ಜಿನೀವಾ: ಕೋವಿಡ್ 19 ವೈರಸ್ ಹರಡುವುದನ್ನು ತಡೆಯಲು ಜಾರಿಗೊಳಿಸಲಾಗಿದ್ದ ಲಾಕ್ ಡೌನ್ ಅನ್ನು ಪ್ರಪಂಚದಾದ್ಯಂತದ ಹಲವು ರಾಷ್ಟ್ರಗಳು ನಿಧಾನವಾಗಿ ಸಡಿಲಿಸುತ್ತಿದ್ದು , ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ತೀವ್ರ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದೆ.
ಲಾಕ್‌ಡೌನ್‌ಗಳಿಗೆ ಸಡಲಿಸಿದ ಕೂಡಲೇ ವೈರಸ್ ಹಠಾತ್ ಹೆಚ್ಚಳವಾಗುವ ಅಪಾಯವಿದೆ. ಈ ಕಾರಣದಿಂದ ಲಾಕ್ ಡೌನ್ ಸಡಿಲಿಸುವ ಮುನ್ನ ಅಗತ್ಯ ಮುನ್ನೆಚ್ಚರಿಕೆ ವಹಿಸಿ. ಈ ವೈರಸ್ ಪರೀಕ್ಷಿಸಲು ಅವಶ್ಯಕವಾಗಿ ಸುಧಾರಿತ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂದು WHO ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ತಿಳಿಸಿದ್ದಾರೆ.
ಹಲವು ದೇಶಗಳು ಲಾಕ್ ಡೌನ್ ಅನ್ನು ಅತ್ಯಂತ ಎಚ್ಚರಿಕೆಯಿಂದ ಮತ್ತು ಹಂತ ಹಂತವಾಗಿ ಸಡಿಲಗೊಳಿಸಬೇಕಾಗುತ್ತದೆ. ಇಲ್ಲದಿದ್ದರೆ ಮತ್ತೊಮ್ಮೆ ಲಾಕ್‌ಡೌನ್ ಜಾರಿಗೆ ತರುವ ಸಂದರ್ಭವೂ ಒದಗಿಬರುವುದು. ಸಾಂಕ್ರಾಮಿಕ ರೋಗವು ಕಡಿಮೆಯಾದ ನಂತರ WHO ಕೈಗೊಂಡ ಕ್ರಮಗಳ ಮೌಲ್ಯಮಾಪನವನ್ನು ನಡೆಸುತ್ತೇನೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
WHOನ ಸಾಂಕ್ರಾಮಿಕ ರೋಗಶಾಸ್ತ್ರಜ್ಞರಾದ ಮಾರಿಯಾ ವ್ಯಾನ್ ಕೆರ್ಖೋವ್ ಕೂಡ ಈ ಮಾತನ್ನು ಬೆಂಬಲಿಸಿ “ಲಾಕ್‌ಡೌನ್ ಕ್ರಮಗಳನ್ನು ಶೀಘ್ರವಾಗಿ ತೆಗೆದುಹಾಕಿದರೆ, ವೈರಸ್ ಮತ್ತೆ ಹೊರಹೊಮ್ಮಬಹುದು” ಎಂದು ತಿಳಿಸಿದರು.
ಈಗಾಗಲೇ ಜರ್ಮನಿ, ಸ್ಪೇನ್ ಮತ್ತು ಇಟಲಿಯಂತಹ ದೇಶಗಳು ಕೋವಿಡ್ 19 ಲಾಕ್‌ಡೌನ್ ಅನ್ನು ಸಡಿಲಿಸಲು ಪ್ರಾರಂಭಿಸಿವೆ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ದೇಶವನ್ನು ಮತ್ತೆ ತೆರೆಯುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.