Advertisement

ಚುನಾವಣೆ ಅಖಾಡದಲ್ಲಿ ಗೆದ್ದವರ್ಯಾರು?

09:49 AM Dec 15, 2021 | Team Udayavani |

ಕಲಬುರಗಿ: ಕಳೆದ ನವೆಂಬರ್‌ 9ರಂದು ಕಲಬುರಗಿ-ಯಾದಗಿರಿ ಸ್ಥಳೀಯ ಸಂಸ್ಥೆಯಿಂದ ರಾಜ್ಯ ವಿಧಾನ ಪರಿಷತ್‌ ಚುನಾವಣೆಗೆ ಅಧಿಸೂಚನೆ ಹೊರಡಿಸಿದ್ದ ಸಂದರ್ಭದಲ್ಲಿ ಬಿಜೆಪಿ ಈ ಚುನಾವಣೆಯನ್ನು ಅವಿರೋಧಾಯ್ಕೆಯಾಗಿ ಗೆಲ್ಲುತ್ತೇವೆ ಎನ್ನುವ ದಾಟಿಯಲ್ಲಿದ್ದರೆ ಕಾಂಗ್ರೆಸ್‌ ದಿಂದ ಸ್ಪರ್ಧಿಸಲು ಅಭ್ಯರ್ಥಿಗಳು ಹಿಂದೇಟು ಹಾಕುವಂತಾಗಿತ್ತು. ಆದರೆ ಮಂಗಳವಾರ ಪ್ರಕಟಗೊಂಡ ಫ‌ಲಿತಾಂಶ ಅವಲೋಕಿಸಿದರೆ ಚುನಾವಣೆ ಎಂದರೆ ಏನಾದರೂ ಆಗಬಹುದು ಎಂಬುದಕ್ಕೆ ತಕ್ಕ ಉದಾಹರಣೆಯಾಗಿ ಮಾರ್ಪಟ್ಟಿದೆ.

Advertisement

ಕಾಂಗ್ರೆಸ್‌ ಪಕ್ಷ ಕಾಟಾಚಾರಕ್ಕೆ ತನ್ನ ಅಭ್ಯರ್ಥಿಯನ್ನು ಕಣಕ್ಕೀಳಿಸಿದೆ ಎಂದು ಬಿಜೆಪಿ ಟೀಕಿಸಿತ್ತು. ಆದರೆ ಫ‌ಲಿತಾಂಶ ನೋಡಿದರೆ ಗೆದ್ದವರ್ಯಾರು? ಸೋತವರ್ಯಾರು? ಎನ್ನುವಂತಾಗಿದೆ.

ಕಳೆದ 2015ರ ಚುನಾವಣೆಯಲ್ಲಿ 800ಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದ ಬಿ.ಜಿ.ಪಾಟೀಲರು ಈ ಸಲ ಸಾವಿರ ಮತಗಳಿಂದ ಸುಲಭ ಗೆಲುವು ಸಾಧಿಸುತ್ತಾರೆ ಎನ್ನಲಾಗಿತ್ತು. ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತರಾಗಿರುವ ಶಿವಾನಂದ ಪಾಟೀಲ ಮರತೂರ ಅಭ್ಯರ್ಥಿಯಾಗಿದ್ದರಿಂದ ಸುಲಭ ಗೆಲುವೇ ಎನ್ನಲಾಗಿತ್ತು. ಆದರೆ ಫ‌ಲಿತಾಂಶವು ಎಲ್ಲ ನಿರೀಕ್ಷೆಗಳನ್ನು ತಲೆಕೆಳಗಾಗಿಸಿದೆ. ಕಾಂಗ್ರೆಸ್‌-ಬಿಜೆಪಿ ಚುನಾವಣೆಯಾಗಿರದೇ ಬಿಜೆಪಿಯ ಅಭ್ಯರ್ಥಿ ಬಿ.ಜಿ.ಪಾಟೀಲ ಹಾಗೂ ಡಾ| ಮಲ್ಲಿಕಾರ್ಜುನ ಖರ್ಗೆ-ಪ್ರಿಯಾಂಕ್‌ ಖರ್ಗೆ ನಡುವಿನ ಚುನಾವಣೆ ಎನ್ನುವಂತೆ ವಾತಾವರಣ ನಿರ್ಮಾಣಗೊಂಡಿದ್ದರಿಂದ ಚುನಾವಣೆಗೆ ಎಲ್ಲಿಲ್ಲದ ರಂಗು ಬಂದಿತ್ತು.

ಪಾಲಿಕೆ ಚುನಾವಣೆಗೆ ಬಾರದ ಡಾ| ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ಅಭ್ಯರ್ಥಿ ಶಿವಾನಂದ ಪಾಟೀಲ ಪರ ಕಲಬುರಗಿ-ಯಾದಗಿರಿ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಪ್ರಚಾರ ನಡೆಸಿ, ತಾವು ಲೋಕಸಭೆ ಚುನಾವಣೆಯಲ್ಲಿ ಸೋತಿರುವುದನ್ನು ಈ ಚುನಾವಣೆಯಲ್ಲಿ ಶಿವಾನಂದ ಪಾಟೀಲರನ್ನು ಗೆಲ್ಲಿಸುವ ಮುಖಾಂತರ ತಕ್ಕ ಉತ್ತರ ನೀಡಿ ಎಂದಿದ್ದರು.

ಮುಖ್ಯವಾಗಿ ಕೆಪಿಸಿಸಿ ಯಾರು ಟಿಕೆಟ್‌ ಕೊಡಿಸಿದ್ದೀರೋ ಅವರೇ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕೆಂದು ಹೇಳಿತ್ತು. ಡಾ| ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯಲ್ಲಿ ಶಿವಾನಂದ ಪಾಟೀಲ ಹಾಗೂ ಬಳ್ಳಾರಿಯಲ್ಲಿ ಕೆ.ಸಿ.ಕೊಂಡಯ್ಯ ಅವರಿಗೆ ಟಿಕೆಟ್‌ ಕೊಡಿಸಿದ್ದರು. ಹೀಗಾಗಿ ಈ ಚುನಾವಣೆಯಲ್ಲಿ ಖರ್ಗೆ ಬಹಳ ಗಂಭೀರವಾಗಿ ತೆಗೆದುಕೊಂಡ ಪರಿಣಾಮ ಚುನಾವಣೆ ಅಖಾಡ ರೋಚಕವಾಗಿ ಪರಿಣಮಿಸಿತ್ತು.

Advertisement

ಇದನ್ನೂಓದಿ:6 ತಿಂಗಳಲ್ಲಿ ಮಕ್ಕಳ ಕೋವಿಡ್ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯ

ಈಗ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಸೋತಿದೆ. ಈ ಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿಯ ಗುಣದ ಹಾಗೂ ಬಿಜೆಪಿ ಅಭ್ಯರ್ಥಿಯ ಹಣದ ನಡುವಿನ ಚುನಾವಣೆ ಎಂದು ಬಿಂಬಿಸಲಾಗಿತ್ತು. ಬಿ.ಜಿ.ಪಾಟೀಲ ಆರು ವರ್ಷಗಳ ಕಾಲ ಯಾವುದೇ ಕೆಲಸ ಮಾಡಿಲ್ಲ ಎಂದು ಕಾಂಗ್ರೆಸ್‌ ನಿರಂತರ ವಾಗ್ಧಾಳಿ ನಡೆಸಿದ್ದರಿಂದ ಚುನಾವಣೆ ರಂಗು ಮುಗಿಲು ಮುಟ್ಟಿತ್ತು.

ಫಲಿತಾಂಶ ಸುಲಭವಿರಲಿಲ್ಲ

ಕಳೆದ ಸಲ ಕಾಂಗ್ರೆಸ್‌ ಸರ್ಕಾರವಿದ್ದಾಗಲೂ ಬಿಜೆಪಿ ಗೆಲುವು ಸಾಧಿಸಿತ್ತು. ಆದರೆ ಈಗ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಅದರಲ್ಲೂ ಬಿಜೆಪಿ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಬಿಜೆಪಿ ಗೆಲುವು ಸುಲಭ ಎನ್ನಲಾಗುತ್ತಿತ್ತು. ಆದರೆ ಚುನಾವಣಾ ಫ‌ಲಿತಾಂಶ ಅಷ್ಟು ಸುಲಭವಾಗಿರಲಿಲ್ಲ ಎನ್ನುವಂತಾಗಿದೆ.

ಕಾಂಗ್ರೆಸ್‌ ಎಲ್ಲ ಕ್ಷೇತ್ರಗಳಲ್ಲಿ ಸಮಬಲದ ಹೋರಾಟ ನೀಡಿದೆ. ಕೆಲವು ಕ್ಷೇತ್ರಗಳಲ್ಲಂತೂ ಕಾಂಗ್ರೆಸ್‌ ಮುನ್ನೆಡೆ ಸಾಧಿಸಿದೆ. ಬಿಜೆಪಿ ಗೆಲುವಿನಲ್ಲಿ ಮತಗಳ ಅಂತರ ಕಡಿಮೆಯಾಗಲು ಬಿಜೆಪಿ ಒಳ ಹೊಡೆತವೇ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಕೆಲವರು ಒಳಗೊಳಗೆ ಪಕ್ಷದ ವಿರುದ್ಧ ಕೆಲಸ ಮಾಡಿ ಕೈ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಯಾರ್ಯಾರು ಪಕ್ಷದ ವಿರುದ್ಧ ಕೆಲಸ ಮಾಡಿದೆ ಎಂಬುದನ್ನು ಆತ್ಮಾವಲೋಕನ ಮುಂದಾಗಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸಾಮಾನ್ಯ ಕಾರ್ಯಕರ್ತರಾಗಿರುವ ಶಿವಾನಂದ ಪಾಟೀಲ ಕೇವಲ 149 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರಿಂದ ಸೋತು ಗೆಲುವು ಸಾಧಿಸಿದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಂದು ವೇಳೆ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಸದಸ್ಯರ ಮತಗಳಿದ್ದರೆ ಶಿವಾನಂದ ಪಾಟೀಲ್‌ ಗೆಲುವು ಸಾಧಿಸುತ್ತಿದ್ದರು ಎಂಬುದಾಗಿ ಮಗದೊಂದು ನಿಟ್ಟಿನಲ್ಲಿ ಹೇಳಲಾಗುತ್ತಿದೆ.

ಕಾಂಗ್ರೆಸ್‌ಗೆ ಹೆಚ್ಚುತ್ತಿದೆ ಜನಬಲ

ಈ ಚುನಾವಣೆಯಲ್ಲಿ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ಕಾಂಗ್ರೆಸ್‌ ಕಾರ್ಯಕರ್ತರ ವಿರೋಚಿತ ಹೋರಾಟದ ಪರಿಣಾಮ ಅತ್ಯಂತ ತೀವ್ರ ಹಣಾಹಣಿಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಅಲ್ಪ ಮತಗಳ ಅಂತರದಿಂದ ಹಿನ್ನಡೆಯಾಗಿದೆಯಷ್ಟೇ. ಕಳೆದ ಬಾರಿಯ ಚುನಾವಣೆಗೆ ಹೋಲಿಕೆ ಮಾಡಿದರೆ, ಇಂದಿನ ಫಲಿತಾಂಶ ಎರಡೂ ಜಿಲ್ಲೆಗಳಲ್ಲಿ ಬಿಜೆಪಿಯ ಹಣಬಲ ಹಾಗೂ ತೋಳ್ಬಲದ ಎದುರು ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚುತ್ತಿರುವ ಜನಬಲದ ಸಂಕೇತವಾಗಿದೆ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಈ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯ ಎದುರು ತೀವ್ರ ಪೈಪೋಟಿ ಕೊಟ್ಟ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಶಿವಾನಂದ ಪಾಟೀಲರಿಗೆ ಮುಂದಿನ ದಿನಗಳಲ್ಲಿ ಗೆಲುವು ಖಂಡಿತ ದಕ್ಕಲಿದೆ ಮತ್ತು ಪಕ್ಷವೂ ಕೂಡಾ ಅವರೊಂದಿಗೆ ಸದಾ ನಿಲ್ಲಲಿದೆ. ಪಕ್ಷವನ್ನು ಗೆಲ್ಲಿಸಲು ಶತಾಯಗತಾಯ ಪ್ರಯತ್ನಪಟ್ಟು, ಹಗಲಿರುಳು ದುಡಿದ ಎರಡೂ ಜಿಲ್ಲೆಗಳ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಪಕ್ಷಕ್ಕೆ ಮತ ನೀಡಿದ ಎಲ್ಲಾ ಸ್ಥಳೀಯ ಸಂಸ್ಥೆ ಸದಸ್ಯರುಗಳ ಹೋರಾಟದ ಸ್ಫೂರ್ತಿಗೆ ನನ್ನ ನಮನ ಸಲ್ಲಿಸುತ್ತೇನೆ. ಇಡೀ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷ ಸದಾ ಮುಂದೆ ನಿಂತು ಹೋರಾಡಲಿದೆ ಎಂದು ಪ್ರಿಯಾಂಕ್‌ ಖರ್ಗೆ ಟ್ವಿಟ್‌ ಮಾಡಿದ್ದಾರೆ.

ದಾಖಲೆ ಎನ್ನುವಂತೆ ಎರಡನೇ ಬಾರಿಗೆ ಗೆಲುವು ಸಾಧಿಲಾಗಿದೆ. ಕಾಂಗ್ರೆಸ್‌ ಪಕ್ಷದ ಅಪಪ್ರಚಾರದಿಂದ ಗೆಲುವಿನ ಅಂತರ ಕಡಿಮೆಯಾಗಿದೆ. ಪಕ್ಷದ ಎಲ್ಲರೂ ಶ್ರಮಿಸಿದ್ದಾರೆ. ಮುಂದಿನ ಪಕ್ಷ ಯಾವುದೇ ಸ್ಥಾನ ಕೊಟ್ಟರೂ ಅದರಲ್ಲೂ ಸಚಿವ ಸ್ಥಾನ ನೀಡಿದರೂ ನಿಭಾಯಿಸುವೆ. -ಬಿ.ಜಿ.ಪಾಟೀಲ, ವಿಧಾನ ಪರಿಷತ್‌ ಸದಸ್ಯ

-ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next