Advertisement

ಸಂತ್ರಸ್ತರ ಸಮಸ್ಯೆ ಕೇಳ್ಳೋರ್ಯಾರು!

11:32 AM Apr 17, 2019 | Team Udayavani |

ಬೀಳಗಿ: ವಿಧಾನಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಿಂತ, ಪ್ರಸ್ತುತ ಲೋಕಸಭೆ ಚುನಾವಣೆ ವಿಭಿನ್ನತೆ ಪಡೆದುಕೊಂಡಿದೆ. ಈ ಚುನಾವಣೆಯಲ್ಲಿ ವ್ಯಕ್ತಿ ಪ್ರತಿಷ್ಠೆ, ಜಾತಿ, ಹಣದ ಪ್ರಭಾವವೇ ಹೆಚ್ಚು ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.

Advertisement

ಬೀಳಗಿ ಕ್ಷೇತ್ರದ ಮತದಾರರು, ಪ್ರಬುದ್ಧ ನಡೆ ಮೆರೆದಿರುವುದು ಹಲವು ಬಾರಿ ಸಾಬೀತಾಗಿದೆ. ತಾಲೂಕಿನಲ್ಲಿ ನೀರಾವರಿ, ಮುಳುಗಡೆ ಸಂತ್ರಸ್ತರ ಸಮಸ್ಯೆಗಳು ಸದಾ ಜೀವಂತ. ಇವೆಲ್ಲ ಹಲವು ಸಮಸ್ಯೆಗಳನ್ನು ಸಹಿಸಿಕೊಂಡಿರುವ ಮತದಾರ, ವ್ಯಕ್ತಿಯನ್ನು ಬದಿಗಿರಿಸಿ ದೇಶದ ಸಮಗ್ರತೆಯ ದೃಷ್ಟಿಕೋನದಲ್ಲಿ ಮತ ಚಲಾಯಿಸುವ
ಉತ್ಸಾಹದಲ್ಲಿರುವುದು ಕಂಡುಬರುತ್ತಿದೆ.

ಲೋಕಸಭೆಗೆ ಮೂರು ಬಾರಿ ಆಯ್ಕೆಯಾಗಿ ಹ್ಯಾಟ್ರಿಕ್‌ ಸಾಧಿಸಿರುವ ಸಂಸದ ಹಾಗೂ ಹಾಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ನಾಲ್ಕನೆ ಬಾರಿಗೆ ಸಂಸತ್‌ ಪ್ರವೇಶಿಸುವುದಕ್ಕಾಗಿ ಜನರ ಮುಂದೆ ಬಂದಿದ್ದಾರೆ. ಪಿ.ಸಿ.ಗದ್ದಿಗೌಡರ ಸಂಭಾವಿತ, ಯಾರ ಮನಸ್ಸನ್ನು ನೋಯಿಸದಂತಹ ಸರಳ ವ್ಯಕ್ತಿ ಎನ್ನುವ ಮಾತು ಬಹುತೇಕ ಸ್ವಪಕ್ಷಿಯರಿಂದ ಹಿಡಿದು, ವಿರೋಧ ಪಕ್ಷದವರಿಂದಲೂ ಕೇಳಿ ಬರುತ್ತವೆ. ಆದರೆ, ಪಿ.ಸಿ.ಗದ್ದಿಗೌಡರ ಜನರೊಂದಿಗೆ ಹೆಚ್ಚು ಬೆರೆಯುವುದು ಕಡಿಮೆ. ಅವರ ಸಾಧನೆಯೂ ಅಷ್ಟಕಷ್ಟೇ ಎನ್ನುವ ಮಾತು ಎಲ್ಲರ ಬಾಯಲ್ಲೂ ಹೆಚ್ಚು ಪ್ರಚಲಿತ. ಪಿ.ಸಿ.ಗದ್ದಿಗೌಡರ ತಮ್ಮ ಅನುದಾನ ಬಳಕೆಯಲ್ಲಿ ರಾಜ್ಯದಲ್ಲಿ 7ನೇ ಸ್ಥಾನದಲ್ಲಿದ್ದಾರೆ.

ಕೇಂದ್ರ ಸರಕಾರದ ಹತ್ತಾರು ಯೋಜನೆಗಳನ್ನು ತರುವಲ್ಲಿ ಅವರು ಸಫಲರಾಗಿದ್ದಾರೆ. ಪ್ರಚಾರ ಪ್ರಿಯರಲ್ಲದ ಗದ್ದಿಗೌಡರ ಮಾಡಿರುವ ಕೆಲಸ ಈ ಕಾರಣಕ್ಕೆ ಗೌಣವಾಗಿವೆ ಎನ್ನುವುದು ಹಲವರವಾದ. ಕಳೆದ ಎರಡೂವರೆ ದಶಕಗಳಿಂದ ಬೀಳಗಿ ತಾಲೂಕಿನ ಮುಳುಗಡೆ ಸಂತ್ರಸ್ತರು ಸಮಸ್ಯೆಗಳ ಸುಳಿಯಿಂದ ಇನ್ನೂ ಹೊರಬರಲಾಗುತ್ತಿಲ್ಲ. ಆಲಮಟ್ಟಿ ಹಿನ್ನೀರಿಗೆ ತಮ್ಮ ಮೂಲ ನೆಲೆಯನ್ನು ತ್ಯಜಿಸಿ, ಸರಕಾರ ತೋರಿಸಿದ ಪುನರ್ವಸತಿ ಕೇಂದ್ರಗಳಲ್ಲಿ ಹೊಸ ಬದುಕು
ರೂಪಿಸಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಮೇಲಿಂದ ಮೇಲೆ ಬರಗಾಲಕ್ಕೆ ತುತ್ತಾಗುತ್ತಿರುವ ರೈತನ ಬದುಕು ಅಸಹನೀಯವಾಗಿದೆ. ತಾಲೂಕಿಗೆ ಶಾಸ್ವತ ನೀರಾವರಿ ಯೋಜನೆ ಅನುಷ್ಠಾನಗೊಳ್ಳಬೇಕಿದೆ.

ಜಿಎಲ್‌ಬಿಸಿ ಕಾಲುವೆಗಳ ಮೂಲಕ ಶಾಸ್ವತ ನೀರಾವರಿ ಕಲ್ಪಿಸುವ ಯೋಜನೆ ಕೇವಲ ಕಾಗದದಲ್ಲಿ ಮಾತ್ರ ದಾಖಲಾಗಿದೆ. ಕಾಲುವೆ ಮಾತ್ರ ಸದಾ ಬಣಗುಡುತ್ತಿವೆ.
ಕಾಲುವೆಗೆ ನೀರು ಬಿಡಲು ಒತ್ತಾಯಿಸಿ ರೈತರು ಹಲವಾರು ಬಾರಿ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ರೈತರ ಭೂಮಿಗೆ ನೀರು ಹರಿಸಲು ಶಾಸ್ವತ ನೀರಾವರಿ ಯೋಜನೆಗೆ ಜನಪ್ರತಿನಿ ಗಳು ಹೆಚ್ಚು ಆಸಕ್ತಿ ವಹಿಸುವುದು ಅವಶ್ಯಕವಾಗಿದೆ. ಇಂತಹ ಹತ್ತಾರು ಜೀವಂತ ಸಮಸ್ಯೆಗಳು ಇಲ್ಲಿನ ಜನತೆಯನ್ನು ನಿರಂತರ ಕಾಡುತ್ತಿದ್ದರೂ ಕೂಡ, ನಮಗೆ ದೇಶ ಮುಖ್ಯ. ದೇಶದ ಭದ್ರತೆಗಾಗಿ ನಮ್ಮ ಮತ ಎನ್ನುವುದು ಹೆಚ್ಚು ಧ್ವನಿಸುತ್ತಿದೆ.

Advertisement

ಲೋಕಸಭಾ ಸದಸ್ಯರು ಏನು ಕೆಲಸ ಮಾಡಿದ್ದಾರೆ, ಕೇಂದ್ರದ ಯಾವೆಲ್ಲ ಯೋಜನೆ ಬಂದಿವೆ ಎನ್ನುವ ಕುರಿತು ಜನರ ಚರ್ಚೆ ಕಡಿಮೆ. ವಿರೋಧ ಪಕ್ಷ ಕಾಂಗ್ರೆಸ್‌ನವರು, ಬಿಜೆಪಿ ಸಂಸದರ ಸಾಧನೆ ಶೂನ್ಯ ಎಂದು ನಿರಂತರ ಟೀಕೆಗಳ ಮೂಲಕ ಬಿಜೆಪಿ ವಿರುದ್ಧ ಮುಗಿಬೀಳುತ್ತಿದ್ದರೂ, ಜನರ ಆಲೋಚನೆ ದಿಕ್ಕು
ಮಾತ್ರ ಬದಲಾಗದಿರುವುದು ಕಂಡುಬರುತ್ತಿದೆ. ಕಾಂಗ್ರೆಸ್‌ ಓಲೈಕೆ ರಾಜಕಾರಣ ನಿಂತಿಲ್ಲ ಎನ್ನುವ ಬೇಸರದ ಮಾತು ಒಂದೆಡೆ; ಬಿಜೆಪಿ ಐದು ವರ್ಷದಲ್ಲಿ ಏನು ಮಾಡಿದೆ. ಕಪ್ಪುಹಣ ತರಲಿಲ್ಲ. ಬಡವರ ಖಾತೆಗೆ ಹತ್ತು ರೂಪಾಯಿ ಕೂಡ ಬರಲಿಲ್ಲ. ಬಿಜೆಪಿ ಸುಳ್ಳು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಇನ್ನೊಂದೆಡೆ ಚರ್ಚೆಗಳು ಸದ್ದು ಮಾಡುತ್ತಿವೆ.

ಯುವ ಉತ್ಸಾಹಿ ಎನ್ನುವ ಟ್ರೆಂಡ್‌ ವೀಣಾ ಕಾಶಪ್ಪನವರಿಗೆ ಪ್ಲಸ್‌. ಬಿಜೆಪಿ ಅಭ್ಯರ್ಥಿ ಗೌಣವಾಗಿದ್ದು, ಕಮಲದ ಹೂವಲ್ಲಿ ಮೋದಿ ಮುಖ ಕಾಣುವ ಪ್ರಯತ್ನ ಹೆಚ್ಚು ಎದ್ದು ಕಾಣುತ್ತಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಬೀಳಗಿ ಮತಕ್ಷೇತ್ರ ಕಾಂಗ್ರೆಸ್‌ಗೆ 254 ಮತ ಲೀಡ್‌ ಕೊಟ್ಟಿದೆ. ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ ಎನ್ನುವುದು ಬಿಜೆಪಿಗೆ ಪ್ಲಸ್‌ ಆಗಬಹುದೇ ಎನ್ನುವ ಚರ್ಚೆ ಜೋರಾಗಿದೆ. ಇವೆಲ್ಲದರ ಮಧ್ಯೆ, ಜಾತಿಭೇದ ಮರೆತು ದೇಶದ ಸಮಗ್ರತೆಗೆ ಬಟನ್‌ ಒತ್ತಲು ಮತದಾರ ತುದಿಗಾಲಲ್ಲಿ ನಿಂತಿದ್ದಾನೆ. ತಾಲೂಕಿನಾದ್ಯಂತ ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಚಾರದ ಅಬ್ಬರ ಜೋರಾಗಿದೆ.

ಕಾಂಗ್ರೆಸ್‌ ರಾಜ್ಯನಾಯಕ ಎಚ್‌.ಕೆ. ಪಾಟೀಲ ಪ್ರಚಾರ ಮಾಡಿ ಹೋಗಿದ್ದಾರೆ. ಅಭ್ಯರ್ಥಿ ವೀಣಾ ಕಾಶಪ್ಪನವರ ಕೂಡ ತಾಲೂಕಿನಲ್ಲಿ ಎರಡು ಸುತ್ತು ಸಂಚರಿಸಿದ್ದಾರೆ. ಮಾಜಿ ಶಾಸಕ ಜೆ.ಟಿ. ಪಾಟೀಲ, ವಿಪ ಸದಸ್ಯ ಎಸ್‌.ಆರ್‌.ಪಾಟೀಲ ಕಾಲಿಗೆ ಚಕ್ರಕಟ್ಟಿಕೊಂಡು ತಿರುಗುತ್ತಿದ್ದಾರೆ.

ಜಿಪಂ ಅಧ್ಯಕ್ಷೆಯಾಗಿ ಉತ್ತಮ ಕೆಲಸ ಮಾಡಿದ್ದಾರೆ. ಯುವ ಉತ್ಸಾಹಿಯಾಗಿರುವ ವೀಣಾ ಕಾಶಪ್ಪನವರಿಂದ ಅಭಿವೃದ್ಧಿ ಕೆಲಸವನ್ನು ನಿರೀಕ್ಷಿಸಬಹುದು ಎನ್ನುವ ಜನಾಭಿಪ್ರಾಯ ಕೂಡ ಓಡಾಡುತ್ತಿದೆ. ಇತ್ತ, ಬಿಜೆಪಿಯೂ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಬಿಜೆಪಿ ರಾಜ್ಯ ನಾಯಕ ಕೆ.ಎಸ್‌.ಈಶ್ವರಪ್ಪ ಎರಡು ಬಾರಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ತಾಲೂಕಿನ ಹಲವು ಭಾಗದಲ್ಲಿ ಪ್ರಚಾರದ ಧೂಳು ಎಬ್ಬಿಸಿದ್ದಾರೆ. ಶಾಸಕ ಮುರುಗೇಶ ನಿರಾಣಿ, ವಿಪ ಸದಸ್ಯ ಹನುಮಂತ ನಿರಾಣಿ ಪ್ರಚಾರ ಜೋರಾಗಿದೆ. ಬಿಜೆಪಿ-ಕಾಂಗ್ರೆಸ್‌ ಫೈಟ್‌ ಚುರುಕು ಪಡೆದಕೊಂಡಿದೆ.

ಪ್ರಬುದ್ಧ ಮತದಾರರು ಪ್ರಚಾರದ ಅಬ್ಬರ ಗಮನಿಸುತ್ತಿದ್ದಾರೆ. ಯಾರಿಗೆ ವೋಟ್‌ ಹಾಕಿ ಏನ ಲಾಭ ಐತ್ರಿ, ನಮಗ ದುಡಿದಂತೂ ತಪ್ಪುದಿಲಿ ಎನ್ನುವ ಬಡವರ, ಕೂಲಿ ಕಾರ್ಮಿಕರ ನಿರಾಶೆ ನುಡಿಗಳೂ ಸುಳಿದಾಡುತ್ತಿವೆ. ತಾಲೂಕಿನಲ್ಲಿ ಗಾಣಿಗ-ಕುರಬ, ವಾಲ್ಮೀಕಿ ಮತಗಳು ಪ್ರಬಲವಾಗಿವೆ. ಅಲ್ಪಸಂಖ್ಯಾತ, ದಲಿತ ಮತಗಳು ನಿರ್ಣಾಯಕವಾಗಿವೆ. ಬಿಜೆಪಿ ಪಾರಂಪರಿಕ ಕೆಲ ಜಾತಿ ಮತಗಳು ಕಾಂಗ್ರೆಸ್‌ ಕಡೆಗೆ ಹೆಜ್ಜೆ ಹಾಕುತ್ತಿವೆ.

ಕಾಂಗ್ರೆಸ್‌ನ ಕೆಲ ಜಾತಿಗಳ ಪಾರಂಪರಿಕ ಮತಗಳು ಬಿಜೆಪಿಗೆ ಹರಿದು ಬರುವ ಮುನ್ಸೂಚನೆಯಿದೆ. ಒಳಗೊಳಗೆ ಕಾಲೆಳೆಯುವ ತಂತ್ರಗಾರಿಕೆ ಎರಡೂ ಪಕ್ಷದಲ್ಲಿ ನಡೆಯುತ್ತಿರುವುದು ಬಹಿರಂಗ ಗುಟ್ಟಾಗಿದೆ. ಆದರೆ, ಯಾವ ಗುಟ್ಟನ್ನೂ ಬಿಟ್ಟುಕೊಡದ ಮತದಾರ ಮಾತ್ರ ಯಾರನ್ನು ದಿಲ್ಲಿ ಗದ್ದುಗೆ ಏರಿಸುತ್ತಾನೆ ?

ಹೊಂದಾಣಿಕೆ ರಾಜಕೀಯದ ವದಂತಿ ಕೆಲವು ಪ್ರಮುಖ ವದಂತಿಗಳಿಂದ ಬೀಳಗಿ ಕ್ಷೇತ್ರ ಗಮನ ಸೆಳೆದಿದೆ. ರಡ್ಡಿ ಸಮುದಾಯ ಪ್ರಭಲವಾಗಿರುವ ಈ ಕ್ಷೇತ್ರದಲ್ಲಿ, ಈ ಬಾರಿ ಲೋಕಸಭೆ ಚುನಾವಣೆಗೆ ತಮ್ಮ ಸಮುದಾಯಕ್ಕೆ ಟಿಕೆಟ್‌ ಕೊಡಲಿಲ್ಲ ಎಂಬ ಸಿಟ್ಟು ಕಾಂಗ್ರೆಸ್‌ ಮೇಲೆ ತೋರಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇನ್ನು ಜಾತಿ ರಾಜಕೀಯದ ಹೊಂದಾಣಿಕೆಯ ಮಾತುಗಳೂ ಈ ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ. ಹೀಗಾಗಿ ಕಾಂಗ್ರೆಸ್‌ ಈ ಕ್ಷೇತ್ರದಲ್ಲಿ ಕಳೆದ ಬಾರಿಗಿಂತ ಹೆಚ್ಚು ಲೀಡ್‌ ಪಡೆಯುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆಯಾದರೂ, ಮೋದಿ ಅಲೆಯಲ್ಲಿ ಜಾತಿ ಹೊಂದಾಣಿಕೆ ರಾಜಕಾರಣ ನಡೆಯಲ್ಲ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.

ಪುರುಷ ಮತದಾರರಿಗಿಂತ 1,311 ಜನ ಮಹಿಳಾ ಮತದಾರರೇ ಹೆಚ್ಚಿರುವ ಕ್ಷೇತ್ರವಿದು. ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಗದ್ದಿಗೌಡರ ಬೀಳಗಿ ಕ್ಷೇತ್ರ ವ್ಯಾಪ್ತಿಯಿಂದ 69,351 ಮತ ಪಡೆದಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಅಜಯಕುಮಾರ ಅವರು 69,638 ಮತ ಪಡೆದಿದ್ದರು. ಅದೇ 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ85,135 ಮತ ಪಡೆದಿದ್ದರೆ, ಕಾಂಗ್ರೆಸ್‌ 80,324 ಮತ ಪಡೆದಿತ್ತು. ಜೆಡಿಎಸ್‌ 1773 ಮತ ಪಡೆದು ಠೇವಣಿ ಕಳೆದುಕೊಂಡಿತ್ತು.

ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದ ಎರಡೂ ಪಕ್ಷಗಳಿಗೆ ವಿಧಾನಸಭೆ ಚುನಾವಣೆಯಲ್ಲಿ ಬಂದಿರುವ
82,097 ಮತ ಪಡೆಯಬಹುದು ಎಂಬ ಲೆಕ್ಕಾಚಾರವಿದೆ.

„ರವೀಂದ್ರ ಕಣವಿ

Advertisement

Udayavani is now on Telegram. Click here to join our channel and stay updated with the latest news.

Next