ಹೊಸದಿಲ್ಲಿ: ನಾಲ್ಕು ವರ್ಷಗಳ ಅವಧಿಯಲ್ಲಿ ಉತ್ತಮ ಪ್ರದರ್ಶನ, ಕ್ರೀಡಾ ಮನೋಭಾವ ಮತ್ತು ಶಿಸ್ತಿನ ಪ್ರಜ್ಞೆಯ ಗುಣಗಳನ್ನು ತೋರಿಸುವುದಕ್ಕಾಗಿ ಭಾರತದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಬಾರಿ ಕ್ರಿಕೆಟ್ ನಲ್ಲಿ ಮೊಹಮ್ಮದ್ ಶಮಿ ಅವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಹಿಂದೆ ವಿರಾಟ್ ಕೊಹ್ಲಿ, ಅಶ್ವಿನ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಸೇರಿ ಹಲವು ಕ್ರಿಕೆಟಿಗರು ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆದರೆ ಟೀಂ ಇಂಡಿಯಾದ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಅವರಿಗೆ ಅರ್ಜುನ ಪ್ರಶಸ್ತಿ ಸಿಕ್ಕಿಲ್ಲ. ಮೂರು ಐಸಿಸಿ ಪ್ರಶಸ್ತಿ ಗೆದ್ದರೂ ಧೋನಿಗ್ಯಾಕೆ ಅರ್ಜುನ ಪ್ರಶಸ್ತಿ ನೀಡಲಾಗಿಲ್ಲ ಎಂಬ ಅನುಮಾನ ಅಭಿಮಾನಿಗಳಿಗೆ ಕಾಡುತ್ತಿದೆ.
ಇದಕ್ಕೆ ಕಾರಣ ಅರ್ಜುನ ಪ್ರಶಸ್ತಿ ಗೆಲ್ಲುವ ಮುನ್ನ ಧೋನಿ ಅವರು ಖೇಲ್ ರತ್ನ ಪ್ರಶಸ್ತಿ ಗೆದ್ದಿರುವುದು. ಅವರು 2007 ರಲ್ಲಿ ಅತ್ಯುನ್ನತ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನವನ್ನು ಪಡೆದಿದ್ದರು. ಇದು ಭಾರತದ ಅತ್ಯುನ್ನತ ಕ್ರೀಡಾ ಗೌರವವಾಗಿದೆ.
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಿದ ಬಳಿಕ ಅರ್ಜುನ ಪ್ರಶಸ್ತಿ ನೀಡಲಾಗುವುದಿಲ್ಲ. ಹೀಗಾಗಿ ಧೋನಿ ಅವರಿಗೆ ಅರ್ಜುನ ಪ್ರಶಸ್ತಿ ನೀಡಲಾಗಿಲ್ಲ.