ಕೋಲ್ಕತ್ತಾ: ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯಾದ ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಲೋಕಸಭೆ ಚುನಾವಣೆಯ ಕಹಳೆ ಊದಿದ್ದಾರೆ. ಎರಡು ರ್ಯಾಲಿಗಳಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ ಅವರು, ದೀದಿ ವಿರುದ್ಧ ಟೀಕಾಪ್ರಹಾರ ನಡೆಸುವುದರ ಜೊತೆಗೆ, ಮಹಾಮೈತ್ರಿಗೆ ಮುಂದಾದ ಪ್ರತಿಪಕ್ಷಗಳನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
‘ದೀದಿಯವರೇ, ನೀವು ಯಾವುದೇ ತಪ್ಪು ಮಾಡಿಲ್ಲ ಎಂದಾದರೆ, ಈ ಚೌಕಿದಾರನನ್ನು ಕಂಡೊಡನೆ ಹೆದರುವುದೇಕೆ’ ಎಂದು ಪ್ರಶ್ನಿಸಿದ ಮೋದಿ, ನಾನು ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇನೆ ಎಂಬ ಏಕೈಕ ಕಾರಣಕ್ಕೆ ಎಲ್ಲರೂ ನನ್ನನ್ನು ಹೀಗಳೆಯುತ್ತಿದ್ದಾರೆ. ಈ ದೇಶದ ಅತ್ಯಂತ ಪ್ರಭಾವಿ ಕುಟುಂಬದ ಸದಸ್ಯರೂ ತೆರಿಗೆ ತಪ್ಪಿಸಿಕೊಂಡು ಕೋರ್ಟ್ ಬಾಗಿಲು ತಟ್ಟುವಂಥ ಪರಿಸ್ಥಿತಿ ಬಂದಿದೆ. ಯಾರೆಲ್ಲ ಪರಾರಿಯಾಗಿದ್ದಾರೋ, ಅವರೆಲ್ಲರನ್ನೂ ಒಬ್ಬೊಬ್ಬರನ್ನಾಗಿ ವಾಪಸ್ ಕರೆತರುವ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.
ಇದೇ ವೇಳೆ, ದೀದಿ ಮತ್ತು ಅವರ ಪಕ್ಷ್ಷವು ಹಿಂಸೆಯಲ್ಲಿ ಯಾಕೆ ತೊಡಗಿದೆ ಎಂದು ಈಗ ಅರ್ಥವಾಯಿತು. ನೀವು ನಮ್ಮ ಮೇಲೆ ತೋರಿಸುತ್ತಿರುವ ಪ್ರೀತಿಯನ್ನು ಅವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿಯೇ ಅವರು ಅಮಾಯಕರನ್ನು ಕೊಲೆ ಮಾಡು ತ್ತಿದ್ದಾರೆ ಎಂದೂ ಮೋದಿ ಆರೋಪಿಸಿದ್ದಾರೆ.
ಮಮತಾ ಸರ್ಕಾರವು ಮಧ್ಯಮ ವರ್ಗದವರ ಇಚ್ಛೆಗಳನ್ನೇ ಕೊಲ್ಲುತ್ತಿದೆ. ಆಡಳಿತಾರೂಢ ಪಕ್ಷವು ತ್ರಿವಳಿ ‘ಟಿ’ಗೆ ಹೆಸರುವಾಸಿಯಾಗಿದೆ. ಅವೆಂದರೆ, ತೃಣಮೂಲ್ ತೋಲಾಬಾಜಿ ಟ್ಯಾಕ್ಸ್. ತೋಲಾಬಾಜಿ ಎಂದರೆ ಸಂಘಟಿತ ಲೂಟಿ ಎಂದರ್ಥ. ಆದರೆ, ನಮ್ಮ ಸರ್ಕಾರ ಜನರ ಕನಸುಗಳನ್ನು ಈಡೇರಿಸುತ್ತಿದೆ ಎಂದಿದ್ದಾರೆ ಮೋದಿ.
ಬಿಜೆಪಿ-ಟಿಎಂಸಿ ಘರ್ಷಣೆ: ಪ್ರಧಾನಿ ರ್ಯಾಲಿಗೂ ಮುನ್ನ ಅಂದರೆ ಶುಕ್ರವಾರ ರಾತ್ರಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಪೋಸ್ಟರ್ ವಾರ್ ನಡೆದಿದೆ. ನಾವು ಅಂಟಿಸಿದ್ದ ಪ್ರಧಾನಿ ಮೋದಿ ಅವರ ಪೋಸ್ಟರ್‌ಗಳನ್ನು ಟಿಎಂಸಿ ಕಾರ್ಯಕರ್ತರು, ಕಿತ್ತೆಸೆದು ಅಲ್ಲಿ ಟಿಎಂಸಿ ನಾಯಕರ ಪೋಸ್ಟ್ ರಗಳನ್ನು ಅಂಟಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದರೆ, ಇದನ್ನು ಅಲ್ಲಗಳೆ ದಿ ರುವ ಟಿಎಂಸಿ, ಸಿಎಂ ಮಮತಾ ಬ್ಯಾನರ್ಜಿ ಅವರ ಪೋಸ್ಟರ್‌ಗೆ ಬಿಜೆಪಿ ಕಾರ್ಯಕರ್ತರು ಮಸಿ ಬಳಿದಿದ್ದರಿಂದಲೇ ಘರ್ಷಣೆ ಆರಂಭ ವಾಯಿತು ಎಂದಿದೆ.