Advertisement

ದೇವರನಾಡಿನ ಗದ್ದುಗೆ ಯಾರ ಕೈಗೆ?

12:38 AM Apr 05, 2021 | Team Udayavani |

ದೇವರನಾಡು ಎಂದೇ ಖ್ಯಾತಿ ಪಡೆದಿರುವ ಕೇರಳದ 140 ವಿಧಾನಸಭಾ ಕ್ಷೇತ್ರಗಳಿಗೆ ಎಪ್ರಿಲ್‌ 6ರಂದು ಅಂದರೆ ನಾಳೆ ಚುನಾವಣೆ ನಡೆಯಲಿದೆ. ಅಷ್ಟೂ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮಂಗಳವಾರ ಸಂಜೆಯ ವೇಳೆಗೆ ಮತಪೆಟ್ಟಿಗೆಯಲ್ಲಿ ಭದ್ರವಾಗಲಿದೆ.

Advertisement

ಈ ಬಾರಿಯ ಕೇರಳ ವಿಧಾನಸಭಾ ಚುನಾವಣೆ ಈ ಹಿಂದಿನಂತೆ ಇಲ್ಲ. ಇದು ಬರೀ ಕೇರಳ ಮಾತ್ರವಲ್ಲದೇ ತಮಿಳುನಾಡು, ಅಸ್ಸಾಂ, ಪುದುಚೇರಿ ಹಾಗೂ ಹೈ ವೋಲ್ಟೆಜ್‌ ರಾಜ್ಯ ಪಶ್ಚಿಮ ಬಂಗಾಲದಲ್ಲಿಯೂ ನೆಕ್‌ ಟು ನೆಕ್‌ ಫೈಟ್‌ ಏರ್ಪಟ್ಟಿದೆ. ಇಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಅಳಿವು ಉಳಿವಿನ ಪ್ರಶ್ನೆಯಾದರೆ, ರಾಷ್ಟ್ರೀಯ ಪಕ್ಷಗಳಿಗೆ ನೆಲೆ ಕಂಡುಕೊಳ್ಳುವ ತವಕ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ತನ್ನ ಎನ್‌ಡಿಎ ಮೈತ್ರಿಕೂಟದ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡರೆ, ಕಾಂಗ್ರೆಸ್‌ ಪಕ್ಷ ಯುಪಿಎ ಮೈತ್ರಿಕೂಟದ ಮೊರೆ ಹೋಗಿದೆ. ಹೀಗಾಗಿ ಏಕಾಂಗಿಯಾಗಿ ಯಾವ ಪಕ್ಷವೂ ಸ್ಪರ್ಧೆ ಮಾಡುವ ಧೈರ್ಯ ತೋರಿಲ್ಲ.

ಬಹಳ ಮುಖ್ಯವಾಗಿ ಈ ಬಾರಿ ಕೇರಳದ ಜನತೆ ಯಾವ ಪಕ್ಷವನ್ನು ಅಧಿಕಾರಕ್ಕೆ ತರುತ್ತದೆ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಈ ಹಿಂದೆ ಒಂದು ಬಾರಿ ಯುಡಿಎಫ್ ಅಧಿಕಾರಕ್ಕೆ ಬಂದರೆ, ಮುಂದಿನ ಬಾರಿ ಎಲ್‌ಡಿಎಫ್ ಸರಕಾರವನ್ನು ಜನರು ಆರಿಸುತ್ತಿದ್ದರು. ಆದರೆ ಕಳೆದ ಲೋಕಸಭಾ ಚುನಾವಣೆ ಬಳಿಕ ಈ ಟ್ರೆಂಡ್‌ ಬದಲಾಗಿದೆ. ರಾಜ್ಯದಲ್ಲಿರುವ ಎಲ್‌ಡಿಎಫ್ ಸರಕಾರ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಯುಡಿಎಫ್ಗೆ ಶರಣಾಗಿದ್ದರೆ, ಆ ಬಳಿಕ ನಡೆದ ತ್ರಿಸ್ಥರ ಪಂಚಾಯತ್‌ ಚುನಾವಣೆಯಲ್ಲಿ ಮತದಾರರು ಎಲ್‌ಡಿಎಫ್ ಬೆಂಬಲಿತ ಅಭ್ಯರ್ಥಿಗಳ ಕೈ ಹಿಡಿದಿದ್ದರು. ಹೀಗಾಗಿ ಈ ಬಾರಿ ಈ ಎರಡೂ ಮೈತ್ರಿಕೂಟಗಳು ಹೊಸ ತಂತ್ರದೊಂದಿಗೆ ಕಾದಾಡಲೇಬೇಕಾದ ಅನಿವಾರ್ಯತೆಗೆ ತೆರೆದುಕೊಂಡಿವೆ.

ಎಲ್‌ಡಿಎಫ್ಗೆ ಸವಾಲು
ಎಲ್‌ಡಿಎಫ್ ಸರಕಾರದ ಅವಧಿಯಲ್ಲಿನ ಶಬರಿಮಲೆ ದೇಗುಲ ವಿವಾದ ಭಾರೀ ಚರ್ಚೆಯಾಗಿತ್ತು. ಅದು ಈ ಬಾರಿ ನಿರ್ಣಾಯಕ ಪಾತ್ರವಹಿಸಲಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರು ಶಬರಿಮಲೆ ವಿಚಾರ ವನ್ನು ಮುಂದಿಟ್ಟು ಕೊಂಡು ಸರಕಾರ ವನ್ನು ರ್ಯಾಲಿಯುದ್ದಕ್ಕೂ ಟೀಕಿಸಿ ದಲ್ಲದೇ ಹಿಂದೂಗಳ ಭಾವನೆಗಳ ಜತೆಗೆ ನಿಂತಿವೆ. ಹೀಗಾಗಿ ಹಿಂದೂ ವಿರೋಧಿ ಹಣೆಪಟ್ಟಿಯನ್ನು ಪಿಣರಾಯಿ ಸರಕಾರ ಕಟ್ಟಿಕೊಳ್ಳಬೇಕಾಗಿದೆ.

ಇನ್ನು ರಾಜ್ಯ ಸರಕಾರದ ವಿರುದ್ಧ ಕೇಳಿ ಬಂದ ವಿದ್ಯುತ್‌ ಹಗರಣಗಳು ಕೆಟ್ಟ ಹೆಸರನ್ನು ತಂದಿದೆ. 300 ಮೆಗಾ ವ್ಯಾಟ್‌ ವಿದ್ಯುತ್‌ಗಾಗಿ ಅದಾನಿ ಸಮೂಹದೊಂದಿಗೆ 25 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದು, ಇದಕ್ಕೆ 8,850 ಸಾವಿರ ಕೋಟಿ ರೂ. ವ್ಯಯಿಸಿದೆ. ಅದರಲ್ಲಿ 1 ಸಾವಿರ ಕೋಟಿ ರೂ.ಗಳನ್ನು ಅದಾನಿಗೆ ಲಾಭ ಮಾಡಿಕೊಡಲು ಎಲ್‌ಡಿಎಫ್ ಸರಕಾರ ಬಯಸಿದೆ ಎಂದು ಕಾಂಗ್ರೆಸ್‌ ಟೀಕಿಸಿತ್ತು. ಜತೆಗೆ ಸಿಎಂ ಪಿಣರಾಯಿ ತಲೆಗೆ ಸುತ್ತಿಕೊಂಡಿ ರುವ ಚಿನ್ನದ ವಿವಾದವೂ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.ಈ ಆರೋಪಗಳಿಂದ ಹೊರಬಂದು ಜನಪರ ಎನಿಸಿಕೊಳ್ಳಲು ಮುಂದಾಗಿರುವ ಸರಕಾರ ಕಲ್ಯಾಣ ಪಿಂಚನಿಯನ್ನು 2,500 ರೂ.ಗಳಿಗೆ ಏರಿಕೆ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದೆ. 60 ಸಾವಿರ ಕೋಟಿ. ರೂ.ಗಳ ಅಭಿವೃದ್ಧಿ ಯೋಜನೆ, ಗಲ್ಫ್ ದೇಶಗಳಲ್ಲಿ ದುಡಿಯುವವರ ಶ್ರೇಯಾಭಿವೃದ್ಧಿಗೆ ಪ್ಯಾಕೇಜ್‌ ಸಹಿತ ಇತರ ಭರಪೂರ ಆಶ್ವಾಸನೆಯನ್ನು ನೀಡಿದೆ.

Advertisement

ರಾಹುಲ್‌ಗೆ ಪ್ರತಿಷ್ಠೆ
ಲೋಕಸಭಾ ಚುನಾವಣೆಯಲ್ಲಿ ಕೇರಳ ದಿಂದ ಚುನಾಯಿತರಾದ ರಾಹುಲ್‌ ಗಾಂಧಿ ಅವರಿಗೆ ಈ ಚುನಾವಣೆ ಪ್ರತಿಷ್ಠೆ ಯ ಕಣವಾಗಿದೆ. ಒಂದರ್ಥದಲ್ಲಿ ರಾಹುಲ್‌ ಆಗಮನ ಕೇರಳ ಕಾಂಗ್ರೆಸ್‌ನಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ. ಇದು ರಾಜ್ಯದ ಎಲ್ಲ ಭಾಗಗಳಲ್ಲಿ ಕಂಡುಬರುತ್ತಿಲ್ಲವಾದರೂ ಲೋಕಸಭಾ ಚುನಾವಣೆಯ ಫ‌ಲಿತಾಂಶದ ನಿಟ್ಟಿನಲ್ಲಿ ಗಮನಿಸುವುದಾದರೆ ಕಾಂಗ್ರೆಸ್‌ಗೆ ಗೆಲ್ಲುವ ಉತ್ಸಾಹ ಇದೆ. ಕಾಂಗ್ರೆಸ್‌ನ ಲೋಕಭಾ ಚುನಾವಣೆಯ ಪ್ರಣಾಳಿಕೆಯಲ್ಲಿದ್ದ ಮಹತ್ವಾಕಾಂಕ್ಷೆಯ “ನ್ಯಾಯ್‌’ ಯೋಜನೆಯನ್ನು ಕೇರಳದಲ್ಲಿ ಜಾರಿಗೆ ತರಲು ಪಕ್ಷ ಮುಂದಾಗಿದೆ. ಈ ಯೋಜನೆಯ ಫ‌ಲಾನುಭವಿಗಳ ಬ್ಯಾಂಕ್‌ ಖಾತೆಗೆ ಪ್ರತೀ ವರ್ಷ 72,000 ರೂ. ಜಮೆಯಾಗಲಿದೆ. ಇನ್ನು ಶಬರಿಮಲೆಯ ಪಾವಿತ್ರ್ಯ ಕಾಪಾಡಲು ವಿಶೇಷ ಕಾನೂನು, ಪ್ರತೀ ತಿಂಗಳು 2,000 ಸಾವಿರ ರೂ. ಪಿಂಚಣಿ, 5 ಕೆ.ಜಿ. ಉಚಿತ ಅಕ್ಕಿ, 5 ಲಕ್ಷ ಮನೆ ನಿರ್ಮಾಣ ಸಹಿತ ಮೊದಲಾದ ಜನಪರ ಯೋಜನೆಯನ್ನು ಹಾಕಿಕೊಂಡಿದೆ.

ಶ್ರೀಧರನ್‌ ಫ್ಯಾಕ್ಟರ್‌
ಈ ನಡುವೆ ಮೊದಲ ಬಾರಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆದಿದ್ದಾರೆ. ಕಾರ್ಯಕರ್ತರ ಉತ್ಸಾಹವನ್ನು ಗಮನಿಸಿದ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ವಿಶ್ವಾಸವನ್ನು ಪಣಕ್ಕಿಟ್ಟು ಹೋರಾಡಲು ಮುಂದಾಗಿದೆ. ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸಲು ಮೆಟ್ರೋ ಮ್ಯಾನ್‌ ಖ್ಯಾತಿಯ ಇ. ಶ್ರೀಧರನ್‌ ಅವರನ್ನು ಸೆಳೆದಿದ್ದು, ಇದರಿಂದ ಎಲ್‌ಡಿಎಫ್ ಮತ್ತು ಯುಡಿಎಫ್ನ ಒಂದಷ್ಟು ಮತಗಳನ್ನು ಸೆಳೆದುಕೊಳ್ಳುವ ತಂತ್ರದ ಮೊರೆಹೋಗಿದೆ. ಕೇರಳದಲ್ಲಿ ಬಿಜೆಪಿಗೆ ಅಧಿಕಾರಕ್ಕೇರುವ ನಿರೀಕ್ಷೆ ಇಲ್ಲದೇ ಇದ್ದರೂ ತನ್ನ ಮತಗಳಿಕೆಯನ್ನು ಹೆಚ್ಚಿಸಿಕೊಳ್ಳುವ ಉಮೇದನ್ನು ಹೊಂದಿದೆ. ಪಕ್ಷಕ್ಕೆ ಕನಿಷ್ಠ ಎರಡು ಅಂಕಿಗಳ ಕ್ಷೇತ್ರಗಳನ್ನು ಗೆಲ್ಲಬೇಕು ಎಂಬ ಆಸೆ ಇದ್ದರೂ ಬೆರಳೆಣಿಕೆಯ ಕ್ಷೇತ್ರಗಳನ್ನು ಈ ಬಾರಿ ಗೆಲ್ಲುವ ನಿರೀಕ್ಷೆ ಇದೆ. ಇದಕ್ಕಾಗಿ ಕೆಲವು ಸ್ಟಾರ್‌ ನಟರಿಗೆ ಪಕ್ಷ ಬಿ-ಫಾರಂ ನೀಡಿದ್ದು, ಅವರ ಮೂಲಕ ಮತ ಸೆಳೆಯಲು ಯತ್ನಿಸಿದೆ. ಲವ್‌ ಜೆಹಾದ್‌ ಮಟ್ಟಹಾಕಲು ಶಾಸನ, ಶಬರಿಮಲೆಗೆ ಸಂಬಂಧಿಸಿದದಂತೆ ಕಾಯ್ದೆ, ಪ್ರತೀ ಮನೆಗೆ ಒಂದು ಉದ್ಯೋಗ ಮೊದಲಾದ ಭರವಸೆಯನ್ನು ಬಿಜೆಪಿ ಜನರ ಮುಂದಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next