ಬೆಂಗಳೂರು : ಕೇಂದ್ರದಲ್ಲಿ ಮತ್ತೆ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ಸ್ಪಷ್ಟವಾಗುತ್ತಿದ್ದಂತೆ ರಾಜ್ಯದಿಂದ ಯಾರ್ಯಾರು ಕೇಂದ್ರ ಸಚಿವ ಸಂಪುಟ ಸೇರಬಹುದೆಂಬ ಚರ್ಚೆ ಪ್ರಾರಂಭವಾಗಿದ್ದು, ಮೈತ್ರಿಕೂಟದಿಂದ ಗೆದ್ದ ಮೂವರು ಮಾಜಿ ಸಿಎಂಗಳ ಪೈಕಿ ಇಬ್ಬರಿಗೆ ಅದೃಷ್ಟ ಒಲಿಯುವ ಸಾಧ್ಯತೆ ಇದೆ.
ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಸಂಸದರಾಗಿ ಆಯ್ಕೆಗೊಂಡಿದ್ದಾರೆ. ಈ ಪೈಕಿ ಕುಮಾರಸ್ವಾಮಿ ಎನ್‌ಡಿಎ ಸಭೆಯಲ್ಲಿ ಭಾಗಿಯಾಗಿದ್ದು, ಅಮಿತ್ ಶಾ ಪಕ್ಕದಲ್ಲಿ ಮೊದಲನೇ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಅವರು ಪ್ರಬಲ ಖಾತೆಯೊಂದಿಗೆ ಕೇಂದ್ರ ಸಂಪುಟ ಸೇರುವುದು ನಿಶ್ಚಿತ. ರಾಷ್ಟ್ರದ ರೈತರ ಸೇವೆ ಮಾಡಬೇಕೆಂಬ ಹಂಬಲವನ್ನು ಅವರು ಈಗಾಗಲೇ ವ್ಯಕ್ತಪಡಿಸಿದ್ದು ಕೃಷಿ ಖಾತೆಯ ಮೇಲೆ ಕಣ್ಣಿಟ್ಟಿದ್ದಾರೆ.
ಇದರ ಜತೆಗೆ ಹಳೇ ಮೈಸೂರು ಭಾಗದಿಂದ ಬಿಜೆಪಿ ಡಾ.ಸಿ.ಎನ್. ಮಂಜುನಾಥ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದ್ದು, ಆಗ ಒಂದೇ ಕುಟುಂಬದ ಒಂದೇ ಸಮುದಾಯಕ್ಕೆ ಸೇರಿದ ಇಬ್ಬರು ಕೇಂದ್ರ ಮಂತ್ರಿಗಳಾದಂತಾಗುತ್ತದೆ. ಮಂಜುನಾಥ್ ಮೊದಲ ಬಾರಿಗೆ ಸಂಸದರಾಗಿರುವ ಕಾರಣಕ್ಕೆ ಅವಕಾಶ ಕೈ ತಪ್ಪಿದರೆ ಹಳೆ ಮೈಸೂರು ಭಾಗದಿಂದ ಮತಾöರಿಗೂ ಸಂಪುಟ ಸೇರುವ ಅವಕಾಶ ಲಭಿಸಲಿಕ್ಕಿಲ್ಲ.
ಇನ್ನು ಲಿಂಗಾಯತ ಕೋಟಾದಲ್ಲಿ ಈ ಬಾರಿ ಒಬ್ಬರಿಗೆ ಮಾತ್ರ ಅವಕಾಶ ಸಿಗಬಹುದು. ಈ ಪೈಕಿ ಜಗದೀಶ್ ಶೆಟ್ಟರ್ ಹಾಗೂ ಬೊಮ್ಮಾಯಿ ಹೆಸರು ಮುಂಚೂಣಿಯಲ್ಲಿದೆ. ಹಾಲಿ ಸಚಿವ ಪ್ರಹ್ಲಾದ್ ಜೋಶಿ ಅಯವರಿಗೆ ಮತ್ತೂಮ್ಮೆ ಸಂಪುಟ ಸೇರುವ ಭಾಗ್ಯ ಸಿಕ್ಕರೆ ಅಕ್ಕಪಕ್ಕದ ಕ್ಷೇತ್ರದಿಂದ ಗೆದ್ದ ಶೆಟ್ಟರ್, ಬೊಮ್ಮಾಯಿ ಇಬ್ಬರ ಪೈಕಿ ಯಾರಿಗೆ ಅವಕಾಶ ಸಿಗಬಹುದು ಎಂಬ ಕುತೂಹಲವಿದೆ. ಹಿರಿತನದ ಆಧಾರದ ಮೇಲೆ ಇವರಿಬ್ಬರ ಬದಲು ಲಿಂಗಾಯತ ಸಮುದಾಯದ ಗದ್ದಿಗೌಡರಿಗೆ ಅವಕಾಶ ಲಭಿಸಿದರೂ ಆಶ್ಚರ್ಯವಿಲ್ಲ. ಅದೇ ರೀತಿ ಪರಿಶಿಷ್ಟ ಜಾತಿಯಿಂದ ಗೋವಿಂದ ಕಾರಜೋಳ ಅಥವಾ ರಮೇಶ್ ಜಿಗಜಿಣಗಿ ಪೈಕಿ ಒಬ್ಬರಿಗೆ ಅದೃಷ್ಟ ಒಲಿಯಬಹುದು ಎಂದು ಹೇಳಲಾಗುತ್ತಿದೆ.
ಸಚಿವ ಸ್ಥಾನದ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದು
ಮೈಸೂರು: ಸಚಿವ ಸ್ಥಾನ ತೀರ್ಮಾನ ಹೈಕಮಾಂಡ್‌ಗೆ ಬಿಟ್ಟಿದ್ದು. ಇಂದಿನ ಪರಿಸ್ಥಿತಿಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಒಂದು ವೇಳೆ ಅವಕಾಶ ಸಿಕ್ಕರೆ ಇನ್ನೂ ಹೆಚ್ಚಿನ ಕೆಲಸ ಆಗುತ್ತದೆ ಎಂದು ನೂತನ ಸಂಸದ ವಿ. ಸೋಮಣ್ಣ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗಿಂತಲೂ ಜೆಡಿಎಸ್‌ನವರು ಹೆಚ್ಚಿನ ಕೆಲಸ ಮಾಡಿದ್ದು, ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿ ನನಗೆ ದೊಡ್ಡ ಶಕ್ತಿ ನೀಡಿದರು. ಅವರಿಗೆ ನಾನು ಯಾವತ್ತಿಗೂ ಋಣಿ. ಹನ್ನೊಂದು ತಿಂಗಳು ವನವಾಸದಲ್ಲಿದ್ದಂತಾಗಿತ್ತು. ಇದೀಗ ಎಲ್ಲವೂ ಮುಕ್ತಯವಾಗಿದೆ ಎಂದರು.
ಬಿಜೆಪಿ ವರಿಷ್ಠ ಅಮಿತ್ ಶಾ ಅವರು ವಿ.ಸೋಮಣ್ಣಗೆ ಈ ಬಾರಿ ಏನಾದರೂ ದೊಡ್ಡ ಗಿಫ್ಟ್ ಕಾದಿದೆ ಎಂದು ಹೇಳಿದ್ದರೆ ದೊಡ್ಡ ಸಮಸ್ಯೆಯಾಗುತ್ತಿತ್ತೇನೋ ಎಂದು ಸೋಮಣ್ಣ ತಮ್ಮ ಭಯವನ್ನು ಹೊರಹಾಕಿದರು. ಕಳೆದ ವಿಧಾನಸಭಾ ಚುನಾವಣಾ ವೇಳೆ ಅಮಿತ್ ಶಾ ಅವರು ದೊಡ್ಡ ಗಿಫ್ಟ್ ಬಗ್ಗೆ ಮಾತನಾಡಿದ್ದಕ್ಕೆ ಒಂದಿಷ್ಟು ಸಮಸ್ಯೆಯಾಗಿತ್ತು. ಆದರೆ, ಈ ಬಾರಿ ಅಂತಹ ಮಾತುಗಳನ್ನು ಆಡಲಿಲ್ಲ ಎಂದು ಹೇಳಿದರು.
ಜವಾಬ್ದಾರಿ ಕೊಟ್ಟರೆ ಸಮರ್ಥವಾಗಿ
ನಿಭಾಯಿಸುತ್ತೇನೆ: ಶೆಟ್ಟರ್
ಹುಬ್ಬಳ್ಳಿ: ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತೂಮ್ಮೆ ಸರ್ಕಾರ ರಚನೆ ಆಗಲಿದೆ. ಈ ವೇಳೆ ನಾನು ಯಾವುದೇ ಸ್ಥಾನಮಾನದ ಬೇಡಿಕೆಗಾಗಿ ಒತ್ತಡ ಹೇರುವುದಿಲ್ಲ. ಆದರೆ ಜವಾಬ್ದಾರಿ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಬೆಳಗಾವಿ ನೂತನ ಸಂಸದ, ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.
ಬೆಳಗಾವಿ ಸಂಸದರಾಗಿ ಆಯ್ಕೆಯಾದ ನಂತರ ಬುಧವಾರ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಜಗದೀಶ್ ಶೆಟ್ಟರ್ ಟೆಂಪಲ್ ರನ್ ಕೈಗೊಂಡರು. ಈ ವೇಳೆ ಸುದ್ದಿಗಾರರ ಜತೆ ಮಾತನಾಡಿ, ಬೆಳಗಾವಿ ಮತದಾರರು ತೋರಿದ ಪ್ರೀತಿಯನ್ನು ನಾನೆಂದೂ ಮರೆಯಲು ಸಾಧ್ಯವೇ ಇಲ್ಲ. ಬೆಳಗಾವಿಯನ್ನು ಮಾದರಿ ಕ್ಷೇತ್ರವಾಗಿಸಲು ಹಾಗೂ ಇನ್ನಷ್ಟು ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. ಚುನಾವಣೆ ವೇಳೆ ನನ್ನ ಪ್ರತಿಸ್ಪರ್ಧಿಗಳು ನನ್ನ ವಿಳಾಸ ಕೇಳಿದ್ದರು. ಅದರ ಬಗ್ಗೆ ಈಗ ಪ್ರಸ್ತಾಪ ಬೇಡ, ಬೆಳಗಾವಿ ಮತದಾರರು ನನ್ನ ವಿಳಾಸ ನೀಡುವ ಕೆಲಸ ಮಾಡಿ¨ªಾರೆ ಎಂದು ಶೆಟ್ಟರ್ ಇದೇ ವೇಳೆ ಪ್ರತಿಕ್ರಿಯಿಸಿದರು.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ಜಯಗಳಿಸಿರುವ ಸಂಸದ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ನರೇಂದ್ರಮೋದಿ ಸಚಿವ ಸಂಪುಟದಲ್ಲಿ ಉತ್ತಮ ಸ್ಥಾನ ನೀಡಬೇಕು. ಅವರಿಗೆ ರೈತ ಪರವಾಗಿ ಕೆಲಸ ಮಾಡುವ ಸ್ಥಾನ ನೀಡಿದರೆ ಕ್ಷೇತ್ರ ಮತ್ತು ರಾಜ್ಯಕ್ಕೆ ಅನುಕೂಲವಾಗಲಿದೆ. ಈ ವಿಚಾರವನ್ನು ಬಿಜೆಪಿ ವರಿಷ್ಠರು ಗಂಭೀರವಾಗಿ ಪರಿಗಣಿಸಬೇಕು.
-ಎಚ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ