Advertisement

ನೀವೇಕೆ ಐಶ್ವರ್ಯಾ ರೈ ಆಗೋಲ್ಲ?

07:50 AM Dec 06, 2017 | Harsha Rao |

ಸೌಂದರ್ಯೋತ್ಪನ್ನಗಳ ಮಾರುಕಟ್ಟೆಯಲ್ಲಿ ಇಂದು ಬ್ಯೂಟಿ ಕ್ರೀಮ್‌ಗಳ ನಡುವೆ ದೊಡ್ಡ ಪೈಪೋಟಿಯೇ ಇದೆ. ಟಿವಿ, ಎಫ್ಎಂ, ದಿನಪತ್ರಿಕೆ, ಮ್ಯಾಗಜಿನ್‌ಗಳಲ್ಲೂ ಇವುಗಳ ಜಾಹೀರಾತುಗಳು ಗ್ರಾಹಕರನ್ನು ಮೋಡಿ ಮಾಡುತ್ತಿವೆ. ಒಂದು ಉತ್ಪನ್ನ “21 ದಿನಗಳಲ್ಲಿ ನಿಮ್ಮನ್ನು ಬಿಳಿ ಮಾಡುತ್ತೇವೆ’ ಎಂದರೆ, ಮತ್ತೂಂದು ಕ್ರೀಮ್‌ ಸಂಸ್ಥೆಯ ಜಾಹೀರಾತು “ವಾರದೊಳಗೆ ನಿಮ್ಮನ್ನು ಐಶ್ವರ್ಯಾ ರೈ ಮಾಡುತ್ತೇವೆ’ ಎಂದು ಪ್ರಾಮಿಸ್‌ ಮಾಡುತ್ತದೆ.

Advertisement

ಅವುಗಳ ವಾದವನ್ನು ನಿಮ್ಮ ಮನಮುಟ್ಟಿಸಲು ಅಂದಚೆಂದದ ತಾರೆಗಳೂ ಪರದೆಯಲ್ಲಿ ಬಣ್ಣದ ಮಾತುಗಳನ್ನಾಡುತ್ತಿರುತ್ತಾರೆ. ಆದರೆ, ನಿಮಗೊಂದು ವಿಚಾರ ಗೊತ್ತಿರಲಿ, ಒಂದು ವಾರದಲ್ಲಿ ಯಾರನ್ನೂ ಐಶ್ವರ್ಯಾ ರೈ ಮಾಡಲಾಗದು. ಆ ಸಿನಿಮಾ ತಾರೆಗಳ ಸೌಂದರ್ಯ ಸಹಜವಾಗಿ ಬಂದಿರುವಂಥದ್ದು. ಅದಕ್ಕೆ ಪೂರಕವಾಗಿ, ಅವರು ಆಹಾರ, ಡಯೆಟ್‌ ಅನುಸರಿಸುತ್ತಾರೆ. ಅದಕ್ಕೆ ತಕ್ಕುನಾದ ಪೋಷಣೆಯನ್ನೂ ಮಾಡುತ್ತಿರುತ್ತಾರೆ.

ಆಗಷ್ಟೇ ಖರೀದಿಸಿದ ಬ್ಯೂಟಿ ಕ್ರೀಮ್‌ ಬಳಸಿ, ನಿಮ್ಮ ಮುಖ ಬೇಗನೆ ಬಿಳಿಯಾಗುತ್ತಿದೆ ಅಂತನ್ನಿಸಿದರೆ, ಅದರ ಹಿಂದೆ ದೊಡ್ಡ ಅಪಾಯವೇ ಇರುತ್ತದೆ. ಒಂದೇ ವಾರದಲ್ಲಿ ಮುಖವನ್ನು ಬೆಳ್ಳಗೆ ಮಾಡುವ ಬ್ಯೂಟಿ ಕ್ರೀಮ್‌ಗಳಲ್ಲಿ ಅನೇಕ ಯಡವಟ್ಟುಗಳು ಇರುತ್ತವೆ…

– 7 ದಿನ, 15 ದಿನಗಳಲ್ಲಿ ಮುಖವನ್ನು ಬಿಳುಪಾಗಿಸುವ ಕ್ರೀಮ್‌ಗಳಲ್ಲಿ ಮೆಲನಿನ್‌ ಉತ್ಪಾದನೆಯನ್ನು ತಡೆಯಬಲ್ಲ ರಾಸಾಯನಿಕಗಳಿರುತ್ತವೆ. ಇವುಗಳಲ್ಲಿನ ಕೋಜಿಕ್‌ ಆಮ್ಲ, ಹೈಡ್ರೋಕ್ವಿನೋನ್‌, ಪಾಲಿಫಿನಾಲ್‌, ಫಿನಾಲಿಕ್‌ ಆಮ್ಲ, ಸಿನಾಮಿಕ್‌ ಆಮ್ಲಗಳು ಚರ್ಮದ ತೀವ್ರ ಉರಿಯೂತಕ್ಕೆಕಾರಣವಾಗುತ್ತವೆ.

– ಕೆಲವು ಕ್ರೀಮ್‌ಗಳಲ್ಲಿ ಸಸ್ಯಮೂಲದ ಬಿಳುಪುಕಾರಕಗಳಲ್ಲದೇ, ಸ್ಟೀರಾಯ್ಡಗಳನ್ನು ಮಿಶ್ರಣ ಮಾಡಿರುತ್ತಾರೆ. ಚರ್ಮ ಬಿಳಿಯಾಗಲು ಇವು ನೆರವಾಗುತ್ತವೆಯಾದರೂ, ತದನಂತರದಲ್ಲಿ ಚರ್ಮ ಸುಕ್ಕುಗಟ್ಟಲೂ ಇವೇ ಕಾರಣ.

Advertisement

– ಕೆಲವು ಸ್ಟೀರಾಯ್ಡಗಳಿಂದ ಮುಖ ಕೆಂಪಾಗುವಿಕೆ, ಮೊಡವೆಗಳು, ಮುಖದಲ್ಲಿ ಕೂದಲು ಬೆಳೆಯುವುದು, ಚರ್ಮ ತೆಳುವಾಗುವುದು… ಮುಂತಾದ ಸಮಸ್ಯೆಗಳು ಕಾಡುತ್ತವೆ.

– ಬಿಳುಪಾಗಿಸುವ ಕ್ರೀಮ್‌ಗಳನ್ನು ದೀರ್ಘ‌ ಕಾಲ ಬಳಸಿದರೆ, ಚರ್ಮದ ಕೋಶಗಳಿಗೆ ಹಾನಿ ಎನ್ನುತ್ತಾರೆ ಚರ್ಮವೈದ್ಯರು.

– ಈ ಕ್ರೀಮ್‌ಗಳಲ್ಲಿ ಬೆರೆತ ಸುಗಂಧ ದ್ರವ್ಯಗಳು, ಕ್ರಮೇಣ ಚರ್ಮವನ್ನು ಸುಡುವಂತೆ ಮಾಡುತ್ತವೆ.

– ಹೈಡ್ರೋಕ್ವಿನೋನ್‌ ಚರ್ಮದೊಳಕ್ಕೆ ಸೇರಿಕೊಂಡರೆ ಕಪ್ಪು ಕಲೆಗಳನ್ನು ಸೃಷ್ಟಿಸುತ್ತದೆ. ಕೋಜಿಕ್‌ ಆಮ್ಲದ ಸುರಕ್ಷತೆಯ ಬಗೆಗೂ ಚರ್ಮ ತಜ್ಞರಲ್ಲಿ ಹತ್ತಾರು ಸಂದೇಹಗಳಿವೆ.

ಬಚಾವ್‌ ಆಗೋದು ಹೇಗೆ?
ಬಿಳುಪಾಗಿಸುವ ಉತ್ಪನ್ನವನ್ನು ಬಳಸಿದ ಮೇಲೆ, ಮುಖ ಕಪ್ಪಾಗತೊಡಗಿದರೆ, ಕುತ್ತಿಗೆಯ ಬಣ್ಣಕ್ಕಿಂತಲೂ ಅದು ಕಪ್ಪಾದರೆ, ಅಂಥ ಕ್ರೀಮ್‌ಗಳನ್ನು ಹಚ್ಚಿಕೊಳ್ಳದಿರಿ. ಹಗಲಿನಲ್ಲಿ ಸೂರ್ಯನ ರಶ್ಮಿಯನ್ನು ತಡೆಯುವುದಕ್ಕೆ ಸೂಕ್ತವಾದ ಸನ್‌ ಸ್ಕ್ರೀನ್‌ ಅನ್ನು ಬಳಸಬೇಕು. ರಾತ್ರಿ ವೇಳೆ ಚರ್ಮದ ತೇವಾಂಶವನ್ನು ಕಾಪಾಡಲು, ಒಳ್ಳೆಯ ಮೋಯಿಶ್ಚರೈಜರ್‌ ಬಳಸಬೇಕು. ಈ ಸನ್‌ ಸ್ಕ್ರೀನ್‌ಗಳು ಬಿಸಿಲಿನ ವೇಳೆ ಮೆಲನಿನ್‌ ಪ್ರಚೋದನೆಯನ್ನು ನಿಗ್ರಹಿಸುತ್ತವೆ. 

Advertisement

Udayavani is now on Telegram. Click here to join our channel and stay updated with the latest news.

Next