ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕಟ್ಟಡಗಳ ವಿಸ್ತೀರ್ಣ ಪತ್ತೆಗೆ ನಡೆಸಲಾದ ಟೋಟಲ್ ಸ್ಟೇಷನ್ ಸರ್ವೆ ಆಧರಿಸಿ ವ್ಯತ್ಯಾಸ ವಿಸ್ತೀರ್ಣ ತೆರಿಗೆ ನಿಗದಿ ಮಾಡುವುದರಲ್ಲಿ ಆಗಿರುವ ಅವ್ಯವಹಾರದಲ್ಲಿ ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರ ಸಹೋದರರ ಹೆಸರು (ಅವರೂ ಅಧಿಕಾರಿ) ಕೇಳಿಬರುತ್ತಿದ್ದು, ಇದರಿಂದಲೇ ವರದಿ ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಟೋಟಲ್ ಸ್ಟೇಷನ್ ಸರ್ವೆ ವರದಿಗೆ ಸಂಬಂಧಿಸಿದಂತೆ ಜೂನ್ 12 ಮತ್ತು 30ರಂದು ಎರಡು ಬಾರಿ ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಕೌನ್ಸಿಲ್ ಸಭೆಯಲ್ಲಿ ಟೋಟಲ್ ಸ್ಟೇಷನ್ ಸರ್ವೆಯ ಬಗ್ಗೆ ವರದಿ ಮಂಡನೆ ಮಾಡಿದ್ದರು. “ಈ ಅವ್ಯವಹಾರದ ಹಿಂದೆ ಕಂದಾಯ ವಿಭಾಗದ ಹಿರಿಯ ಅಧಿಕಾರಿಯ ಸಹೋದರರೊಬ್ಬರು ಬಿಬಿಎಂಪಿಯ ವಲಯ ಮಟ್ಟದಲ್ಲಿ ಉನ್ನತ ಸ್ಥಾನದಲ್ಲಿದ್ದು, ಅವರೂ ಇದರಲ್ಲಿ ಶಾಮೀಲಾಗಿರುವ ಹಿನ್ನೆಲೆಯಲ್ಲಿ ವರದಿ ನೀಡುವುದಕ್ಕೆ ವಿಳಂಬವಾಗುತ್ತಿದೆ’ ಎಂದು ಹೆಸರು ಹೇಳಲಿಚ್ಛಿಸದ ಪಾಲಿಕೆ ಸದಸ್ಯರೊಬ್ಬರು ಹೇಳಿದರು.
ಇದಕ್ಕೆ ಪುಷ್ಟಿ ನೀಡುವಂತೆ ಎರಡೆರಡು ಬಾರಿ ವರದಿ ಮಂಡನೆಯಾದರೂ, ಇದರಲ್ಲಿ ಪೂರ್ಣ ಮಾಹಿತಿ ನೀಡದೆ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಬಿಬಿಎಂಪಿಗೆ ಟೋಟಲ್ ಸ್ಟೇಷನ್ ಸರ್ವೆ ಒಟ್ಟು 321 ಕೋಟಿ ರೂ. ನಷ್ಟ ಉಂಟಾಗಿದೆ. ಆದರೆ, ಜೂನ್ 12ಕ್ಕೆ ಮಂಡನೆಯಾದ ವರದಿಯಲ್ಲಿ ಅಂದಾಜು 41.47 ಕೋಟಿ ರೂ. ಎಂದು ಉಲ್ಲೇಖ ಮಾಡಲಾಗಿತ್ತು. ಒಟ್ಟು ಮೊತ್ತ ಉಲ್ಲೇಖ ಮಾಡಿರಲಿಲ್ಲ. ಅದೇ ರೀತಿ, ಜೂನ್ 30ಕ್ಕೆ ಮಂಡನೆ ಮಾಡಿದ ವರದಿಯಲ್ಲಿ 2017-18ನೇ ಸಾಲಿನವರಗೆ ಮಾತ್ರ ವರದಿಯನ್ನು ಪರಿಶೀಲನೆ ಮಾಡಲಾಗಿದ್ದು, ಇದರಲ್ಲಿ 251 ಕೋಟಿ ರೂ. ನಷ್ಟ ಉಂಟಾಗಿದೆ. ಉಳಿದ ವರದಿಯನ್ನು ಮುಂದಿನ ಕೌನ್ಸಿಲ್ ಸಭೆಯಲ್ಲಿ ಮಂಡನೆ ಮಾಡುವುದಾಗಿ ಆಯುಕ್ತರು ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?: ನಗರದಲ್ಲಿ ಆಸ್ತಿ ತೆರಿಗೆ ಮಾಲಿಕರು ಸ್ವಯಂಘೋಷಿತ ಆಸ್ತಿ ತೆರಿಗೆ ವ್ಯವಸ್ಥೆ (ಎಸ್‌ಎಎಸ್) ಅಡಿ ತಪ್ಪು ಮಾಹಿತಿ ನೀಡಿರುವುದನ್ನು ಪತ್ತೆಹಚ್ಚುವ ಉದ್ದೇಶದಿಂದ ಬಿಬಿಎಂಪಿ ಟೋಟಲ್ ಸ್ಟೇಷನ್ ಸರ್ವೆ (ಟಿಎಸ್‌ಎಸ್) ಯೋಜನೆಯನ್ನು ಪರಿಚಯಿಸಿತ್ತು. ಆದರೆ, ಇದರಲ್ಲಿಯೂ ಅವ್ಯವಹಾರ ನಡೆದಿದ್ದು, ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವುದ ರಿಂದ ಪಾಲಿಕೆಗೆ ಕೋಟ್ಯಂತರ ರೂ. ನಷ್ಟ ಉಂಟಾಗಿದೆ ಎಂದು ವಿರೋಧ ಪಕ್ಷದ ಮಾಜಿ ನಾಯಕ ಪದ್ಮನಾಭರೆಡ್ಡಿ ಅವರು ಆರೋಪಿಸಿದ್ದರು. ಈ ಸಂಬಂಧ ಬಿಬಿಎಂಪಿ ಆಯುಕ್ತರು ಪ್ರತ್ಯೇಕ ಉಪ ಸಮಿತಿ ರಚಿಸಿದ್ದರು.
ನಗರದಲ್ಲಿನ ಕಟ್ಟಡಗಳ ಟೋಟಲ್ ಸ್ಟೇಷನ್ ಸರ್ವೆ ನಡೆದ ನಂತರದ ಎಸ್‌ಎಎಸ್ ಹಾಗೂ ಟಿಎಸ್ ಎಸ್‌ನಲ್ಲಿನ ವ್ಯತ್ಯಾಸದ ಆಧಾರದ ಮೇಲೆ ಆಸ್ತಿ ತೆರಿಗೆ ಪರಿಷ್ಕರಿಸಿ, ವಿಶೇಷ ಸೂಚನಾ ಪತ್ರ ನೀಡಲಾಗುತ್ತಿದೆ. ಆದರೆ, ಈ ರೀತಿ ಮರುಪರಿಶೀಲನೆ ಮಾಡುವ ಹಂತದಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವುದು 2019ರ ಅಕ್ಟೋಬರ್‌ನಲ್ಲಿ ಬೆಳಕಿಗೆ ಬಂದಿತ್ತು. ಹೀಗಾಗಿ, ಈ ಸಂಬಂಧ ಆತಂರಿಕ ತನಿಖೆ ನಡೆದಿದ್ದು, ಅವ್ಯವಹಾರದ ಬಗ್ಗೆ ಹಂತ ಹಂತವಾಗಿ ವರದಿ ಮಂಡನೆಯಾಗುತ್ತಿದೆ.
ಟೋಟಲ್ ಸ್ಟೇಷನ್ ಸರ್ವೆ ವರದಿ ಸಂಬಂಧ ಇದೇ ಶನಿವಾರ ಮೇಯರ್ ಎಂ. ಗೌತಮ್‌ಕುಮಾರ್ ಹಾಗೂ ವಿರೋಧ ಪಕ್ಷದ ಮಾಜಿ ನಾಯಕ ಪದ್ಮನಾಭ ರೆಡ್ಡಿ ಅವರೊಂದಿಗೆ ಚರ್ಚೆ ಮಾಡಲಾಗುವುದು. ಸಂಪೂರ್ಣ ವರದಿಯನ್ನು ಮುಂದಿನ ಕೌನ್ಸಿಲ್ ಸಭೆಯಲ್ಲಿ ಮಂಡನೆ ಮಾಡಲಾಗುವುದು.
-ಬಿ.ಎಚ್.ಅನಿಲ್‌ಕುಮಾರ್, ಬಿಬಿಎಂಪಿ ಆಯುಕ್ತ