Advertisement

Cricket: ಒತ್ತಡದಲ್ಲಿ ಸೋಲುವುದೇಕೆ ಭಾರತ? 

12:28 AM Nov 20, 2023 | Team Udayavani |

ಬೆಂಗಳೂರು: ಐಸಿಸಿ ನಡೆಸುವ ವಿಶ್ವಕಪ್‌ ಸಹಿತ ಪ್ರಮುಖ ಕ್ರೀಡಾಕೂಟಗಳ ಲೀಗ್‌ ಹಂತದಲ್ಲಿ ಉತ್ತಮವಾಗಿ ಆಡುವ ಭಾರತೀಯ ಕ್ರಿಕೆಟ್‌ ತಂಡವು ಸೆಮಿಫೈನಲ್‌ ಮತ್ತು ಫೈನಲ್‌ಗಳಲ್ಲೇ ಕೈಕೊಡುವುದೇಕೆ?

Advertisement

ಈ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಇದಕ್ಕೆ ಸಾಕ್ಷಿ ಪ್ರಸಕ್ತ ವಿಶ್ವಕಪ್‌. ಲೀಗ್‌ ಹಂತದಲ್ಲಿ ಸತತ 9 ಪಂದ್ಯ ಮತ್ತು ಸೆಮಿಫೈನಲ್‌ ಪಂದ್ಯವನ್ನು ಗೆದ್ದ ಭಾರತವು ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಎಡವಿತು. ಒಂದೆರಡು ಪಂದ್ಯ ಹೊರತುಪಡಿಸಿದರೆ ಬಹುತೇಕ ಪಂದ್ಯಗಳು ಏಕಮುಖವಾಗಿದ್ದವು. ಆದರೆ ಸೆಮಿಫೈನಲ್‌ನಲ್ಲಿ 400 ರನ್‌ಗಳ ಗುರಿ ಇದ್ದರೂ ನ್ಯೂಜಿಲೆಂಡ್‌ ತಂಡ ಕೊಂಚ ಭಯ ಹುಟ್ಟಿಸಿತು. ಫೈನಲ್‌ನಲ್ಲಿ ಮಾತ್ರ ಭಾರತೀಯ ತಂಡ ಇದುವರೆಗೆ ಆಡಿದ ಶೇ. 1ರಷ್ಟು ಕೆಚ್ಚನ್ನೂ ಪ್ರದರ್ಶಿಸಲಿಲ್ಲ.

ಈ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳಾದ ಶುಭಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಅವರ ವೈಫ‌ಲ್ಯ ಎದ್ದುಕಂಡಿತು. ಈ ಹಿಂದೆ ಗಿಲ್‌ ಮತ್ತು ಅಯ್ಯರ್‌ ಬ್ಯಾಟಿಂಗ್‌ ಅದ್ಭುತವಾಗಿಯೇ ಇತ್ತು. ಸೂರ್ಯ

ಕುಮಾರ್‌ ಯಾದವ್‌ಗೆ ಅವಕಾಶ ಸಿಕ್ಕಿದ್ದು ಕಡಿಮೆ. ಈ ಪಂದ್ಯದಲ್ಲಿ ಉತ್ತಮ ಅವಕಾಶವೇ ಸಿಕ್ಕಿದರೂ ಸರಿಯಾಗಿ ಬಳಸಿಕೊಳ್ಳಲಿಲ್ಲ.

ಬೌಲಿಂಗ್‌ ವಿಭಾಗದಲ್ಲಿ ಜಸ್‌ಪ್ರೀತ್‌ ಬೂಮ್ರಾ ಮತ್ತು ಮೊಹಮ್ಮದ್‌ ಶಮಿ ಉತ್ತಮವಾಗಿಯೇ ಆರಂಭ ಮಾಡಿದರು. ಆಸ್ಟ್ರೇಲಿಯದ ಮೂವರನ್ನು ಈ ಜೋಡಿ ಬೇಗನೆ ಪೆವಿಲಿಯನ್‌ಗೆ ಅಟ್ಟಿತು.

Advertisement

ಆದರೆ ಹೆಡ್‌ ಮತ್ತು ಲಬುಶೇನ್‌ ಜೋಡಿಯನ್ನು ಬೇರ್ಪಡಿಸಲು ಆಗಲಿಲ್ಲ. ಈ ಹಂತದಲ್ಲಿ ನಾಯಕ ರೋಹಿತ್‌ ಎಲ್ಲ ಬೌಲರ್‌ಗಳ ಪ್ರಯೋಗವನ್ನೂ ಮಾಡಿದರು. ಈ ಪಂದ್ಯದಲ್ಲಿ ಢಾಳಾಗಿ ಕಾಣಿಸಿದ್ದು ಅರೆಕಾಲಿಕ ಬೌಲರ್‌ನ ಕೊರತೆ. ಒಂದು ವೇಳೆ ಆರನೇ ಬೌಲರ್‌ ಆಗಿ ಹಾರ್ದಿಕ್‌ ಪಾಂಡ್ಯ ಇದ್ದಿದ್ದರೆ ಪಂದ್ಯದ ದಿಕ್ಕು ಬದಲಾಗುತ್ತಿತ್ತೇನೋ.

Advertisement

Udayavani is now on Telegram. Click here to join our channel and stay updated with the latest news.

Next