ಅವತ್ತು ಚುಕುಬುಕು ರೈಲ್‌ನಲ್ಲಿ ಫುಲ್ ನಿದ್ದೆ. ಜನ ಜಂಗುಳಿಯ ನಡುವೆ ಒಂದು ಹುಡುಗಿಯ ಎಂಟ್ರಿ ಆಯ್ತು. ರೈಲ್ ಕೂಡ ಮಲೆನಾಡಿನತ್ತ ಹೊರಟಾಗಲೇ ಅಂದುಕೊಂಡೆ; ಅವಳೂರು ಶಿವಮೊಗ್ಗದ ಒಂದು ಹಳ್ಳಿ ಆಗಿರಬಹುದೆಂದು. ಹಾಗೇ ನೋಡುತ್ತಿದ್ದಂತೆಯೇ ಮನಸ್ಸಲ್ಲಿ ಬಿದ್ದಿತ್ತು ಅವಳದೇ ಹಚ್ಚೆ. ಎದುರು ಕುಳಿತಾಗ ನಾನು ಅವಳ ಕಿವಿಯ ಒಲೆಯನ್ನ ಗಮನಿಸಿದೆ. ಆ ಬಂಗಾರದ ಓಲೆ, ಮಲೆನಾಡ ತಪ್ಪಲಿನಲ್ಲಿ ಬೆಳೆದ ಅಣಬೆಯ ಆಕಾರದಂತಿತ್ತು.. ನಾನು, ಮನಸ್ಸಿನ ಮಾತನ್ನು ಅಂತರಾಳದಲ್ಲಿ ಇಟ್ಟುಕೊಂಡವನಲ್ಲ. ಆವತ್ತು ಅದೇಕೊ ಸಂಕೋಚ. ಉಗುರನ್ನ ಕಡಿಯುತ್ತಾ, ಅವಳ ಅಂದವನ್ನ, ಸಹ್ಯಾದ್ರಿ ಹಸಿರ ನೋಡಿ ಕಣ್ ತುಂಬಿಕೊಂಡಂತೆ ಆನಂದಿಸುತ್ತಿದ್ದೆ. ತುಂಬಾ ಡೀಸೆಂಟ್, ಸಾಫ್ಟ್ ಅನ್ನೊ ರೀತಿ ಅವಳೊಂದಿಗೆ ನಡೆದುಕೊಂಡ್ರೂ.. ಮನನಸ್ಸು ಕೇಳಬೇಕಲ್ಲ… ಒಮ್ಮೆಲೇ ಸ್ಟೇಷನ್ ನಿಂದ ಟ್ರೈನ್ ಹೊರಡುವ ವೇಳೆ ಹಾರ್ನ್ ಹೊಡೆಯೋ ಹಾಗೆ ಹೊಡೆದುಕೊಳ್ತಿತ್ತು ಹೃದಯ.
ಕೊನೆಗೆ, ನನ್ನ ಕ್ಸೆ„ಮ್ಯಾಕ್ಸ್ ಬಂದೇ ಬಿಡ್ತು. ಪ್ರಪೋಸ್ ಮಾಡಲು ಮನಸ್ಸು ಗಟ್ಟಿ ಮಾಡಿಕೊಂಡು, ಒಂದೆರಡು ಸಲ ಪ್ರಾಕ್ಟೀಸ್ ಮಾಡಿದೆ. ಆದರೆ, ಭಯ ಮಾತ್ರ ಬೆಟ್ಟದಷ್ಟು ಕಾಣುತ್ತಿತ್ತು. ನಾನು ನೋಡಿದ್ದ ಲವ್ ಸ್ಟೋರಿ ಸಿನಿಮಾಗಳನ್ನೆಲ್ಲಾ ನೆನಸಿಕೊಂಡು ಐ ಲವ್ ಯು ಕಂಣ್ರಿ ಅಂದೆ. ಆಕಡೆ, ಕಿಟಕಿಯಿಂದ ಯಾರೋ ಕಿವಿಗೆ ಏಟು ಕೊಟ್ಟಂಗೆ ಆಯ್ತು.. ಎದ್ದು ನೋಡಿದ್ರೆ, ಪಕ್ಕದ ರೈಲ್ ಹಳಿಯಲ್ಲಿ ಇನ್ನೊಂದು ರೈಲ್‌ನ ಶಬ್ಧ. ಕಣ್ಣುಗಳನ್ನ ಉಜ್ಜಿಕೊಂಡಾಗ ಪ್ರಪೋಸ್ ಕನಸೋ, ಕನಸೋ? ಅಂತಾ ಕಣ್ ಪಿಳಿ ಪಿಳಿ ಅಂತ ಬಿಟ್ಟು ನೋಡಿದೆ.
ನಾ ಕಂಡ ಕನಸಿನಂತೆ, ಎದುರಲ್ಲಿ ಹುಡುಗಿ ಇದ್ದಳು. ಆದರೆ, ನನಗಿಷ್ಟವಾದ ಹಾಗೂ ತುಂಬ ಹಿಡಿಸಿದ ಕಿವಿಯ ಒಲೆ ಆ ಹುಡುಗಿಯ ಕಿವಿಯಲ್ಲಿ ಮಿಸ್ ಆಗಿತ್ತು….
ಅಂದಿನಿಂದ, ಆ ಕನಸಿನ ಓಲೆಯ ಹುಡುಗಿ ಸಿಗ್ತಾಳೆ ಅಂತ ಪ್ರತಿ ಸಲ ಟ್ರೈನ್ ಹತ್ತುವಾಗನೂ ನೆನಪಿಸಿಕೊಳ್ಳುತ್ತೇನೆ.
ಈ. ಪ್ರಶಾಂತ್ ಕುಮಾರ್