Advertisement

ರಾಜ್ಯಸಭೆಗೆ ಆಡಳಿತ ಪಕ್ಷದ ನಾಯಕ ಯಾರು?

06:00 AM Jul 17, 2018 | |

ನವದೆಹಲಿ: ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿ ಪಡೆಯುತ್ತಿರುವ ಕೇಂದ್ರ ಸಚಿವ ಅರುಣ್‌ ಜೇಟ್ಲಿ ಮುಂಗಾರು ಅಧಿವೇಶನದಲ್ಲಿ ಭಾಗವಹಿಸುತ್ತಿಲ್ಲ. ಹೀಗಾಗಿ, ಜು.18ರಿಂದ ಶುರುವಾಗುವ ಅಧಿವೇಶನದಲ್ಲಿ ರಾಜ್ಯಸಭೆ ಆಡಳಿತ ಪಕ್ಷದ ನಾಯಕ ಯಾರು ಎಂಬ ಜಿಜ್ಞಾಸೆ ಶುರುವಾಗಿದೆ. ಹೀಗಾಗಿ, ಮೇಲ್ಮನೆಯಲ್ಲಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ನಡೆಸಲಿರುವ ಟೀಕಾ ಪ್ರಹಾರ ಎದುರಿಸುವ ಪ್ರಬಲ ನಾಯಕನನ್ನು ಬಿಜೆಪಿ ಶೋಧಿಸುತ್ತಿದೆ. 

Advertisement

ಜಮ್ಮು -ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಕುಸಿತ, ಕರ್ನಾಟಕ, ಮಹಾರಾಷ್ಟ್ರ ಸೇರಿ ದೇಶಾದ್ಯಂತದ ಥಳಿತ ಪ್ರಕರಣ ಸೇರಿದಂತೆ ಹಲವಾರು ವಿಚಾರ ಗಳನ್ನು ಮುಂದಿಟ್ಟು ಕೊಂಡು ಪ್ರತಿಪಕ್ಷಗಳು ವಾಗ್ಧಾಳಿ ನಡೆಸಲಿವೆ. ಜೇಟ್ಲಿ ಸ್ಥಾನಕ್ಕೆ ಕೇಂದ್ರ ಸಚಿವರಾದ ವಿಜಯ ಗೋಯಲ್‌, ಜೆ.ಪಿ.ನಡ್ಡಾ ಹೆಸರು ಕೇಳಿ ಬಂದಿದೆ. ಆದರೆ ಗುಲಾಂ ನಬಿ ಆಜಾದ್‌, ಶರದ್‌ ಯಾದವ್‌ರಂಥ ಪ್ರಮುಖ ನಾಯಕರನ್ನೆದುರಿಸಲು ಅವರು ಸಮರ್ಥರೇ ಎಂಬ ಪ್ರಶ್ನೆ ಬಿಜೆಪಿಯದ್ದು. ಹೀಗಾಗಿ, ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ದೂರ ಸಂಪರ್ಕ ಖಾತೆ ಸಚಿವ ರವಿಶಂಕರ ಪ್ರಸಾದ್‌ ಈ ಸವಾಲು ಎದುರಿಸಲು ಸಮರ್ಥರು ಎಂಬ ಅಂಬೋಣ ಪಕ್ಷದ ಹಿರಿಯ ನಾಯಕ ರೊಬ್ಬರದ್ದು ಎಂದು “ಇಂಡಿಯಾ ಟುಡೇ’ ವರದಿ ಮಾಡಿದೆ.

ಇಂದು ಸಭೆ: 18ರಿಂದ ಅಧಿವೇಶನ ಶುರುವಾಗುವ ಹಿನ್ನೆಲೆಯಲ್ಲಿ ಲೋಕಸಭೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಪ್ರಮುಖ ಪಕ್ಷಗಳ ನಾಯಕರ ಜತೆ ಮಂಗಳವಾರ ಸಭೆ ನಡೆಸಲಿದ್ದಾರೆ. ಸಂಸತ್‌ನಲ್ಲಿ ಈಗಾಗಲೇ ಮಂಡನೆಯಾಗಿರುವ ಮತ್ತು ಆಗಲಿರುವ ಮಸೂದೆಗಳ ಅಂಗೀಕಾರದ ಬಗ್ಗೆ ಪಕ್ಷಗಳ ಸಹಕಾರ ಕೋರಲಿದ್ದಾರೆ. ಪ್ರಧಾನಿ ಮೋದಿ ಈ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ಇದೇ ವೇಳೆ, ಸೋಮವಾರ ಪ್ರತಿಪಕ್ಷಗಳು ಸಭೆ ಸೇರಿ, ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಏನೇನು ಕಾರ್ಯ ತಂತ್ರಗಳನ್ನು ಹೆಣೆಯಬಹುದು ಎಂಬ ಬಗ್ಗೆ ಚರ್ಚಿಸಿವೆ.

ಬೆಂಬಲ ಕೋರಿದ ಟಿಡಿಪಿ: ಕೇಂದ್ರ ಸರ್ಕಾರದ ವಿರುದ್ಧ ಮಂಡಿಸಲಿರುವ ಅವಿಶ್ವಾಸ ಗೊತ್ತುವಳಿಗೆ ಬೆಂಬಲ ನೀಡು ವಂತೆ ಬಿಜೆಪಿಯೇತರ ಮತ್ತು ಕಾಂಗ್ರೆಸೇತರ ಪಕ್ಷಗಳಿಗೆ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಮನವಿ ಮಾಡಿದ್ದಾರೆ. ಈ ಬಗ್ಗೆ ಪತ್ರ ಬರೆದಿರುವ ಅವರು, ಆಂಧ್ರಕ್ಕೆ ವಾಗ್ಧಾನ ಮಾಡಿದ ವಿಶೇಷ ಸ್ಥಾನಮಾನ ನೀಡದಿರುವ ಕೇಂದ್ರದ ವಿರುದ್ಧ ಮಂಡಿ ಸಲಿರುವ ಅವಿಶ್ವಾಸ ಗೊತ್ತುವಳಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

ರಾಹುಲ್‌ ಪತ್ರ
ಹಾಲಿ ಅಧಿವೇಶನದಲ್ಲಿಯೇ ಮಹಿಳಾ ಮೀಸಲು ಮಸೂದೆ ಅಂಗೀಕರಿ ಸುವಂತೆ ಪ್ರಧಾನಿ ಮೋದಿ ಯವರನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಒತ್ತಾಯಿಸಿದ್ದಾರೆ. ಅದಕ್ಕಾಗಿ ಪಕ್ಷ ಷರತ್ತಿಲ್ಲದೆ ಬೆಂಬಲ ನೀಡುವುದಾಗಿ ಹೇಳಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ವಿಧಾನಸಭೆಗಳಲ್ಲಿ, ಸಂಸತ್‌ನಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನ ನೀಡುವ ಸಮಯ ಬಂದಿದೆ ಎಂದಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next