ಕಡಿಮೆಯಾಗುವ ತನಕ ವಿಚಾರಣೆಗೆತ್ತಿಕೊಳ್ಳದಿರುವದೆಲ್ಲ ಅಪೇಕ್ಷಿತವಲ್ಲ. ನ್ಯಾಯಾಂಗ ತನ್ನ ಸ್ವಾತಂತ್ರ್ಯವನ್ನು ಮತ್ತು ನಿರ್ಬಿಢೆತೆಯನ್ನು ಕಳೆದುಕೊಂಡಿದೆಯೇ ಎಂಬ ಭಯ ಕಾಡುತ್ತಿದೆ.
Advertisement
ನಮ್ಮದಿನ್ನೂ ಎಳೆಯ ಪ್ರಜಾತಂತ್ರ. ಇಲ್ಲಿ ಅನೇಕ ದೊಡ್ಡ ಪ್ರಶ್ನೆಗಳು ಇನ್ನೂ ಉತ್ತರದ ನಿರೀಕ್ಷೆಯಲ್ಲಿವೆ. ವ್ಯಕ್ತಿಯ ಖಾಸಗಿ ಬದುಕಿನಲ್ಲಿ ಸರಕಾರ ಎಷ್ಟು ಹಸ್ತಕ್ಷೇಪ ಮಾಡಬಹುದು? ವ್ಯಕ್ತಿ ಒಂದು ದೇಶದ ನಾಗರಿಕನಾಗುವುದು ಹೇಗೆ? ಈ ಮುಂತಾದ ಪ್ರಶ್ನೆಗಳಿಗೆ ಇನ್ನೂ ನಿಖರವಾದ ಉತ್ತರಗಳು ಸಿಕ್ಕಿಲ್ಲ ಮತ್ತು ಇವುಗಳಿಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಹೊಸ ನಿಯಮಗಳು ರಚನೆಯಾಗುತ್ತಿವೆ.ನ್ಯಾಯಾಂಗವನ್ನು ವಿಪರೀತ ಎನ್ನುವಷ್ಟು ಅವಲಂಬಿಸಿರುವ ಈ ದೇಶದ ನ್ಯಾಯಾಲಯಗಳ ಸ್ಥಿತಿಗತಿ ಏನೇನೂ ಚೆನ್ನಾಗಿಲ್ಲ ಎನ್ನುವುದನ್ನು ನೋವಿನಿಂದಲೇ ಹೇಳುತ್ತಿದ್ದೇನೆ. ಕಕ್ಷಿದಾರರ ಬೃಹತ್ ಸಮೂಹಕ್ಕೆ ನಮ್ಮಲ್ಲಿ ಬಹಳ ಕಡಿಮೆ ನ್ಯಾಯಾಧೀಶರಿದ್ದಾರೆ. ವಿಚಾರಣಾ ನ್ಯಾಯಾಲಯಗಳ ಮೂಲಸೌಕರ್ಯಗಳು ಏನೇನೂ ಸಾಲದು ಮತ್ತು ನ್ಯಾಯಾಧೀಶರ ಅರ್ಹತೆಯೂ ಕಳಪೆಯಾಗಿದೆ. ಇದರಿಂದಾಗಿ ಕಳವಳಕಾರಿ ಎನ್ನಬಹುದಾದಷ್ಟು ಪ್ರಮಾಣದಲ್ಲಿ ಪ್ರಕರಣಗಳು ವಿಚಾರಣೆಗೆ ಬಾಕಿಯುಳಿದಿವೆ ಮತ್ತು ತೀರ್ಪು ರಿಜಿಸ್ಟ್ರಿಗಳ ಪುಟಗಳು ತುಂಬಿ ತುಳುಕುತ್ತಿವೆ.
Related Articles
Advertisement
ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಿರುವ ಅಂಶಗಳಿಗೆ ಪರ್ಯಾಯವಾಗಿ ತಾತ್ಕಾಲಿಕವಾದ ಉಪಶಮನಗಳೇ ಪ್ರಮುಖವಾಗುತ್ತಿರುವುದು ಬಹಳ ಕಳವಳಕಾರಿಯಾದ ಸಂಗತಿ. ಜನ ಸಮೂಹದ ಹಿತಾಸಕ್ತಿಗೆ ಸಂಬಂಧಿಸಿದಂಥ ವಿಚಾರಗಳನ್ನು ಇತ್ಯರ್ಥಪಡಿಸಿಕೊಳ್ಳಲು ದೊಡ್ಡ ಸಂಖ್ಯೆಯಲ್ಲಿ ಪಿಐಎಲ್‌ಗಳು ಬಳಕೆಯಾಗುತ್ತಿರುವುದು ದುರದೃಷ್ಟಕರವಾದ ಬೆಳವಣಿಗೆ. ಈ ಮಾದರಿಯ ನ್ಯಾಯ ತೀರ್ಮಾನಗಳು ಕಾಲನ ಪರೀಕ್ಷೆಗೊಳಪಟ್ಟಿರುವ ನ್ಯಾಯಾಂಗದ ಪ್ರಜ್ಞಾವಂತಿಕೆಗೆ ಸವಾಲೊಡ್ಡುತ್ತಿವೆ. ಏನಾಗುತ್ತಿದೆ ಮತ್ತು ಏನಾಗಬಾರದು ಎಂಬುದನ್ನು ಅರಿತುಕೊಳ್ಳುವುದರಲ್ಲಿ ನಮ್ಮ ನ್ಯಾಯಾಂಗದ ಸ್ಥಿರತೆ ನಿಂತಿದೆ. ಈ ಮೂಲಕವೇ ನ್ಯಾಯಾಂಗದ ವಿಧಾನಗಳು ಬೆಳೆದು ಬಂದಿವೆ. ಇದನ್ನು ಕಡೆಗಣಿಸಿದರೆ ನ್ಯಾಯಾಂಗಕ್ಕೇ ಅಪಾಯ.
ನ್ಯಾಯಾಲಯ ತನ್ನ ವ್ಯಾಪ್ತಿ ಮತ್ತು ಅಧಿಕಾರವನ್ನು ತಾನೇ ವಿಸ್ತರಿಸಿಕೊಳ್ಳುತ್ತಿದೆ. ತೀವ್ರ ವಿರೋಧವಿರುವ ಪ್ರಕರಣಗಳಲ್ಲಿ ನಿರ್ದೇಶನಗಳನ್ನು ನೀಡುವ ಮತ್ತು ಪ್ರಕ್ರಿಯೆಗಳ ಉಸ್ತುವಾರಿಯನ್ನು ನೋಡಿಕೊಳ್ಳುವಂಥ ಪಾತ್ರಗಳನ್ನು ತಾನೇ ನಿಭಾಯಿಸುತ್ತಿದೆ. ಅಸ್ಸಾಂನಲ್ಲಿ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಕೋರ್ಟಿನ ಮೆಟ್ಟಿಲೇರಿದಾಗ ಮಧ್ಯ ಪ್ರವೇಶಿಸಿದ ಸುಪ್ರೀಂ ಕೋರ್ಟ್ ತಾನೇ “ಆಳುವ ವ್ಯವಸ್ಥೆ’ಯ ಪಾತ್ರವನ್ನು ನಿಭಾಯಿಸಿತು. ಎನ್‌ಆರ್‌ಸಿಗೆ ನಿಯಮಾವಳಿಗಳನ್ನೂ ತಾನೇ ರಚಿಸಿತು ಹಾಗೂ ಒಟ್ಟು ಪ್ರಕ್ರಿಯೆಯ ಉಸ್ತುವಾರಿಯನ್ನು ನೋಡಿಕೊಂಡಿತು. ಈ ಮೂಲಕ ಕಾರ್ಯಾಂಗದ ಕೆಲಸವನ್ನೂ ತಾನೇ ಮಾಡಿತು.
ಈಗ ಎದುರಾಗುವ ನಿಜವಾದ ಸಮಸ್ಯೆ ಏನೆಂದರೆ ಈ ಪ್ರಕ್ರಿಯೆಗಳ ವಿರುದ್ಧ ಯಾರಿಗೆ ದೂರು ನೀಡುವುದು ಎನ್ನುವುದು. ಇಲ್ಲಿ ನ್ಯಾಯಾಂಗವೇ ಅರ್ಥಾತ್ ಸುಪ್ರೀಂ ಕೋರ್ಟ್ ಅನುಷ್ಠಾನದ ಜವಾಬ್ದಾರಿ ವಹಿಸಿಕೊಂಡಿರುವಾಗ ಅದರ ವಿರುದ್ಧ ಯಾವ ವ್ಯವಸ್ಥೆಗೆ ದೂರು ನೀಡಬಹುದು? ನ್ಯಾಯಾಲಯವೇ ತಾನು ಕೈಗೊಂಡಿರುವ ಕ್ರಮಗಳು ಸರಿಯೇ ಎಂದು ನಿರ್ಧರಿಸಬೇಕಾದ ಸಂದಿಗ್ಧ ಪರಿಸ್ಥಿತಿಯನ್ನು ಇದು ಸೃಷ್ಟಿಸುತ್ತದೆ.
ಇತ್ತೀಚೆಗೆ ಪ್ರಕಟವಾಗಿರುವ ನನ್ನ ಪುಸ್ತಕದಲ್ಲಿ ಆಡಳಿತಾಂಗದ ಮೇಲೆ ನ್ಯಾಯಾಂಗ ಕಣ್ಣಿಡುವುದು ಎಷ್ಟು ಅಗತ್ಯ ಮತ್ತು ಕಾನೂನು ಮತ್ತು ಶಾಸನಗಳ ಮೌಲ್ಯಮಾಪನ ಮಾಡುವ ಅಗತ್ಯದ ಬಗ್ಗೆ ಚರ್ಚಿಸಿದ್ದೇನೆ.ನ್ಯಾಯಾಧೀಶರ ನೇಮಕಾತಿಯಲ್ಲಿ ಆಡಳಿತಾಂಗಕ್ಕಿರುವುದು ಮಾರ್ಗದರ್ಶಕನ ಪಾತ್ರವಷ್ಟೆ. ಹಾಗೆಂದು ಇದರ ಅಗತ್ಯ ಪೂರ್ಣವಾಗಿ ಕಂಡುಬಂದಿಲ್ಲ. ಶಾಸಕಾಂಗಕ್ಕೆ ನ್ಯಾಯಾಧೀಶರನ್ನು ಮಹಾಭಿಯೋಗಕ್ಕೊಳಪಡಿಸುವ ಅಥವಾ ನ್ಯಾಯಾಧೀಶರನ್ನು ವಜಾಗೊಳಿಸುವ ಅಧಿಕಾರ ಇದೆ ಎನ್ನುವುದು ನಿಜ. ಮಹಾಭಿಯೋಗದ ಪ್ರಕರಣಗಳಲ್ಲಿ ಆರಂಭದಲ್ಲೇ ನ್ಯಾಯಾಧೀಶರು ರಾಜೀನಾಮೆ ನೀಡಿದ ಉದಾಹರಣೆ ಇದೆ.
ಸುಪ್ರೀಂ ಕೋರ್ಟ್ ಕಳೆದ ಕೆಲ ವರ್ಷಗಳಲ್ಲಿ ದೊಡ್ಡ ಮಟ್ಟದ ಹಿತಾಸಕ್ತಿಗಳಿರುವ ಪ್ರಕರಣಗಳಲ್ಲಿ ಸರಕಾರದ ವಿರುದ್ಧ ಕ್ರಮ ಕೈಗೊಳ್ಳಲು ನಿರಾಕರಿಸಿದ ದೃಷ್ಟಾಂತಗಳಿವೆ. ಸರಕಾರಕ್ಕೆ ಸುದೀರ್ಘ ಕಾಲಾವಕಾಶ ಕೊಡುವ ಪ್ರವೃತ್ತಿಯೊಂದು ನ್ಯಾಯಾಲಯಗಳಲ್ಲಿದೆ. ಆದರೆ ಅನಿವಾರ್ಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಸರಕಾರವನ್ನು ತಡೆದದ್ದೂ ಇದೆ. ಸರಕಾರ ತಪ್ಪು ಮಾಡಿದಾಗಲೂ ನ್ಯಾಯಾಲಯ ಪ್ರಕರಣವನ್ನು ಮುಂದೂಡುವುದು, ಪ್ರಕರಣದ ಮಹತ್ವ ಕಡಿಮೆಯಾಗುವ ತನಕ ವಿಚಾರಣೆಗೆತ್ತಿಕೊಳ್ಳದಿರುವದೆಲ್ಲ ಅಪೇಕ್ಷಿತವಲ್ಲ. ನ್ಯಾಯಾಂಗ ತನ್ನ ಸ್ವಾತಂತ್ರ್ಯವನ್ನು ಮತ್ತು ನಿರ್ಬಿಢೆತೆಯನ್ನು ಕಳೆದುಕೊಂಡಿದೆಯೇ ಎಂಬ ಭಯ ಕಾಡುತ್ತಿದೆ. ಕಾರ್ಯಾಂಗ ಮತ್ತು ಶಾಸಕಾಂಗವನ್ನು ನಿಯಂತ್ರಿಸುವ ದಾಷ್ಟì ನ್ಯಾಯಾಂಗಕ್ಕಿಲ್ಲವೆ? ಪ್ರಜಾತಂತ್ರದ ವಿವಿಧ ಕಾರ್ಯಗಳು ಅಥವಾ ವಿಚಾರಗಳು ಸರಕಾರದ ಕ್ರಮಗಳಿಂದಾಗಿ ಅಥವಾ ನ್ಯಾಯಾಲಯದ ಒಂದು ತೀರ್ಪಿನಿಂದ ಸ್ಥಗಿತಗೊಳ್ಳುವುದಿಲ್ಲ ಎನ್ನುವುದು ನಿಜ. ಮುಕ್ತ ಮತ್ತು ನಿರ್ಭೀತ ಮಾಧ್ಯಮ, ಕ್ರಿಯಾಶೀಲ, ವಿಚಾರವಂತ ಪ್ರಜೆಗಳು ಶೋಧನಾ ಪ್ರವೃತ್ತಿಯ ಮನಸುಗಳು ಇರುವ ತನಕ ಜನತಂತ್ರ ಸುರಕ್ಷಿತ. ಅಂತಿಮವಾಗಿ ಪ್ರಜಾತಂತ್ರದ ಮೌಲ್ಯಗಳನ್ನು ಎತ್ತಿಹಿಡಿಯುವುದು, ಅದರ ಸಿಂಧುತ್ವ ಮತ್ತು ಅಧಿಕಾರವನ್ನು ನಿರ್ಧರಿಸುವವರು ನೀವೆ, ಈ ದೇಶದ ಪ್ರಜೆಗಳು.
ನಮ್ಮ ವ್ಯವಸ್ಥೆಯಲ್ಲಿ ವಿಚಾರಣೆ ಮುಂದೂಡಿಕೆಗಳು ಕೆಲವೊಮ್ಮೆ ನಿರ್ಣಾಯಕವಾಗಬಹುದು. ಹೀಗಾಗುವುದರಿಂದ ಕೇಸುಗಳು ಗಟ್ಟಿಯಾಗಬಹುದು ಇಲ್ಲವೆ ನಾಶವಾಗಬಹುದು.
ನ್ಯಾಯಾಲಯ ತನ್ನ ಅಧಿಕಾರವನ್ನು ತಾನೇ ವಿಸ್ತರಿಸಿಕೊಳ್ಳುತ್ತಿದೆ. ತೀವ್ರ ವಿರೋಧದ ಪ್ರಕರಣಗಳಲ್ಲಿ ನಿರ್ದೇಶನಗಳನ್ನು ನೀಡುವ ಪ್ರಕ್ರಿಯೆಗಳ ಉಸ್ತುವಾರಿ ವಹಿಸುವ ಪಾತ್ರ ನಿಭಾಯಿಸುತ್ತಿದೆ.
ಪ್ರಜಾತಂತ್ರದ ವಿವಿಧ ಕಾರ್ಯಗಳು ಅಥವಾ ವಿಚಾರಗಳು ಸರಕಾರದ ಕ್ರಮಗಳಿಂದಾಗಿ ಅಥವಾ ನ್ಯಾಯಾಲಯದ ಒಂದು ತೀರ್ಪಿನಿಂದ ಸ್ಥಗಿತಗೊಳ್ಳುವುದಿಲ್ಲ ಎನ್ನುವುದು ನಿಜ.
(ಲೇಖನ ಕೃಪೆ : ಟೈಮ್ಸ್ ಆಫ್ ಇಂಡಿಯಾ) ಅಭಿಷೇಕ್ ಮನು ಸಿಂಘ್ವಿ