Advertisement
ಈ ಬಾರಿ ದ್ವಿತೀಯ ಪಿಯುಸಿ ಸೇರಲಿದ್ದ ವಿದ್ಯಾರ್ಥಿನಿಯೊಬ್ಬಳು ಮೇ 2ಕ್ಕೆ ಕಾಲೇಜು ಆರಂಭವಾಗಿದ್ದರೂ ಕೂಡ ಕಾಲೇಜಿಗೆ ಹೋಗುತ್ತಿರಲಿಲ್ಲ. ಮನೆಯ ಬಳಿ ಸಿಕ್ಕಿದ್ದ ಅವಳನ್ನು ಯಾಕಮ್ಮಾ ಕಾಲೇಜಿಗೆ ಹೋಗುತ್ತಿಲ್ಲ ಎಂದು ವಿಚಾರಿಸಿದರೆ ಅಡ್ಮಿಷನ್ ಇನ್ನೂ ಆಗಿಲ್ಲ ಸರ್ ಅದಕ್ಕೆ ಎಂದಳು. ಏಕೆ ಎಂದರೆ ಹಣಕ್ಕೆ ತೊಂದರೆ ಯಾಗಿದೆ ಸರ್ ಎಂದಳು. ಸ್ವಲ್ಪ ದಿನ ರಿಕ್ವೆಸ್ಟ್ ಮಾಡಿ ಕೊಂಡು ಕಾಲೇಜಿಗೆ ಹೋಗು ಆಮೇಲೆ ಅದಷ್ಟು ಬೇಗನೇ ಅಡ್ಮಿಷನ್ ಮಾಡಿಕೊಳ್ಳಬಹುದು ಎನ್ನುತ್ತಿದ್ದಂತೆ ಅವಳ ಕಣ್ಣುಗಳು ನೀರಾಗಿದ್ದವು. ಇಲ್ಲ ಸರ್ ಒಂಥರಾ ಆಗುತ್ತೆ ಅಂದಳು.
Related Articles
Advertisement
ಮೇ ತಿಂಗಳು ಅಪ್ಪಟ ಉರಿ ಬಿಸಿಲಿನ ಕಾಲ. ಹಲವು ಕಡೆ ತರಗತಿಗಳ ಒಳಗೆ ಕಿಕ್ಕಿರಿದು ಕುಳಿತುಕೊಳ್ಳುವಂತಹ ಪರಿಸ್ಥಿತಿ ಇದೆ. ನೀರಿನ ಸಮಸ್ಯೆಯೂ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯೂ ಇದೆ. ಈ ಬೇಗೆಯ ನಡುವೆ ಪಾಠ ಪ್ರವಚನಗಳನ್ನು ಕೇಳುವುದು ಎಷ್ಟು ಕಷ್ಟ ಎನ್ನುವುದನ್ನು ಕೂಡ ಆಲೋಚಿಸಬೇಕಿಲ್ಲವೆ? ನೂರು ದಿನ ರಜೆ ಸಿಕ್ಕರೆ ವಿದ್ಯಾರ್ಥಿಗಳು ಕಲಿತದ್ದನ್ನೆಲ್ಲಾ ಮರೆತಿರುತ್ತಾರೆ ಎನ್ನುವ ಸಮರ್ಥನೆ ಯನ್ನು ಪೂರ್ಣವಾಗಿ ಒಪ್ಪಲಾಗದು. ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಮಕ್ಕಳ ಕಲಿಕಾ ಮಟ್ಟ ಎಷ್ಟರ ಮಟ್ಟಿನದು ಎನ್ನುವ ವಾಸ್ತವವನ್ನು ಖುದ್ದಾಗಿ ಅರ್ಥ ಮಾಡಿಕೊಳ್ಳದ ಹೊರತು ನಗರದ ಎಸಿ ರೂಮುಗಳಲ್ಲಿ ಕುಳಿತುಕೊಂಡು ತೆಗೆದುಕೊಳ್ಳುವ ಇಂತಹ ನಿರ್ಧಾರಗಳ ಔಚಿತ್ಯ ಪ್ರಶ್ನಾರ್ಹ. ವಿದ್ಯಾರ್ಥಿ ಗಳ ಬಗೆಗೆ ಕಾಳಜಿ ಪ್ರದರ್ಶಿಸಿಸುವವರು ಮಧ್ಯಂತರ ರಜೆಗಳಲ್ಲಿ ನಿರ್ದಿಷ್ಠ ಸಮುದಾಯದ ವಿದ್ಯಾರ್ಥಿಳಿಗೆ ಮಾತ್ರ ವಿಶೇಷ ತರಗತಿಗಳನ್ನು ನಡೆಸುವ ಅವಶ್ಯಕತೆ ಏನು ಎನ್ನುವುದಕ್ಕೆ ಉತ್ತರಿ ಸಬೇಕಿದೆ. ಸಮಾನತೆ ಬೋಧಿಸಬೇಕಾದ ವಿದ್ಯಾಲಯಗಳಲ್ಲೇ ವಿದ್ಯಾರ್ಥಿಗಳ ನಡುವೆ ಅಂತರವನ್ನು ಸೃಷ್ಟಿಸುವ ಇಂತಹ ಯೋಜನೆಗಳು ಬೇಕೆ?
ಮೇ ತಿಂಗಳು ಮದುವೆ ಉಪನಯನದಂತಹ ಹತ್ತು ಹಲವು ರೀತಿಯ ಸಮಾರಂಭಗಳ ಕಾಲ. ವಿದ್ಯಾರ್ಥಿಗಳ ಮನೆಯಲ್ಲಿ ಸಮಾರಂಭಗಳು ಇದ್ದಾಗ ಅವರು ಕಾಲೇಜಿಗೆ ಬರುವ ಸಾಧ್ಯತೆ ಗಳು ಅಷ್ಟಕಷ್ಟೆ ಇದ್ದವು. ಎಲ್ಲಾ ಕಾರ್ಯಕ್ರಮಗಳು ಮುಗಿದ ನಂತ ರವೇ ನಾವು ಕಾಲೇಜಿಗೆ ಹೋಗುವುದು, ಹೇಗೂ ಆರಂಭದ ದಿನಗಳಲ್ವಾ ತೊಂದರೆ ಇಲ್ಲ ಎನ್ನುವಂತಹ ಮನೋಭಾವದ ಅನೇಕರು ನಮ್ಮ ನಡುವೆಯೇ ಇದ್ದಾರೆ. ವಿದ್ಯಾಭ್ಯಾಸದ ಗಂಭೀರತೆಯ ಅರಿವಿಲ್ಲದೆ ಮಕ್ಕಳ ಕೋರಿಕೆಗೆ ಮಣಿಯುವ ಹೆತ್ತವರೂ ಇದ್ದಾರೆ. ಹೇಗೂ ಶೇ. 75 ಹಾಜರಾತಿ ಇದ್ದರೆ ಸಾಕಲ್ವಾ ಮುಂದೆ ಎಲ್ಲಾ ತರಗತಿಗಳಿಗೂ ಹಾಜರಾದರೆ ಆಯ್ತು, ಸರಿಯಾಗುತ್ತದೆ ಎಂದು ಕೊಳ್ಳುವ ವಿದ್ಯಾರ್ಥಿಗಳೂ ಇದ್ದಾರೆ.
ಹೀಗೆಂದು ಅವರುಗಳನ್ನು ನಾವು ನಿರ್ಲಕ್ಷಿಸಲಾಗದು. ಉತ್ತಮ ಫಲಿತಾಂಶಕ್ಕೆ ಅವರ ಕೊಡಗೆಯೂ ಬೇಕಲ್ಲವೆ? ಕೆಲವೊಂದು ವಿಷಯಗಳಲ್ಲಿ ಆರಂಭದ ದಿನಗಳ ಫೌಂಡೇಶನ್ ಸರಿಯಾಗಿದ್ದರೆ ಮಾತ್ರ ಉಳಿದ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸಲು ಸಾಧ್ಯವಾಗುತ್ತದೆ. ಈ ಹೊತ್ತಿಗೂ ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪೂರ್ಣ ಪ್ರಮಾಣದ ಹಾಜರಾತಿಯ ಕೊರತೆ ಎದ್ದು ಕಾಣಿಸುತ್ತಿದೆ. ಪರಿಸ್ಥಿತಿ ಹೀಗಿ ರುವುದರಿಂದ ಉಪನ್ಯಾಸಕರು ಕೂಡ ಪಾಠ ಮುಂದುವರಿಸು ವುದೋ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ. ಅಲ್ಲಲ್ಲಿ ಹೆಸರಿಗೆ ಮಾತ್ರ ತರಗತಿಗಳನ್ನು ನಡೆಸಿ ಮನೆಗೆ ಬಿಡುವ ವರದಿಗಳು ಕೇಳಿ ಬರುತ್ತಿವೆ. ಹಾಗಾದರೆ ಪಿಯುಸಿ ಬೇಗ ಆರಂಭಿಸಿ ಸಾಧಿಸಿದ್ದೇನು?
ಅಂದ ಹಾಗೆ ಕಳೆದ ಬಾರಿ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ನಿರ್ದಿಷ್ಟ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಭಾಷಾ ವಿಷಯಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಿಷಯಗಳನ್ನು ಒಂದೇ ಮಾಧ್ಯಮದಲ್ಲಿ ಬರೆಯಬೇಕು ಎಂದು ಹೇಳಿ ವಿದ್ಯಾರ್ಥಿಗಳಲ್ಲಿ ಇನ್ನಿಲ್ಲದ ಗೊಂದಲ, ಹೆದರಿಕೆ ಹುಟ್ಟುಹಾಕಲಾಗಿತ್ತು. ವರ್ಷದ ಕೊನೆಯಲ್ಲಿ ಎರಡರಲ್ಲೂ ಬರೆಯುವ ಅವಕಾಶ ನೀಡಲಾಯಿತು. ಈ ಬಾರಿ ಮಾಧ್ಯಮ ಆಯ್ಕೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಪಿಯು ಮಂಡಳಿಯ ನಿಲುವೇನು ಎನ್ನುವುದನ್ನು ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ತಿಳಿಸುವಂತಹ ಕಾರ್ಯ ಆರಂಭದಲ್ಲೇ ಆಗಬೇಕಿದೆ. ಪಠ್ಯಪುಸ್ತಕಗಳ ಕೊರತೆಯೂ ಕಾಡದಂತೆ ಎಚ್ಚರ ವಹಿಸಬೇಕಿದೆ.
ನರೇಂದ್ರ ಎಸ್ ಗಂಗೊಳ್ಳಿ