ನವದೆಹಲಿ : ಡಿಸೆಂಬರ್ 1 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ(ICC) ಅಧ್ಯಕ್ಷರಾಗಿ ಜಯ್ ಶಾ ಅಧಿಕಾರ ವಹಿಸಿಕೊಳ್ಳಲಿದ್ದು, ಪ್ರಬಲ ಬಿಸಿಸಿಐನಲ್ಲಿ ಕಾರ್ಯದರ್ಶಿಯ ಹುದ್ದೆ ಖಾಲಿಯಾಗಲಿದೆ. ಸದ್ಯ ಬದಲಿ ಯಾರು ಎಂದು ಕುತೂಹಲ ಮೂಡಿದ್ದು ಲೆಕ್ಕಾಚಾರ ಮಾಡಲಾಗುತ್ತಿದೆ.
2022 ರಲ್ಲಿ ಸಾಂವಿಧಾನಿಕ ತಿದ್ದುಪಡಿಯನ್ನು ಅನುಸರಿಸಿ, BCCI ಯಲ್ಲಿ ಕಾರ್ಯದರ್ಶಿಯು ಅತ್ಯಂತ ಪ್ರಭಾವಶಾಲಿ ಪದಾಧಿಕಾರಿಯಾಗಿದ್ದು,ಕ್ರಿಕೆಟ್ ಮತ್ತು ಕ್ರಿಕೆಟೇತರ ವಿಷಯಗಳಿಗೆ ಸಂಬಂಧಿಸಿದಂತೆ ಎಲ್ಲಾ ಅಧಿಕಾರಗಳನ್ನು ಕಾರ್ಯದರ್ಶಿ ಹೊಂದಿರುತ್ತಾರೆ. ಸಿಇಒ ಅವರ ಕಾರ್ಯದರ್ಶಿಯ ಮೇಲ್ವಿಚಾರಣೆಯಲ್ಲೇ ಕಾರ್ಯನಿರ್ವಹಿಸಬೇಕು.
ಆಗಸ್ಟ್‌ನಲ್ಲಿ ಐಸಿಸಿ ಉನ್ನತ ಸ್ಥಾನಕ್ಕೆ ಶಾ ಅವಿರೋಧವಾಗಿ ಆಯ್ಕೆಯಾಗಿದ್ದು, ಬಿಸಿಸಿಐ ನ ಉನ್ನತ ಹುದ್ದೆಗೆ ಆಯ್ಕೆ ಹೇಗೆ ನಡೆಯುತ್ತದೆ ಎಂದು ಕುತೂಹಲ ಮೂಡಿದೆ.
ಗುಜರಾತ್‌ನ ಅನಿಲ್ ಪಟೇಲ್ ಮತ್ತು ಪ್ರಸ್ತುತ ಬಿಸಿಸಿಐ ಜಂಟಿ ಕಾರ್ಯದರ್ಶಿ ದೇವ್‌ಜಿತ್ ಸೈಕಿಯಾ ಅವರು ಶಾ ಅವರ ಜಾಗಕ್ಕೆ ಬರಬಹುದು ಎಂದು ಹೇಳಲಾಗಿದ್ದು, ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ ಅವರ ಹೆಸರೂ ಕೇಳಿ ಬಂದರೂ ಕೇವಲ ಊಹಾಪೋಹವಾಗಿಯೇ ಉಳಿದಿದೆ.
“ಏನಾಗುತ್ತಿದೆ ಎಂದು ನಮಗೆ ತಿಳಿದಿಲ್ಲ. ಬಿಸಿಸಿಐ ಅಧಿಕಾರಿಗಳೆಲ್ಲರೂ ಮತ್ತು ರಾಜ್ಯ ಘಟಕಗಳು ಈ ವಿಷಯದಲ್ಲಿ ಮೌನವಾಗಿದ್ದಾರೆ. ಸದ್ಯಕ್ಕೆ ಜಂಟಿ ಕಾರ್ಯದರ್ಶಿ ಸೈಕಿಯಾ ಅವರು ಮಧ್ಯಂತರವಾಗಿರುತ್ತಾರೆ ಎಂದು ಬಿಸಿಸಿಐ ಆಡಳಿತಾಧಿಕಾರಿಯೊಬ್ಬರು ತಿಳಿಸಿದ್ದಾರೆ.