ವರದಿ: ದತ್ತು ಕಮ್ಮಾರ
ಕೊಪ್ಪಳ: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಭಾರಿ ಪೈಪೋಟಿ ಏರ್ಪಟ್ಟಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಬಿಜೆಪಿ ಹೈಕಮಾಂಡ್ ಭೇಟಿ ಮಾಡಿ ಯಾರಿಗೆ ಸಚಿವ ಸ್ಥಾನ ಕೊಡಬೇಕೆಂಬ ಚರ್ಚೆ ನಡೆಸಿದ್ದಾರೆ.ಜಿಲ್ಲೆಗೆ ಈ ಬಾರಿಯಾದರೂ ಸಚಿವ ಸ್ಥಾನದ ಭಾಗ್ಯ ಸಿಗುತ್ತಾ ಎನ್ನುವ ಚರ್ಚೆ ನಡೆದಿದೆ.
ಹೌದು. ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಜಿಲ್ಲೆಗೆ ಸಚಿವ ಸ್ಥಾನವು ಸಿಗಲಿಲ್ಲ. ಆಗಲೂ ಆರ್. ಶಂಕರ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾದರು. ನಂತರದ ನಡೆದ ರಾಜಕೀಯ ಬೆಳವಣಿಗೆಯಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅವರ ಆಡಳಿತ ಶುರುವಾಗಿ ಎರಡು ವರ್ಷ ಪೂರೈಸಿದ್ದರೂ ಜಿಲ್ಲೆಯವರಿಗೆ ಸಚಿವ ಸ್ಥಾನವೇ ಸಿಗಲಿಲ್ಲ. ಸಿ.ಸಿ. ಪಾಟೀಲ್ ಅವರು ಜಿಲ್ಲಾ ಸಚಿವರಾದರು. ಆದರೆ ಜಿಲ್ಲೆಯ ಮೂವರು ಬಿಜೆಪಿ ಶಾಸಕರಿದ್ದರು ಸಹ ಅವರಿಗೆ ಬಿಜೆಪಿ ಹೈಕಮಾಂಡ್ ಸಚಿವ ಸ್ಥಾನ ಕರುಣಿಸಿಲ್ಲ. ಆಗಲೂ ಸ್ಥಳೀಯ ಶಾಸಕರು ಕೊಪ್ಪಳ ಜಿಲ್ಲೆ ಅಭಿವೃದ್ಧಿ ಕಾಣಬೇಕಾದರೆ ಜಿಲ್ಲೆಯವರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವ ಒತ್ತಾಯ ಮಾಡಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಸ್ಥಳೀಯ ಬಿಜೆಪಿ ಶಾಸಕರನ್ನೇ ಮರೆಯಿತು. ಈಗ ರಾಜ್ಯದಲ್ಲಿ ಸಚಿವ ಸಂಪುಟ ರಚನೆಯ ಸರ್ಕಸ್ ಜೋರಾಗಿದೆ. ಈ ಬಾರಿಯಾದರೂ ಕೊಪ್ಪಳ ಜಿಲ್ಲೆಗೆ ಪ್ರಾದೇಶಿಕ ಪ್ರಾತಿನಿಧ್ಯದಲ್ಲಿ ಸ್ಥಾನಮಾನ ಸಿಗಲಿದೆಯೇ ಎನ್ನುವ ಚರ್ಚೆಗಳು ನಡೆದಿವೆ.
ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಅವರು ಹಿರಿಯ, ಅನುಭವಿ ರಾಜಕಾರಣಿ. ಪಕ್ಷದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಬಿಜೆಪಿ ಹೈಕಮಾಂಡ್ ಮಟ್ಟದಲ್ಲೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದರೆ ಶಾಸಕ ಹಾಲಪ್ಪ ಆಚಾರ್ ಅವರು ನಾನೇ ಸಚಿವ ಸ್ಥಾನ ಕೊಡಿ ಎಂದು ಏಂದೂ ಕೇಳುವುದಿಲ್ಲ. ನಮ್ಮ ಕೆಲಸ ನೋಡಿ ಪಕ್ಷವೇ ಕೊಡಲಿ. ನಾನೆಂದು ಯಾರ ಬಳಿಯೂ ಲಾಭಿ ಮಾಡಲ್ಲ, ಮಾಡುವುದೂ ಇಲ್ಲ ಎನ್ನುವ ನೇರ ನುಡಿಯನ್ನಾಡುತ್ತಲೇ ಬಂದಿದ್ದಾರೆ. ಈಗಲೂ ಅನ್ಯ ಜಿಲ್ಲೆಯವರಿಗೆ ಜಿಲ್ಲಾ ಉಸ್ತುವಾರಿ ಕೊಡುವುದಕ್ಕಿಂತ ಜಿಲ್ಲೆಯ ಶಾಸಕರಿಗೆ ಕೊಡಲಿ ಎನ್ನುವ ಮಾತನ್ನಾಡಿದ್ದಾರೆ.
ಇನ್ನೂ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಮೊದಲಿಂದಲೂ ಸಚಿವ ಸ್ಥಾನಕ್ಕೆ ಬೇಡಿಕೆ ಇಡುತ್ತಿದ್ದಾರೆ. ತಾವು ಎರಡನೇ ಬಾರಿ ಶಾಸಕರಾಗಿದ್ದೇವೆ. ಹಿರಿತನವಿದೆ, ನಮಗೆ ಸಚಿವ ಸ್ಥಾನ ಕೊಟ್ಟರೆ ಅಭಿವೃದ್ಧಿಗೂ ವೇಗ ದೊರೆಯಲಿದೆ ಎನ್ನುವ ಮಾತನ್ನಾಡಿದ್ದಾರೆ. ಇನ್ನೂ ಕನಕಗಿರಿ ಶಾಸಕ ಬಸವರಾಜ ದಢೇಸುಗೂರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಬಿಎಸ್‌ವೈ ಸರ್ಕಾರದಲ್ಲಿ ಸಚಿವಗಿರಿಗಾಗಿ ಲಾಭಿ ಮಾಡಿದ್ದು ಗುಟ್ಟಾಗಿ ಉಳಿದಿಲ್ಲ. ಆದರೆ ಬಿಎಸ್‌ವೈ ಸರ್ಕಾರದಲ್ಲಿ ಇವರಿಗೆ ಸಚಿವ ಸ್ಥಾನ ಸಿಗಲಿಲ್ಲ. ಬದಲಾಗಿ ಸಮಾಜ ಕಲ್ಯಾಣ ಇಲಾಖೆ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು.ತಾಂತ್ರಿಕ ಕಾರಣದಿಂದ ಒಂದೇ ದಿನದಲ್ಲಿ ಸ್ಥಾನ ಕಳೆದುಕೊಂಡರು.
ದಲಿತ ಕೋಟಾದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರಾತಿನಿಧ್ಯ ಆಧಾರದ ಮೇಲೆಯೂ ಸಚಿವಗಿರಿಗೆ ಲಾಭಿ ನಡೆಸಿದ್ದಾರೆ ಎಂದೆನ್ನಲಾಗುತ್ತಿದೆ. ಆದರೆ ಬಿಜೆಪಿ ಹೈಕಮಾಂಡ್ ಸರ್ಕಾರದ ಕೊನೆಯ ಅವ ಧಿಯಲ್ಲಾದರೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆಗುತ್ತಿರುವ ತಾರತಮ್ಯಕ್ಕೆ ಬ್ರೇಕ್ ಹಾಕಿ ಈ ಭಾಗದ ಶಾಸಕರಿಗೆ ಸಚಿವಗಿರಿ ಕೊಡುತ್ತಾ ಎನ್ನುವುದೇ ಜನರ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ ಜಿಲ್ಲೆಯ ಮೂವರು ಶಾಸಕರು ಸಚಿವಗಿರಿ ಕನಸು ಕಾಣುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ಯಾರಿಗೆ ಸಚಿವ ಭಾಗ್ಯ ಕರುಣಿಸುತ್ತೇ ಎನ್ನುವುದೇ ಕಾದು ನೋಡಬೇಕಿದೆ.