ಒಮ್ಮೆ ರಾಜನಿಗೆ ಈ ಇಳೆಯಲ್ಲಿ ಯಾರು ಹೆಚ್ಚು ಸುಖೀ ಹಾಗೂ ಸಂತೃಪ್ತ…! ಎಂದು ತಿಳಿಯುವ ಮನಸ್ಸಾಯಿತು. ತನ್ನ ಪ್ರಶ್ನೆಯನ್ನು ಸಭಾಸದರ ಮುಂದಿಟ್ಟ. ತಲೆಗೊಂದೊಂದು ಉತ್ತರ ಬಂತು. ಯಾವ ಉತ್ತರವೂ ರಾಜನಿಗೆ ಸಮಾಧಾನ ತರಲಿಲ್ಲ. ತನ್ನನ್ನು ಕಾಡುತ್ತಿರುವ ಪ್ರಶ್ನೆಗೆ ಹೇಗಾದರೂ ಉತ್ತರ ಕಂಡುಕೊಳ್ಳಬೇಕೆಂಬ ತವಕದಿಂದ ರಾಜ ಮಾರುವೇಷದಲ್ಲಿ ಸಂಚಾರ ಹೊರಟ. ರಾಜ್ಯದ ಹಳ್ಳಿ, ಹಳ್ಳಿಗಳನ್ನು ಸುತ್ತುತ್ತಾ, ಅಲ್ಲಿನ ಜನರನ್ನು ಮಾತಾಡಿಸುತ್ತಾ, ಅವರ ಕಷ್ಟ-ಸುಖಗಳನ್ನು, ಆಲಿಸುತ್ತಾ, ಸಮಾಧಾನವನ್ನೋ, ಪರಿಹಾರವನ್ನೋ ಹೇಳುತ್ತಾ ನಡೆದ.
ಒಂದು ರಾತ್ರಿ ದೂರದ ಹಳ್ಳಿಯೊಂದರ ಜಗಲಿಯಲ್ಲಿ ಕುಳಿತು ಆನಂದದಿಂದ ಹಾಡುತ್ತಿದ್ದ ರೈತನೊಬ್ಬ ಕಾಣಿಸಿದ. ಮಾರುವೇಷದಲ್ಲಿದ್ದ ರಾಜನಿಗೆ ಆತನನ್ನು ಕಂಡು ಅಚ್ಚರಿಯಾಯಿತು. ಆತನ ಕುಶಲ ವಿಚಾರಿಸಿ, ಬಹಳ ಸಂತೋಷದಿಂದ ಹಾಡುತ್ತಿರುವ ಕಾರಣ ಕೇಳಿದ. ಅದಕ್ಕೆ ರೈತನ ಉತ್ತರ ಹೀಗಿತ್ತು; “ದಿನವೂ ಕಷ್ಟಪಟ್ಟು ಹೊಲದಲ್ಲಿ ದುಡಿಯುತ್ತೇನೆ. ಭಗವಂತನ ದಯೆಯಿಂದ ಸಿಕ್ಕ ಫಲದಲ್ಲಿ ಅರ್ಧ ಭಾಗವನ್ನು ಮಾತ್ರ ನನ್ನ ದೈನಂದಿನ ಜೀವನದ ನಿರ್ವಹಣೆಗೆ ಖರ್ಚು ಮಾಡುತ್ತೇನೆ. ಉಳಿದ ಅರ್ಧಭಾಗದಲ್ಲಿ ಕಾಲು ಭಾಗವನ್ನು ಸಾಲ ತೀರಿಸಲು, ಇನ್ನುಳಿದ ಕಾಲು ಭಾಗವನ್ನು ಸಾಲ ಕೊಡುವುದಕ್ಕೂ ವ್ಯಯಿಸುತ್ತೇನೆ. ಹೀಗಾಗಿ ನನ್ನ ಆದಾಯದ ಮಿತಿಯಲ್ಲಿ ನಾನು ಜೀವಿಸುತ್ತಾ ನನ್ನ ಕುಟುಂಬದವರೊಟ್ಟಿಗೆ ಸುಖ- ಸಂತೋಷದಿಂದಿದ್ದೇನೆ’ ಎಂದ.
ರೈತನ ಈ ಮಾತು ರಾಜನಿಗೆ ಒಗಟಾಗಿ ಕಂಡಿತು. “ಸಾಲ ಕೊಡುವುದು, ಸಾಲ ತೀರಿಸುವುದು ಹೀಗಂದರೇನು? ಕೊಂಚ ಬಿಡಿಸಿ ಹೇಳು ಮಹರಾಯ’ ಎಂದ. ರಾಜನ ಮಾತಿಗೆ ನಗುತ್ತ ರೈತನೆಂದ; “ಸಾಲ ಕೊಡುವುದೆಂದರೆ, ನನ್ನ ದುಡಿಮೆಯ ಕಾಲು ಭಾಗವನ್ನು ನಾನು ನನ್ನ ತಂದೆ- ತಾಯಿಯರನ್ನು ಸಾಕಲು ವ್ಯಯಿಸುತ್ತೇನೆ. ಕಾರಣ ಅವರು ನನ್ನನ್ನು ತಮ್ಮ ಕಷ್ಟದಲ್ಲೂ ನನ್ನನ್ನು ಸಾಕಿ- ಸಲಹಿ ದೊಡ್ಡವನನ್ನಾಗಿ ಮಾಡಿ¨ªಾರೆ. ಅವರ ಋಣ ನನ್ನ ಮೇಲಿದೆ. ಹೀಗಾಗಿ ವೃದ್ಧರಾದ ಅವರನ್ನು ನೋಡಿಕೊಳ್ಳುವುದು ನನ್ನ ಹೊಣೆ. ಇದು ನಾನು ಪಡೆದ ಸಾಲ ತೀರಿಸುವ ರೀತಿ. ಇನ್ನು ನಿಮ್ಮ ಅನುಮಾನ ಸಾಲ ಕೊಡುವ ಕುರಿತದ್ದು; ಅದೂ ಹೀಗೆಯೇ, ನಾನು ನನ್ನ ಮಕ್ಕಳನ್ನು ಸಾಕಿ-ಸಲಹಿ, ಸಶಕ್ತರನ್ನಾಗಿ ಮಾಡುತ್ತಿದ್ದೇನೆ. ಇದು ಒಂದು ರೀತಿ ಸಾಲ ಕೊಟ್ಟಂತೆ; ಅಂದರೆ ಅವರು ಮುಂದೆ ನನಗೆ ಮತ್ತು ನನ್ನ ಹೆಂಡತಿಗೆ ವಯಸ್ಸಾದಾಗ ದಿಕ್ಕಾಗುತ್ತಾರೆ. ಇನ್ನು ಉಳಿದ ಅರ್ಧಭಾಗದಲ್ಲಿ ನನ್ನ ದೈನಂದಿನ ಜೀವನ ಹೇಗೋ ಸಾಗುತ್ತದೆ.
ಹೀಗಾಗಿ ನನ್ನ ನೆಮ್ಮದಿಯ ಜೀವನಕ್ಕೆ ಭಂಗವಿಲ್ಲ’ ಎಂದು ನಗೆ ಬೀರಿದ. ರೈತನ ಜೀವನೋತ್ಸಾಹದ ಮಾತು ರಾಜನಲ್ಲಿ ಹೊಸ ಅರಿವನ್ನೇ ಹುಟ್ಟಿಸಿತು. ಸರಳ ಜೀವನ ಹಾಗೂ ಇದ್ದುದರÇÉೇ ತೃಪ್ತಿ ಹೊಂದುವ ಗುಣ ಇವೇ ಬದುಕಿನ ಸುಖ-ಸಂತೋಷದ ಮೂಲ ಎನ್ನುವ ಸತ್ಯ ಗೊತ್ತಾಯಿತು. ಆಗಲೇ ರಾಜನನ್ನು ಕಾಡುತ್ತಿದ್ದ ಪ್ರಶ್ನೆಗೆ ಉತ್ತರವೂ ದೊರಕಿತು.
– ಹೊಸ್ಮನೆ ಮುತ್ತು