Advertisement
ಸಿಂಗಾಪುರಕ್ಕೆ ತೆರಳುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಅನೌಪಚಾರಿಕವಾಗಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಡಿಸೆಂಬರ್ ಎರಡನೇ ವಾರದಲ್ಲಿ ರಾಜ್ಯದ ಮತ್ತೂಬ್ಬ ಬಿಜೆಪಿ ಸಂಸದರಿಗೆ ಕೇಂದ್ರ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.
Related Articles
Advertisement
ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಪ್ರಹ್ಲಾದ್ ಜೋಷಿ ಹೈದರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಭಾಗದಲ್ಲಿ ಪ್ರಭಾವಿ ಎನಿಸಿದ್ದಾರೆ. ರಾಜ್ಯಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ ಅನುಭವವಿದ್ದು, ಬ್ರಾಹ್ಮಣ ಸಮುದಾಯದ ಕೋಟಾದಡಿ ಸಚಿವ ಸ್ಥಾನಕ್ಕೆ ಪರಿಗಣಿಸಬಹುದು. ಜತೆಗೆ ಸಂಘ ಪರಿವಾರದಲ್ಲೂ ಇದಕ್ಕೆ ಸಮ್ಮತಿ ವ್ಯಕ್ತವಾಗಲಿದೆ ಎಂದು ಹೇಳಲಾಗಿದೆ.
ಇನ್ನೊಂದೆಡೆ ರಾಜ್ಯದ ಕರಾವಳಿ ಭಾಗದಲ್ಲಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಲು ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ. ಯುವ ಸಂಸದರಿಗೆ ಅವಕಾಶ ನೀಡುವ ಮೂಲಕ ಯುವಜನತೆಯನ್ನು ಸೆಳೆಯುವ ಲೆಕ್ಕಾಚಾರವೂ ನಡೆದಿದೆ. ಸಿಂಗಾಪುರ ಪ್ರವಾಸ ಕೈಗೊಳ್ಳುವ ಮುನ್ನ ಪ್ರಧಾನಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಅನೌಪಚಾರಿಕವಾಗಿ ಈ ಎಲ್ಲ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಲಿಂಗಾಯಿತ ಸಂಸದರ ಪರಿಗಣನೆ ಅಲ್ಲಗಳೆಯುವಂತಿಲ್ಲ!ರಾಜ್ಯದ ಸಂಸದರೊಬ್ಬರಿಗೆ ಸಚಿವ ಸ್ಥಾನ ನೀಡುವುದಾದರೆ ಬ್ರಾಹ್ಮಣೇತರರನ್ನು ಪರಿಗಣಿಸುವ ಸಾಧ್ಯತೆಯನ್ನು ಅಲ್ಲಗಳಿಯುವಂತಿಲ್ಲ. ಸಂಸದ ಜಿ.ಎಂ.ಸಿದ್ಧೇಶ್ವರ್ ಅವರನ್ನು ಕೇಂದ್ರ ಸಂಪುಟದಿಂದ ಕೈಬಿಟ್ಟ ಬಳಿಕ ಲಿಂಗಾಯಿತರಿಗೆ ಆದ್ಯತೆ ಸಿಕ್ಕಂತಾಗಿಲ್ಲ. ಅಲ್ಲದೇ ಈಗಾಗಲೇ ಬ್ರಾಹ್ಮಣ ಸಮುದಾಯದ ಅನಂತ ಕುಮಾರ್ ಹೆಗಡೆ ಅವರು ಕೇಂದ್ರ ಸಚಿವರಾಗಿರುವ ಕಾರಣ ಲಿಂಗಾಯಿತ ಸಂಸದರಿಗೆ ಅವಕಾಶ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಒಂದೊಮ್ಮೆ ಲಿಂಗಾಯಿತ ಸಂಸದರಿಗೆ ಸಚಿವ ಸ್ಥಾನ ನೀಡುವುದಾದರೆ ಬೆಳಗಾವಿಯಿಂದ ನಾಲ್ಕು ಬಾರಿ ಸಂಸದರಾಗಿರುವ ಸುರೇಶ್ ಅಂಗಡಿ ಇಲ್ಲವೇ ಹಾವೇರಿಯಿಂದ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಶಿವಕುಮಾರ್ ಉದಾಸಿ ಅವರನ್ನು ಪರಿಗಣಿಸುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ. – ಎಂ. ಕೀರ್ತಿಪ್ರಸಾದ್