Advertisement
ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಎನ್ ಸಿಪಿಯ ಅಜಿತ್ ಪವಾರ್ ಬೆಂಬಲ ಕೂಡಾ ಘೋಷಿಸಿದ್ದರು. ಹೀಗೆ ಫಡ್ನವೀಸ್ ಮುಖ್ಯಮಂತ್ರಿಯಾಗಿ, ಪವಾರ್ ಉಪಮುಖ್ಯಮಂತ್ರಿಯಾಗಿ ಕಳೆದ ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದರು.
Related Articles
Advertisement
ಜಗದಂಬಿಕಾ ಪಾಲ್ ಏಕ್ ದಿನ್ ಕಾ ಸುಲ್ತಾನ್!
1998ರ ಫೆಬ್ರುವರಿ 21ರಂದು ಉತ್ತರಪ್ರದೇಶದಲ್ಲಿ ರಾಜ್ಯಪಾಲ ರೋಮೇಶ್ ಭಂಡಾರಿ ಅವರು ಕಲ್ಯಾಣ್ ಸಿಂಗ್ ನೇತೃತ್ವದ ಸರ್ಕಾರವನ್ನು ವಜಾಗೊಳಿಸಿ, ಫೆ.22ರಂದು ಅಂದಿನ ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದ ಜಗದಂಬಿಕಾ (2014ರಲ್ಲಿ ಬಿಜೆಪಿ ಸೇರ್ಪಡೆ) ಪಾಲ್ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಿದ್ದರು. ಕಲ್ಯಾಣ ಸಿಂಗ್ ರಾಜ್ಯಪಾಲರ ಕ್ರಮದ ವಿರುದ್ಧ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದು ಕಾನೂನು ಬಾಹಿರ ಸರ್ಕಾರ ಎಂದು ಫೆ.23ರಂದು ಕೋರ್ಟ್ ತೀರ್ಪು ನೀಡಿತ್ತು. ಮತ್ತೆ ಕಲ್ಯಾಣ ಸಿಂಗ್ ಸಿಎಂ ಗದ್ದುಗೆ ಏರಿದ್ದರು. ಹೀಗೆ ಜಗದಂಬಿಕಾ ಪಾಲ್ ಅವರು ಒಂದೇ ದಿನ ಮುಖ್ಯಮಂತ್ರಿ ಹುದ್ದೆಗೆ ಏರಿ ಕೆಳಗಿಳಿದಿದ್ದರು.
2 ದಿನ, 8 ದಿನ ಸಿಎಂ ಆಗಿ ಗದ್ದುಗೆ ಇಳಿದಿದ್ದ ಬಿಎಸ್ ಯಡಿಯೂರಪ್ಪ:
2007ರಲ್ಲಿ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ಬಿಎಸ್ ಯಡಿಯೂರಪ್ಪ ಅವರು ಕೇವಲ 8 ದಿನ ಮುಖ್ಯಮಂತ್ರಿ ಹುದ್ದೆ ಏರಿ ಗದ್ದುಗೆ ಕೆಳಗಿಳಿದಿದ್ದರು.
2018ರಲ್ಲಿ ಬಿಜೆಪಿಯ ಬಿಎಸ್ ಯಡಿಯೂರಪ್ಪ ಸಿಎಂ ಆಗಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಬಹುಮತ ಸಾಬೀತುಪಡಿಸುವಂತೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೇವಲ 2ದಿನ ಸಿಎಂ ಆಗಿದ್ದ ಬಿಎಸ್ ವೈ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.
5 ದಿನಕ್ಕೆ ರಾಜೀನಾಮೆ ಕೊಟ್ಟಿದ್ರು ಚೌಟಾಲಾ:
ಇಂಡಿಯನ್ ನ್ಯಾಷನಲ್ ಲೋಕ್ ದಳದ ಮುಖ್ಯಸ್ಥ ಓಂ ಪ್ರಕಾಶ್ ಚೌಟಾಲಾ ಅವರು 1990ರಲ್ಲಿ ಕೇವಲ 5ದಿನಗಳ ಕಾಲ ಮುಖ್ಯಮಂತ್ರಿ ಗಾದಿ ಏರಿದ್ದು, ನಂತರ ರಾಜೀನಾಮೆ ನೀಡಿದ್ದರು.
ಒಂದು ವಾರ ಸಿಎಂ ಆಗಿದ್ದ ಸತೀಶ್ ಪ್ರಸಾದ್ ಸಿಂಗ್:
1968ರಲ್ಲಿ ಬಿಹಾರದಲ್ಲಿ ಸತೀಶ್ ಪ್ರಸಾದ್ ಸಿಂಗ್ ಅವರು ಅತೀ ಕಿರಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಅವರು ಅಧಿಕಾರದಲ್ಲಿ ಇದ್ದದ್ದು ಕೇವಲ 7 ದಿನ ಮಾತ್ರ. ಮಹತ್ತರ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಿಂಗ್ ತಾವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಎಸ್ ಸಿ ಮರಾಕ್ 13 ದಿನ ಸಿಎಂ:
ಮೇಘಾಲಯದ ಹಿರಿಯ ಕಾಂಗ್ರೆಸ್ ಮುಖಂಡ ಎಸ್ ಸಿ ಮರಾಕ್ ಅವರು 1998ರ ಫೆಬ್ರುವರಿ 27ರಿಂದ ಮಾರ್ಚ್ 10ರವರೆಗೆ ಸಿಎಂ ಆಗಿದ್ದು, ನಂತರ ಗದ್ದುಗೆಯಿಂದ ಕೆಳಗಿಳಿದಿದ್ದರು. ಕಾಂಗ್ರೆಸ್ ಮೈತ್ರಿಕೂಟದ ಪಕ್ಷ ರಾಜೀನಾಮೆ ಕೊಟ್ಟ ಹಿನ್ನೆಲೆಯಲ್ಲಿ ಮರಾಕ್ ರಾಜೀನಾಮೆ ನೀಡಿದ್ದು, ಯುನೈಟೆಡ್ ಪಾರ್ಲಿಮೆಂಟರಿ ಫೋರಂನ ಮುಖಂಡ ಬಿಬಿ ಲೈಗ್ದೋಹ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 1993ರಿಂದ 1998ರವರೆಗೆ ಮರಾಕ್ ಮೇಘಾಲಯದ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಗೊಳಿಸಿದ್ದರು.