ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಕಣ್ಣ ಮುಂದಿದೆ. ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಕಂಡಿದೆ. ಆಡಳಿತ ವಿರೋಧಿ ಅಲೆಗೆ ಕೊಚ್ಚಿಹೋದ ಬಿಜೆಪಿಯು ಕೇವಲ 66 ಸ್ಥಾನಗಳಿಗೆ ತೃಪ್ತಿ ಪಡೆದುಕೊಂಡಿದೆ.
ಸಿದ್ದರಾಮಯ್ಯ- ಡಿಕೆ ಶಿವಕುಮಾರ್ ಜೋಡೆತ್ತುಗಳ ನಡುವೆ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಎಂಬ ಚರ್ಚೆ ಎಂದೆಡೆ ಜೋರಾಗಿದೆ. ಇದರ ನಡುವೆ ಮುಂದಿನ ವಿಪಕ್ಷ ನಾಯಕ ಯಾರು ಎಂಬ ಚರ್ಚೆಯೂ ಆರಂಭವಾಗಿದೆ.
ಈ ಸ್ಥಾನ ಬಸವರಾಜ ಬೊಮ್ಮಾಯಿ ಅವರಿಗೆ ಒಲಿಯಬಹುದೆಂಬುದು ಒಂದು ಲೆಕ್ಕಾಚಾರ. ಸದನದಲ್ಲಿ ಕಾಂಗ್ರೆಸನ್ನು ಎದುರಿಸಬೇಕಾದರೆ ಸಂಸದೀಯ ಪಟ್ಟುಗಳು ಕರಗತವಾಗಿರುವ ವ್ಯಕ್ತಿ ಬೇಕು. ಆಗ ಬೊಮ್ಮಾಯಿ ಆಯ್ಕೆ ಅನಿವಾರ್ಯವಾಗಬಹುದು. ಆದರೆ ಪಕ್ಷದ ಹೀನಾಯ ಸೋಲಿಗೆ ಬೊಮ್ಮಾಯಿ ಆಡಳಿತ ವೈಖರಿಯೇ ಕಾರಣ ಎಂಬ ಟೀಕೆ ಬಲವಾಗಿರುವುದರಿಂದ ಪಕ್ಷ ನಿಷ್ಠರು ಹಾಗೂ ಮೂಲ ಬಿಜೆಪಿಯ ಮುಖಕ್ಕೆ ಮನ್ನಣೆ ಹಾಕಬೇಕಾಗಬಹುದು.
ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿದ್ದ ಹಲವು ಪ್ರಮುಖರು ಸೋಲನುಭವಿಸಿದ್ದಾರೆ. ಹೀಗಾಗಿ ಪಕ್ಷ ನಿಷ್ಠರು ಹಾಗೂ ಮೂಲ ಬಿಜೆಪಿಯ ಮುಖವನ್ನು ನೆಚ್ಚಿಕೊಳ್ಳುವ ಸಂದರ್ಭ ಬಂದಾಗ ಬಸನಗೌಡ ಪಾಟೀಲ್ ಯತ್ನಾಳ್ ಅಥವಾ ಸುನಿಲ್ ಕುಮಾರ್ ವಿಪಕ್ಷ ನಾಯಕನ ಸ್ಥಾನಕ್ಕೆ ಬಿಜೆಪಿಯ ಆಯ್ಕೆಯಾಗಬೇಕಾಗುತ್ತದೆ. ಇದನ್ನು ಹೊರತುಪಡಿಸಿ ಬಿಜೆಪಿಯ ಮುಂದೆ ಸದ್ಯಕ್ಕೆ ಬೇರೆ ಆಯ್ಕೆಗಳು ಕಡಿಮೆ.