Advertisement
ಪ್ರತಿಪಕ್ಷಗಳ ಒಕ್ಕೂಟದ ಮುಂದಿನ ಸಭೆ ಜು.13, 14ರಂದು ಬೆಂಗಳೂರಿನಲ್ಲಿ ನಿಗದಿಯಾಗಿರುವಂತೆಯೇ ಶಾ ಅವರ ಮಾತಿನ ಕೂರಂಬುಗಳು ಸಿಡಿದಿವೆ. ಭ್ರಷ್ಟಾಚಾರದ ವಿರುದ್ಧ ಬಿಹಾರದ ಜನತೆಗೆ ಸಿಡಿದು ನಿಲ್ಲುತ್ತಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಭ್ರಷ್ಟರಿಗೆ ಸೂಕ್ತ ಉತ್ತರ ನೀಡಲಿದ್ದಾರೆ. ಮಾಜಿ ಸಂಸದ ರಾಹುಲ್ ಗಾಂಧಿಯವರನ್ನು ಬೃಹತ್ ನಾಯಕ ಎಂದು ಬಿಂಬಿಸಲು ಪ್ರಯತ್ನ ಮಾಡಿದರೂ, ಫಲ ಕಂಡಿಲ್ಲ ಎಂದರು. ಎನ್‌ಡಿಎಯನ್ನು ತ್ಯಜಿಸಿದ ನಾಯಕರನ್ನು ವಿಶೇಷವಾಗಿ ಬಿಹಾರ ಸಿಎಂ ನಿತೀಶ್ ಕುಮಾರ್‌ನ್ನು ಗುರಿಯಾಗಿಸಿ ಅವರು ಎನ್‌ಡಿಎ ಮೈತ್ರಿಕೂಟ ತ್ಯಜಿಸಿದ್ದೇಕೆ ಎಂಬ ಬಗ್ಗೆ ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ. ಅವರು ಯಾವತ್ತೂ ಮೈತ್ರಿ ಪಕ್ಷಗಳನ್ನು ಬದಲಿಸುವುದರಲ್ಲಿಯೇ ಸಮಯ ಕಳೆದಿದ್ದಾರೆ ಎಂದು ದೂರಿದ್ದಾರೆ.
ಪ್ರಧಾನಿ ಮೋದಿಯವರಿಗೆ ಜಗತ್ತಿನಲ್ಲಿ ಹೆಚ್ಚಿನ ರೀತಿಯಲ್ಲಿ ಮನ್ನಣೆ ಸಿಗುವ ಸಂದರ್ಭಗಳಲ್ಲೆಲ್ಲಾ ಕಾಂಗ್ರೆಸ್‌ಗೆ ಹೊಟ್ಟೆ ನೋವು ಶುರುವಾಗುತ್ತದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಲೇವಡಿ ಮಾಡಿದ್ದಾರೆ. ರಾಜಸ್ಥಾನದ ಭರತ್‌ಪುರ ಮತ್ತು ನದಾಯಿ ಎಂಬಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಮಾತನಾಡಿದ ಅವರು, ಆಸ್ಟ್ರೇಲಿಯಾ ಪ್ರಧಾನಿ ನರೇಂದ್ರ ಮೋದಿಯವರನ್ನು “ಬಾಸ್’, ಉದ್ಯಮಿ ಎಲಾನ್ ಮಸ್ಕ್ “ನಾನು ಮೋದಿಯವರ ಅಭಿಮಾನಿ’ ಎಂದು ಹೇಳಿಕೊಂಡರೆ ಕಾಂಗ್ರೆಸ್‌ನ ಕೆಲವು ನಾಯಕರು ಅವರನ್ನು “ಹಾವು’, “ದುಷ್ಟ’, “ಚೇಳು’, “ಚಹಾ ಮಾರಾಟಗಾರ’ ಎಂದು ಹೀಯಾಳಿಸುತ್ತಾರೆ ಎಂದು ಟೀಕಿಸಿದ್ದಾರೆ. ಆಹಾರ ಹಣದುಬ್ಬರ ವಿಚಾರದಲ್ಲಿ ಕಾಂಗ್ರೆಸ್‌ನವರು ನಿರಕ್ಷರಕುಕ್ಷಿಗಳಂತೆ ವರ್ತಿಸುತ್ತಾರೆ ಎಂದು ದೂರಿದ್ದಾರೆ. ದೇಶದಲ್ಲಿ ಹಣದುಬ್ಬರ ಪ್ರಮಾಣ ಶೇ.2.7 ಆಗಿದ್ದರೆ, ಪಾಕಿಸ್ತಾನದಲ್ಲಿ ಶೇ.48.75, ಅಮೆರಿಕದಲ್ಲಿ ಶೇ.5.5, ಯು.ಕೆ.ಯಲ್ಲಿ ಶೇ.8, ರಷ್ಯಾದಲ್ಲಿ ಶೇ.11, ಜರ್ಮನಿಯಲ್ಲಿ ಶೇ.9 ಇದೆ ಎಂದರು. ದೇಶದಲ್ಲಿನ ರಾಜಕೀಯ ವ್ಯವಸ್ಥೆ ಬದಲಾಗಿರುವುದರಿಂದ ಕೆಲವು ರಾಜಕೀಯ ಪಕ್ಷಗಳಿಗೆ ತಮ್ಮ ವಂಶಪಾರಂಪರ್ಯ ಆಡಳಿತ ಕೈತಪ್ಪಲಿದೆ ಎಂಬ ಆತಂಕ ಶುರುವಾಗಿದೆ ಎಂದು ಲೇವಡಿ ಮಾಡಿದ್ದಾರೆ ನಡ್ಡಾ. ಮೋದಿಯವರಿಗಿಂತ ಮೊದಲು ಪ್ರಧಾನಿಯಾಗಿದ್ದವರು ವಿದೇಶ ಪ್ರವಾಸ ಕೈಗೊಂಡಿದ್ದಾಗ ಪಾಕಿಸ್ತಾನ, ಉಗ್ರವಾದದ ಬಗ್ಗೆ ಮಾತನಾಡಲಾಗುತ್ತಿತ್ತು. ಈಗ ಬಾಹ್ಯಾಕಾಶ, ಎಫ್ಡಿಐ, ಕ್ರಯೋಜನಿಕ್ ಎಂಜಿನ್ ಬಗ್ಗೆ ಚರ್ಚಿಸಲಾಗುತ್ತಿದೆ ಎಂದರು.