Advertisement

ನಾನ್ಯಾಕೆ ಫೇಲಾದೆ?

05:07 AM Jul 07, 2020 | Lakshmi GovindaRaj |

ಫೇಲ್‌ ಅನ್ನೋದು ಗೆಲುವಿನ ಮೊದಲ ಮೆಟ್ಟಿಲು. ಇದನ್ನು ಹತ್ತಬೇಕಾದರೆ, ಸೋಲಿನ ಮೆಟ್ಟಿಲನ್ನು ಮೆಟ್ಟಬೇಕು. ಪ್ರತಿಯೊಬ್ಬರ ಜೀವನದಲ್ಲೂ ಫೇಲ್‌ ಎಂಬುದು ಒಂದಲ್ಲಾ ಒಂದು ಬಾರಿ ಹಾಜರಿ ಹಾಕಿ ಹೋಗಿರುತ್ತದೆ. ಅದು, ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರನ್ನೂ ಬಿಟ್ಟಿಲ್ಲ. ಡಿಗ್ರಿಯಲ್ಲಿ ಒಂದು ಸಲ ಫೇಲಾಗಿದ್ದರೂ, ಬದುಕಲ್ಲಿ ಸಂತೋಷವಾಗಿದ್ದದ್ದು ಹೇಗೆ ಅಂತ ಇಲ್ಲಿ ಅವರೇ ಹೇಳಿಕೊಂಡಿದ್ದಾರೆ….

Advertisement

ನಾನೇನೂ ರ್‍ಯಾಂಕ್‌ ಸ್ಟೂಡೆಂಟ್‌ ಅಲ್ಲ. ಆವರೇಜ್‌ ಸ್ಟೂಡೆಂಟ್‌. ಮನೆಯಲ್ಲಿ ಬಡತನ ಇದ್ದಿದ್ದರಿಂದ ಓದಿ, ಉದ್ಯೋಗ ಹಿಡೀಲೇಬೇಕಿತ್ತು. ನಮ್ಮ ತಾಯಿಗೆ ನಾನು ಮೆಡಿಕಲ್‌ ಓದಬೇಕು ಅನ್ನೋ ಆಸೆ ಇತ್ತು. ನನಗೋ, ಒಳ್ಳೆ ಹಾಕಿ  ಪ್ಲೇಯರ್‌ ಆಗೋ ಕನಸಿತ್ತು. ಶಾಲೆ, ವಿಶ್ವವಿದ್ಯಾಲಯ ಮಟ್ಟದ ಎಲ್ಲಾ ಸ್ಪರ್ಧೆಗಳಲ್ಲಿ ನಾನು ಭಾಗವಹಿಸುತ್ತಿದ್ದೆ. ಆ ಕಾಲದಲ್ಲೇ ನಾನು ಮೈಸೂರು ಪ್ರಾಂತ್ಯವನ್ನು ಹಾಕಿಯಲ್ಲಿ ಪ್ರತಿನಿಧಿಸಿದ್ದೂ ಉಂಟು. ಒಂದು ಕಡೆ ಆಟ, ಇನ್ನೊಂದು  ಕಡೆ ಓದು. ಎರಡರ ಮಧ್ಯೆ ನಡೆಯುತ್ತಲೇ ಅಂಕ ಪಡೆಯುವುದು ನನಗೇ ಕಷ್ಟವಾದರೂ, ಬ್ಯಾಲೆನ್ಸ್‌ ಮಾಡುತಲಿದ್ದೆ.

ಆಗೆಲ್ಲಾ ನನಗೆ ವರ್ಷಕ್ಕೆ ಮೂರು ಪರೀಕ್ಷೆಗಳು ಇರ್ತಿದ್ದವು. ಒಂದು ದಸರಾಕ್ಕೂ ಮುಂಚೆ, ಇನ್ನೊಂದು ಕ್ರಿಸ್‌ಮಸ್‌ಗೂ  ಮುಂಚೆ. ಅಂತಿಮ ಪರೀಕ್ಷೆ ಮಾತ್ರ ಏಪ್ರಿಲ್‌ ತಿಂಗಳಲ್ಲಿ. ಈ ಪರೀಕ್ಷೆಗಳಲ್ಲಿ ಪಡೆದ ಮಾರ್ಕಿನ ಆಧಾರದ ಮೇಲೆ, ಮುಂದಿನ ತರಗತಿಗೆ ಪ್ರಮೋಷನ್‌ ಆಗ್ತಾ ಇತ್ತು. ನಾನು, ಮೂರೂ ಪರೀಕ್ಷೆಗಳಲ್ಲಿ ಪಾಸಾಗುವ ಪ್ರಯತ್ನ  ಮಾಡ್ತಾ ಇದ್ದೆ. ಇದಕ್ಕೆ ಕಾರಣವೂ ಇತ್ತು. ನಾನು ಗಳಿಸಿದ ಅಂಕ ಪಟ್ಟಿ ತೋರಿಸಿ, ಹೆತ್ತವರಿಂದ ಸಹಿ ತಗೋಬೇಕಿತ್ತು. ಪೋಷಕರು ನನ್ನ ಓದಿನ ಬಗ್ಗೆ ಜಾಗೃತರಾಗಿರುತ್ತಿದ್ದರು. ಒಂದು ಪಕ್ಷ ಫೇಲಾಗಿದ್ದರೆ, ಯಾಕೆ ಫೇಲಾಗಿದ್ದೀಯ? ಏನು  ಸಮಾಚಾರ, ಅಂಕ ಏಕೆ ಕಡಿಮೆ ಬಂತು? ಅಂತ ಕೇಳ್ತಾ ಇದ್ದರು.

ನಾನು ಡಿಗ್ರಿಗೆ ಬರೋವರೆಗೂ ಒಮ್ಮೆಯೂ ಫೇಲಾಗಿಲ್ಲ. ಹಾಗಂತ ಬುದ್ಧಿವಂತ ಮೇಧಾವಿ ಅಲ್ಲವೇ ಅಲ್ಲ. ಸೆಕೆಂಡ್‌ ಕ್ಲಾಸ್‌ ಸ್ಟೂಡೆಂಟ್‌. ಆಗೆಲ್ಲಾ, ವಿದ್ಯಾರ್ಥಿಗಳ ಮೇಲೆ  ಕೌಟುಂಬಿಕ, ಸಾಮಾಜಿಕ ಒತ್ತಡ ಏನೂ ಇರಲಿಲ್ಲ. ಸೆಕೆಂಡ್‌ ಕ್ಲಾಸ್‌ ಬಂದವರಿಗೆಲ್ಲಾ ಮೆಡಿಕಲ್‌ ಸೀಟು ಸಿಗೋದು. ಡಿಗ್ರಿಗೆ ಬಂದಾಗಲೇ ನಾನು ಫೇಲಿನ ರುಚಿ ನೋಡಿದ್ದು. ಅದಕ್ಕೆ ಕಾರಣಗಳೂ ಇವೆ. ಡಿಗ್ರಿಗೆ ಬಂದ ಕೂಡಲೇ ಕ್ರೀಡೆಯಲ್ಲಿ  ಜಾಸ್ತಿ ಪಾಲ್ಗೊಳ್ಳತೊಡಗಿದೆ. ದೇಶದ ಬೇರೆ ಬೇರೆ ಭಾಗಗಳಿಗೆ, ಕಾಲೇಜಿನ ಪ್ರತಿನಿಧಿಯಾಗಿ ಆಟ ಆಡಲು ಹೋಗ್ತಾ ಇದ್ದೆ.

ಸ್ವಲ್ಪ ಸಿನಿಮಾದ ಪ್ರಭಾವವೂ ಇತ್ತು ಅನ್ನಿ. ಎಲ್ಲದರ ಪರಿಣಾಮವಾಗಿ, ಡಿಗ್ರಿಯಲ್ಲಿ ಫೇಲಾದೆ. ಫೇಲಾದೆ ಅಂತ  ತಿಳಿದಾಕ್ಷಣ ಜಗತ್ತೇ ನನ್ನ ತಲೆ ಮೇಲೆ ಬಿದ್ದಂತೆ ಆಗಲಿಲ್ಲ. ಯಾವ ಮುಜುಗರವೂ ಆಗಲಿಲ್ಲ. ಫೇಲ್‌ ಆಗಿದ್ದಾನೆ, ಇನ್ಮೆಲೆ ಈತ ಕೆಲಸಕ್ಕೆ ಬಾರದವನು ಎಂಬಂತೆ ನನ್ನನ್ನು ಯಾರೂ ನೋಡಲಿಲ್ಲ. ಫೇಲಾಗ್ತಿನಿ ಅಂತ ಮೊದಲೇ ನನಗೆ  ಗೊತ್ತಿತ್ತು. ಈ ಸಲ ಪಾಸಾಗುವ ಮಟ್ಟಕ್ಕೂ ನಾನು ಓದಿಲ್ಲ ಅಂತ ತಿಳಿದಿತ್ತು. ಹೀಗಾಗಿ, ಅಯ್ಯೋ ಫೇಲಾದೆ ಅಂತ ಖನ್ನತೆಗೆ ಒಳಗಾಗುವ ಪ್ರಮೇಯವೇ ಬರಲಿಲ್ಲ.

Advertisement

ಬದಲಿಗೆ, ನಾನು ಮಾಡಿದ ತಪ್ಪುಗಳು ಏನು, ಫೇಲಿಗೆ ಕಾರಣಗಳೇನು  ಅನ್ನೋದನ್ನು ಒಂದು ದಿನ ಕೂತು ಅವಲೋಕನ ಮಾಡಿಕೊಂಡೆ. ನ್ಯೂನತೆಗಳನ್ನು ಪಟ್ಟಿ ಮಾಡಿ ಮುಂದಿನ ಪರೀಕ್ಷೆಯಲ್ಲಿ ಸರಿಮಾಡಿಕೊಂಡೆ. ನನ್ನ ಫೇಲ್‌ನಿಂದ ಪೋಷಕರಿಗೆ ನಿರಾಸೆ ಆಗಿರಬೇಕು. ಆಟದ ಕಡೆ ಸ್ವಲ್ಪ ಗಮನ ಕಡಿಮೆ  ಮಾಡಿ, ಓದಿನ ಕಡೆ ಹೆಚ್ಚಿಗೆ ಗಮನ ಕೊಡು ಅಂತ ಹೇಳಿ ದ್ದುಂಟು. ಎಷ್ಟೇ ಆಗಲಿ, ಅವರ ಕನಸನ್ನು ನಮ್ಮ ಮೇಲೆ ಕಟ್ಟಿರುತ್ತಾರಲ್ಲ. ಅದಕ್ಕೆ. ಮುಖ್ಯವಾಗಿ, ನಮಗೆ ಆಸ್ತಿಗೀಸ್ತಿ ಇರಲಿಲ್ಲ. ಮುಂದಿನ ಜೀವನ ನಿರ್ವಹಣೆಗಾಗಿ ಕೆಲಸಬೇಕಿತ್ತು.  ಹಾಗಾಗಿ, ಫೇಲಾದಾಗ ಸ್ವಲ್ಪ ಒತ್ತಡ ಇತ್ತು.

ಇವತ್ತಿನ ವಿದ್ಯಾರ್ಥಿಗಳಿಗೆ ಹೀಗಾದರೆ…: ಊಹಿಸಲು ಅಸಾಧ್ಯ. ಈಗಿನ ವಿದ್ಯಾರ್ಥಿಗಳು ತಿಳಿದು ಕೊಳ್ಳಬೇಕಾದ್ದು ಏನೆಂದರೆ, ಇವತ್ತು ಡಿಸ್ಟ್ರಾಕ್ಷನ್‌ ಜಾಸ್ತಿ ಇದೆ. ಅದರ ಮಧ್ಯೆ ಓದಲೇಬೇಕು. ನಿಮಗೆ ಗೊತ್ತಿರಲಿ, ಈಗಿನ ಸಾಮಾಜಿಕ  ಪರಿಸ್ಥಿತಿಯಲ್ಲಿ ಒಂದು ಮಟ್ಟದ ವಿದ್ಯೆ ಅಗತ್ಯ ಇದೆ. ವಿದ್ಯೆ ಅಂದರೆ, ಪಾಸಾದರೆ ಗೌರವ ಬರ್ತ ದೆಯೇ ಹೊರತು, ನಾನು ಕೂಡ ಬಿ.ಎ.ಗೆ ಹೋಗಿದ್ದೆ; ಆದರೆ ಪಾಸಾಗಲಿಲ್ಲ ಅಂದಾಗ ಗೌರವ ಸಿಗೋಲ್ಲ. ಎಲ್ಲದರ ಜೊತೆಗೆ ಪೋಷಕರಿಗೆ  ನಿರೀಕ್ಷೆ, ನಿರಾಸೆ ಆಗದ ಹಾಗೆ ನೋಡಿಕೊಳ್ಳಬೇಕು. ನಿಮ್ಮ ಸಕ್ಸಸ್‌ ಅವರಿಗೆ ಖುಷಿ ಕೊಡ್ತದೆ. ನಮ್ಮ ಹುಡುಗ ಒಳ್ಳೆ ಅಂಕ ಪಡೆದಿದ್ದಾನೆ, ಡಾಕ್ಟ್ರೋ, ಎಂಜಿನಿಯರೋ ಆಗ್ತಾನೆ ಅಂತ ನಾಲ್ಕು ಜನಕ್ಕೆ ಸಂತೋಷದಿಂದ ಹೇಳಿಕೊಳ್ತಾರೆ.

ನಮ್ಮಗಳ ಬದುಕನ್ನು ಕಟ್ಟಲು ಅವರು ಎಷ್ಟೆಲ್ಲಾ ಕಷ್ಟ ಪಟ್ಟಿದ್ದಾರೆ ಅನ್ನೋದನ್ನು ತಿಳಿದಿರಬೇಕು. ಒಂದು ಪಕ್ಷ ಪರೀಕ್ಷೆಯಲ್ಲಿ ವಿಫ‌ಲರಾದರೆ ನಿರಾಶರಾಗುವ ಅಗತ್ಯ ಇಲ್ಲ. ನಾನೂ ಫೇಲಾದಾಗಲೂ ಹೀಗೇ ಮಾಡಿದ್ದು. ಈ  ಸಂದರ್ಭದಲ್ಲಿ ಒಂದು ಸಲ ಹಿಂದೆ ತಿರುಗಿ ನೋಡಿ. ನಿಮ್ಮ ಮಟ್ಟಕ್ಕೂ ಬಾರದ ಲಕ್ಷಾಂತರ ಮಂದಿ ಇರುತ್ತಾರೆ. ಅವರೂ ನಿಮ್ಮ ರೀತಿಯೇ ಪ್ರಯತ್ನ ಪಟ್ಟು ವಿಫ‌ಲರಾಗಿರುತ್ತಾರೆ. ಆದ್ದರಿಂದ, ನಿರಾಶರಾಗಿ ಬೇಡದ ನಿರ್ಧಾರ ಕೈಗೊಳ್ಳಬೇಡಿ.  ಇವತ್ತು ನಿರಾಸೆ ಎದುರಾದರೂ ಮುಂದಕ್ಕೆ ನಿಮಗೆ ಅಂತಲೇ ಒಳ್ಳೆ ದಿನ ಇದ್ದೇ ಇರುತ್ತದೆ. ಆ ಅವಕಾಶವನ್ನು ಇವತ್ತೇ ಕಳೆದುಕೊಳ್ಳಬೇಡಿ.

* ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next