Advertisement

ಯಾರಿಗೆ ಬೇಕು ಈ ಜಿಂಕೆ?

12:30 PM Apr 05, 2018 | |

ಅದೊಂದು ದಟ್ಟವಾದ ಕಾಡು. ಆ ಕಾಡಿನಲ್ಲಿ ಜಿಂಕೆಯೊಂದು ಹುಲ್ಲು ಮೇಯುತ್ತಿತ್ತು. ಹತ್ತಿರದಲ್ಲೇ ಸಿಂಹ ಮತ್ತು ಚಿರತೆ ಎರಡೂ ಜಿಂಕೆಗಾಗಿ ಹೊಂಚು ಹಾಕುತ್ತಿದ್ದವು. ತಾವಿಬ್ಬರೂ ಒಂದೇ ಜಿಂಕೆಗೆ ಹೊಂಚು ಹಾಕುತ್ತಿರುವ ವಿಷಯ ಅವೆರಡಕ್ಕೂ ಗೊತ್ತಿರಲಿಲ್ಲ. ಅದೇ ಸಮಯಕ್ಕೆ ಸಪ್ಪಳವಾದಂತಾಗಿ ಜಿಂಕೆ ತಲೆಯೆತ್ತಿ ಸುತ್ತಲೂ ನೋಡಿತು. ಮೊದಲಿಗೆ ಏನೂ ಕಾಣಲಿಲ್ಲ. ಅದಕ್ಕೇ ಹುಲ್ಲು ಮೇಯುವುದನ್ನು ಮುಂದುವರಿಸಿತು. ಅಷ್ಟರಲ್ಲಿ ಸಿಂಹ ಮತ್ತು ಚಿರತೆ ಒಂದನ್ನೊಂದು ನೋಡಿದವು. ಇಬ್ಬರೂ ಆ ಜಿಂಕೆಗೆ ಹೊಂಚು ಹಾಕಿರುವುದು ಗೊತ್ತಾಗಿ ಹೋಯಿತು. ಮೊದಲು ಜಿಂಕೆಯನ್ನು ತಾವೇ ಬೇಟೆಯಾಡಬೇಕೆಂದು ಮುಂದೆ ಬರತೊಡಗಿದವು. ಜಿಂಕೆ ಅವೆರಡನ್ನೂ ನೋಡಿ ಪ್ರಾಣ ಭಯದಿಂದ ಓಟ ಕಿತ್ತಿತು. ಓಡಿ ಓಡಿ ಸುಸ್ತಾದ ಜಿಂಕೆ ಆಯಾಸಗೊಂಡು ಪ್ರಜ್ಞೆ ತಪ್ಪಿ ನೆಲಕ್ಕುರುಳಿತು. ಪ್ರಜ್ಞೆ ತಪ್ಪಿ ಬಿದ್ದ ಜಿಂಕೆಯನ್ನು ಕಂಡು ಸಿಂಹ ಮತ್ತು ಚಿರತೆಗೆ ಖುಷಿಯಾಯಿತು. 

Advertisement

ಸಿಂಹವು “ಇದು ನನ್ನ ಆಹಾರ’ ಎಂದು ಹೇಳಿತು. ಚಿರತೆ ಪ್ರತಿಕ್ರಿಯಿಸುತ್ತ “ಮೊದಲು ಜಿಂಕೆಯನ್ನು ನಾನು ನೋಡಿದ್ದು, ಹಾಗಾಗಿ ಇದು ನನಗೆ ಸೇರಬೇಕು’ ಎಂದು ಹೇಳಿತು. ಜಿಂಕೆಗಾಗಿ ಎರಡೂ ಪ್ರಾಣಿಗಳು ಜಗಳಕ್ಕಿಳಿದವು. ಕಾಡಿನಲ್ಲಿ ಇವುಗಳ ಘರ್ಜನೆ ಪ್ರತಿಧ್ವನಿಸಿತು. ಇತರೆ ಪ್ರಾಣಿಗಲೆಲ್ಲಾ ಸುತ್ತ ನೆರೆದರು. ಸಿಂಹ ಮತ್ತು ಚಿರತೆ ಎರಡಕ್ಕೂ ಜಿಂಕೆಯನ್ನು ಪಡೆಯುವುದು ಪ್ರತಿಷ್ಠೆಯ ವಿಷಯವಾಯಿತು. ಜಗಳ ಆಡುವುದರಲ್ಲಿ ಅವೆರಡೂ ಮಗ್ನರಾಗಿದ್ದ ಸಮಯದಲ್ಲಿ ಜಿಂಕೆಗೆ ಎಚ್ಚರವಾಗತೊಡಗಿತು. ಸರಿಯಾದ ಸಮಯ ನೋಡಿ ಅದು ಅಲ್ಲಿಂದ ತಪ್ಪಿಸಿಕೊಂಡು ಕಾಡಿನಲ್ಲಿ ಮರೆಯಾಯಿತು.

ಸುತ್ತಲೂ ನೆರೆದಿದ್ದ ಪ್ರಾಣಿಗಳು ಈ ತಮಾಷೆಯನ್ನು ನೋಡಿ ಕೇಕೆ ಹಾಕಿದವು. ಚಿರತೆ ಮತ್ತು ಸಿಂಹಕ್ಕೆ ಅವಮಾನವಾದಂತಾಯಿತು. ಅವೆರಡೂ ಅಲ್ಲಿಂದ ಸಪ್ಪೆ ಮುಖದೊಂದಿಗೆ ಹೊರಟವು. 

– ಸಣ್ಣಮಾರಪ್ಪ, ಚಂಗಾವರ

Advertisement

Udayavani is now on Telegram. Click here to join our channel and stay updated with the latest news.

Next