ಬೀಜಿಂಗ್: “ನೀವು ಹೊಸದಾಗಿ ಮದುವೆಯಾಗಿದ್ದು, ಯಾವಾಗ ಗರ್ಭಿಣಿಯಾಗುತ್ತೀರಿ? ಯಾವಾಗ ಮಕ್ಕಳಿಗೆ ಜನ್ಮ ನೀಡುತ್ತೀರಿ’
-ಇವು ಹೊಸದಾಗಿ ಮದುವೆಯಾದ ನವಜೋಡಿಗೆ ಚೀನಾ ಸರ್ಕಾರ ಕೇಳುತ್ತಿರುವ ಪ್ರಶ್ನೆಗಳು.
ಇದು ಕೇವಲ ಒಂದಿಬ್ಬರು ನವವಿವಾಹಿತ ಮಹಿಳೆಯರಿಗೆ ಕೇಳಲಾದ ಪ್ರಶ್ನೆಗಳಲ್ಲ. ಅನೇಕ ಚೀನಿ ನವವಿವಾಹಿತರಿಗೆ ಇದೇ ರೀತಿಯ ಪ್ರಶ್ನೆಗಳನ್ನು ಕೇಳಿ ಸ್ಥಳೀಯ ಸರ್ಕಾರಿ ಕಚೇರಿಗಳಿಂದ ಫೋನ್ ಕರೆಗಳು ಬರುತ್ತಿವೆ.
ಚೀನಾದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನಿನಿಂದಾಗಿ ಅಲ್ಲಿನ ಜನಸಂಖ್ಯೆಯಲ್ಲಿ ಏರುಪೇರಾಗಿದೆ. ಯುವಕರಿಗೆ ಹೋಲಿಸಿದರೆ ದೇಶದಲ್ಲಿ ಹಿರಿಯ ವಯಸ್ಸಿನವರು ಹೆಚ್ಚಿದ್ದಾರೆ. ಅದೇ ರೀತಿ ಗಂಡು-ಹೆಣ್ಣಿನ ಅನುಪಾತದಲ್ಲಿ ವ್ಯತ್ಯಾಸವಾಗಿದೆ.
ಜನನ ಪ್ರಮಾಣವನ್ನು ಹೆಚ್ಚಿಸಲು ಮತ್ತು ಜನಸಂಖ್ಯೆಯ ಅಭಿವೃದ್ಧಿಗಾಗಿ ನೂತನ ಕಾಯ್ದೆ ತರಲು ಚೀನಾ ಸರ್ಕಾರ ಯೋಜಿಸಿದೆ. ಅದಕ್ಕೆ ಅನುಸಾರವಾಗಿ ಈ ಕರೆಗಳನ್ನು ಮಾಡಲಾಗುತ್ತಿದೆ.
ಇನ್ನೊಂದೆಡೆ, “ನಾನು ಮದುವೆಯಾದ ಮೂರು ತಿಂಗಳಿಗೆ ಚೀನಾ ಸರ್ಕಾರದ ಕಚೇರಿಯಿಂದ ಕರೆ ಬಂದಿತು. “ಇನ್ನು ನೀವು ಗರ್ಭಿಣಿಯಾಗಿಲ್ಲವೆ?. ಯಾವಾಗ ಮಗು ಪಡೆಯಲು ಬಯಸ್ಸಿದ್ದೀರಿ’ ಎಂದು. ನಂತರ ಪುನಃ ಆರು ತಿಂಗಳಿಗೆ ಕರೆ ಬಂದಿತು. “ಇನ್ನು ನೀವು ಗರ್ಭಿಣಿ ಆಗಲಿಲ್ಲವೇ? ಏಕೆ ಮಗುವಿಗೆ ಜನ್ಮ ನೀಡಲು ನೀವು ಮುಂದಾಗಿಲ್ಲ,’ ಎಂದು ಪ್ರಶ್ನಿಸಿದರು,’ ಎಂದು ಚೀನೀ ಮಹಿಳೆಯೊಬ್ಬಳು ವಿವರಿಸಿದರು.