Advertisement

ಗಾಡಿಗೆ ಗಿಯರ್‌ ಯಾಕೆ ಬೇಕು? 

02:35 AM Sep 24, 2017 | |

ಅಂಚಿನಲ್ಲಿ ಹಲ್ಲುಗಳನ್ನು ಹೊಂದಿರುವ ಗಾಲಿಯಾಕಾರವನ್ನು ಗಿಯರ್‌ ಹೊಂದಿರುತ್ತದೆ. ಹಲವು ಗಿಯರ್‌ಗಳನ್ನು ಒಗ್ಗೂಡಿಸಿ ಗಿಯರ್‌ ಬಾಕ್ಸ್‌ ಮಾಡಿರುತ್ತಾರೆ. ಗಿಯರ್‌ ಅಳತೆಯ ಮೇಲೆ ತಿರುಗುಬಲ ಇಲ್ಲವೇ ವೇಗವನ್ನಾಗಿ ಮಾರ್ಪಡಿಸಬಹುದು. ಅಳತೆಯಲ್ಲಿ ಗಿಯರ್‌ ದೊಡ್ಡದಾಗಿದ್ದರೆ ಅದರಿಂದ ಹೆಚ್ಚಿನ ತಿರುಗುಬಲವನ್ನು ಮತ್ತು ಅದು ಚಿಕ್ಕದಾಗಿದ್ದರೆ ಅದರಿಂದ ಹೆಚ್ಚಿನ ವೇಗವನ್ನು ಪಡೆಯಬಹುದು.

Advertisement

ಬೆಂಗಳೂರಿನಂತಹ ದೊಡ್ಡ ಊರಿನ ದಟ್ಟಣೆಯಲ್ಲಿ ಕಾರು ಓಡಿಸುವವರಿಗೆ, ಕಾರಿನ ಗಿಯರ್‌ ಬದಲಾಯಿಸುವುದೊಂದು ದೊಡ್ಡ ತಲೆನೋವು ಅನ್ನಿಸದೇ ಇರದು. ಏರುವಾಗ ಒಂದು ಗಿಯರಾದರೆ ಜೋರಾಗಿ ಓಡಿಸಲೊಂದು ಗಿಯರ್‌, ಕ್ಲಚ್‌-ಬ್ರೇಕ್‌ ಸರಿದೂಗಿಸಿಕೊಂಡು ಗಿಯರ್‌ ಗಾಡಿಗಳನ್ನು ಎತ್ತರದ ರಸ್ತೆಯಲ್ಲಿ ಏರಿಸುವ ಕಷ್ಟ ಎಲ್ಲರಿಗೂ ಗೊತ್ತು. ಗಾಡಿ ಓಡಿಸುವವರಿಗೆ ಗಿಯರ್‌ ಯಾಕಾದರೂ ಇವೆಯೋ? ಅನ್ನುವ ಪ್ರಶ್ನೆ ಕಾಡುವುದು ಸಹಜ. ಗಾಡಿಯಲ್ಲಿ ಗಿಯರ್‌ ಏಕಿರುತ್ತದೆ ಅನ್ನುವುದನ್ನು ತಿಳಿಯುವ ಮುನ್ನ ಸಾಗಾಟದ ಕೆಲವು ಅಡಿಪಾಯದ ವಿಷಯಗಳನ್ನು ಅರಿತುಕೊಳ್ಳೋಣ.

ವಸ್ತುವೊಂದನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಜರುಗಿಸಬೇಕೆಂದರೆ ಅದರ ಮೇಲೆ ಬಲ ಹಾಕಬೇಕು. ಈ ಬಲ ವಸ್ತುವಿನ ರಾಶಿ (mass) ಮತ್ತು ವಸ್ತುವಿನ ವೇಗಮಾರ್ಪಾಟಿನ acceleration) ಪ್ರಮಾಣವನ್ನು ಅವಲಂಬಿಸಿರುತ್ತದೆ. ಜತೆಗೆ ವಸ್ತು ಸಾಗುವ ಮೇಲ್ಮೆ ಯ ಉರುಟುತನ, ವಸ್ತು ಸಾಗಾಟದ ಎದುರಾಗಿ ಎರಗುವ ಗಾಳಿಯ ತಡೆಯ ಮೇಲೆಯೂ ಬಲವು ಅವಲಂಬಿತವಾಗಿರುತ್ತದೆ. ವಸ್ತುವನ್ನು ಜರಗಿಸುವ ಬಲವನ್ನು ಮುಖ್ಯವಾಗಿ ಎರಡು ಬಗೆಗಳನ್ನಾಗಿ ಮಾಡಬಹುದು. ಮೊದಲನೆಯದು ನೇರಬಲ (linear force) ಇನ್ನೊಂದು ತಿರುಗುಬಲ (turning force/moment). ಹೆಸರೇ ಸೂಚಿಸುವಂತೆ ಒಂದನೆ ಬಗೆಯ ಬಲ, ವಸ್ತುವನ್ನು ನೇರ ದಾರಿಯಲ್ಲಿ ಜರಗುವಂತೆ ಮಾಡಿದರೆ ಎರಡನೆಯದು ವಸ್ತುವಿಗೆ ತಿರುಗುವ ಕಸುವನ್ನು ಕೊಡುತ್ತದೆ. ಕಾರುಗಳ ಬಗ್ಗೆ ಪತ್ರಿಕೆಗಳಲ್ಲಿ ಓದುತ್ತಿರುವಾಗ ಇಲ್ಲವೇ ಕಾರ್‌ ಕೊಳ್ಳುವಾಗ ಟಾರ್ಕ್‌ (torque) ಅನ್ನುವ ಪದವನ್ನು ನೀವು ಕೇಳಿರಬಹುದು. ಈ ಟಾರ್ಕ್‌ ಮತ್ತೇನೂ ಅಲ್ಲದೇ ಗಾಡಿಗೆ ಇರುವ ತಿರುಗುಬಲ ಇಲ್ಲವೇ ಜಗ್ಗುಬಲದ ಪ್ರಮಾಣವನ್ನು ಸೂಚಿಸುತ್ತದೆ. ಕಾರಿನ ಟಾರ್ಕ್‌ ಹೆಚ್ಚಾಗಿದೆ ಅಂದರೆ ಅದಕ್ಕೆ ತಿರುಗುವ ಬಲ ಹೆಚ್ಚಿದೆ ಅಂತ ಅರ್ಥ. ಟಾರ್ಕ್‌ (ತಿರುಗುಬಲ) ಮತ್ತು ವೇಗ, ಗಾಡಿ ಸಾಗಲು ಬೇಕಾದ ಮೂಲ ಅಂಶಗಳಾಗಿದ್ದು, ಇವೆರಡು ಗಾಡಿಯ ಕಸುವು ಅಂದರೆ ಪಾವರ್‌ನ್ನು (power) ತೀರ್ಮಾನಿಸುತ್ತವೆ.   

ನಮಗೆ ಗೊತ್ತಿರುವಂತೆ ಗಾಡಿಗಳಲ್ಲಿ ಸಾಮಾನ್ಯವಾಗಿ ಪೆಟ್ರೋಲ್, ಡೀಸೆಲ್‌ನಂತಹ ಉರುವಲುಗಳಿಂದ ನಡೆಯುವ ಒಳ ಉರಿಯುವಿಕೆಯ (Internal Combustion) ಇಂಜಿನ್‌ಗಳನ್ನು ಅಳವಡಿಸಿರುತ್ತಾರೆ. ಇಂಜಿನ್‌ ಹೊರಗೆಡುಹುವ ಕಸುವು ಗಾಡಿಯನ್ನು ಮುಂದಕ್ಕೆ ಓಡಿಸುತ್ತದೆ. ಇಂಜಿನ್‌ಗಳ ಗುಣವೆಂದರೆ ತುಂಬಾ ಕಡಿಮೆ ವೇಗದಲ್ಲಿ ಅವು ಹೆಚ್ಚಿನ ತಿರುಗುಬಲವನ್ನು ಹೊಮ್ಮಿಸಲಾರವು. ಆದರೆ ಅದೇ ಗಾಡಿ ಓಡಲು ಶುರುಮಾಡುವಾಗ, ಅಂದರೆ ಅದು ನಿಂತೆಡೆಯಿಂದ ಮೆಲ್ಲಗೆ ಸಾಗದೊಡಗುವಾಗ ಹೆಚ್ಚಿನ ತಿರುಗುಬಲ ಬೇಕಾಗುತ್ತದೆ. ಗಾಡಿ ಜೋರಾಗಿ ಓಡತೊಡಗಿದಾಗ ಅದಕ್ಕೆ ಕಡಿಮೆ ತಿರುಗುಬಲವಿದ್ದರೆ ಸಾಕು ಆಗ ಅದಕ್ಕೆ ಹೆಚ್ಚಿನ ವೇಗವನ್ನು ಒದಗಿಸುವ ಏರ್ಪಾಟು ಬೇಕಾಗುತ್ತದೆ. ಅಂದರೆ ಇಂಜಿನ್‌ ಒದಗಿಸುವ ತಿರುಗುಬಲಕ್ಕೂ ಗಾಡಿಗೆ ಬೇಕಾದ ತಿರುಗುಬಲಕ್ಕೂ ಏರುಪೇರಿರುತ್ತದೆ. ಈ ಏರುಪೇರನ್ನು ಸರಿದೂಗಿಸಲು ಇರುವ ಏರ್ಪಾಟೇ ಗಿಯರ್‌ ಬಾಕ್ಸ್‌. 

ಅಂಚಿನಲ್ಲಿ ಹಲ್ಲುಗಳನ್ನು ಹೊಂದಿರುವ ಗಾಲಿಯಾಕಾರವನ್ನು ಗಿಯರ್‌ ಹೊಂದಿರುತ್ತದೆ. ಹಲವು ಗಿಯರ್‌ಗಳನ್ನು ಒಗ್ಗೂಡಿಸಿ ಗಿಯರ್‌ ಬಾಕ್ಸ್‌ ಮಾಡಿರುತ್ತಾರೆ. ಗಿಯರ್‌ ಅಳತೆಯ ಮೇಲೆ ತಿರುಗುಬಲ ಇಲ್ಲವೇ ವೇಗವನ್ನಾಗಿ ಮಾರ್ಪಡಿಸಬಹುದು. ಅಳತೆಯಲ್ಲಿ ಗಿಯರ್‌ ದೊಡ್ಡದಾಗಿದ್ದರೆ ಅದರಿಂದ ಹೆಚ್ಚಿನ ತಿರುಗುಬಲವನ್ನು ಮತ್ತು ಅದು ಚಿಕ್ಕದಾಗಿದ್ದರೆ ಅದರಿಂದ ಹೆಚ್ಚಿನ ವೇಗವನ್ನು ಪಡೆಯಬಹುದು. ಗಿಯರ್‌ಗಳ ಈ ಗುಣವನ್ನು ಬಳಸಿಕೊಂಡು ಮೇಲೆ ತಿಳಿಸಿರುವಂತೆ ಇಂಜಿನ್‌ ಮತ್ತು ಗಾಡಿಯ ನಡುವಿರುವ ಕಸುವಿನ ಏರುಪೇರನ್ನು ಸರಿಪಡಿಸಲಾಗುತ್ತದೆ. ಗಾಡಿ ನಿಂತ ನೆಲೆಯಿಂದ ಸಾಗತೊಡಗಿದಾಗ ದೊಡ್ಡ ಅಳತೆಯ ಗಿಯರ್‌ ಮತ್ತು ಜೋರಾಗಿ ಓಡತೊಡಗಿದಾಗ ಚಿಕ್ಕ ಅಳತೆಯ ಗಿಯರ್‌ ಬಳಸುವಂತೆ ಏರ್ಪಾಟನ್ನು ಮಾಡಿರಲಾಗುತ್ತದೆ. ನಾವು ಕಾರು ಓಡಿಸುವಾಗ ಮೊದಲನೇ ಗಿಯರ್‌ ಹಾಕಿದಾಗ ಗಿಯರ್‌ ಬಾಕ್ಸ್‌ ಒಳಗಡೆಯಿರುವ ದೊಡ್ಡ ಗಿಯರ್‌ ಇಂಜಿನ್ನಿನ ತಿರುಗುಣಿಗೆ ಕಚ್ಚಿಕೊಳ್ಳುತ್ತದೆ. ಅದೇ ಎರಡು, ಮೂರು, ನಾಲ್ಕು, ಐದು ಗಿಯರ್‌ ಹಾಕಿದಂತೆ ಅಳತೆಯಲ್ಲಿ ಅನುಗುಣವಾಗಿ ಚಿಕ್ಕದಾಗಿರುವ ಗಿಯರ್‌ಗಳು ತಿರುಗುಣಿಗೆ ಕಚ್ಚಿಕೊಳ್ಳುತ್ತವೆ. ಇಂಜಿನ್ನಿನಿಂದ ಹೊಮ್ಮುವ ಕಸುವನ್ನು ಹೀಗೆ ಗಿಯರ್‌ಗಳನ್ನು ಬಳಸಿಕೊಂಡು ಹೆಚ್ಚಿನ ತಿರುಗುಬಲ ಇಲ್ಲವೇ ಹೆಚ್ಚಿನ ವೇಗವನ್ನು ಗಾಡಿಗೆ ಒದಗಿಸಲಾಗುತ್ತದೆ.

Advertisement

ಗಿಯರ್‌ ಕೆಲಸ ತಿಳಿದಾಯ್ತು ಆದರೆ ಕ್ಲಚ್‌ ಯಾಕೇ ಬೇಕು? ಮೇಲೆ ತಿಳಿಸಿದಂತೆ ಗಾಡಿಯ ಬೇಡಿಕೆಗೆ ಒಗ್ಗುವಂತೆ ಗಿಯರ್‌ ಬದಲಾಯಿಸುತ್ತಿರಬೇಕಾದರೂ, ಈ ಬದಲಾವಣೆಗಾಗಿ ಇಂಜಿನನ್ನು ನಿಲ್ಲಿಸಲಾಗದು. ಅಂದರೆ ಇಂಜಿನ್‌ ತಿರುಗುತ್ತಿರುವಾಗ ದೊಡ್ಡದು ಇಲ್ಲವೇ ಚಿಕ್ಕ ಗಿಯರ್‌ ಕಚ್ಚಿಕೊಳ್ಳುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ನೆರವಾಗುವುದೇ ಕ್ಲಚ್‌ ಕೆಲಸ. ಇಂಜಿನ್‌ ಮತ್ತು ಗಿಯರ್‌ ಬಾಕ್ಸ್‌ ನ ನಡುವೆ ಕ್ಲಚ್‌ ಇರುತ್ತದೆ. ಕ್ಲಚ್‌ ಒತ್ತಿದಾಗ ಅದು ಇಂಜಿನನ್ನು ಗಿಯರ್‌ ಬಾಕ್ಸ್‌ನಿಂದ ಬೇರ್ಪಡಿಸುತ್ತದೆ. ಹೀಗೆ ಬೇರ್ಪಟ್ಟಾದ ಮೇಲೆ ಗಿಯರ್‌ನ ಬದಲಾವಣೆ ಸುಲಭವಾಗುತ್ತದೆ. ಏಕೆಂದರೆ ಆಗ ಇಂಜಿನ್‌ ತಿರುಗುತ್ತಿದ್ದರೂ ಅದರಿಂದ ಹೊಮ್ಮುವ ಕಸುವು ಕ್ಲಚ್‌ನ ಒತ್ತುವಿಕೆಯಿಂದಾಗಿ ಗಿಯರ್‌ಗಳಿಗೆ ಸಾಗುವುದಿಲ್ಲ. ಹೀಗೆ ಗಿಯರ್‌ ಮತ್ತು ಕ್ಲಚ್‌ ಏರ್ಪಾಟುಗಳು ಒಗ್ಗೂಡಿ ಗಾಡಿಗೆ ಬೇಕಾದ ಕಸುವನ್ನು ಇಂಜಿನ್ನಿನಿಂದ ಸರಾಗವಾಗಿ ಸಾಗಿಸುತ್ತವೆ.

ಅಟೋಮ್ಯಾಟಿಕ್‌ ಗಿಯರ್‌ ಬಾಕ್ಸ್‌ (ಉದಾ: ಮಹೀಂದ್ರಾ XUV500)  ಹೊಂದಿರುವ ಇಲ್ಲವೇ ಕ್ಲಚ್‌ ಇರದ (ಉದಾ: ಸುಜುಕಿ ಸೆಲೆರಿಯೊ) ಕಾರುಗಳ ಬಗ್ಗೆ ನೀವು ಕೇಳಿರಬಹುದು, ಇಲ್ಲವೇ ಬಳಸಿರಬಹುದು. ಇವುಗಳಲ್ಲಿ ಗಿಯರ್‌ ಬದಲಾವಣೆ ಮತ್ತು ಕ್ಲಚ್‌ ಒತ್ತುವಿಕೆಯನ್ನು ಡ್ರೈವರ್‌ ಮಾಡದೇ, ಒಳಗಡೆ ತಂತಾನೇ ನಡೆಯುವಂತಹ ಏರ್ಪಾಟನ್ನು ಅಳವಡಿಸಲಾಗಿರುತ್ತದೆ. ಜಿಡ್ಡೆಣ್ಣೆಯಿಂದ ನಡೆಯುವ ಹೈಡ್ರಾಲಿಕ್‌ ಸಲಕರಣೆಗಳು, ಅವುಗಳನ್ನು ಹಿಡಿತದಲ್ಲಿಡಲು ಬಳಸುವ ಇಲೆಕ್ಟ್ರಾನಿಕ್‌ ಕಂಟ್ರೋಲ್‌ಗ‌ಳನ್ನು ಅಟೋಮ್ಯಾಟಿಕ್‌ ಗಿಯರ್‌ ಬಾಕ್ಸ್‌ ನಡೆಸಲು ಉಪಯೋಗಿಸಲಾಗುತ್ತದೆ. ಹೀಗೆ ತೀರಾ ಸಾಮಾನ್ಯವೆನಿಸುವ ಗಿಯರ್‌ಗಳ ಹಿಂದೆ ತಲೆದೂಗುವ ತಂತ್ರಜ್ಞಾನವಿದೆ ಅಂದರೆ ಅಚ್ಚರಿಯಲ್ಲವೇ?

(ತಿಳಿಗನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮಾತುಕತೆಯನ್ನು ತಿಂಗಳಿಗೊಮ್ಮೆ ಬೆಂಗಳೂರಿನ ಮುನ್ನೋಟ ಮಳಿಗೆ ನಡೆಸಿಕೊಡುತ್ತಿದೆ. ಈ ಬಾರಿ ಅಟೋಮೊಬೈಲ್‌ ಇಂಜನಿಯರ್‌ ಆಗಿರುವ ಕಾರ್ತಿಕ್‌ ಪ್ರಭಾಕರ್‌ ನಡೆಸಿಕೊಟ್ಟ ಮಾತುಕತೆಯ ಆಯ್ದ ಭಾಗವಿದು) 

ಕಾರ್ತಿಕ್‌ ಪ್ರಭಾಕರ್‌  ಅಟೋಮೊಬೈಲ್‌ ಎಂಜಿನಿಯರ್‌  

Advertisement

Udayavani is now on Telegram. Click here to join our channel and stay updated with the latest news.

Next