Advertisement

ವಿಪಕ್ಷ ನಾಯಕ ಯಾರು? ಬಿಜೆಪಿಯಲ್ಲಿ ಚರ್ಚೆ ಆರಂಭ

09:35 PM May 15, 2023 | Team Udayavani |

ಬೆಂಗಳೂರು: ಪಾತಾಳಕ್ಕೆ ಕುಸಿದ ಇಮೇಜ್‌ ವೃದ್ಧಿ ಹಾಗೂ ಭವಿಷ್ಯದಲ್ಲಿ ಪಕ್ಷದ ಪುನರುತ್ಥಾನ ದೃಷ್ಟಿಯಿಂದ ಕಮಲಕ್ಕೆ “ಆಪರೇಷನ್‌’ ಮಾಡಲು ಬಿಜೆಪಿ ಹಾಗೂ ಸಂಘ ಪರಿವಾರದ ಮುಖಂಡರು ಗಂಭೀರ ಚಿಂತನೆ ನಡೆಸಿದ್ದು, ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕನ ಸ್ಥಾನಕ್ಕೆ ಸಮರ್ಥರನ್ನು ನೇಮಕ ಮಾಡುವ ಬಗ್ಗೆ ಈಗ ಚರ್ಚೆ ಪ್ರಾರಂಭವಾಗಿದೆ.

Advertisement

ಸೋಲಿನ ಬೆನ್ನಲ್ಲೇ ಒಂದಾದ ಮೇಲೊಂದರಂತೆ ಪಕ್ಷದ ಆಂತರಿಕ ವಲಯದಲ್ಲಿ ಪರಾಮರ್ಶೆ ಸಭೆ ನಡೆಯುತ್ತಿದ್ದು, ಮುಂದಿನ 15 ದಿನಗಳಲ್ಲಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರ ಬದಲಾವಣೆ ನಿಚ್ಚಳವಾಗಿದೆ.

ಲೋಕಸಭಾ ಚುನಾವಣೆಯನ್ನೂ ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಂಘ-ಪರಿವಾರದ ಹಿನ್ನೆಲೆ ಹೊಂದಿರುವ ಹಾಗೂ ಸಂಘಟನ ಚಾತುರ್ಯ ಹೊಂದಿರುವ ವ್ಯಕ್ತಿಯನ್ನು ನಿಯೋಜಿಸಬೇಕೆಂಬ ಬಗ್ಗೆ ಚರ್ಚೆ ನಡೆಯುತ್ತಿದ್ದು, ಹಿಂದುಳಿದ ವರ್ಗ ಅಥವಾ ಒಕ್ಕಲಿಗ ಸಮುದಾಯಕ್ಕೆ ಮನ್ನಣೆ ನೀಡುವ ಸಾಧ್ಯತೆ ಹೆಚ್ಚಿದೆ.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒಕ್ಕಲಿಗ ಸಮುದಾಯದವರನ್ನೇ ಪರಿಗಣಿಸಿದರೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಥವಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೆಸರು ಮುಂಚೂಣಿಯಲ್ಲಿದೆ. ಆದರೆ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಸ್ಥಾನ ಯಾರಿಗೆ ಒಲಿಯುತ್ತದೆ ಎಂಬುದರ ಆಧಾರದ ಮೇಲೆ ಈ ವಿಚಾರ ನಿರ್ಧಾರವಾಗಲಿದೆ. ಆದರೆ ಸಂಘ ಪರಿವಾರ ಹಾಗೂ ದಿಲ್ಲಿ ನಾಯಕರು ರಾಜ್ಯಾಧ್ಯಕ್ಷ ಸ್ಥಾನವನ್ನು ಈ ಬಾರಿ ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿಗೆ ನೀಡುವುದು ಸೂಕ್ತ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಹೀಗಾಗಿ ಮಾಜಿ ಸಚಿವ ವಿ. ಸುನಿಲ್‌ ಕುಮಾರ್‌ ಹೆಸರು ಮುನ್ನೆಲೆಗೆ ಬಂದಿದೆ. ಚುನಾವಣೆಗೆ 6 ತಿಂಗಳು ಮುನ್ನ ಸುನಿಲ್‌ ಕುಮಾರ್‌ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ, ಕಾರ್ಯಕರ್ತರಲ್ಲಿ ಹುರುಪು ಮೂಡಿಸುವ ಬಗ್ಗೆ ಈ ಹಿಂದೆ ಚಿಂತನೆ ನಡೆದಿತ್ತು. ಆದರೆ ರಾಜ್ಯಾಧ್ಯಕ್ಷರ ನೇಮಕ ವಿಚಾರ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯ ಬಳಿಕವೇ ನಡೆಯಲಿದೆ.

ವಿಪಕ್ಷ ನಾಯಕ ಯಾರು?
ಅದೇ ಕಾಲಕ್ಕೆ ವಿಪಕ್ಷ ನಾಯಕನ ಸ್ಥಾನವೂ ಪಕ್ಷದ ಪಾಲಿಗೆ ನಿರ್ಣಾಯಕವಾಗಿದ್ದು, ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವ ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್‌ ಜತೆಗೆ “ಹೊಂದಾಣಿಕೆ ರಾಜಕೀಯ’ ನಡೆಸದೇ ಪೂರ್ಣ ಪ್ರಮಾಣದಲ್ಲಿ ಪಕ್ಷದ ಸಿದ್ಧಾಂತ ಹಾಗೂ ಹಿತಾಸಕ್ತಿ ಆಧರಿಸಿ ಹೋರಾಟ ರೂಪಿಸುವವರನ್ನೇ ಈ ಹುದ್ದೆಗೆ ನಿಯೋಜನೆ ಮಾಡಲು ಪಕ್ಷ ಚಿಂತನೆ ನಡೆಸಿದೆ.

Advertisement

ವಿಪಕ್ಷ ನಾಯಕ ಸ್ಥಾನಕ್ಕೆ ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೇ ನೇಮಿಸುವುದು ಸೂಕ್ತ ಎಂಬ ಮಾತು ಕೇಳಿ ಬಂದಿದೆ. ಆದರೆ ಸಂಘ ಪರಿವಾರದ ನಾಯಕರ ಜತೆಗೆ ನಡೆದ ಸಭೆಯ ಸಂದರ್ಭದಲ್ಲಿ ಬೊಮ್ಮಾಯಿ ಬಗ್ಗೆ ಹೆಚ್ಚಿನ ಒಲವು ಕಂಡುಬಂದಿಲ್ಲ ಎನ್ನಲಾಗಿದೆ. ಪಕ್ಷದ ಹಿರಿಯರು ಹಾಗೂ ಕಾರ್ಯಕರ್ತರ ಮಟ್ಟದಲ್ಲೂ ಬೊಮ್ಮಾಯಿ ಬಗ್ಗೆ ಬೇಸರ ಇರುವುದರಿಂದ ಬೇರೆ ಲಿಂಗಾಯತ ನಾಯಕರನ್ನು ಈ ಹುದ್ದೆಗೆ ನೇಮಕ ಮಾಡುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಬೊಮ್ಮಾಯಿ ಹೊರತುಪಡಿಸಿ ಲಿಂಗಾಯತರನ್ನೇ ವಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಮಾಡುವುದಾದರೆ ಕೇಂದ್ರದ ಮಾಜಿ ಸಚಿವ ಬಸನಗೌಡ ಯತ್ನಾಳ್‌ ಅಥವಾ ಅರವಿಂದ ಬೆಲ್ಲದ್‌ ಹೆಸರು ಪಕ್ಷದ ಹಂತದಲ್ಲಿ ಚರ್ಚೆಯಲ್ಲಿದೆ. ಇಬ್ಬರೂ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಪಕ್ಷ ಹಾಗೂ ಸಂಘಟನೆ ಬಗ್ಗೆ ನಿಷ್ಠೆ ಹೊಂದಿದ್ದಾರೆ. ಸದನದಲ್ಲಿ ಕಾಂಗ್ರೆಸ್‌ ವಿರುದ್ಧ ಹೋರಾಟ ರೂಪಿಸಬೇಕಿದ್ದರೆ ವೈಯಕ್ತಿಕವಾಗಿ ಕ್ಲೀನ್‌ ಇಮೇಜ್‌ ಹೊಂದಿರುವವರು ಬೇಕಾಗುತ್ತದೆ. ಬೆಲ್ಲದ್‌ ಹಾಗೂ ಯತ್ನಾಳ್‌ ಈ ದೃಷ್ಟಿಯಿಂದ ಹೆಚ್ಚು ಅರ್ಹತೆ ಹೊಂದಿದ್ದಾರೆ. ಇದರಿಂದ ಬಿಜೆಪಿ ಲಿಂಗಾಯತರಿಗೆ ಅವಕಾಶ ನೀಡಿಲ್ಲ ಎಂಬ ಕೂಗನ್ನು ತಪ್ಪಿಸುವ ಜತೆಗೆ ಹೊಸ ನಾಯಕತ್ವ ಹುಟ್ಟಿ ಹಾಕುವುದಕ್ಕೂ ಅನುಕೂಲವಾಗುತ್ತದೆ ಎಂಬುದು ಬಿಜೆಪಿ ಲೆಕ್ಕಾಚಾರ. ಒಂದೊಮ್ಮೆ ವರಿಷ್ಠರು ಲಿಂಗಾಯತ ಸಮುದಾಯಕ್ಕೆ ಸೇರಿದವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಿದರೆ ಆಗ ಮಾಜಿ ಸಚಿವರಾದ ಸುರೇಶ್‌ ಕುಮಾರ್‌ ಅಥವಾ ಸುನಿಲ್‌ ಕುಮಾರ್‌ ವಿಪಕ್ಷ ನಾಯಕರಾಗಿ ನೇಮಕಗೊಳ್ಳುವ ಸಾಧ್ಯತೆ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next