Advertisement
ಇಂತಹ ಹಲವಾರು ಪ್ರಶ್ನೆ ಮತ್ತು ಚರ್ಚೆಗಳು ಈಗ ನಡೆದಿವೆ. ಉಮೇಶ ಕತ್ತಿ ಸ್ಥಾನ ತುಂಬುವ ಕೆಲಸ ಅಂದುಕೊಂಡಷ್ಟು ಸರಳವಾಗಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಅದು ಒಂದು ರೀತಿಯಲ್ಲಿ ಜೇನುಗೂಡಿಗೆ ಕೈ ಹಾಕಿದಂತೆ. ಸಂಪುಟ ವಿಸ್ತರಣೆ ಮಾಡಬೇಕೋ ಅಥವಾ ಪುನಾರಚನೆ ಮಾಡಬೇಕೋ ಎಂಬ ಗೊಂದಲದಲ್ಲಿರುವ ಸರ್ಕಾರ ಮತ್ತು ಪಕ್ಷದ ವರಿಷ್ಠರು ಇದೇ ಕಾರಣಕ್ಕೆ ಯಾವುದನ್ನೂ ಅನವಶ್ಯಕವಾಗಿ ಮೈಮೇಲೆಳೆದುಕೊಳ್ಳಲು ತಯಾರಿಲ್ಲ.
Related Articles
Advertisement
ಸಮರ್ಥ ನಾಯಕ: ಹಿರಿಯ, ಅನುಭವಿ ರಾಜಕಾರಣಿ ಉಮೇಶ ಕತ್ತಿ ಅಗಲಿಕೆ ಅನಿರೀಕ್ಷಿತ. ಸದಾ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುತ್ತಿದ್ದ ಕತ್ತಿ ಅವರು ಕೊನೆಗೆ ಅದನ್ನು ಸಮರ್ಥನೆ ಮಾಡಿಕೊಳ್ಳುವುದರಲ್ಲಿ ಹಿಂದೆ ಬೀಳುತ್ತಿರಲಿಲ್ಲ. ಇದರ ಜತೆಗೆ ಸರ್ಕಾರ ಹಾಗೂ ಪಕ್ಷಕ್ಕೆ ಸಮಸ್ಯೆಗಳು ಉಂಟಾದಾಗ ಅವುಗಳನ್ನು ಬಹಳ ಸೂಕ್ಷ್ಮವಾಗಿ ನಿಭಾಯಿಸುವ ಸಾಮರ್ಥ್ಯ ಅವರಲ್ಲಿತ್ತು. ಈಗ ಈ ಎಲ್ಲ ಕೊರತೆಗಳು ಕಾಡುತ್ತಿವೆ.
ಇನ್ನು ಜಿಲ್ಲಾ ರಾಜಕಾರಣದಲ್ಲೂ ತಮ್ಮದೇ ಆದ ಪ್ರಭಾವ ಮತ್ತು ಶಕ್ತಿ ಹೊಂದಿದ್ದ ಉಮೇಶ ಕತ್ತಿ, ಡಿಸಿಸಿ ಬ್ಯಾಂಕ್ ರಾಜಕಾರಣದಲ್ಲಿ ಬಹಳ ಪಳಗಿದ್ದರು. ಸಾಕಷ್ಟು ಪೈಪೋಟಿ ಇದ್ದರೂ ಸರಿಯಾದ ಸಮಯದಲ್ಲಿ ಸರಿಯಾದ ವ್ಯಕ್ತಿಗಳನ್ನೇ ಹಿಡಿದು ತಮ್ಮ ಸಹೋದರ ರಮೇಶ ಕತ್ತಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಸಿಗುವಂತೆ ಮಾಡಿದ್ದರು. ಈಗ ಇವೆಲ್ಲವೂ ನೆನಪು ಮಾತ್ರ. ಆದರೆ ಅವರ ಈ ಸ್ಥಾನ ಹಾಗೂ ಸಾಮರ್ಥ್ಯ ತುಂಬಬಲ್ಲವರು ಯಾರೆಂಬ ಪ್ರಶ್ನೆ ಎದ್ದಿದೆ. ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ತಮ್ಮೆಲ್ಲ ಅನುಭವ-ಶಕ್ತಿಯನ್ನು ಪಣಕ್ಕಿಟ್ಟು ಸಚಿವರಾಗಿದ್ದ ಉಮೇಶ ಕತ್ತಿ ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಎರಡೂ ಮಹತ್ವದ ಖಾತೆಗಳನ್ನು ನಿರ್ವಹಿಸುತ್ತಿದ್ದರು.
ಉತ್ತರಾಧಿಕಾರಿ ಯಾರು?:
ಉಮೇಶ ಕತ್ತಿ ಅನಿರೀಕ್ಷಿತ ಅಗಲಿಕೆ ನಂತರ ಹುಕ್ಕೇರಿ ಕ್ಷೇತ್ರ ಅಕ್ಷರಶಃ ಅನಾಥವಾಗಿದೆ. ಮನೆಯಲ್ಲಿ ಹಿರಿಯರು ಇಲ್ಲದಂತೆ ಭಾಸವಾಗುತ್ತಿದೆ. ಇದರ ಬೆನ್ನಲ್ಲೇ ಉಮೇಶ ಕತ್ತಿ ರಾಜನಂತೆ ಆಳಿದ ಹುಕ್ಕೇರಿ ಕ್ಷೇತ್ರಕ್ಕೆ ನೂತನ ಉತ್ತರಾಧಿಕಾರಿ ಯಾರೆಂಬ ಪ್ರಶ್ನೆ ಎದುರಾಗಿದೆ. ಉತ್ತರಾಧಿಕಾರಿ ಪಟ್ಟ ಅದೇ ಕುಟುಂಬಕ್ಕೆ ಹೋಗುತ್ತದೆ ಎಂಬುದರಲ್ಲಿ ಬೇರೆ ಅಭಿಪ್ರಾಯಗಳಿಲ್ಲ. ಆದರೆ ಮುಂದಿನ ಚುನಾವಣೆಯಲ್ಲಿ ಹುಕ್ಕೇರಿ ಕ್ಷೇತ್ರದಿಂದ ಸಹೋದರ ಹಾಗೂ ಮಾಜಿ ಸಂಸದ ರಮೇಶ ಕತ್ತಿ ಸ್ಪರ್ಧೆ ಮಾಡುತ್ತಾರೋ ಅಥವಾ ಉಮೇಶ ಕತ್ತಿ ಪುತ್ರ ನಿಖಿಲ್ ಕಣಕ್ಕಿಳಿಯುತ್ತಾರೋ ಎಂಬ ಕುತೂಹಲ ಮಾತ್ರ ಇದೆ. ಇದರ ಬಗ್ಗೆ ಇನ್ನೂ ಬಹಿರಂಗ ಚರ್ಚೆಗಳು ಆರಂಭವಾಗಿಲ್ಲ.
ಉಪಚುನಾವಣೆ ಯಾರಿಗೂ ಬೇಕಿಲ್ಲ!
ಮುಂದಿನ ದಿನಗಳಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆಯುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಕತ್ತಿ ಕುಟುಂಬದಿಂದ ಯಾರು ಸ್ಪರ್ಧಿಸುತ್ತಾರೆಂಬುದು ಕುತೂಹಲಕ್ಕೆ ಕಾರಣವಾಗಲಿದೆ. ಸದ್ಯದ ಬೆಳವಣಿಗೆ ಪ್ರಕಾರ ತಕ್ಷಣವೇ ಹುಕ್ಕೇರಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುವುದು ಅನುಮಾನ. ಮುಂದಿನ ವರ್ಷ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಇರುವುದರಿಂದ ಈಗ ಉಪಚುನಾವಣೆ ಬಗ್ಗೆ ಯಾರಿಗೂ ಅಷ್ಟಾಗಿ ಆಸಕ್ತಿ ಇಲ್ಲ. ಹೀಗಾಗಿ ಉಪಚುನಾವಣೆ ಬದಲು ಸಾರ್ವತ್ರಿಕ ಚುನಾವಣೆಗೆ ಹೋಗುವುದು ಒಳ್ಳೆಯದು ಎಂಬ ಮಾತುಗಳು ಕೇಳಿ ಬಂದಿವೆ.
ಕೇಶವ ಆದಿ