Advertisement

ನೆರೆಯ ಹೊರೆ ಇಳಿಸುವವರು ಯಾರು?

10:09 AM Nov 25, 2019 | Suhan S |

ಧಾರವಾಡ: ನೆರೆಯ ರಭಸಕ್ಕೆ ಕೊಚ್ಚಿಹೋದ ನಮ್ಮ ಹೊಲ ನಮ್ಮ ರಸ್ತೆಗಳಾಗಿಲ್ಲ ಇನ್ನು ದುರಸ್ತಿ, ಬಿದ್ದ ಮನೆಗಳಿಗೆ ಸಿಕ್ಕಿಲ್ಲ ಪೂರ್ಣ ಪರಿಹಾರ, ಕೆರೆಕಟ್ಟೆ ದುರಸ್ತಿಯಾಗದೆ ಹರಿದು ಹಳ್ಳ ಸೇರುತ್ತಿರುವ ಕೆರೆಗಳ ನೀರು, ಒಟ್ಟಿನಲ್ಲಿ ನೆರೆಯಿಂದ ಉಂಟಾದ ಎಲ್ಲಾ ಹೊರೆಯನ್ನು ಇದೀಗ ಯಾರು ಇಳಿಸುವವರು?

Advertisement

ಹೌದು, ನೆರೆ ಮಾಡಿದ ಅನಾಹುತಗಳು ನೂರೆಂಟು. ಆದರೆ ಅವುಗಳ ಪೈಕಿ ಪರಿಹಾರ ಸಿಕ್ಕಿದ್ದು ಮಾತ್ರ ಎಂಟು. ಕೇಂದ್ರ-ರಾಜ್ಯ ನಾಯಕರು ಮಾತಿನಲ್ಲಿ ನೆರೆ ಪರಿಹಾರ ಬಿಡುಗಡೆ ಎನ್ನುತ್ತ ಕೂಗು ಹಾಕುತ್ತಿದ್ದಾರೆ. ಆದರೆ ನಿಜಕ್ಕೂ ಇನ್ನು ಮನೆ ಬಿದ್ದವರಿಗೆ ಮತ್ತು ಬೆಳೆನಷ್ಟವಾದ ರೈತರಿಗೆ ಪರಿಹಾರವೇ ಸಿಕ್ಕಿಲ್ಲ.

ಜಿಲ್ಲೆಯಲ್ಲಿನ 1.79 ಲಕ್ಷಕ್ಕೂ ಅಧಿಕ ರೈತರು ಈ ವರ್ಷ ಸುರಿದ ಭಾರಿ ಮಳೆಯಿಂದಾಗಿ ತಮ್ಮ ಹೊಲದಲ್ಲಿನ ಬೆಳೆ ಕಳೆದುಕೊಂಡಿದ್ದಾರೆ. ಇದೀಗ ಸರ್ಕಾರ ಅವರಿಗೆಲ್ಲ ಬೆಳೆಹಾನಿ ಪರಿಹಾರ ನೀಡುವುದಕ್ಕೆ ಸತತ ಮೂರು ಬಾರಿ ರೈತರಿಂದ ದಾಖಲೆಗಳನ್ನು ಸಂಗ್ರಹಿಸಿಕೊಂಡಿದೆ. ಆದರೆ ಈ ವರೆಗೂ ಪರಿಹಾರ ಮಾತ್ರ ಬಂದಿಲ್ಲ. ಅಷ್ಟೇಯಲ್ಲ, ಮಳೆಯಿಂದಾಗಿ ಕೊರೆದು ಹೋದ ರಸ್ತೆ, ಕೆರೆಕಟ್ಟೆಗಳ ದುರಸ್ತಿ ಕಾರ್ಯಕೂಡ ಆಮೆಗತಿಯಲ್ಲಿ ಸಾಗಿದೆ.

ಕೆಟ್ಟ ಸ್ಥಿತಿಯಲ್ಲಿವೆ ರಸ್ತೆಗಳು: ತೀವ್ರ ಮಳೆಯಿಂದಾಗಿ ಕೊರೆದು ಹೋಗಿರುವ ಹಳ್ಳಿಗಳಲ್ಲಿನ ರಸ್ತೆಗಳ ದುರಸ್ತಿ ಕಾರ್ಯ ಇನ್ನು ಹಾಗೆ ಇದೆ. ಅದರಲ್ಲೂ ಅರೆಮಲೆನಾಡು ಪ್ರದೇಶದಲ್ಲಿ ಇದೀಗ ಕಬ್ಬು ಸಾಗಾಣಿಕೆ ಜೋರಾಗಿ ನಡೆಯುತ್ತಿದ್ದು ರೈತರು ಹರಸಾಹಸ ಪಟ್ಟು ತಮ್ಮ ಕಬ್ಬನ್ನು ಕಳಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ರಸ್ತೆ ದುರಸ್ತಿಯಾಗದೇ ಹೋಗಿದ್ದರಿಂದ ಮತ್ತಷ್ಟು ತೊಂದರೆಯಾಗುತ್ತಿದೆ. ಧಾರವಾಡ ತಾಲೂಕಿನಲ್ಲಿ ನಮ್ಮ ಹೊಲ ನಮ್ಮ ರಸ್ತೆ ಅಡಿಯಲ್ಲಿ ನಿರ್ಮಿಸಿದ 400 ಕಿಮೀ ರಸ್ತೆ ಪೈಕಿ ಅಂದಾಜು 150 ಕಿಮೀನಷ್ಟು ರಸ್ತೆ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ. ಕಲಘಟಗಿ ತಾಲೂಕಿನಲ್ಲಿ 96 ಕಿ.ಮೀ., ಕುಂದಗೋಳ ತಾಲೂಕಿನಲ್ಲಿ 29 ಕಿಮೀ, ನವಲಗುಂದ ತಾಲೂಕಿನಲ್ಲಿ 112 ಕಿಮೀ ಮತ್ತು ಹುಬ್ಬಳ್ಳಿ ತಾಲೂಕಿನಲ್ಲಿ 89 ಕಿಮೀನಷ್ಟು ನಮ್ಮಹೊಲ ನಮ್ಮ ರಸ್ತೆ ಯೋಜನೆ ವ್ಯಾಪ್ತಿಯಲ್ಲಿನ ಕಚ್ಚಾ ರಸ್ತೆ ಹದಗೆಟ್ಟಿದೆ ಎಂದು ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ಈ ಪೈಕಿ ಶೇ.20 ಮಾತ್ರ ಅಲ್ಲಲ್ಲಿ ಆಸಕ್ತ ಗ್ರಾಪಂಗಳು ನರೇಗಾ ಯೋಜನೆ ಅಡಿಯಲ್ಲಿ ರಸ್ತೆಗಳನ್ನು ದುರಸ್ತಿಗೊಳಿಸಿಕೊಂಡಿವೆ ಬಿಟ್ಟರೆ ಇನ್ನುಳಿದ ಶೇ.80 ರಸ್ತೆ ಇನ್ನು ದುರಸ್ತಿಯಾಗಬೇಕಿದೆ.

ಕೆರೆಕಟ್ಟೆ, ಸೋರುವ ತಟ್ಟೆ: ಜಿಲ್ಲೆಯಲ್ಲಿನ 500ಕ್ಕೂ ಅಧಿಕ ಕೆರೆಗಳಲ್ಲಿ ಈ ವರ್ಷ ಉತ್ತಮವಾದ ನೀರು ಭರ್ತಿಯಾಗಿದೆ. ಆದರೆ ಈ ಪೈಕಿ ಅರ್ಧದಷ್ಟು ಕೆರೆಗಳಲ್ಲಿನ ನೀರು ತೋಬುಗಳನ್ನು ಸರಿಯಾಗಿ ನಿರ್ವಹಿಸದೇ ಇರುವುದರಿಂದ ಹರಿದು ಹೋಗುತ್ತಿದೆ. ಇನ್ನು ಜಿಲ್ಲೆಯಲ್ಲಿ ಕೆರೆಕಟ್ಟೆಯೇ ಒಡೆದು ಹೋಗಿರುವ 73 ಕೆರೆಗಳ ಕಟ್ಟೆ ದುರಸ್ತಿ ಕಾರ್ಯ ಇನ್ನು ಆರಂಭವೇ ಆಗಿಲ್ಲ. ಹೀಗಾಗಿ ಕೆರೆಯಲ್ಲಿನ ನೀರು ಸುಖಾಸುಮ್ಮನೆ ಹರಿದು ಹಳ್ಳ ಸೇರುತ್ತಿದೆ. ನೀರಾವರಿಗೆ ಬಳಕೆಯಾಗಬೇಕಿರುವ ನೀರನ್ನು ಸಹ ರೈತರು ಹೆಚ್ಚಿನ ಮಳೆಯಾಗಿದ್ದರಿಂದ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಹೀಗಾಗಿ ಕೆರೆಗಳಲ್ಲಿನ ನೀರು ವ್ಯಯವಾಗಿ ಹೋಗುತ್ತಿದೆ.

Advertisement

ಕಿತ್ತುಹೊದ ಹೊಲಕ್ಕಿಲ್ಲ ಪರಿಹಾರ?: ನೆರೆ ಪರಿಹಾರದ ಪಟ್ಟಿಯನ್ನು ಜಿಲ್ಲೆಯಲ್ಲಿನ ಅಧಿಕಾರಿಗಳು ಸರ್ಕಾರಕ್ಕೇನೋ ಕೊಟ್ಟಾಗಿದೆ. ಇದರಲ್ಲಿ ಬಿದ್ದ ಮನೆ ಮತ್ತು ರೈತರ ಹೊಲದಲ್ಲಿನ ಕೆಲವು ಪೈರುಗಳಿಗೆ ನಷ್ಟ ಉಂಟಾಗಿದ್ದು ಮಾತ್ರ ನಮೂದಾಗಿದೆ. ಜಿಲ್ಲೆಯಲ್ಲಿನ 300ಕ್ಕೂ ಅಧಿಕ ರೈತರ ಹೊಲಕ್ಕೆ ಹೊಲವೇ ಕೊಚ್ಚಿಕೊಂಡು ಹೋಗಿ ಗುಂಡಿ ಬಿದ್ದಿವೆ. ಅವರಿನ್ನು ತಮ್ಮ ಹೊಲಕ್ಕೆ ಬೇರೆಡೆಯಿಂದ ಮಣ್ಣು ತಂದು ಅದನ್ನು ಮರುಪೂರಣ ಮಾಡಬೇಕಿದೆ. ಹೀಗಾಗಿ ಬೇಡ್ತಿ, ತುಪರಿ, ಬೆಣ್ಣೆ ಹಳ್ಳ ಸೇರಿದಂತೆ 23 ಹಳ್ಳಗಳ ಅಕ್ಕಪಕ್ಕದ ಹೊಲದ ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದರು. ಆದರೆ ಇದನ್ನು ಜಿಲ್ಲೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.

ಪರಿಹಾರ ಬಂದಿದೆಯೇ?: ಗ್ರಾಮ ಲೆಕ್ಕಾಧಿಕಾರಿಗಳು ಬಿದ್ದ ಮನೆಗಳಿಗೆ ಮತ್ತು ಕೊಚ್ಚಿಹೋದ ಬೆಳೆಗೆ ಸೂಕ್ತ ಪರಿಹಾರಕ್ಕೆ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಇದನ್ನು ಸರ್ಕಾರಕ್ಕೂ ಜಿಲ್ಲಾಮಟ್ಟದ ಅಧಿಕಾರಿಗಳು ರವಾನಿಸಿಯಾಗಿದೆ. ಜಿಲ್ಲೆಯಲ್ಲಿ ಬರೊಬ್ಬರಿ 810 ಕೋಟಿ ರೂ.ನೆರೆಯಿಂದ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ ಈ ವರೆಗೂ ಹೆಚ್ಚುಬಿದ್ದ ಮನೆಗಳಿಗೆ ಇನ್ನು ಪರಿಹಾರ ಬಂದಿಲ್ಲ. ಮನೆಬಿದ್ದ ಬಡವರಿಗೆ ಬರೀ 10 ಸಾವಿರ ರೂ. ಚೆಕ್‌ ನೀಡಿ ಕೈತೊಳೆದುಕೊಳ್ಳಲಾಗಿದೆ. ಕೊಡಗು ಮಾದರಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ ಇದೀಗ ಬರೀ 20-40 ಸಾವಿರ ರೂ. ಪರಿಹಾರಕ್ಕೆ ಮಾತ್ರ ಒಪ್ಪಿಗೆ ಕೊಡುತ್ತಿದೆ. ಬೆಳೆನಾಶವಾದ ರೈತರಂತೂ ಪರಿಹಾರಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತ ಕುಳಿತಿದ್ದಾರೆ. ಆದರೆ ಈ ವರೆಗೂ ಬೆಳೆಹಾನಿ ಪರಿಹಾರ ಮಾತ್ರ ಬಂದಿಲ್ಲ.

ಜಿಲ್ಲಾಡಳಿತ ಕೂಡಲೇ ಜಿಲ್ಲೆಯಲ್ಲಿನ ಎಲ್ಲ ಕೆರೆಗಳಲ್ಲಿನ ನೀರನ್ನು ವ್ಯರ್ಥವಾಗದಂತೆ ತಡೆಯಲು ಪಂಚಾಯತ್‌ರಾಜ್‌ ಇಲಾಖೆ ಮೂಲಕ ಕ್ರಮ ವಹಿಸಬೇಕು. ಇಲ್ಲವಾದರೆ ಒಂದೇ ವರ್ಷದಲ್ಲಿ ಮತ್ತೆ ಹಳ್ಳಿಗರು ನೀರಿಗಾಗಿ ಪರಿತಪಿಸಬೇಕಾಗುತ್ತದೆ. – ಪ್ರಕಾಶ ಗೌಡರ, ಜಲತಜ್ಞ

 

-ಬಸವರಾಜ ಹೊಂಗಲ್‌  

Advertisement

Udayavani is now on Telegram. Click here to join our channel and stay updated with the latest news.

Next