ರಾಮಪುರ ಎಂಬುದೊಂದು ಹಳ್ಳಿ. ಅಲ್ಲಿ ರಂಗಪ್ಪ ಮತ್ತು ತಿಮ್ಮಣ್ಣ ಎಂಬ ಇಬ್ಬರು ರೈತರಿದ್ದರು. ಅಕ್ಕಪಕ್ಕದಲ್ಲಿಯೇ ಅವರ ಜಮೀನು ಇದ್ದಿದ್ದರಿಂದ ಇಬ್ಬರೂ ಗೆಳೆಯರಾಗಿದ್ದರು. ರಂಗಪ್ಪ ಹೊಲದಲ್ಲಿ ತೆಂಗಿನ ಮರಗಳನ್ನು ಬೆಳೆಸಿದ್ದ. ಅವನ ಬಳಿ ಕೊಳವೆ ಬಾವಿ ಇತ್ತು. ಆದರೆ, ತಿಮ್ಮಣ್ಣನ ಜಮೀನಿನಲ್ಲಿ ನೀರಿನ ಅಭಾವವಿತ್ತು. ಹೀಗಾಗಿ ರಾಗಿ, ಜೋಳ, ನವಣೆಯಂಥ ಬೆಳೆಗಳನ್ನು ಮಾತ್ರ ಬೆಳೆಯುತ್ತಿದ್ದನು.
ಒಂದು ದಿನ ತಿಮ್ಮಣ್ಣ ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಬಾಯರಿಕೆಯಾಯಿತು. ಬಿಂದಿಗೆಯಲ್ಲಿ ತಂದಿಟ್ಟಿದ್ದ ನೀರು ಖಾಲಿಯಾಗಿತ್ತು. ಸುತ್ತ ಯಾರೂ ಇರಲಿಲ್ಲ. ಮನೆಗೆ ಹೋಗಿ ಬರಲು ತಡವಾಗುತ್ತದೆ. ಏನು ಮಾಡುವುದೆಂದು ಯೋಚಿಸಿದಾಗ ಪಕ್ಕದಲ್ಲೇ ಇದ್ದ ರಂಗಣ್ಣನ ತೆಂಗಿನ ತೋಟ ನೆನಪಾಗಿತ್ತು. ಅಲ್ಲಿಗೆ ಹೋಗಿ ಮರವೇರಿ ಎರಡು ಎಳನೀರನ್ನು ಕಿತ್ತು ಬಾಯಾರಿಕೆ ನೀಗಿಸಿಕೊಂಡ. ಅದನ್ನು ರಂಗಪ್ಪ ನೋಡಿದನು. ಹಿಂದಿನ ವಾರವಷ್ಟೇ ಅವನ ತೆಂಗಿನ ಕಾಯಿಗಳನ್ನು ಯಾರೋ ಕದ್ದೊಯ್ದಿದ್ದರು. ಇದರಿಂದ ರಂಗಣ್ಣ ಚಿಂತಾಕ್ರಾಂತನಾಗಿದ್ದ. ಈಗ ತಿಮ್ಮಣ್ಣ ಎಳನೀರನ್ನು ಕುಡಿಯುವುದು ನೋಡಿ ಅವನೇ ತೆಂಗಿನಕಾಯಿಗಳನ್ನು ಕಿತ್ತಿದ್ದು ಎಂದು ತಿಳಿದ.
ಊರಿಗೆ ಬಂದು ತಿಮ್ಮಣ್ಣನ ವಿರುದ್ಧ ದೂರು ನೀಡಿದ. ನ್ಯಾಯ ತೀರ್ಮಾನ ಮಾಡಲು ಪಂಚಾಯಿತಿ ಕರೆಯಲಾಯಿತು. ಅಲ್ಲಿ ಹಿರಿಯರೆಲ್ಲರೂ ಎಳನೀರನ್ನು ಕುಡಿದಿದ್ದು ನಿಜವೇ ಎಂದು ಕೇಳಿದಾಗ ತಿಮ್ಮಣ್ಣ ನಿಜವೆಂದು ಒಪ್ಪಿಕೊಂಡ. ಅವನಿಗೆ 5,000 ರೂ. ದಂಡ ವಿಧಿಸಲಾಯಿತು. ತಿಮ್ಮಣ್ಣ, ರಂಗಪ್ಪನ ಬಳಿ ಕ್ಷಮೆಯನ್ನು ಕೇಳಿದ. ಅದರ ನಂತರ ರಂಗಪ್ಪ ತಿಮ್ಮಣ್ಣನನ್ನು ಮಾತಾಡಿಸುತ್ತಿರಲಿಲ್ಲ.
ಅದೊಂದು ದಿನ ರಂಗಪ್ಪ ತನ್ನ ಜಮೀನಿನ ಬಳಿ ನಡೆದುಹೋಗುತ್ತಿದ್ದಾಗ ತನ್ನ ಜಮೀನಿನಲ್ಲಿ ತೆಂಗಿನಕಾಯಿಗಳು ಬಿದ್ದಿರುವುದನ್ನು ಕಂಡ. ಏನೆಂದು ನೋಡಿದಾಗ ಮರದ ಮೇಲೆ ಮಂಗಗಳು ಇರುವುದನ್ನು ಕಂಡನು. ಅವನಿಗೆ ಇಷ್ಟು ದಿನ ತನ್ನ ತೆಂಗಿನಕಾಯಿಗಳು ಕಾಣೆಯಾಗಲು ಇವುಗಳೇ ಕಾರಣ ಎಂದು ತಿಳಿದುಹೋಗಿತ್ತು. ಕೂಡಲೆ ಅವನು ತಿಮ್ಮಣ್ಣನ ಬಳಿ ತೆರಳಿ ಕ್ಷಮೆಯಾಚಿಸಿದ. ಏಕೆ ಇಷ್ಟು ದಿನ ಅದನ್ನು ತನ್ನಲ್ಲಿ ಹೇಳಲಿಲ್ಲವೆಂದು ಕೇಳಿದಾಗ ತಿಮ್ಮಣ್ಣ “ನಾನು ಹೇಳಿದರೂ ನೀನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ’ ಎಂದನು. ರಂಗಪ್ಪನಿಗೆ ಪಶ್ಚಾತ್ತಾಪವಾಗಿ ತಿಮ್ಮಣ್ಣನನ್ನು ಆಲಂಗಿಸಿದನು. ಅಲ್ಲದೆ ಮತ್ತೆ ಪಂಚಾಯಿತಿ ಸೇರಿಸಿ ಅವನಿಂದ ಪಡೆದಿದ್ದ 5,000 ರೂ. ಯನ್ನು ಮರಳಿಸಿದನು.
– ಸಣ್ಣ ಮಾರಪ್ಪ