Advertisement

ಬೇಕಾಬಿಟ್ಟಿ ವೆಚ್ಚ ಮಾಡಿದ್ದು ಯಾರು: ನಿರ್ಮಲಾ ಪ್ರಶ್ನೆ

11:22 PM Feb 05, 2024 | Team Udayavani |

ಹೊಸದಿಲ್ಲಿ: ಕರ್ನಾಟಕ ಸಹಿತ ದಕ್ಷಿಣ ಭಾರತದ ರಾಜ್ಯಗಳಿಗೆ ನಿಧಿ (ಜಿಎಸ್‌ಟಿ) ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪವು ಸೋಮವಾರ ಲೋಕಸಭೆ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನಡುವೆ ಭಾರೀ ವಾಗ್ವಾದಕ್ಕೆ ಕಾರಣವಾಗಿದೆ.

Advertisement

ಬುಧವಾರ ಕರ್ನಾಟಕದ ಶಾಸಕರು, ಸಚಿವರು, ಎಂಎಲ್‌ಸಿಗಳು ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿರುವಂತೆಯೇ ಈ ಬೆಳವಣಿಗೆ ನಡೆದಿದೆ. ಒಂದು ಹಂತದಲ್ಲಿ ಕಾಂಗ್ರೆಸ್‌ ವಿರುದ್ಧ ಕೆಂಡಾಮಂಡಲರಾದ ಸಚಿವೆ ನಿರ್ಮಲಾ, “ಖರ್ಚು ಮಾಡಬಾರದ ಕಡೆ ಯೆಲ್ಲ ಖರ್ಚು ಮಾಡಲು ಹೋಗಿ ಹೀಗೆ ಆಗಿದೆ ಯಲ್ಲವೇ? ಬಜೆಟ್‌ ಮೀರಿ ಬೇಕಾಬಿಟ್ಟಿ ವೆಚ್ಚ ಮಾಡಿದ್ದು ಯಾರು? ಮಾಡುವುದೆಲ್ಲ ಮಾಡಿ ಕೇಂದ್ರ ಸರಕಾರದ ವಿರುದ್ಧ ಏಕೆ ಗೂಬೆ ಕೂರಿಸುತ್ತೀರಿ’ ಎಂದು ಪ್ರಶ್ನಿಸುವ ಮೂಲಕ ರಾಜ್ಯ ಕಾಂಗ್ರೆಸ್‌ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.

ಸೋಮವಾರ ಲೋಕಸಭೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ವ್ಯವಸ್ಥೆ ಕುರಿತು ಚರ್ಚೆಯ ವೇಳೆ ಈ ವಾಗ್ವಾದ ನಡೆದಿದೆ. “ವಿಪಕ್ಷಗಳ ಆಡಳಿತವಿರುವ ರಾಜ್ಯಗಳ ಬಗ್ಗೆ ಸಚಿವೆ ನಿರ್ಮಲಾ ಹಾಗೂ ಆಡಳಿತಾರೂಢ ಬಿಜೆಪಿಯು ನಿರಂಕುಶ, ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ. ಅದಕ್ಕೆ ಅತ್ಯುತ್ತಮ ಉದಾ ಹರಣೆ ಕರ್ನಾಟಕ. ನಿಮ್ಮ ಆಡಳಿತದ ಈ ನಡೆ ವಿರೋಧಿಸಿ ಇಡೀ ಕರ್ನಾಟಕ ಸಚಿವ ಸಂಪುಟವೇ ಪ್ರತಿಭಟನೆ ನಡೆಸುತ್ತಿದೆ. ಕೆಲವು ತಿಂಗಳ ಹಿಂದೆ ಎಲ್ಲವೂ ಸರಿಯಾಗಿತ್ತು. ಆದರೆ ಕರ್ನಾಟಕದಲ್ಲಿ ಹೊಸ ಸರಕಾರ ಬಂದ ಬಳಿಕ ಸಮಸ್ಯೆಗಳು ಆರಂಭವಾದವು’ ಎಂದು ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಆರೋಪಿಸಿದರು.
ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವೆ ನಿರ್ಮಲಾ, “ಹಣಕಾಸು ಆಯೋಗದ ಶಿಫಾರಸಿನ ಮೇರೆಗೆ ರಾಜ್ಯಗಳಿಗೆ ಪಾಲನ್ನು ಹಂಚಲಾಗುತ್ತದೆ. ತೆರಿಗೆ ಆದಾಯದ ಹಂಚಿಕೆಯಲ್ಲಿ ನಾನು ಯಾವುದೇ ವಿವೇಚನಾಧಿಕಾರ ಹೊಂದಿಲ್ಲ.

ಇದೆಲ್ಲ ಪಟ್ಟಭದ್ರ ಹಿತಾಸಕ್ತಿಗಳು ಹಬ್ಬಿಸುತ್ತಿರುವಂಥ ರಾಜಕೀಯ ಪ್ರೇರಿತ ಆರೋಪಗಳಷ್ಟೆ’ ಎಂದರು. ಜತೆಗೆ, “ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್‌ ನನ್ನನ್ನು ಭೇಟಿಯಾದಾಗ ನಾನು ಎಲ್ಲ ವಿಚಾರಗಳನ್ನೂ ತಿಳಿಸಿದ್ದೇನೆ, ಅನುದಾನ ಹಂಚಿಕೆ ಕುರಿತು ಎಲ್ಲ ವಿವರಗಳು, ಅಂಕಿಅಂಶಗಳನ್ನು ಅವರಿಗೆ ಮನದಟ್ಟು ಮಾಡಿದ್ದೇನೆ’ ಎಂದೂ ಹೇಳಿದರು.

ಬೇಕಾಬಿಟ್ಟಿ ಖರ್ಚು ಮಾಡಿದ್ದು ನೀವು ಅಧೀರ್‌ ಅವರೇ ಅರ್ಥಮಾಡಿಕೊಳ್ಳಿ. ನನ್ನ ಇಚ್ಛೆಯ ಪ್ರಕಾರ ನಿಧಿ ಹಂಚಿಕೆ ಮಾಡುವ ಅಧಿಕಾರ ನನಗಿಲ್ಲ. ನನಗೆ ಈ ರಾಜ್ಯ ಇಷ್ಟ ಅಥವಾ ಆ ರಾಜ್ಯ ಇಷ್ಟವಿಲ್ಲ ಎಂಬ ಕಾರಣಕ್ಕೆ ನಿಧಿ ಹಂಚಿಕೆಯನ್ನು ಬದಲಾಯಿಸಲು ಬರುವುದಿಲ್ಲ. ಹಣಕಾಸು ಆಯೋಗದ ಶಿಫಾರಸಿನಂತೆಯೇ ಹಂಚಿಕೆ ಮಾಡಿದ್ದೇವೆ. 6 ತಿಂಗಳ ಹಿಂದೆ ಎಲ್ಲವೂ ಸರಿಯಾಗಿತ್ತು ಎಂದು ನೀವು ಹೇಳುತ್ತಿದ್ದೀರಿ. ಹಾಗಾದರೆ ದಿಢೀರನೆ ಈಗೇನಾಯಿತು? ಖರ್ಚು ಮಾಡಬಾರದ ಕಡೆಯೆಲ್ಲ ಖರ್ಚು ಮಾಡಲು ಹೋಗಿ ಹೀಗೆ ಆಯಿತೇ ಎನ್ನುವ ಮೂಲಕ ಕಾಂಗ್ರೆಸ್‌ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು. ಜತೆಗೆ, “ಅದರ ಬಗ್ಗೆ ನಾನು ಪ್ರಶ್ನೆ ಮಾಡುವುದಿಲ್ಲ. ಆದರೆ ಖರ್ಚು ಮಾಡಿದ್ದು ನೀವು. ಅದಕ್ಕೆಲ್ಲ ಕೇಂದ್ರ ಸರಕಾರದ ಮೇಲೆ ಆಪಾದನೆ ಮಾಡಬೇಡಿ’ ಎಂದು ನಿರ್ಮಲಾ ಆಕ್ರೋಶಭರಿತರಾಗಿ ನುಡಿದರು.

Advertisement

ಒಂದು ಹಂತದಲ್ಲಿ ಆಕ್ರೋಶಭರಿತರಾಗಿ ಕೂಗಾಡಿದ ನಿರ್ಮಲಾ, “ಹಣಕಾಸು ಆಯೋಗ ಏನು ಹೇಳುತ್ತದೋ ಅದನ್ನೇ ನಾನು ಮಾಡುವುದು. ನೀವು ಏನೇನೋ ಕಲ್ಪಿಸಿಕೊಳ್ಳುವುದು ಬೇಡ. ಇನ್ನೂ ಅನುಮಾನವಿದ್ದರೆ, ದಯವಿಟ್ಟು ನೀವೇ ಹಣಕಾಸು ಆಯೋಗದೊಂದಿಗೆ ಮಾತಾಡಿಕೊಳ್ಳಿ’ ಎಂದು ಹೇಳಿ, ಕೈಮುಗಿದು ತಮ್ಮ ಆಸನದಲ್ಲಿ ಕುಳಿತರು.

ಸಚಿವೆ ನಿರ್ಮಲಾ ಹೇಳಿದ್ದು
-ಹಣಕಾಸು ಆಯೋಗದ ಶಿಫಾರಸಿನ ಅನ್ವಯವೇ ನಿಧಿ ಹಂಚಿಕೆ
-ನನಗೆ ಇಂಥ ರಾಜ್ಯವನ್ನು ಕಂಡರೆ ಆಗು ವುದಿಲ್ಲ, ಹೀಗಾಗಿ ಹಣ ತಡೆಹಿಡಿಯಿರಿ ಎಂದು ಹೇಳಲು ಅಸಾಧ್ಯ
-ಇವೆಲ್ಲವೂ ಪಟ್ಟಭದ್ರ ಹಿತಾಸಕ್ತಿಗಳ ರಾಜಕೀಯ ಪ್ರೇರಿತ ಆರೋಪ
-6 ತಿಂಗಳ ಹಿಂದೆ ಎಲ್ಲವೂ ಸರಿಯಿತ್ತು ಎಂದರೆ ಈಗ ತಪ್ಪಾದದ್ದು ಎಲ್ಲಿ?
-ಮಾಡಬಾರದ್ದಕ್ಕೆ ಖರ್ಚು ಮಾಡಿದ್ದರಿಂದ ಹೀಗಾಯಿತೇ?

Advertisement

Udayavani is now on Telegram. Click here to join our channel and stay updated with the latest news.

Next