ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಕ್ಷಣ ಗಣನೆ ಆರಂಭವಾಗಿರುವ ಬೆನ್ನಲ್ಲೇ, ಈ ಕ್ಷೇತ್ರದ ವಿಜಯಮಾಲೆ ಯಾರ ಕೊರಳಿಗೆ ಎಂಬುದು ಕುತೂಹಲ ಮೂಡಿಸಿದೆ. ಗುರುವಾರ ಮಹತ್ವದ ದಿನವಾಗಿದ್ದು, ಯಾರಿಗೆ ವರ ಸಿಗಲಿದೆ ಎನ್ನುವುದು ಮಧ್ಯಾಹ್ನದೊಳಗೆ ನಿರ್ಧಾರವಾಗಲಿದೆ.
ಬಿಜೆಪಿ, ಮೈತ್ರಿ ಪಕ್ಷದಿಂದ ಕಾಂಗ್ರೆಸ್ ಅಭ್ಯರ್ಥಿ, ಬಿಎಸ್‌ಪಿ ಸೇರಿದಂತೆ 22 ಅಭ್ಯರ್ಥಿಗಳು ಕಣದಲ್ಲಿ ದ್ದರೂ ಗೆಲುವು-ಸೋಲಿನ ರಾಜಕೀಯ ಲೆಕ್ಕಾಚಾರ ಗಳು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಹಾಗೂ ಮೈತ್ರಿ ಅಭ್ಯರ್ಥಿ ಕಾಂಗ್ರೆಸ್‌ನ ಸಿ.ಎಚ್.ವಿಜಯಶಂಕರ್ ಸುತ್ತಲೇ ಗಿರಕಿ ಹೊಡೆಯುತ್ತಿವೆ.
2014ರ ಚುನಾವಣೆಯಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮೈಸೂರಿಗೆ ಬಂದು ಮೋದಿ ಅಲೆಯಲ್ಲಿ ಚೊಚ್ಚಲ ಪ್ರಯತ್ನದಲ್ಲೇ ಸಂಸತ್ ಪ್ರವೇಶಿಸಿದ್ದ ಪ್ರತಾಪ್‌ಸಿಂಹ ಅವರು ಈ ಬಾರಿ ಮೋದಿ ಅಲೆಯ ಜೊತೆಗೆ ಕಳೆದ ಐದು ವರ್ಷಗಳಲ್ಲಿ ತಾವು ಮಾಡಿದ ಕೆಲಸಗಳ ಆಧಾರದ ಮೇಲೆ ಮತ ಯಾಚಿಸಿದ್ದು, ಸತತ ಎರಡನೇ ಬಾರಿ ಸಂಸತ್ ಪ್ರವೇಶಿಸುವಲ್ಲಿ ಯಶಸ್ವಿಯಾಗುತ್ತಾರಾ? ಎರಡು ಬಾರಿ ಬಿಜೆಪಿಯಿಂದ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಸಿ.ಎಚ್.ವಿಜಯಶಂಕರ್ ಕಳೆದ ಚುನಾವಣೆಯಲ್ಲಿ ಒಲ್ಲದ ಮನಸ್ಸಿನಿಂದಲೇ ಪಕ್ಷದ ಸೂಚನೆಯಂತೆ ಹಾಸನ ಲೋಕಸಭಾ ಕ್ಷೇತ್ರ ದಲ್ಲಿ ಸ್ಪರ್ಧಿಸಿ ಎಚ್.ಡಿ. ದೇವೇಗೌಡರ ವಿರುದ್ಧ ಪರಾಭವಗೊಂಡಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಪಿರಿಯಾ ಪಟ್ಟಣ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ಸಿಗದೆ ಮೂಲೆ ಗುಂಪಾಗಿದ್ದ ವಿಜಯಶಂಕರ್‌ರನ್ನು ಪಕ್ಷಕ್ಕೆ ಕರೆತಂದು ಲೋಕಸಭಾ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿ ರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಚುನಾವಣೆಯಲ್ಲಿ ತಮ್ಮ ಪ್ರತಿಷ್ಠೆಯನ್ನು ಪಣಕ್ಕೆ ಒಡ್ಡಿ, ತಮ್ಮ ಕಡು ವಿರೋಧಿಗಳ ಜೊತೆಗೂ ಕೈ ಜೋಡಿಸಿ ಜಂಟಿ ಪ್ರಚಾರ ನಡೆಸಿರುವುದರಿಂದ ತಮ್ಮ ಅಭ್ಯರ್ಥಿ ಯನ್ನು ಗೆಲ್ಲಿಸಿಕೊಳ್ಳುವಲ್ಲಿ ಸಫಲರಾಗುತ್ತಾರಾ ಎಂಬ ಕುತೂಹಲ ಮೂಡಿಸಿದೆ.
3 ಬಾರಿ ಕಮಲ, 13 ಬಾರಿ ಹಸ್ತ: ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ ನಡೆದಿರುವ 16 ಚುನಾವಣೆಗಳಲ್ಲಿ ಮೂರು ಬಾರಿ ಬಿಜೆಪಿ ಗೆಲುವು ಸಾಧಿಸಿರುವುದನ್ನು ಬಿಟ್ಟರೆ, 13 ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. 1998 ಮತ್ತು 2004ರಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದ ಸಿ.ಎಚ್.ವಿಜಯಶಂಕರ್, 2009ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಡಗೂರು ಎಚ್.ವಿಶ್ವನಾಥ್ ಅವರ ವಿರುದ್ಧ 7 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು. 2014ರ ಚುನಾವಣೆಯಲ್ಲಿ ಹಾಲಿ ಸಂಸದ ಅಡಗೂರು ಎಚ್.ವಿಶ್ವನಾಥ್ ವಿರುದ್ದ ಕ್ಷೇತ್ರಕ್ಕೆ ಹೊಸಬರಾದ ಬಿಜೆಪಿಯ ಪ್ರತಾಪ್ ಸಿಂಹ 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಪ್ರತಾಪ್ ಸಿಂಹ ಗೆಲುವಿನಲ್ಲಿ ಜೆಡಿಎಸ್‌ನ ಪರೋಕ್ಷ ಬೆಂಬಲ ಕೆಲಸ ಮಾಡಿತ್ತು.
ಕೈಕೊಟ್ಟ ದೋಸ್ತಿ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಯಿಂದಾಗಿ ಗೆಲುವು ಸುಲಭ ಸಾಧ್ಯ ಎಂದು ಎರಡೂ ಪಕ್ಷಗಳ ನಾಯಕರು ಲೆಕ್ಕಾಚಾರ ಹಾಕಿದ್ದರಾದರೂ ದಶಕಗಳಿಂದ ಪರಸ್ಪರ ಹೋರಾಟ ನಡೆಸುತ್ತಾ ಬಂದಿರುವ ಸ್ಥಳೀಯ ಮುಖಂಡರು ಕೈ ಜೋಡಿಸಲು ಒಲ್ಲೆ ಎಂದಿದ್ದರಿಂದ ಹೆಸರಿಗೆ ದೋಸ್ತಿ ಅಭ್ಯರ್ಥಿ ಯಾದರೂ ಕಾಂಗ್ರೆಸ್ ಏಕಾಂಗಿ ಹೋರಾಟ ನಡೆಸ ಬೇಕಾಯಿತು. ಕಾಂಗ್ರೆಸ್ ಅಭ್ಯರ್ಥಿ ಪರ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತೋರಿಕೆಯ ಮತ ಯಾಚನೆಮಾಡಿದರಾದರೂ ತಮ್ಮ ಪಕ್ಷದ ಸಾಂಪ್ರದಾಯಿಕ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿಗೆ ವರ್ಗಾಯಿಸುವ ಕೆಲಸ ಮಾಡಲಿಲ್ಲ. ಹೀಗಾಗಿ ಜೆಡಿಎಸ್ ಬಯಸಿದ್ದ ಈ ಕ್ಷೇತ್ರವನ್ನು ಹಠಕ್ಕೆ ಬಿದ್ದು ಉಳಿಸಿಕೊಂಡ ಸಿದ್ದರಾಮಯ್ಯ ಅವರಿಗೇ ಈ ಕ್ಷೇತ್ರದ ಸೋಲು – ಗೆಲುವು ಪ್ರತಿಷ್ಠೆಯ ಪ್ರಶ್ನೆಯಾಗಿದ್ದರಿಂದ ತನ್ನ ಅಭ್ಯರ್ಥಿಗೆ ಮತತಂದು ಕೊಡುವಲ್ಲಿ ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ಆರಂಭದಿಂದಲೂ ಮೈತ್ರಿಗೆ ಅಪಸ್ವರ ತೆಗೆದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಸಿದ್ದರಾಮಯ್ಯ ಅವರ ಜೊತೆಗೆ ವೇದಿಕೆ ಹಂಚಿಕೊಂಡಿದ್ದು ಬಿಟ್ಟರೆ, ಕಾಂಗ್ರೆಸ್ ಅಭ್ಯರ್ಥಿ ಪರ ಪೂರ್ಣಪ್ರಮಾಣದಲ್ಲಿ ಕೆಲಸ ಮಾಡಲೇ ಇಲ್ಲ.
ಆದರೆ, ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಪರ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಮತಯಾಚನೆ ಮಾಡಿರುವುದು ಆನೆ ಬಲ ತಂದುಕೊಟ್ಟಿದೆ. ಜೊತೆಗೆ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಸ್ಮತಿ ಇರಾನಿ ಅವರೂ ಮತಯಾಚನೆ ಮಾಡಿ ಹೋಗಿದ್ದರೆ, ಸಂಘ ಪರಿವಾರದ ನೂರಾರು ಕಾರ್ಯಕರ್ತರು ತಿಂಗಳುಗಳ ಕಾಲ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿ ಪಕ್ಷದ ಪರ ಕೆಲಸ ಮಾಡಿ ಹೋಗಿದ್ದಾರೆ.
ಜೆಡಿಎಸ್ ಜೊತೆಗಿನ ಮೈತ್ರಿಯಿಂದಾಗಿ ಗೆಲುವು ಸುಲಭ ಸಾಧ್ಯ ಎಂದುಕೊಂಡಿದ್ದ ಕಾಂಗ್ರೆಸ್ಸಿಗರಿಗೆ ಜೆಡಿಎಸ್‌ನ ಸ್ಥಳೀಯ ಮುಖಂಡರು ಕೈಕೊಟ್ಟಿದ್ದರಿಂದ ತನ್ನ ಸಾಂಪ್ರದಾಯಿಕ ಮತಗಳ ಜೊತೆಗೆ ಅಹಿಂದ ವರ್ಗದ ಮತಗಳು ಹಾಗೂ ಒಕ್ಕಲಿಗ ಸಮುದಾಯ ಪೂರ್ಣ ಪ್ರಮಾಣದಲ್ಲಿ ಕೈಹಿಡಿಯದಿದ್ದರೂ ಶೇ.5 ರಿಂದ 10ರಷ್ಟು ಆ ವರ್ಗದ ಮತಗಳು ನಮಗೆ ಬಂದಿದ್ದರೂ ಗೆಲುವು ಸಾಧ್ಯ ಎಂಬ ಲೆಕ್ಕಾಚಾರದಲ್ಲಿದೆ.
ಮೋದಿ ಅಲೆ: ಮೋದಿ ಮತ್ತೂಮ್ಮೆ ಪ್ರಧಾನಿ ಯಾಗಬೇಕು ಎಂದು ಎದ್ದಿರುವ ಅಲೆಯ ಜೊತೆಗೆ ದೋಸ್ತಿಗಳ ನಡುವಿನ ಒಡಕಿನಿಂದ ಒಕ್ಕಲಿಗ ಸಮುದಾಯದ ಮತಗಳು ಸಂಪೂರ್ಣವಾಗಿ ಬಿಜೆಪಿಗೆ ವರ್ಗವಾಗಿರುವುದರಿಂದ ಬಿಜೆಪಿ ಗೆಲುವು ಸುಲಭ ಸಾಧ್ಯ ಎಂಬ ಲೆಕ್ಕಾಚಾರ ಹಾಕಿದೆ. ಆದರೆ, ಕಳೆದ 35 ದಿನಗಳ ಹಿಂದೆಯೇ ಮೈಸೂರು – ಕೊಡಗು ಎರಡೂ ಜಿಲ್ಲೆಗಳ ಮತದಾರ ಬರೆದಿರುವ ಅಭ್ಯರ್ಥಿ ಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ಗುರುವಾರ ಮತ ಎಣಿಕೆಯೊಂದಿಗೆ ಕ್ಷೇತ್ರದ ಮತದಾರ ಯಾರನ್ನು ಸಂಸತ್ ಪ್ರವೇಶಿಸಲು ರಹದಾರಿ ನೀಡಿದ್ದಾನೆ ಎಂಬುದು ಬಹಿರಂಗವಾಗಲಿದೆ.
● ಗಿರೀಶ್ ಹುಣಸೂರು