ಬೆಂಗಳೂರು: ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಈಗ ಮುಕ್ತ ಮನಸು ಹೊಂದಿದ್ದಾರೆ. ಆದರೆ ಈ ಪ್ರಕ್ರಿಯೆಗೆ ಈಗ ಪಂಚಮಸಾಲಿ ಸಮುದಾಯದಿಂದ ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ? ಎಂಬ ದೊಡ್ಡ ಪ್ರಶ್ನೆ ಎದುರಾಗಿದೆ.
ಇದನ್ನೂ ಓದಿ:ಲತಾ ಮಂಗೇಶ್ಕರ್ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಶಾರುಖ್: ‘ಜಾತ್ಯಾತೀತ ಭಾರತ’ ಎಂದ ನೆಟ್ಟಿಗರು
ವೋಟ್ ಬ್ಯಾಂಕ್ ರಾಜಕಾರಣದ ದೃಷ್ಟಿಯಿಂದ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಪಂಚಮಸಾಲಿ ಲಿಂಗಾಯಿತ ಸಮುದಾಯ ಮಹತ್ವದ್ದಾಗಿದೆ. ಎರಡು ಪಕ್ಷ ಸೇರಿ 20ಕ್ಕೂ ಹೆಚ್ಚು ಪಂಚಮಸಾಲಿ ಸಮುದಾಯದ ಶಾಸಕರಿದ್ದಾರೆ. ಬಿಜೆಪಿಯಲ್ಲಿ 15 ಪಂಚಮಸಾಲಿ ಸಮುದಾಯವನ್ನು ಪ್ರತಿನಿಧಿಸುವ ಶಾಸಕರಿದ್ದಾರೆ. ಹೀಗಾಗಿ ಈ ಸಮುದಾಯಕ್ಕೆ ಪ್ರಾಧಾನ್ಯತೆ ನೀಡುವುದು ಈಗ ಅನಿವಾರ‍್ಯವಾಗಿದೆ.
ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಸೇರಿಸ ಮೂವರಿಗೆ ಈಗಾಗಲೇ ಸಂಪುಟದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಆದರೆ ಸಮುದಾಯದ ಮುಖಂಡರು ಹಾಗೂ ಸಂಪುಟದಲ್ಲಿ ಸ್ಥಾನ ಪಡೆದ ಸಚಿವರ ಮಧ್ಯೆ ಹೇಳಿಕೊಳ್ಳುವಂಥ ಹೊಂದಾಣಿಕೆ ಇಲ್ಲ. ಪಂಚಮಸಾಲಿ ಮಠಾಧೀಶರ ಪರವಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅರವಿಂದ ಬೆಲ್ಲದ್ ಸಂಪುಟದಿಂದ ಹೊರಗಿದ್ದಾರೆ.
ಬಿಜೆಪಿ ಮೂಲಗಳ ಪ್ರಕಾರ ಸಂಪುಟ ಪುನಾರಚನೆಯಾದರೆ ಸಚಿವ ನಿರಾಣಿಯನ್ನು ಕೈ ಬಿಟ್ಟಿ ಯತ್ನಾಳ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಕ್ಕೆ ಸಿಎಂ ಬೊಮ್ಮಾಯಿ ಉತ್ಸುಕರಾಗಿದ್ದಾರೆ. ಆದರೆ ಬೆಲ್ಲದ್ ಪರ ಸಂಘ ಪರಿವಾರದ ನಾಯಕರು ಒಲವು ಹೊಂದಿದ್ದಾರೆ. ಬೆಲ್ಲದ್ ಹಾಗೂ ಯತ್ನಾಳ್ ಇಬ್ಬರಿಗೂ ಸಂಪುಟದಲ್ಲಿ ಅವಕಾಶ ನೀಡಲೇಬಾರದು ಎಂದು ಮಾಜಿ ಸಿಎಂ ಯಡಿಯೂರಪ್ಪ ಪಟ್ಟು ಹಿಡಿದು ಕುಳಿತಿದ್ದಾರೆ.
ಹೀಗಾಗಿ ಪಂಚಮಸಾಲಿ ಸಮುದಾಯದ ರಾಜಕೀಯ ಗೋಜಲು ನಿವಾರಣೆ ಮಾಡುವುದು ಸಿಎಂ ಬೊಮ್ಮಾಯಿಗೆ ಸವಾಲಾಗಿ ಪರಿಣಮಿಸಿದೆ. ಯಾರಿಗೆ ಅವಕಾಶ ನೀಡಿದರೂ ಮತ್ತೊಂದು ಬಣ ಮುನಿಸಿಕೊಳ್ಳುವುದು ನಿಶ್ಚಿತ. ಈ ಸಮಸ್ಯೆ ನಿವಾರಣೆ ಮಾಡುವುದು ಬೊಮ್ಮಾಯಿ ಅವರಿಗೆ ಹಗ್ಗದ ಮೇಲಿನ ನಡಿಗೆಯಾಗಿ ಪರಿಣಮಿಸಿದೆ.