Advertisement

ಹೂ ನೀಡಿ ಹೆಲ್ಮೆಟ್‌ ಧರಿಸುವಂತೆ ಜಾಗೃತಿ ಮೂಡಿಸಿದ ಪೊಲೀಸರು

01:51 PM Feb 24, 2017 | |

ಪುತ್ತೂರು: ಹೆಲ್ಮೆಟ್‌ ಧಾರಣೆ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಚಾಲಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸರು ಠಾಣಾ ವ್ಯಾಪ್ತಿಯ 17 ಗ್ರಾಮಗಳಿಗೆ ತೆರಳಿ ಹೆಲ್ಮೆಟ್‌ ಧಾರಣೆ ಮಾಡದ ಸವಾರರಿಗೆ ಗುಲಾಬಿ ಹೂ ನೀಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಹೆಲ್ಮೆಟ್‌ ಕುರಿತು ಜಾಗೃತಿ ಮೂಡಿಸಿದ್ದಾರೆ.

Advertisement

ಸಂಪ್ಯ ಠಾಣಾ ಬಳಿ ಈ ಕಾರ್ಯಕ್ರಮಕ್ಕೆ ಸಂಪ್ಯ ಠಾಣಾ ಎಸ್‌.ಐ. ಅಬ್ದುಲ್‌ ಖಾದರ್‌ ಚಾಲನೆ ನೀಡಿದರು. ಹೆಲ್ಮೆಟ್‌ ಧ‌ರಿಸದ ದ್ವಿಚಕ್ರ ವಾಹನ ಚಾಲಕರನ್ನು ನಿಲ್ಲಿಸಿ ಅವರ ಕೈಗೆ ಗುಲಾಬಿ ಹೂ ಕೊಟ್ಟು ಹೆಲ್ಮೆಟ್‌ ಧರಿಸುವಂತೆ ಪ್ರೇರಣೆ ನೀಡಿದರು. ಸುಪ್ರಿಂ ಕೋರ್ಟ್‌ ಕಡ್ಡಾಯ ಕಾನೂನು ಜಾರಿ ಮಾಡಿರುವುದು ಪ್ರತಿಯೊಬ್ಬ ಸವಾರನ ರಕ್ಷಣೆಗಾಗಿ, ಅಪಘಾತ ಸಂದರ್ಭದಲ್ಲಿ ಹೆಲ್ಮೆಟ್‌ ನಿಮ್ಮನ್ನು ಕಾಪಾಡುತ್ತದೆ. ದೇಶದ ಕಾನೂನನ್ನು ಪಾಲನೆ ಮಾಡುವುದು ಮತ್ತು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಕಾನೂನು ಪಾಲನೆ ಮಾಡದೇ ಇದ್ದಲ್ಲಿ ದಂಡ ಹಾಕಬಹುದಾಗಿದ್ದು ಒಂದು ವಾರ ಕಾಲ ಯಾವುದೇ ದಂಡವನ್ನು ವಿಧಿಸುವುದಿಲ್ಲ. ಕೇವಲ ಎಚ್ಚರಿಕೆಯನ್ನು ಮಾತ್ರ ನೀಡುವುದಾಗಿ ಖಾದರ್‌ ಹೇಳಿದರು. 

ಗುಲಾಬಿ ಹೂ ಸ್ವೀಕರಿಸಿದ ಸವಾರರು ಮುಂದಿನ ದಿನಗಳಲ್ಲಿ ತಪ್ಪದೆ ಹೆಲ್ಮೆಟ್‌ ಹಾಕಿಯೇ ವಾಹನ ಚಲಾಯಿಸುವುದಾಗಿ ಪ್ರಮಾಣ ಮಾಡಿದರು.ಅರ್ಧ ಗಂಟೆ ಕಾಲ ಮಾಣಿ- ಮೈಸೂರು ರಾ. ಹೆದ್ದಾರಿಯ ಸಂಪ್ಯದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು. ಒಂದು ವಾರಗಳ ಈ ಜಾಗೃತಿ ಕಾರ್ಯಕ್ರಮ ನಡೆಯಲಿದ್ದು ಒಳಮೊಗ್ರು, ಕೆದಂಬಾಡಿ, ಬೆಟ್ಟಂಪಾಡಿ, ಕೆಯ್ಯೂರು, ಸರ್ವೆ, ಮುಂಡೂರು, ನೆಟ್ಟಣಿಗೆ ಮುಟ್ನೂರು, ಪಡುವನ್ನೂರು, ಬಡಗನ್ನೂರು, ಅರಿಯಡ್ಕ, ಪಾಣಾಜೆ, ಆರ್ಯಾಪು, ಕುರಿಯ, ಮಾಟ್ನೂರು ಸೇರಿದಂತೆ ಒಟ್ಟು 17 ಗ್ರಾಮ ವ್ಯಾಪ್ತಿಯಲ್ಲಿ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಲ್ಮೆಟ್‌ ಧಾರಣೆ ರಹಿತ ಪ್ರಯಾಣ ಮಾಡುವವರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಸಿದ್ದೇವೆ. ಕಾನೂನು ಪಾಲನೆ ಮಾಡುವಂತೆಯೂ ವಿನಂತಿಸಿದ್ದೇವೆ. ವಾರ‌ ಕಾಲ 17 ಗ್ರಾಮ ವ್ಯಾಪ್ತಿಯಲ್ಲಿ ಜಾಗೃತಿ ನಡೆಯಲಿದೆ. ಬಳಿಕ ಹೆಲ್ಮೆಟ್‌ ದರಿಸದೇ ಇದ್ದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್‌ ಇನ್ಸ್‌ಪೆಕ್ಟರ್‌ ಅಬ್ದುಲ್‌ ಖಾದರ್‌  ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next