡ ನಂತರ ಅವರ ಹುಡುಕಾಟ ನಡೆದಿದೆ, ಪ್ರಭಾವಿ ಕೈ ನಾಯಕರ ಒತ್ತಡದಿಂದಲೇ ಗಣೇಶ್‌ರ ಬಂಧನವಾಗಲಿಲ್ಲ ಎಂದು ಹೇಳಲಾಗಿದೆ.
ರೆಸಾರ್ಟ್ ಪೊಲೀಸರ ಸರ್ಪಗಾವಲು: ಕೈ ಶಾಸಕರು ವಾಸ್ತವ್ಯವಿದ್ದ ವೇಳೆ ಪೊಲೀಸರು ಭಾರಿ ಬಂದೋಬಸ್ತ್ ಏರ್ಪಡಿಸಿದ್ದರು. ಮಾರಾಮಾರಿ ನಡೆದ ವೇಳೆಯೂ ಬಂದೋಬಸ್ತ್ ಇತ್ತು. ಆದರೂ ಗಣೇಶ್‌ರನ್ನು ವಶಕ್ಕೆ ತೆಗೆದುಕೊಳ್ಳಲಿಲ್ಲ . ಈಗ ಮೂರು ತಂಡಗಳನ್ನು ಮಾಡಿಕೊಂಡು ಶೋಧ ಆರಂಭಿಸಿದ್ಧಾರೆ ಎಂಬ ಕುಹುಕಗಳು ಕೇಳಿ ಬಂದಿವೆ.