ಬೆಂಗಳೂರು: ಕಾದಂಬರಿಗಳ ಮೂಲಕ ತಮ್ಮದೇ ಆದ ಓದುಗರನ್ನು ಸೃಷ್ಟಿಸಿ ಹೊಸ ಸಾಹಿತ್ಯ ಪ್ರಕಾರ ಹುಟ್ಟು ಹಾಕಿದವರು ಕೆ.ಟಿ.ಗಟ್ಟಿ ಎಂದು ಹಿರಿಯ ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಬಣ್ಣಿಸಿದ್ದಾರೆ.
ಬಸವನಗುಡಿಯ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಭಾನುವಾರ ಅಂಕಿತ ಪ್ರಕಾಶ ಹಮ್ಮಿಕೊಂಡಿದ್ದ ಕಾದಂಬರಿಕಾರ ಕೆ.ಟಿ.ಗಟ್ಟಿ ಅವರ ಆತ್ಮಕತೆ “ತೀರ’, ನಂದಿನಿ ವಿಶ್ವನಾಥ್ ಹೆದ್ದುರ್ಗ ಅವರ “ಒಳಸೆಲೆ’ ಕವನ ಸಂಕಲನ, ಬಿ.ಜನಾರ್ದನ್ ಭಟ್ ಅವರ “ಕಲ್ಲು ಕಂಬವೇರಿದ ಹುಂಬ’ ಕಾದಂಬರಿ ಹಾಗೂ ಆನಂದ ಝಂಕರವಾಡ ಅನುವಾದಿಸಿರುವ “ಓದುವದೆಂದರೆ’ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನವ್ಯ ಸಾಹಿತಿಗಳು ಹೊಸ ತಲೆಮಾರಿನ ಓದುಗರನ್ನು ಅಚ್ಚರಿಯಲ್ಲಿ ಕೆಡಹುತ್ತಿದ್ದ ಕಾಲಘಟ್ಟದಲ್ಲಿ ಗಟ್ಟಿಯವರು ತಮ್ಮದೇ ಆದ ರೀತಿಯ ಬರವಣಿಗೆಯ ಮೂಲಕ ಓದುಗರಿಗೆ ತಲುಪಿದವರು. ಗಟ್ಟಿಯವರು ತಮಗೆ ಅನಿಸಿದ್ದನ್ನು ನೇರವಾಗಿ ಹೇಳಿ ಬಿಡುತ್ತಾರೆ. ಹಾಗೇ ತಮ್ಮ ಆತ್ಮಕತೆಯಲ್ಲೂ ಖಾಸಗಿ ಬದಕನ್ನು ಮುಚ್ಚು ಮರೆಯಿಲ್ಲದೆ ಬಿಚ್ಚಿಟ್ಟಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಹೆಜ್ಜೆಗುರುತುಗಳನ್ನು ಮೂಡಿಸಿ ಸಾಹಿತ್ಯ ಕೃಷಿಯನ್ನು ಮಾಡುತ್ತಿರುವ ಜನಾರ್ದನ್ ಭಟ್ ರಚಿಸಿರುವ “ಕಲ್ಲು ಕಂಬವೇರಿದ ಹುಂಬ’ ಕಾದಂಬರಿಯು ಏಕಮುಖವಾಗದೇ, ಬಹುಮುಖ ಆಯಾಮದಲ್ಲಿ ಹರಡಿಕೊಂಡಿದೆ ಎಂದು ಹೇಳಿದರು.
ಕವಿ ಡಾ.ಟಿ.ಯಲ್ಲಪ್ಪ ಮಾತನಾಡಿ, ಕವಯಿತ್ರಿ ನಂದಿನಿ ಅವರು ತಮ್ಮ ಕವನಗಳ ಸಾಲುಗಳಲ್ಲಿ ಮಹಿಳೆಯರ ಸ್ವಾತಂತ್ರ್ಯ ಮತ್ತು ಸ್ತ್ರೀತನವನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಯೊಬ್ಬಳು ತನ್ನ ಮೇಲೆ ಹೇರಲ್ಪಿಟಿರುವ ಸಂಕೋಲೆಗಳನ್ನು ಬಿಡಿಸಿಕೊಳ್ಳಲು ಹೇಗೆ ಪ್ರಯತ್ನಿಸುತ್ತಾಳೆ ಎಂದು ಕಣ್ಣಿಗೆ ಕಟ್ಟುವ ಹಾಗೆ ಕವಿತೆಗಳಲ್ಲಿ ಮೂಡಿಸಿದ್ದಾರೆ ಎಂದರು.
ವಿಮರ್ಶಕ ಡಾ.ಎಚ್.ಎಸ್.ಸತ್ಯನಾರಾಯಣ ಮಾತನಾಡಿ, ಆನಂದ್ ಝಂಜರವಾಡರು ಅನುವಾದ ಕೃತಿಯಲ್ಲಿ ಆದಿ ಮಾನವರ ಗ್ರಹಿಕೆಯ ಬಗ್ಗೆ ಬಿಚ್ಚಿಟ್ಟಿದ್ದಾರೆ. ವೈಜ್ಞಾನಿಕ ಪ್ರಬಂಧಗಳನ್ನು ಓದುಗರಿಗೆ ನೀಡಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕವಿ ಬಿ.ಆರ್. ಲಕ್ಷ್ಮಣ್‌ರಾವ್, ಕವಿಯತ್ರಿ ನಂದಿನಿ ವಿಶ್ವನಾಥ್ ಹೆದ್ದುರ್ಗ, ಲೇಖಕ ಬಿ.ಜನಾರ್ದನ್ ಭ ಟ್, ಆನಂದ ಝಂಕರವಾಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.