Advertisement

Mysuru; ಯಾರಿಗೆ ಟಿಕೆಟ್ ದೊರೆತರೂ ಒಗ್ಗಟ್ಟಿನಿಂದ ಗೆಲ್ಲಿಸುತ್ತೇವೆ: ಎಸ್.ಎ.ರಾಮದಾಸ್

06:07 PM Feb 01, 2024 | Team Udayavani |

ಮೈಸೂರು: ಗೆಲ್ಲುವ ಮಾನದಂಡ ಆಧರಿಸಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಯಾರಿಗೆ ಟಿಕೆಟ್ ದೊರೆತರೂ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ ಗೆಲ್ಲಿಸುತ್ತೇವೆ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಎಸ್.ಎ.ರಾಮದಾಸ್ ಗುರುವಾರ ಹೇಳಿಕೆ ನೀಡಿದ್ದಾರೆ.

Advertisement

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ”ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ.ಈ ಬಗ್ಗೆ ಪಕ್ಷದ ಹೈಕಮಾಂಡ್ ಗೆ ತಿಳಿಸಿದ್ದೇನೆ. ಪಕ್ಷದ ನಿರ್ಧಾರಕ್ಕೆ ವಿರುದ್ಧವಾಗಿ ನಾನು ಎಂದೂ ಹೋಗಿಲ್ಲ.ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಲೋಕಸಭಾ ಕ್ಷೇತ್ರಗಳಿಗೆ ನನ್ನನ್ನು ಕ್ಲಸ್ಟರ್ ಮಾಡಿದ್ದಾರೆ.ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಮಾತ್ರ ನನ್ನದು” ಎಂದರು.

”ಈ ಬಾರಿಯ ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿಕೂಟ 400ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿದೆ.ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಾಗ ಎಲ್ಲಾ ಅಂಶವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.ಗೆಲ್ಲುವ ಸಾಮರ್ಥ್ಯ ಇರುವ ಅಭ್ಯರ್ಥಿಗೆ ಟಿಕೆಟ್ ನೀಡಲಾಗುತ್ತದೆ. ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ಬದ್ದರಾಗಿರುತ್ತೇವೆ” ಎಂದರು.

ಮಧ್ಯಂತರ ಬಜೆಟ್ ಮಂಡನೆ ಬಗ್ಗೆ ಇಡೀ ಭಾರತ ಮಾತ್ರವಲ್ಲದೇ, ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿತ್ತು.ಜತೆಗೆ ವಿಪಕ್ಷಗಳು ಕೂಡ ಕಾಲೆಳೆಯಲಿಕ್ಕೆ ಸಿದ್ದವಾಗಿದ್ದವು. ಲೋಕಸಭಾ ಚುನಾವಣೆ ನಡೆಯಲಿರುವ ಕಾರಣ, ಇದೊಂದು ಚುನಾವಣೆ ಬಜೆಟ್ ಎಂದು ಹೇಳಲು ಮುಂದಾಗುತ್ತಿದ್ದವು.ಆದರೆ ಕೇಂದ್ರ ಸರಕಾರ ಯಾವುದೇ ಚುನಾವಣೆ ಭರವಸೆ ನೀಡದೇ 140 ಕೋಟಿ ಭಾರತೀಯರಿಗೆ ಉತ್ತಮ ಬಜೆಟ್ ಮಂಡನೆ ಮಾಡಿದೆ ಎಂದರು.

ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರದ ಅನಿವಾರ್ಯತೆ ಇದೆ ಎಂದು ಹೇಳಿಕೆ ನೀಡಿರುವ ಡಿ.ಕೆ. ಸುರೇಶ್ ಕೂಡಲೇ ಕ್ಷಮೆ ಯಾಚಿಸಬೇಕು.ಎಐಸಿಸಿ, ಕೆಪಿಸಿಸಿ ದುರ್ಬಲವಾಗಿವೆ.ಹಾಗಾಗಿ ಈ ರೀತಿಯ ಹೇಳಿಕೆ ‌ನೀಡಿದ್ದಾರೆ. ಇದೇ ಮಾತನ್ನು ರಾಹುಲ್ ಗಾಂಧಿಯವರಿಂದ ಹೇಳಿಸಲಿ.ಎಐಸಿಸಿ, ಕೆಪಿಸಿಸಿ ಕೂಡಲೇ ಕ್ರಮ ಜರುಗಿಸಬೇಕು.ಒಂದೆಡೆ ರಾಹುಲ್ ಗಾಂಧಿ ಯಾತ್ರೆ ಮೂಲಕ ಭಾರತ್ ಜೋಡೋ ಅಂತಾರೆ.ಮತ್ತೊಂದೆಡೆ ಅವರದೇ ಪಕ್ಷದ ಸಂಸದ ಭಾರತ ಇಬ್ಬಾಗದ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next