Advertisement

ವಿಶ್ವನಾಥ್‌ ಜತೆ ಮಾತು ಬಿಟ್ಟಿದ್ದು ಯಾಕೆ ಗೊತ್ತಾ?

10:55 PM Oct 20, 2019 | Lakshmi GovindaRaju |

ಮೈಸೂರು: ನಗರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಅನರ್ಹ ಶಾಸಕ ವಿಶ್ವನಾಥ್‌ ಜತೆ ತಾವು ಮಾತು ಬಿಟ್ಟಿದ್ದೇಕೆ ಎಂಬ ಬಗ್ಗೆ ವಿವರಣೆ ನೀಡಿದ್ದು, ಅದರ ವಿವರ ಇಂತಿದೆ.

Advertisement

“ನನ್ನಿಂದ ವಿಶ್ವನಾಥ್‌ಗೆ ಅನ್ಯಾಯ ವಾಗಲಿ, ತೊಂದರೆಯಾಗಲಿ ಆಗಿಲ್ಲ. ಅನ್ಯಾಯ, ತೊಂದರೆ ಆಗಿದ್ದರೆ ಅದು ಮಾಜಿ ಶಾಸಕ ದಿವಂಗತ ಮಂಚನಹಳ್ಳಿ ಮಹದೇವ್‌ಗೆ. 2008ರಲ್ಲಿ ವಿಧಾನಸಭಾ ಚುನಾವಣೆಗೆ ಹಿರಿಯ ರಾಜಕಾರಣಿ, ಮುತ್ಸದ್ಧಿಯಾಗಿದ್ದ ಮಂಚನಹಳ್ಳಿ ಮಹದೇವ್‌ಗೆ ಟಿಕೆಟ್‌ ಕೊಡಬೇಕೆಂದು ಹೈಕಮಾಂಡ್‌ನಿಂದ ತೀರ್ಮಾನವಾಗಿತ್ತು. ಅವರು, ಆಗ ಹಾಲಿ ಶಾಸಕರು ಮತ್ತು ಪ್ರತಿಭಾವಂತ ರಾಜಕಾರಣಿ ಆಗಿದ್ದರು.

ಈ ಸಂದರ್ಭದಲ್ಲಿ ವಿಶ್ವನಾಥ್‌ ನನ್ನ ಬಳಿ ಬಂದು, “ನಾನು ಹಿರಿಯ ರಾಜಕಾರಣಿ. ನನಗೆ ಈ ಬಾರಿ ಎಂಎಲ್‌ಎ ಟಿಕೆಟ್‌ ನೀಡಿ’ ಎಂದು ಕೇಳಿದರು. ನಾನು ವಿಧಿ ಇಲ್ಲದೆ ಮಹದೇವ್‌ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒಪ್ಪಿಸಿ, ವಿಶ್ವನಾಥ್‌ಗೆ ಟಿಕೆಟ್‌ ಕೊಟ್ಟೆ. ಆದರೂ ಸೋತರು. ಸೋತು ಮನೆಯಲ್ಲಿ ಇರಬೇಕಿತ್ತು, ಮತ್ತೆ 2009ರ ಲೋಕಸಭಾ ಚುನಾವಣೆಯಲ್ಲಿಯೂ ನನಗೆ ಟಿಕೆಟ್‌ ನೀಡುವಂತೆ ಕೇಳಿಕೊಂಡು ಬಂದ.

ವಿಶ್ವನಾಥ್‌ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದರಿಂದ ಕೊನೆಯ ಅವಕಾಶ ನೀಡೋಣ ಎಂದು ಮತ್ತೆ ಮಹದೇವ್‌ ಮನವೊಲಿ ಸಿದೆ. ಆ ಚುನಾವಣೆಯಲ್ಲಿ ವಿಶ್ವನಾಥ್‌ ಗೆದ್ದ, ದುರಾ ದೃಷ್ಟವಶಾತ್‌ ಮಹದೇವ್‌ ನಿಧನರಾದರು. 2014ರ ಲೋಕಸಭೆಗೆ ಟಿಕೆಟ್‌ ಪಡೆದು ಸೋತ.

ಆಗಲಾದರೂ ಮನೆಯಲ್ಲಿ ಕೂರಬೇಕಿತ್ತು. ಮತ್ತೆ ನನ್ನ ಮೇಲೆಯೇ ಬಾಣ ಬಿಡಲು ಆರಂಭಿಸಿದ. ನನ್ನ ವಿರುದ್ಧ ಲಂಚ ಕೋರ, ಭ್ರಷ್ಟಾಚಾರಿ ಎಂದು ಸೋನಿಯಾಗಾಂಧಿಗೆ ದೂರು ನೀಡಿ, ಸಿಎಂ ಸ್ಥಾನದಿಂದ ಕೆಳಗಿಳಿಸಿ ಎಂದು ಪತ್ರ ಬರೆದ. ಅದರಿಂದ ನನಗೆ ಬೇಸರವಾಗಿ ನಾನು ಮಾತನಾಡುವುದನ್ನು ಬಿಟ್ಟೆ’ ಎಂದರು.

Advertisement

ನಾನು ಮತ್ತೆ ಮುಖ್ಯಮಂತ್ರಿ ಆಗುತ್ತೇನೆಂದು ಕನಸು ಕಾಣುವವನಲ್ಲ. ಜನರ ಆಶೀರ್ವಾದ ಇದ್ದರೆ ನೋಡೋಣ. ರಾಜಕಾರಣ ಹೇಗೆ ಬರುತ್ತೆ ಅಂತ ಹೇಳ್ಳೋಕೆ ಆಗಲ್ಲ. ಅವಕಾಶ ಸಿಕ್ಕರೆ ಮತ್ತೂಮ್ಮೆ ಸಿಎಂ ಆಗುತ್ತೇನೆ. ಅದರಲ್ಲಿ ತಪ್ಪೇನಿದೆ? ಅವಕಾಶ ಸಿಗದಿದ್ದರೆ ಮನೆಯಲ್ಲಿ ಇರುತ್ತೇನೆ.
-ಸಿದ್ದರಾಮಯ್ಯ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next