ಮಂಡ್ಯ: ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ದೂರವಾಣಿ ಕದ್ದಾಲಿಸಿದ್ದು ಜೆಡಿಎಸ್ ಸರಕಾರ ಅಲ್ಲವೇ? ಅಂದು ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಸರಕಾರದಲ್ಲೇ ದೂರವಾಣಿ ಕದ್ದಾಲಿಸಲಾಗಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಆರೋಪಿಸಿದರು.
ನಾಗಮಂಗಲದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಒಂದು ಧರ್ಮದ ಪೀಠಕ್ಕೆ ದೂರವಾಣಿ ಕದ್ದಾಲಿಕೆಗಿಂತ ದೊಡ್ಡ ಅಗೌರವ ಬೇಕಾ ಎಂದು ಪ್ರಶ್ನಿಸಿದರು.
ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗೆ ಪ್ರತಿಯಾಗಿ ಎರಡನೇ ಮಠ ಹುಟ್ಟು ಹಾಕಿದ್ದು ಯಾರು ಎಂಬುದು ಗೊತ್ತಿದೆ. ನಾನು ಅಂದು ಜೆಡಿಎಸ್‌ನಲ್ಲಿಯೇ ಇದ್ದೆ. ಅಂದು ಡಿ.ಕೆ.ಶಿವಕುಮಾರ್, ಕಾಂಗ್ರೆಸ್‌ನ ಒಕ್ಕಲಿಗರು ನಮ್ಮ ಮೇಲೆ ಗಲಾಟೆ ಮಾಡಿದರು ಎಂದು ತಿಳಿಸಿದರು.
ಜ್ವರ ಬಂದಾಗ ವೈದ್ಯರ ಬಳಿ ಹೋಗಬೇಕು. ಅದರಂತೆ ಈಗ ಚುನಾವಣೆ ಬಂದಿದೆ. ಅದಕ್ಕೆ ಎಲ್ಲರ ಬಳಿ ಹೋಗುತ್ತಿದ್ದಾರೆ. ಆದಿಚುಂಚನಗಿರಿ ಶ್ರೀಗಳನ್ನು ನಾವೂ ಭೇಟಿ ಮಾಡಿದ್ದೇವೆ. ನಾವೇ ಮೊದಲು ಅವರನ್ನು ಭೇಟಿ ಮಾಡಿದ್ದೆವು. ಸ್ಟಾರ್ ಚಂದ್ರು ಇಲ್ಲೇ ಹುಟ್ಟಿ ಬೆಳೆದವರು. ಚುನಾವಣೆ ಬಂದಾಗ ಎಲ್ಲ ಮಠಗಳಿಗೆ ಎಲ್ಲರೂ ಹೋಗಿ ಆಶೀರ್ವಾದ ಪಡೆದುಯುವುದು ಸಾಮಾನ್ಯ ಎಂದರು.
ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದ್ದಾರೆ. ಆದರೆ 2004ರಲ್ಲಿ ಇದೇ ಎಸ್.ಎಂ.ಕೃಷ್ಣ ಅವರಿಗೆ ಬಹುಮತ ಸಿಗದಿದ್ದಾಗ ಜೆಡಿಎಸ್‌ನವರು ಏನು ಮಾಡಿದರು. ಆಗ ನಾನೂ ಅಲ್ಲೇ ಇದ್ದೆ. ಇದೇ ಜಿಲ್ಲೆಯ ಒಬ್ಬ ಒಕ್ಕಲಿಗನನ್ನು ಮತ್ತೆ ಸಿಎಂ ಮಾಡುವ ಅವಕಾಶ ಜೆಡಿಎಸ್‌ಗೆ ಇತ್ತು. ಎರಡನೇ ಅವಕಾಶ ಖರ್ಗೆಗೆ ಕೇಳಲಾಗಿತ್ತು. ಆದರೆ ಎಸ್.ಎಂ.ಕೃಷ್ಣ ಅವರನ್ನು ತಪ್ಪಿಸಿ, ಮೂರನೇ ಬಾರಿ ಅವರು ಹೇಳಿದಂತೆ ಕೇಳಬೇಕು ಎಂಬ ಉದ್ದೇಶದಲ್ಲಿ ಧರಂ ಸಿಂಗ್ ಅವರನ್ನು ಸಿಎಂ ಮಾಡಲಾಯಿತು. ಇದಕ್ಕೆ ಏನು ಹೇಳಬೇಕು. ಈಗ ಅವರ ಮನೆಗೆ ಹೋಗುತ್ತೀರಾ, ಅವರು ಏನು ಮಾಡಬೇಕು ಎಂದು ಪ್ರಶ್ನಿಸಿದರು.