ಬೆಂಗಳೂರು: ಮುಂದಿನ ಐಪಿಎಲ್ ಗೆ ಭರದಿಂದ ಸಿದ್ದತೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಐಪಿಎಲ್ ಆಟಗಾರರ ಹರಾಜು ನಡೆಯಲಿದೆ. ಇದೀಗ ತಂಡಗಳ ಮಧ್ಯೆ ಕೊಡು ಕೊಳ್ಳುವಿಕೆ (ಟ್ರೇಡ್) ನಡೆಯುತ್ತಿದೆ. ಈ ಮಧ್ಯೆ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಆಸ್ಟ್ರೇಲಿಯನ್ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಖರೀದಿ ಮಾಡಿಕೊಂಡಿದೆ. ಅದೂ ಬರೋಬ್ಬರಿ 17.50 ಕೋಟಿ ರೂಪಾಯಿಗೆ.
ಅತ್ಯಂತ ಕೊನೆಯ ಕ್ಷಣದಲ್ಲಿ ನಡೆದ ವಹಿವಾಟು ಇದಾಗಿದೆ. ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ಮುಂಬೈ ತಂಡ ಸೇರಿದ ಕಾರಣ ಹಣ ಹೊಂದಿಸಲು ಮುಂಬೈಗೆ ಗ್ರೀನ್ ಅವರನ್ನು ಕೈಬಿಡಬೇಕಿತ್ತು. ಹೀಗಾಗಿ ಸಿಕ್ಕ ಅವಕಾಶದಲ್ಲಿ ಗ್ರೀನ್ ಆರ್ ಸಿಬಿ ಪಾಲಾದರು.
ಆರ್ ಸಿಬಿ ಮುಖ್ಯ ಕೋಚ್ ಆಂಡಿ ಫ್ಲವರ್, ತಂಡದ ನಿರ್ದೇಶಕ ಮೊ ಬೊಬಾಟ್ ಮತ್ತು ಇತರರ ನಡುವೆ ತ್ವರಿತ ಸಭೆ ನಡೆದು ಈ ಕ್ರಮ ಕೈಗೊಳ್ಳಲಾಯಿತು.
“ಆ ಮಧ್ಯಮ ಕ್ರಮಾಂಕದಲ್ಲಿ ಅವರು ನಮಗೆ ಸರಿಯಾದ ವ್ಯಕ್ತಿ” ಎಂದು ಮೊ ಬೊಬಾಟ್ ಆರ್‌ಸಿಬಿ ಬೋಲ್ಡ್ ಡೈರೀಸ್‌ನಲ್ಲಿ ಹೇಳಿದರು.
“ಅವರು ಉತ್ತಮ ಗುಣಮಟ್ಟದ, ಕೌಶಲ್ಯಪೂರ್ಣ ಮತ್ತು ಶಕ್ತಿಯುತ ಬ್ಯಾಟ್ಸ್‌ಮನ್. ಅವರು ಪೇಸ್ ಮತ್ತು ಸ್ಪಿನ್ ಎರಡರ ವಿರುದ್ಧದ ಆಟವನ್ನು ಹೊಂದಿದ್ದಾರೆ. ಅವರು ಅಂತಾರಾಷ್ಟ್ರೀಯ ಅನುಭವವನ್ನು ಹೊಂದಿದ್ದಾರೆ ಮತ್ತು ಚಿನ್ನಸ್ವಾಮಿಯಲ್ಲಿ ಬ್ಯಾಟಿಂಗ್ ಮಾಡುವುದುನ್ನು ಆನಂದಿಸುತ್ತಾರೆ ಎಂದು ನನಗೆ ಖಾತ್ರಿಯಿದೆ. ಅಲ್ಲದೆ ಅದ್ಭುತ ಬೌಲರ್ ಮತ್ತು ವೇಗ ಮತ್ತು ಬೌನ್ಸ್‌ನೊಂದಿಗೆ ಬೌಲಿಂಗ್ ಮಾಡುತ್ತಾರೆ, ಇದು ಖಂಡಿತವಾಗಿಯೂ ನಾವು ಹುಡುಕುತ್ತಿರುವ ಗುಣಲಕ್ಷಣಗಳಾಗಿವೆ. ಅವರು ಎಂತಹ ಅಸಾಧಾರಣ ಫೀಲ್ಡರ್ ಎಂಬುದನ್ನು ನಾವು ಮರೆಯಬಾರದು” ಎಂದಿದ್ದಾರೆ.
ಕೋಚ್ ಆ್ಯಂಡಿ ಫ್ಲವರ್ ಅವರು ಈ ಬಗ್ಗೆ ಮಾತನಾಡಿದ್ದು, ಆಲ್ ರೌಂಡರ್ ಗಳ ತಂಡವನ್ನು ಹೊಂದುವುದು ಎಷ್ಟು ಮುಖ್ಯ ಎಂದು ಚರ್ಚಿಸಿದ ಬಳಿಕವಷ್ಟೇ ಗ್ರೀನ್ ಅವರ ಟ್ರೇಡ್ ಮಾಡುವ ಬಗ್ಗೆ ತೀರ್ಮಾನಿಸಲಾಯಿತು ಎಂದಿದ್ದಾರೆ.