Advertisement

UV Fusion: ನಮಗೇ ಯಾಕೆ ಹೀಗೆ…

03:55 PM Mar 02, 2024 | Team Udayavani |

ಜೀವನದಲ್ಲಿ ಪ್ರತೀ ಬಾರಿಯೂ ಒಳ್ಳೆಯವರಿಗೇ ಕೆಟ್ಟದು ಸಂಭವಿಸುವುದನ್ನು ನಾವು ನೋಡಿರುತ್ತೇವೆ. ಯಾವಾಗಲೂ ಕೆಟ್ಟದ್ದು ಒಳ್ಳೆಯವರಿಗೇ ಏಕೆ ಆಗುತ್ತದೆ? ಪ್ರತಿಯೊಬ್ಬರೂ ಜೀವನದ ಒಂದು ಘಟ್ಟದಲ್ಲಿ ಈ ಪ್ರಶ್ನೆಯನ್ನು ಖಂಡಿತವಾಗಿಯೂ ತಮಗೆ ತಾವೇ ಕೇಳಿಕೊಂಡಿರುತ್ತಾರೆ. ದುಃಖದ ಸಂಗತಿಗಳು, ಯೋಚಿಸಿಯೇ ಇರದ ಘಟನೆಗಳು ಸಂಭವಿಸಿದಾಗ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವುದೇ ಯಾಕೆ ನನಗೆ ಹೀಗೆ… ನನ್ನಂತ ಒಳ್ಳೆಯವನಿಗೇಕೆ ಕಷ್ಟಗಳ ಸರಮಾಲೆಯೇ…?

Advertisement

ಆರ್ಥಿಕವಾಗಿ ದಿವಾಳಿ ಎದ್ದು, ನಂಬಿದವರೆಲ್ಲ ಕೈ ಬಿಟ್ಟು, ರಕ್ತ ಸಂಬಂಧಿಗಳೇ ಬಿಟ್ಟು ಹೋದಾಗ ಜೀವಿಸುವುದಾದರೂ ಹೇಗೆ?, ಕಟ್ಟಿಕೊಂಡ ಗಂಡ ಕಾರಣವೇ ಇಲ್ಲದೆ ಹೊರ ನಡೆದಾಗ ಮುಂದಿನ ಬದುಕೇನು?, ಪ್ರಾಣಕ್ಕೆ ಪ್ರಾಣವೇ ಆಗಿದ್ದ ಒಬ್ಬ ಮಗ ಅನಿರೀಕ್ಷಿತವಾಗಿ ಮರಣ ಹೊಂದಿದಾಗ ಯಾರನ್ನು ದೂರಬೇಕು?, ಜೀವನ ದೂಡುವುದೇ ಕಷ್ಟಕರವಾಗಿರುವಾಗ ಸಂಕೀರ್ಣ ಕಾಯಿಲೆಗಳು ಬಂದಪ್ಪಳಿಸಿದಾಗ ಯಾರ ಮೊರೆ ಹೋಗುವುದು? ಶ್ರೀರಾಮ ಚಂದ್ರನಿಗೂ ತಪ್ಪಿಲ್ಲ, ಸತ್ಯ ಹರಿಶ್ಚಂದ್ರನನ್ನು ಬಿಟ್ಟಿಲ್ಲ. ಹುಲು ಮಾನವರಾದ ನಾವು ಇವುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ? ಎಂ ದಿಗೂ ಸಾಧ್ಯವಿಲ್ಲ. ಹರಿಯುವ ನದಿಗೆ ಒಮ್ಮೊಮ್ಮೆ ವಿರುದ್ಧ ವಾಗಿ ಈಜಲೇಬೇಕು. ಈಜಿ ಜಯಿಸಲೇಬೇಕು. ಜೀವನ ನೇರವಾದ ಸರಳ ರೇಖೆ ಅಲ್ಲ, ಏಳು ಬೀಳು ಸಹಜ.

ಜೀವನದ ಹಲವು ಸಂಗತಿಗಳು ನಮ್ಮ ಹಿಡಿತದಲ್ಲಿರುವುದಿಲ್ಲ. ಇದು ಯಾವುದೇ ಸಿನೆಮಾವಲ್ಲ, ಕನಸಲ್ಲ, ಕಾಲ್ಪನಿಕವಲ್ಲ, ರುದ್ರ ರಮಣೀಯವಂತೂ ಅಲ್ಲವೇ ಅಲ್ಲ. ನಾವು ನಮ್ಮ ಜೀವನವನ್ನು ಊಹೆ ಮಾಡಿ ಜೀವಿಸುವುದಕ್ಕೆ ಆಗುವುದಿಲ್ಲ. ಮುಂಬರುವ ಕ್ಷಣ ಏನಾಗುತ್ತದೆಂದು ಗ್ರಹಿಸಲೂ ಸಾಧ್ಯವಿಲ್ಲ. ನಮ್ಮ ಜೀವನ ಒಂದು ಊಹಿಸಲು ಅಸಾಧ್ಯವಾದ ಅನೂಹ್ಯ ಪಯಣ.

ದುಃಖದ, ಸಂಕಷ್ಟದ ಸಂಗತಿಗಳು ಜರುಗಿದಾಗ ನಮ್ಮ ಮನಸ್ಸು, ಕುಗ್ಗುವುದು, ನಕಾರಾತ್ಮಕ ಚಿಂತನೆಗಳು ಆವರಿಸುತ್ತದೆ. ಆದರೆ ಇದೇ ಕೊನೆಯಲ್ಲ. ಇವನ್ನು ದಾಟ ಬೇಕು. ನಮ್ಮ ಜೀವನದ ಬೆಳಕಿನ ಕಡೆಗೆ ನಾವು ಮುಖ ಮಾಡಬೇಕು. ಘಟಿ ಸಿದ ಹಲವಾರು ಒಳ್ಳೆಯ ಸಂತೋಷದ ಕ್ಷಣಗಳನ್ನು ನೆನೆಯುವುದು, ನಮ್ಮ ಸುತ್ತಲಿನ ಒಳ್ಳೆಯ ಜನರ ಒಳ್ಳೆಯತನವನ್ನು ಗೌರವಿಸುವುದು ಮಾಡಬೇಕು.

ಜೀವನ ಒಂದು ಸುಂದರ ಪುಸ್ತಕವಿದ್ದಂತೆ, ಅದರಲ್ಲಿ ಕೆಲವು ದುಃಖದ ಅಧ್ಯಾಯಗಳು, ಕೆಲವು ಸಂತೋಷ, ಮತ್ತು ಕೆಲವು ರೋಮಾಂಚನಕಾರಿ ಅಧ್ಯಾಯಗಳು ಇರುವುದು ಸರ್ವೇಸಾಮಾನ್ಯ. ದುಃಖದ ಅಧ್ಯಾಯ ಬಂದ ತತ್‌ಕ್ಷಣ ಪುಸ್ತಕವನ್ನು ಮಡಚಿಟ್ಟರೆ ಆ ಪುಸ್ತಕದ ಒಟ್ಟಾರೆ ಸಾರಾಂಶವನ್ನು ಗ್ರಹಿಸಿದಂತಾಯಿತೆ? ಇಲ್ಲ ಅಲ್ಲವೇ. ಹಾಗೆಯೇ ಜೀವನ ಕೂಡ ಸಿಹಿ-ಕಹಿ, ಬೇವು- ಬೆಲ್ಲಗಳ ಮಿಶ್ರಣ. ಅದ್ಭುತ ಜೀವನದ ಸವಿಯನ್ನು ಸವಿಯಬೇಕಾದರೆ ಹಲವು ಮಿಶ್ರಣಗಳು ಅನಿವಾರ್ಯ ಹಾಗೂ ಅಗತ್ಯ ಕೂಡ.

Advertisement

ಜೀವನವು ಬರೀ ಸಂಕಷ್ಟಗಳ ಸರಪಳಿಯಲ್ಲ, ಒಳ್ಳೆಯ ಘಟನೆಗಳೂ ಘಟಿಸುತ್ತವೆ. ಎಂತಹ ನೋವನ್ನು ಕೂಡ ಕಾಲ ಮಾಯ ಮಾಡುತ್ತದೆ. ಮನಸ್ಸನ್ನು ಸಕಾರಾತ್ಮಕ ಚಿಂತನೆಗಳಿಗೆ ಮೀಸಲಿಡಬೇಕು ಅವುಗಳನ್ನೇ ಮೆಲುಕು ಹಾಕಲು ಬಿಡಬೇಕು.

“ದಿವಸದಿಂ ದಿವಸಕ್ಕೆ ನಿಮಿಷದಿಂ ನಿಮಿಷಕ್ಕೆ ಭವಿಷ್ಯವ ಚಿಂತಿಸದೇ ಬದುಕು ನೂಕುತಿರು ವಿವರಗಳ ಜೋಡಿಸುವ ಯಜಮಾನ ಬೇರಿಹನು ಸವೆಸು ನೀ ಜನುಮವನು ಮಂಕುತಿಮ್ಮ”

ಎನ್ನುವ ಡಿವಿಜಿಯವರ ಮಾತುಗಳು ಎಷ್ಟೊಂದು ಅರ್ಥಪೂರ್ಣವಲ್ಲವೇ?, ಇರುವಷ್ಟು ದಿನ ಖುಷಿಯಾಗಿರೋಣ, ಖುಷಿಯ ಬುತ್ತಿ ಹಂಚೋಣ. ನಮ್ರತೆ, ಸಹಾನುಭೂತಿ ಹಂಚೋಣ.

-ಕೆ.ಟಿ. ಮಲ್ಲಿಕಾರ್ಜುನಯ್ಯ

ಶಿಕ್ಷಕರು, ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next